ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?

ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?

ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಇಲಾಖೆ ಒದಗಿಸಿದ್ದ ಒಟ್ಟು ಅನುದಾನ ರೂಪಾಯಿ ೪೮೩ ಕೋಟಿಗಳಲ್ಲಿ ರೂಪಾಯಿ ೩೯೯ ಕೋಟಿ ವೆಚ್ಚ ಮಾಡಲಾಗಿದೆ.

ಸರಕಾರದ ಇಂತಹ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.

ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಕಾರ ಮಹಾರಾಷ್ಟ್ರದಲ್ಲಿ ೧೭,೫೦೦ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸಲಿಕ್ಕಾಗಿ ಕೇಂದ್ರ ಸರಕಾರ ಮಂಜೂರು ಮಾಡಿರುವುದು ರೂಪಾಯಿ ೮೦ ಕೋಟಿ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ತಡೆಯಲಿಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಅದರ ಸದಸ್ಯರು ಅಂತಿಮವಾಗಿ ೫೦೦ ಮೈಕ್ರೋನ್ ದಪ್ಪದ ಜೀಯೊಮೆಂಬ್ರೇನ್ ಪ್ಲಾಸ್ಟಿಕ್ ಹಾಳೆಗಳನ್ನು ಸರಬರಾಜು ಮಾಡಲಿಕ್ಕಾಗಿ ೩ ಉತ್ಪಾದನಾ ಕಂಪೆನಿಗಳನ್ನು ಆಯ್ಕೆ ಮಾಡಿದರು. ಈ ಯೋಜನೆ ನಂಬಿ ಕೃಷಿಹೊಂಡ ತೋಡಿದ ರೈತರಿಗೆ, ಕಂಪೆನಿಗಳ ತಂತ್ರದಿಂದಾಗಿ ದೊಡ್ಡ ಆತಂಕ ಎದುರಾಯಿತು. ಹೆಚ್ಚುವರಿ ಮೊತ್ತ ಯಾರು ಪಾವತಿಸಬೇಕು? ರಾಜ್ಯ ತೋಟಗಾರಿಕಾ ಮಿಷನ್‍ನ ಅಧಿಕಾರಿಗಳು ’ಶಿಫಾರಸ್ ಮಾಡಲಾಗಿದೆ’ ಎನ್ನುತ್ತಲೇ ಕಾಲ ತಳ್ಳಿದರು.

ಅದೆಲ್ಲ್ಲ ಹಾಗಿರಲಿ, ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸುವುದು ಅಗತ್ಯವೇ? ನೀರಿಗಾಗಿ ಜನರು ಪರದಾಡುವ ವಿದರ್ಭ ಪ್ರದೇಶದಲ್ಲಿ ಕೃಷಿಹೊಂಡಗಳಿಗೆ ಶತಮಾನಗಳ ಪರಂಪರೆಯೇ ಇದೆ. ಕೃಷಿಹೊಂಡಗಳು ಮಳೆನೀರಿನ ಕೊಯ್ಲು ಮತ್ತು ನೀರಾವರಿಯ ಸಂರಚನೆಗಳಾಗಿ ಅಲ್ಲಿನವರಿಗೆ ಚಿರಪರಿಚಿತ. ಆದ್ದರಿಂದ ಸುಸ್ಥಿರ ಕೃಷಿಯ ಪ್ರತಿಪಾದಕರ ಆರೋಪ ಇಂತಿದೆ: ಸರಕಾರ ಪಾರಂಪರಿಕ ತಂತ್ರಜಾನ ಅಲಕ್ಷಿಸಿ ಕೈಗಾರಿಕೆಗಳಿಗೆ ಲಾಭ ಮಾಡುತ್ತಿದೆ.

ನಾಗಪುರದ ಸರಕಾರೇತರ ಸಂಸ್ಥೆ "ಯುವ"ದ ಕಾರ್ಯಕರ್ತ ನಿತಿನ್ ಅವರೂ ಸರಕಾರದ ಯೋಜನೆಯನ್ನು ಟೀಕಿಸುತ್ತಾರೆ, "ಪ್ಲಾಸ್ಟಿಕ್ ಹಾಳೆ ಹಾಸುವುದು ಅಲ್ಪಕಾಲಿಕ ವಿಧಾನ. ಇದರಿಂದ ಒಂದು ಬೆಳೆಗಾಗಿ ನೀರು ಸಂಗ್ರಹಿಸಲು ರೈತರಿಗೆ ಸಾಧ್ಯವಾದೀತು ಅಷ್ಟೇ. ಅಂತರ್ಜಲಮಟ್ಟ ಈ ವಿಧಾನದಿಂದಾಗಿ ಏರುವುದಿಲ್ಲ. ಆದ್ದರಿಂದ ಈ ಯೋಜನೆಗಾಗಿ ದುಬಾರಿ ವೆಚ್ಚ ಮಾಡೋದು ಸರಿಯಲ್ಲ." ವಾಷಿಂ ಜಿಲ್ಲೆಯ ಪಾರಂಪರಿಕ ನೀರಿನಾಸರೆಗಳ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿರುವ ನೀಲೇಶ್ ಹೆಡ ಅವರು ’ಈ ಹೊಂಡಗಳ ಹೂಳು ತೆಗೆಯುವಾಗ ಪ್ಲಾಸ್ಟಿಕ್ ಹಾಳೆಗಳಿಗೆ ತೂತುಗಳು ಆಗೋದಿಲ್ಲವೇ?’ ಎಂಬ ಪ್ರಶ್ನೆ ಎತ್ತಿದ್ದಾರೆ. ವಿದರ್ಭದ ಪರ್ಯಾವರಣವಾಹಿನಿ ಸಂಸ್ಥೆಯ ಕಾರ್ಯಕರ್ತ ಯೋಗೇಶ್ ಅನೇಜರ ಅನುಭವದ ಪ್ರಕಾರ, ’ಪಾರಂಪರಿಕ ಕೃಷಿಹೊಂಡಗಳೇ ಅಂತರ್ಜಲ ಮಟ್ಟ ಏರಿಸಿವೆ.’

ಕೃಷಿಕರಿಗೆ ಸಹಾಯ ಮಾಡುವ ನೆಪದಲ್ಲಿ ಈ ದೇಶದಲ್ಲಿ ಏನೇನು ಆಗುತ್ತಿದೆ, ನೋಡಿದಿರಾ?