ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 2)

ಮಹಾರಾಷ್ಟ್ರದಲ್ಲಿ 600 ರೈತ ಕುಟುಂಬಗಳ ಬದುಕು ಬದಲಾಯಿಸಿದ ಅಗ್ರಿ ಟೂರಿಸಮ್
ಪಾಂಡುರಂಗ ತಾವರೆ (52) ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಶಾಂಗವಿಯ ರೈತನ ಮಗ. 2005ರಲ್ಲಿ ಅವರು ಸ್ಥಾಪಿಸಿದ ಕಂಪೆನಿ: ಅಗ್ರಿ ಟೂರಿಸಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್. ಇಪ್ಪತ್ತು ವರುಷ ಪ್ರವಾಸೋದ್ಯಮದಲ್ಲಿ ಕೆಲಸ ಮಾಡಿದ ಪಾಂಡುರಂಗ ಅನಂತರ ಪತ್ನಿ ವೈಶಾಲಿಯೊಂದಿಗೆ ತಾವರೆ ಹಳ್ಳಿಗೆ ಮರಳಿದರು.
ಕೃಷಿಯ ಜೊತೆಗೆ ಪ್ರವಾಸೋದ್ಯಮದ ಸಾಂಗತ್ಯ ಅವರ ಕನಸಾಗಿತ್ತು. ಕಂಪೆನಿ ಸ್ಥಾಪಿಸಿದ ಆರಂಭದ ವರುಷದಲ್ಲಿ ಗ್ರಾಹಕರ ಸ್ಪಂದನೆ ಉತ್ಸಾಹದಾಯಕವಾಗಿರಲಿಲ್ಲ. ಹಾಗಾಗಿ ಮಾರ್ಕೆಟಿಂಗ್ ತಂತ್ರಗಳ ಮೊರೆ ಹೊಕ್ಕರು ಪಾಂಡುರಂಗ: ಜಾಹೀರಾತು ಮತ್ತು ಫೋನ್ ಕರೆಗಳು. 2006ರಲ್ಲಿ ಪುಣೆಯ 4,000 ಮಹಿಳಾ ಸದಸ್ಯರ ಸಂಘಟನೆಯ ಸದಸ್ಯರು ಇವರ “ಕೃಷಿ ಪ್ರವಾಸೋದ್ಯಮ ಪ್ಯಾಕೇಜಿ"ನಂತೆ ಹಳ್ಳಿಗೆ ಬಂದು ಹಳ್ಳಿ ಬದುಕಿನ ಸೊಬಗನ್ನು ಅನುಭವಿಸಿದರು. ಅನಂತರ ಇವರ ಕಾರ್ಯಕ್ರಮಕ್ಕೆ ಗ್ರಾಹಕರ ಬೇಡಿಕೆ ಹೆಚ್ಚತೊಡಗಿತು.
ಇದೀಗ 628 ರೈತರು ಇವರ ಕಂಪೆನಿಯ ಭಾಗಿಗಳು. ಈ ರೈತರ ಜಮೀನಿಗೆ ಭೇಟಿ ನೀಡುವ ನಗರವಾಸಿಗಳು ಕೃಷಿಯ ಮತ್ತು ಗ್ರಾಮೀಣ ಬದುಕಿನ ಹಲವು ಅನುಭವಗಳಿಗೆ ತೆರೆದುಕೊಳ್ಳುತ್ತಾರೆ: ಕೃಷಿ ಕೆಲಸಗಳಲ್ಲಿ ಭಾಗವಹಿಸುವುದು, ಎತ್ತಿನ ಗಾಡಿ ಸವಾರಿ, ಟ್ರಾಕ್ಟರ್ ಸವಾರಿ, ಪಾರಂಪರಿಕ ಆಹಾರ ಸೇವನೆ, ಪಾರಂಪರಿಕ ಉಡುಪು ಧಾರಣೆ, ಗ್ರಾಮ ಸಂಸ್ಕೃತಿಯ ಪರಿಚಯ, ಜಾನಪದ ಹಾಡುಗಳು ಮತ್ತು ನೃತ್ಯ ಪ್ರದರ್ಶನ. ಇವು ನಗರವಾಸಿಗಳ ಮನಸೂರಿಗೊಳ್ಳುವುದು ಖಂಡಿತ. ಒಮ್ಮೆ ಬಂದವರು ಮತ್ತೆಮತ್ತೆ ಬರುತ್ತಾರೆ.
ನಗರವಾಸಿಗಳಿಗೆ ದಿನಕ್ಕೆ ರೂ.1,500 ಶುಲ್ಕ (ರಾತ್ರಿ ವಾಸದ ವ್ಯವಸ್ಥೆ ಮತ್ತು ಆಹಾರ ವೆಚ್ಚ ಸಹಿತ). ಅಂತೂ, ಈ ವ್ಯವಸ್ಥೆ ರೈತರಿಗೆ ಹೆಚ್ಚುವರಿ ಆದಾಯ ಮೂಲ ಒದಗಿಸಿ, ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಕಾರಣವಾದದ್ದು ಸಾಧನೆಯೇ ಸೈ.
ಅಸ್ಸಾಮ್ ಟೀ ಭಾರೀ ಬೆಲೆಗೆ ಖರೀದಿ - ಕಿಲೋಗ್ರಾಮ್‌ಗೆ ರೂ.99,999/-
ಅಸ್ಸಾಮಿನ ದಿಬ್ರುಘಡ್ ಜಿಲ್ಲೆಯಲ್ಲಿ ಬೆಳೆದ ಟೀ ಹುಡಿ ಕಿಲೋಗ್ರಾಮಿಗೆ ರೂ.99,999 ಬೆಲೆಗೆ ಅಸ್ಸಾಮಿನ ಟೀ ಹರಾಜಿನಲ್ಲಿ ಮಾರಾಟವಾದದ್ದು 2023ರ ದೊಡ್ಡ ಸುದ್ದಿ. ಇದು ಎ.ಎಫ್.ಟಿ. ಟೆಕ್ನೋ ಟ್ರೇಡ್ ಮಾಲೀಕತ್ವದ “ಗೋಲ್ಡನ್ ಪರ್ಲ್” ಟೀ ಹುಡಿ.
ಹಿಂದಿನ ವರುಷ 14-12-2022ರಂದು ಮನೋಹರಿ ಟೀ ಎಸ್ಟೇಟಿನ “ಮನೋಹರಿ ಗೋಲ್ಡ್” ಟೀ ಇದೇ ಬೆಲೆಗೆ ಹರಾಜಿನಲ್ಲಿ ಮಾರಾಟವಾಗಿತ್ತು. ಇದು ಭಾರತದಲ್ಲಿ ಟೀ ಹುಡಿ ಮಾರಾಟವಾದ ಅತ್ಯಧಿಕ ಬೆಲೆ. (2019ರಲ್ಲಿ “ಮನೋಹರಿ ಟೀ” ಕಿಲೋಗ್ರಾಮಿಗೆ ರೂ.50,000 ಬೆಲೆಗೆ ಮಾರಾಟವಾಗಿತ್ತು.)
ಅತ್ಯುತ್ತಮ ಗುಣಮಟ್ಟ ಉಳಿಸಿಕೊಂಡರೆ, ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ ಸಿಗುತ್ತದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ.
"ಪ್ರೇಮಿಗಳ ದಿನ"ಕ್ಕಾಗಿ ಗುಲಾಬಿ ಹೂಗಳ ರಫ್ತಿನಲ್ಲಿ ಎರಡು ಪಟ್ಟು ಏರಿಕೆ
2022ರ ಪ್ರೇಮಿಗಳ ದಿನಕ್ಕಾಗಿ (ಫೆಬ್ರವರಿ 14) ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕಿಗ್ರಾ ಗುಲಾಬಿ ರಫ್ತಾಯಿತು. ಹಿಂದಿನ ವರುಷದ ಪ್ರೇಮಿಗಳ ದಿನಕ್ಕಾಗಿ ರಫ್ತಾಗಿದ್ದ 2.7 ಲಕ್ಷ ಕಿಗ್ರಾ ಗುಲಾಬಿಗಳಿಗೆ ಹೋಲಿಸಿದರೆ, ಒಂದೇ ವರುಷದಲ್ಲಿ ಈ ರಫ್ತಿನ ಪರಿಮಾಣ ಎರಡು ಪಟ್ಟು ಜಾಸ್ತಿಯಾಯಿತು!
ದೆಹಲಿ, ಮುಂಬೈ, ಕೊಲ್ಕತಾ, ಗೌಹಾತಿ, ಚಂಡಿಘರ್ ನಗರಗಳಿಗೆ ಹಾಗೂ ವಿದೇಶಗಳ ಸಿಂಗಪೂರ, ಕೌಲಾಲಂಪುರ, ಲಂಡನ್, ಆಮ್‌ಸ್ಟರ್-ಡಾಮ್, ಕುವೈತ್, ಬೈರೂತ್, ಮಸ್ಕತ್, ದುಬೈ, ಆಕ್ಲಾಂಡ್ ಮತ್ತು ಮನಿಲಾ ನಗರಗಳಿಗೆ ಬೆಂಗಳೂರಿನಿಂದ ಗುಲಾಬಿಗಳು ರಫ್ತಾಗಿರುವುದು ಗಮನಿಸಬೇಕಾದ ಸಂಗತಿ.
ಬೆಂಗಳೂರು ಗುಲಾಬಿ ರಫ್ತಿನ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ರಫ್ತಿಗಾಗಿ ಹೂವಿನ ಕೃಷಿ ಪ್ರಮುಖ ಕೃಷಿ ಚಟುವಟಿಕೆಯಾಗಿ ಬೆಳೆಯುತ್ತಿದೆ ಎಂಬುದನ್ನು ಈ ಬೆಳವಣಿಗೆಗಳು ಸೂಚಿಸುತ್ತಿವೆ.
ಭಾರತದ ಆಹಾರಧಾನ್ಯ ಉತ್ಪಾದನೆ 2023-24ರಲ್ಲಿ ದಾಖಲೆ 332 ದಶಲಕ್ಷ (ಮಿಲಿಯನ್) ಟನ್
ಮಹಾನ್ ಭಾರತದ 144 ಕೋಟಿ ಜನರಿಗೆ ಆಹಾರ ಒದಗಿಸುವುದು ದೊಡ್ಡ ಸವಾಲು. 2020ರಿಂದ ನಮ್ಮ ರೈತರು ಪ್ರತಿ ವರುಷವೂ ಆಹಾರಧಾನ್ಯಗಳ (ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳು ಮತ್ತು ಇತರ ಏಕದಳ ಧಾನ್ಯಗಳು) ಉತ್ಪಾದನೆ ಹೆಚ್ಚಿಸುವ ಮೂಲಕ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಲೇ ಇದ್ದಾರೆ ಎಂಬುದಕ್ಕೆ ಪುರಾವೆ ಈ ಕೆಳಗಿನ ಮಾಹಿತಿ:
ವರುಷ ಆಹಾರಧಾನ್ಯಗಳ ಉತ್ಪಾದನೆ (ಮಿಲಿಯನ್ ಟನ್)
2020-21 308.65
2021-22 315.72
2022-23 329.69
2023-24 332.30
ಆಕರ: ಭಾರತ ಸರಕಾರದ ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆ ಪ್ರಕಟಿಸಿರುವ ಅಂಕೆಸಂಖ್ಯೆಗಳು
(ಮುಗಿಯಿತು)
ಸಾಂದರ್ಭಿಕ ಫೋಟೋ: ಹಳ್ಳಿಗೆ ಬಂದ ನಗರವಾಸಿಗಳ ಎತ್ತಿನ ಗಾಡಿ ಪಯಣ… ಕೃಪೆ: ಷಟರ್-ಸ್ಟಾಕ್