ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 1)

ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 1)

ಕೃಷಿರಂಗದಲ್ಲಿ  ಡ್ರೋನ್ ಬಳಕೆಗೆ ವಿಪುಲ ಅವಕಾಶ
ಬೆಳೆಗಳಿಗೆ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಭಾರತದಲ್ಲಿ ಹಲವೆಡೆ ಶುರುವಾಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯ ಮತ್ತು ವೆಚ್ಚದಲ್ಲಿ ಭಾರೀ ಉಳಿತಾಯ.

ಜನವರಿ 2022ರಲ್ಲಿ ಚಿತ್ರದುರ್ಗದ ಸಿರಿಗೆರೆಯಲ್ಲಿ ರೈತ ಗುರುಶಾಂತಪ್ಪರ ನಾಲ್ಕು ಎಕ್ರೆ ಅಡಿಕೆ ತೋಟಕ್ಕೆ ಕೇವಲ ಎರಡು ಗಂಟೆಯಲ್ಲಿ ಡ್ರೋನ್‌ನಿಂದ ಪೀಡೆನಾಶಕ ಸಿಂಪರಣೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಯಾಕೆಂದರೆ ಕೆಲಸಗಾರರಿಂದ ಸಿಂಪರಣೆ ಮಾಡಿಸಲು ನಾಲ್ಕು ದಿನ ತಗಲುತ್ತಿತ್ತು ಮತ್ತು ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಡ್ರೋನ್ ಸಿಂಪರಣೆಗೆ ತಗಲಿದ ವೆಚ್ಚ ರೂ.1,350 ಮಾತ್ರ!

ಈ ಡ್ರೋನ್ ಸಿಂಪರಣೆ ನಡೆಸಿದ ಕಂಪೆನಿ ಮಲ್ಟಿಪ್ಲೆಕ್ಸ್ ಡ್ರೋನ್ ಪ್ರೈ.ಲಿ. ಇದು ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳ 3,200 ಎಕ್ರೆ ಕೃಷಿ ಜಮೀನಿನಲ್ಲಿ ಡ್ರೋನ್ ಸಿಂಪರಣೆ ನಡೆಸಿದೆ. ಅಡಿಕೆ, ಭತ್ತ, ಗೋಧಿ ಮತ್ತು ಕಬ್ಬು ಬೆಳೆಗಳ ರೋಗ ಹಾಗೂ ಕೀಟ ಬಾಧೆ ನಿಯಂತ್ರಣಕ್ಕೆ ಡ್ರೋನಿನಿಂದ ಪೀಡೆನಾಶಕ ಸಿಂಪರಣೆ ಸುಲಭ. ಭತ್ತ ಮತ್ತು ಗೋಧಿ ಒಂದೆಕ್ರೆ ಹೊಲಕ್ಕೆ ಪೀಡೆನಾಶಕ ಸಿಂಪರಣೆಗೆ ಕೇವಲ ಹತ್ತು ನಿಮಿಷ ಸಾಕು!

ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳ ರಾಜಗಳಲ್ಲಿಯೂ ಕೃಷಿ ಕೆಲಸಗಳಿಗೆ ಡ್ರೋನ್ ಬಳಸಲಾಗಿದೆ. ಇದು ಪ್ರಯೋಜನಕಾರಿ ಎಂಬುದು  ಕೇರಳದ ಕುಮಾರಕೋಂನ ಪಳ್ಳಿಕಾಯಲಿನ ಜೋಸೆಫ್ ಅಂತೋನಿ (ಚಾಚಪ್ಪನ್) ಅನುಭವ.
ಲೀಸಿಗೆ ಪಡೆದ ಎಂಭತ್ತು ಎಕ್ರೆ ಜಮೀನಿನಲ್ಲಿ ಅವರಿಂದ ಭತ್ತದ ಕೃಷಿ. ಭತ್ತದ ಸಸಿಗಳ ಬೆಳವಣಿಗೆ ಚೆನ್ನಾಗಿಲ್ಲ ಎಂಬುದನ್ನು ಅವರು ಗಮನಿಸಿದರು. ಹತ್ತಿರದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದರು. ಡ್ರೋನಿನಿಂದ ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆ ಸೂಕ್ತವೆಂಬುದು ಅಲ್ಲಿನ ಪರಿಣತರ ಸಲಹೆ. ಅವರ ಹತ್ತು ಎಕ್ರೆ ಭತ್ತದ ಬೆಳೆಗೆ ಕೇಂದ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಂಗವಾಗಿ ಡ್ರೋನಿನಿಂದ ಸಿಂಪರಣೆ.

ಸಿಂಪರಣೆಯ ನಂತರ  ಭತ್ತದ ಸಸಿಗಳ ಬೆಳವಣಿಗೆ ಸುಧಾರಿಸಿತು. ಆದ್ದರಿಂದ ಹೆಚ್ಚುವರಿ ಮೂವತ್ತು ಎಕ್ರೆಗೆ ಡ್ರೋನಿನಿಂದ ಸಿಂಪರಣೆ ಮಾಡಿಸಿದರು ಜೋಸೆಫ್. ಇದರಿಂದಾಗಿ ಭತ್ತದ ಇಳುವರಿ ಶೇ.20 ಹೆಚ್ಚಿತೆಂದು ಕಂಡು ಬಂದಿದೆ.

ಕೃಷಿ ಬೆಳೆಗಳ ಸಿಂಪರಣೆಗೆ ಮಾತ್ರವಲ್ಲ, ಬೆಳೆಗಳ ಬೆಳವಣಿಗೆ ಮತ್ತು ಕೀಟ/ ರೋಗ ಬಾಧೆ ಪರಿಶೀಲನೆ, ಭೂದಾಖಲೆಗಳ ಡಿಜಿಟಲೀಕರಣ, ಭೂನಕ್ಷೆ ತಯಾರಿ ಇತ್ಯಾದಿ ಹತ್ತುಹಲವು ಉದ್ದೇಶಗಳಿಗೆ ಡ್ರೋನ್ ಬಳಕೆಗೆ ಅವಕಾಶಗಳು ವಿಪುಲ.

ಗಮನಿಸಿ: ಕೇಂದ್ರ ಬಜೆಟ್ 2022ರಲ್ಲಿ ಕೃಷಿ ಸೇವಾ ಕೇಂದ್ರಗಳ ಡ್ರೋನ್ ಸೇವೆಗಾಗಿ ರೂ.10 ಲಕ್ಷ ಆರ್ಥಿಕ ಸಹಾಯ ಘೋಷಿಸಲಾಯಿತು. ಭಾರತೀಯ ಕೃಷಿ ಸಂಶೋಧನಾ ಮಂಡಲಿ (ಐಸಿಎಆರ್) ಆಡಳಿತಕ್ಕೆ ಒಳಪಟ್ಟ ಕೃಷಿ ವಿಜ್ನಾನ ಕೇಂದ್ರಗಳಿಗೆ ತಲಾ ಒಂದು ಡ್ರೋನ್ ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿರುವುದು ಕ್ರಾಂತಿಕಾರಕ ಹೆಜ್ಜೆ. 19 ಫೆಬ್ರವರಿ 2022ರಂದು ಪ್ರಧಾನಿ ನರೇಂದ್ರ ಮೋದಿ ಅವರು “ಗರುಡ ಏರೋಸ್ಪೇಸ್‌ನ 100 ಕಿಸಾನ್ ಡ್ರೋನ್ ಉಡಾವಣೆಗೆ ಚಾಲನೆ ನೀಡುತ್ತಾ “ಇದು 21ನೇ ಶತಮಾನದ ಆಧುನಿಕ ಬೇಸಾಯ ವ್ಯವಸ್ಥೆಯ ಹೊಸ ಅಧ್ಯಾಯ” ಎಂದು ಘೋಷಿಸಿದ್ದರು.

ಗ್ರಾಹಕರಿಗೆ ನೇರ ಮಾರಾಟದ ಮಗದೊಂದು ಯಶೋಗಾಥೆ
ಉಷಾರಾಣಿ ವಿನಯ್ ಎಂಬಿಎ ಸ್ನಾತಕೋತ್ತರ ಪದವಿ ಗಳಿಸಿ, ಹಲವು ಐಟಿ ಕಂಪೆನಿಗಳಲ್ಲಿ ಉದ್ಯೋಗಿಯಾಗಿದ್ದರು. ಕೊರೋನಾ ವೈರಸಿನ ಲಾಕ್-ಡೌನ್ ಕಾಲದಲ್ಲಿ ಕುಣಿಗಲ್ ತಾಲೂಕಿನ ತನ್ನ ಹಳ್ಳಿ ಯಲಗಲವಾಡಿಗೆ ಬಂದಿದ್ದರು. ಆಗ ಅವರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿತು. ನಂತರ ಅಲ್ಲೇ ಜಮೀನು ಖರೀದಿಸಿ, ವ್ಯವಸಾಯ ಶುರು ಮಾಡಿದರು - ಸ್ಕೈಯೋ ಫಾರ್ಮ್ ಹೆಸರಿನಲ್ಲಿ. ಈಗ ಬಾಳೆ, ಪಪ್ಪಾಯಿ, ಪೇರಲೆ, ಮಾವು ಸಹಿತ 15 ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಕುರಿ ಸಾಕಣೆ ಮತ್ತು ಮೀನು ಸಾಕಣೆಯಲ್ಲಿಯೂ ತೊಡಗಿದ್ದಾರೆ.

ತಮ್ಮ ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕಾಗಿ ಅನೇಕ ಕಾರ್ಪೊರೇಟ್ ಕಚೇರಿಗಳು ಮತ್ತು ಅಪಾರ್ಟ್-ಮೆಂಟುಗಳನ್ನು ಸಂಪರ್ಕಿಸಿದರು. ರೂ. 500 ಬೆಲೆಗೆ ಒಂದು ಬುಟ್ಟಿ ತುಂಬ ಹಣ್ಣು ಇತ್ಯಾದಿ ಮಾರುವ ಅವರ ಐಡಿಯಾ ಗ್ರಾಹಕ ಮೆಚ್ಚುಗೆ ಗಳಿಸಿದೆ. ತಲಾ ಎರಡು ಕಿಗ್ರಾ ಪಪ್ಪಾಯಿ ಮತ್ತು ಬಾಳೆಹಣ್ಣು, ತಲಾ ಒಂದು ಕಿಗ್ರಾ ಮುಸಂಬಿ ಮತ್ತು ಪೇರಲೆ, ಎರಡು ತೆಂಗಿನಕಾಯಿ ಹಾಗೂ ಕಬ್ಬಿನ ತುಂಡುಗಳು - ಇವು ಒಂದು ಬುಟ್ಟಿ ತುಂಬಿರುತ್ತವೆ.

(ಇನ್ನೂ ಇದೆ: ಭಾಗ 2)
ಫೋಟೋ: ಡ್ರೋನ್ ಮೂಲಕ ಹೊಲಕ್ಕೆ ಸಿಂಪಡಣೆ…  ಕೃಪೆ: ಜಾಲತಾಣ