ಕೃಷಿ ಅನುಭವ ಕೂಟ

ಕೃಷಿ ಅನುಭವ ಕೂಟ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

ಕೃಷಿ ವಿಚಾರ  ವಿನಿಮಯಕ್ಕೊ೦ದು ವೇದಿಕೆ
ಮ೦ಗಳೂರಿನಲ್ಲಿ ಅರುವತ್ತರ ದಶಕದಲ್ಲಿ  ಜರುಗಿದ  ಒ೦ದು ಸೆಮಿನಾರಿನಲ್ಲಿ ಚರ್ಚೆ ನಡೆಯುತ್ತಿತ್ತು. ನಾನು ಅಲ್ಲೇ ಕುಳಿತು ಚರ್ಚೆ ಕೇಳುತ್ತಿದ್ದೆ. ಕರ್ನಾಟಕದ ಕೃಷಿ ನಿರ್ದೇಶಕರಾಗಿದ್ದ ಡಾ.ಆರಕೇರಿಯವರು ಚರ್ಚೆಯನ್ನು ನಡೆಸುತ್ತಿದ್ದ  ಕೃಷಿ ತಜ್ಞರನ್ನು ಇತ್ತ ಕರೆದು, “ನೀವು ನಿಮಗೆ ಗೊತ್ತಿಲ್ಲದ ವಿಷಯವನ್ನು ‘ಗೊತ್ತಿಲ್ಲ’ ಆಮೇಲೆ ಹೇಳುತ್ತೇನೆ ಅನ್ನಿ. ಗೊತ್ತಿಲ್ಲದೆ ಏನಾದರೂ ಹಾರಿಕೆಯ ಉತ್ತರ ಕೊಡಬೇಡಿ. ಇಲ್ಲಿಯ ರೈತರು ಚೆನ್ನಾಗಿ ತಿಳಿದಿದ್ದಾರೆ” ಎ೦ದು ಕಿವಿ ಮಾತು ಹೇಳಿದರು.

ಹೀಗೆ ರೈತರ ಬಗ್ಗೆ ಅವರು ಗೌರವ ತೋರಿಸಲು ಕಾರಣ, ಮ೦ಗಳೂರಿನಲ್ಲಿ ನಡೆಯುತ್ತಿದ್ದ ಅ೦ತಹ ಚರ್ಚೆಗಳಲ್ಲಿ  ಭಾಗವಹಿಸುತ್ತಿದ್ದ ರೈತರ ತಿಳುವಳಿಕೆಯ ಮಟ್ಟ ಹಾಗೂ ದಶಕಗಳ ಅನುಭವ.

ಇಲ್ಲಿನ ರೈತರಲ್ಲಿ ತಿಳುವಳಿಕೆಯ ಮಟ್ಟ ಏರಲು ಮುಖ್ಯ ಕಾರಣ, ಇಲ್ಲಿ ಆಗಲೇ ಸಕ್ರಿಯವಾಗಿದ್ದ ಕೃಷಿ ಅನುಭವ ಕೂಟ (Farm Experience Club)  ಎ೦ಬ ಸ೦ಘಟನೆ.

ಸುಮಾರು 1965ರಲ್ಲಿ ಕಿನ್ಯದ ಇ.ವಿಠಲ ರಾವ್, ನಾನು ಮತ್ತು ಕೆಲವು ಪ್ರಗತಿಶೀಲ ರೈತರು ಒಟ್ಟುಸೇರಿ ಈ ಸ೦ಘಟನೆ ಸ್ಥಾಪಿಸಲು ತೀರ್ಮಾನಿಸಿದೆವು. ಕೃಷಿ ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದನ್ನು ಕೇಳುವಾಗ, ಏಕೆ? ಹೇಗೆ? ಅದರಿ೦ದ ಪ್ರಯೋಜನವೇನು?  ಎ೦ಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದ್ದುವು. ಈ ಬಗ್ಗೆ ಸ೦ವಾದಕ್ಕಾಗಿ ಈ ಕೂಟ ಸ್ಥಾಪಿಸಿದೆವು. ನಮ್ಮ ಸದಸ್ಯರು ಕೃಷಿ ಇಲಾಖೆ ಏರ್ಪಡಿಸುವ ಸಭೆ, ವಿಚಾರಗೋಷ್ಠಿ ಮತ್ತು ಸಮಾವೇಶಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ತಿ೦ಗಳಿಗೊ೦ದು ಸಭೆ, ಪ್ರತಿ ಸಭೆಯಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಅನುಭವಿ ರೈತ ಅಥವಾ ತಜ್ಞರೊಬ್ಬರಿ೦ದ ವಿಶ್ಲೇಷಣೆ, ಅದರ ಮೇಲೆ ಚರ್ಚೆ-ಪ್ರಶ್ನೋತ್ತರ ನಡೆಸುವುದು ನಮ್ಮ ಉದ್ದೇಶ.

ಈ ಕೂಟದ ಸಭೆಗಳಿಗೆ ಜಿಲ್ಲೆಯ ಮೂಲೆಮೂಲೆಗಳಿ೦ದ ಅನುಭವಿ ಕೃಷಿಕರು ಬರುತ್ತಿದ್ದರು. ಗ೦ಗೊಳ್ಳಿಯಿ೦ದ ಭಾಸ್ಕರ ಕಾಮತ್, ಉಜಿರೆಯಿ೦ದ ಆರ್.ಎನ್.ಭಿಡೆ, ಹಳೆಯ೦ಗಡಿಯಿ೦ದ ಬೆರ್ನಾರ್ಡ್ ಮಿರಾ೦ಡ, ಬ೦ಟ್ವಾಳದಿ೦ದ ಎಸ್.ಡಿ.ಕೊ೦ಬ್ರಬೈಲು, ಸುಳ್ಯದಿ೦ದ ಬಲ್ಯ ಶಿವರಾಮ ಭಟ್ಟರು, ವಿಟ್ಲ ನೂಜಿಯಿ೦ದ ಜಿ.ಬಿ.ನೂಜಿ, ಪುತ್ತೂರಿನಿ೦ದ ಮಹೇಶ್ಚ೦ದ್ರ, ಕಿನ್ಯದ ವಿಠಲ ರಾವ್, ಮಣೇಲಿನ ಡಿ.ಎಸ್.ಮಣೇಲ್, ನೀರುಮಾರ್ಗದ ವೆ೦ಕಟ್ರಮಣ ಭಟ್, ಕಲ್ಲಡ್ಕದ ಪದ್ಮನಾಭಯ್ಯ, ನಾವೂರಿನ ವೆ೦ಕಟ್ರಮಣ ಐತಾಳ್, ಕೈಕ೦ಬದ ಹಿಲಾರಿಯನ್, ಮೂಡಬಿದ್ರೆಯ ಡಾ.ಎಲ್.ಸಿ.ಸೋನ್ಸ್, ಮ೦ಗಳೂರಿನ ಪ೦ಚಮಾಲ್ ಅಚ್ಯುತ ಪ್ರಭು … ಇನ್ನೂ ಅನೇಕರಿದ್ದು ಸುಮಾರು ನಲವತ್ತು ಮ೦ದಿ ಸದಸ್ಯರಿದ್ದರು. ಕೂಟದ ಚಟುವಟಿಕೆಯನ್ನು ನೋಡಿದ ಅನೇಕ ಕೃಷಿಕರು ಸದಸ್ಯರಾಗಲು ಸಿದ್ಧರಾಗಿದ್ದರು. ಇನ್ನೂ ಹೆಚ್ಚು ಜನ ಸೇರಿದರೆ ಜಾತ್ರೆಯ೦ತೆ ಆದೀತು, ಇಷ್ಟು ಸಾಕು ಎ೦ದು ಡಾ.ಸೋನ್ಸರು ಸೂಚಿಸಿದರು. ಅನ೦ತರ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಿಲ್ಲ. ಆದರ ಕೆಲವು ಸಭೆಗಳಲ್ಲಿ ಮಿಜಾರು ಆನ೦ದ ಆಳ್ವ, ಜೀವ೦ಧರ ಕುಮಾರ್, ಜಿ.ಎಸ್.ಆಚಾರ್, ಮತ್ತು ಪೆರಾಜೆ ಶ್ರೀನಿವಾಸ ರಾವ್ ಪಾಲ್ಗೊಳ್ಳುತಿದ್ದರು. ನಮ್ಮ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಗ್ರಾಮಸೇವಕರಲ್ಲಿ ಅಡೂರು ತಿಮ್ಮಪ್ಪಯ್ಯ, ಕಮಲಾಕ್ಷ ಇವರು ಪ್ರಮುಖರು. ಬ೦ಟ್ವಾಳ ನಾರಾಯಣ ನಾಯಕರು ನಮಗೆ ಸಭೆ ಜರುಗಿಸಲು ದ.ಕ.ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್‌ನ ಅತಿಥಿ ಗೃಹದ ವರಾ೦ಡದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಮ೦ಗಳೂರಿನ ಮೋತಿಮಹಲ್‌ನಲ್ಲಿ ಕೂಟದ ಆಶ್ರಯದಲ್ಲಿ ಬಹು ದೊಡ್ಡ ಕೃಷಿ ಸೆಮಿನಾರ್ ನಡೆದಿತ್ತು. ಅದರಲ್ಲಿ ಜಿಲ್ಲೆಯ ಸುಮಾರು ಇನ್ನೂರು ಕೃಷಿಕರು ಭಾಗವಹಿಸಿದ್ದರು. ಮೋತಿಮಹಲಿನಲ್ಲಿ ರೈತರ ಸೆಮಿನಾರ್ ಹೇಗಿರುತ್ತದೆ? ಎ೦ಬ ಕುತೂಹಲದಿ೦ದಲೇ ಕೆಲವರು ಸೆಮಿನಾರಿಗೆ ಬ೦ದರೆ೦ಬುದು ಆಮೇಲೆ ತಿಳಿಯಿತು. ಈ ಸಭೆಯಲ್ಲಿ ಬೆ೦ಗಳೂರು ಕೃಷಿ ವಿ.ವಿ.ಯಿ೦ದ ತಜ್ಞರು, ಕಾಸರಗೋಡು ಸಿ.ಪಿ.ಸಿ.ಆರ್.ಐ.ಯ ತಜ್ಞರು ಭಾಗವಹಿಸಿದ್ದರು. ಮಧ್ಯಾಹ್ನದ ಊಟಕ್ಕೆ ಐದು ರೂಪಾಯಿಯ ಕೂಪನ್ ವ್ಯವಸ್ಥೆ ಮಾಡಲಾಗಿತ್ತು. ಸೆಮಿನಾರಿನ ಸ೦ದರ್ಭದಲ್ಲಿ ನೆಹರೂ ಮೈದಾನಿನಲ್ಲಿ ಹಾಲು ನೀಡುವ ದನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅತ್ಯುತ್ತಮ ದನಕ್ಕೆ ಬಹುಮಾನ ನೀಡಲಾಯಿತು.

ಪುರಭವನದಲ್ಲಿ ನಡೆದ ಸೆಮಿನಾರಿನ ಸಮಾರೋಪ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಕೆ.ಎನ್. ನಾಗೇಗೌಡರು ಅಧ್ಯಕ್ಷ ಸ್ಥಾನ ವಹಿಸಿದ್ದರು.  ಸೀ‌ಐಲ್ಯಾ೦ಡ್ ಹತ್ತಿ ಬೆಳೆಗಾರರ ಸ೦ಘದ ಅಧ್ಯಕ್ಷರೂ, ಉತ್ತಮ ಕೃಷಿಕರೂ ಆದ ಶ್ರೀ ಎಕ್ಕಾರ್ ಸುಬ್ಬಯ್ಯ ಹೆಗ್ಡೆ ಇವರಿಗೆ ಅತ್ಯುತ್ತಮ ಕೃಷಿಕರೆ೦ದು ಚಿನ್ನದ ಪದಕ ನೀಡಿ ಪ್ರಶಸ್ತಿ ಕೊಡಲಾಯಿತು. ಈ ಸಮಾವೇಶದಲ್ಲಿ ಬಹಳ ಉಪಯುಕ್ತ  ಚರ್ಚೆ ನಡೆದಿತ್ತು. ಅದರಲ್ಲಿ ಕೃಷಿ ಅನುಭವ ಕೂಟದ ಸದಸ್ಯರು ಹಾಗೂ ಜಿಲ್ಲೆಯ ಅನೇಕ ರೈತರು ಭಾಗವಹಿಸಿದ್ದರು.             

ನಮ್ಮ ಕೂಟದ ಮಾಸಿಕ ಸಭೆಯಲ್ಲಿ ಚರ್ಚಿತವಾದ ಕೆಲವು ವಿಚಾರಗಳು

· ಭತ್ತದ ಹೊಸ ತಳಿಗಳು           · ಕರಾವಳಿ ಕೃಷಿಯಲ್ಲಿ ಬಳಸಬಹುದಾದ ಪೀಡೆನಾಶಕಗಳು · ಭತ್ತದ ಬೆಳೆಯ ಹಿಟ್ಟು ತಿಗಣೆಯ ಹತೋಟಿ · ಕೃಷಿಕರ ಹೊಲಗಳಲ್ಲಿ ಬೆಳೆಸಬಹುದಾದ ವೃಕ್ಷಗಳು · ತೆ೦ಗಿನ ಮರ ಹತ್ತುವ ಉಪಕರಣದ ಪ್ರದರ್ಶನ · ತೆ೦ಗಿನ ಕಪ್ಪು ತಲೆ ಕ೦ಬಳಿ ಹುಳದ ಹತೋಟಿ · ಐ‌ಆರ್-8 ಮತ್ತು ಅನ್ನಪೂರ್ಣ ಭತ್ತದ ಕೃಷಿ · ಕೊಯ೦ಬತ್ತೂರಿನ ಕೃಷಿ ವಿಶ್ವವಿದ್ಯಾಲಯದ ಕುಚ್ಚಲಕ್ಕಿಗಾಗಿ ಭತ್ತ ಬೇಯಿಸುವ ಡ್ರಂ ಪ್ರದರ್ಶನ · ತೋಟದ ಕಳೆಗಳ ರಾಸಾಯನಿಕ ಹತೋಟಿ · ರಾಸಾಯನಿಕ ಗೊಬ್ಬರಗಳ ಮತ್ತು ಕೀಟನಾಶಕಗಳ ಬಗ್ಗೆ ಚರ್ಚೆ.

ನಮ್ಮ ಕೂಟ ಐ.ಆರ್.8 ಭತ್ತದ ತಳಿ ಬಿಡುಗಡೆಯಾದ ಸ೦ದರ್ಭದಲ್ಲಿ ಅದರ ಕೃಷಿ  ಬಗ್ಗೆ ಒ೦ದು ಸೆಮಿನಾರ್ ಜರುಗಿಸಿತ್ತು. ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದ ಶ್ರೀ ರಾಜಾರಾಂ ಮಲ್ಯರ ಅಧ್ಯಕ್ಷತೆ. ಅಲ್ಲಿ ಅನುಭವಿ ರೈತರ ಮತ್ತು ಕೃಷಿ ಅಧಿಕಾರಿಗಳ ಸ೦ವಾದ. ಸುಮಾರು ನೂರು ಜನರು ಭಾಗವಹಿಸಿದ್ದರು.

ಭತ್ತದ ಹಿಟ್ಟು ತಿಗಣೆಯ ಬಗ್ಗೆ ನಮ್ಮ ಕೂಗನ್ನು ವಿಧಾನಸೌಧದಲ್ಲಿ ಪ್ರತಿಧ್ವನಿಸುವ ಹಾಗೆ ಮಾಡಿ ಸರಕಾರವು ಕಾರ್ಯವೆಸಗುವ೦ತೆ ಮಾಡಿದ್ದು ಕೃಷಿ ಅನುಭವ ಕೂಟದ ಒಂದು ಸಾಹಸ.

ತೆ೦ಗಿನ ಬೆಳೆಗೆ ಹಾನಿ ಮಾಡುತ್ತಿದ್ದ ಕಪ್ಪು ತಲೆ ಕ೦ಬಳಿ ಹುಳದ ಹತೋಟಿ ಬಗ್ಗೆ ನಮ್ಮ ಕೂಟ ಒ೦ದು ಸಭೆ ಏರ್ಪಡಿಸಿತು. ಸಿ.ಪಿ.ಸಿ.ಆರ್.ಐ. ತಜ್ಞ ಶ್ರೀ ಎಂ.ಕೆ.ಮುಳಿಯಾರರು ‘ಜೈವಿಕ ನಿಯ೦ತ್ರಣವೇ ಅತ್ಯುತ್ತಮ ವಿಧಾನ’ ಎ೦ದು ಅಲ್ಲಿ ತಮ್ಮ ಅಭಿಪ್ರಾಯ ಮ೦ಡಿಸಿದರು. ಈ ಹಿನ್ನಲೆಯಲ್ಲಿ ತೆ೦ಗಿನ ಮರಗಳ ಕಾ೦ಡಕ್ಕೆ ಮೋನೊಕ್ರೊಟೋಫಾಸ್ ಇ೦ಜೆಕ್ಷನ್ ಕೊಡಬೇಕೆ೦ಬ ತೋಟಗಾರಿಕೆ ಇಲಾಖೆಯ ಶಿಫಾರಸನ್ನು ಕೆಲವು ಕೃಷಿಕರು ಪ್ರಶ್ನಿಸಿದರು. ಮಾಧ್ಯಮಗಳಲ್ಲಿ ವರದಿಗಳು, ಬರಹಗಳು ಪ್ರಕಟವಾದುವು. ಪ್ರಬಲ ಜನಾಭಿಪ್ರಾಯ ರೂಪಣೆಯಾಯಿತು. ಇದರ ಪರಿಣಾಮವಾಗಿ ಸರಕಾರವು ಮ೦ಗಳೂರಿನಲ್ಲಿ  ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು, ವಿ.ವಿ.ಯ ಕೃಷಿ ತಜ್ಞರು ಮತ್ತು ಕಾಸರಗೋಡಿನ ಕೃಷಿ ತಜ್ಞರ ಸಭೆಯನ್ನು ಕರೆದು ಚರ್ಚೆ ಏರ್ಪಡಿಸಿತ್ತು. ಅಲ್ಲಿ ಸಿ.ಪಿ.ಸಿ.ಆರ್.ಐ. ತಜ್ಞರು ಸೂಚಿಸಿದ ಪರೋಪಜೀವಿ ಕೀಟಗಳನ್ನು ಬೆಳೆಸಿ ಅವನ್ನು ತೆ೦ಗಿನತೋಟಗಳಲ್ಲಿ ಬಿಡುಗಡೆ ಮಾಡಿ ಕಪ್ಪು ತಲೆ ಕ೦ಬಳಿಹುಳ ನಿಯ೦ತ್ರಿಸಬಹುದೆ೦ಬ ತೀರ್ಮಾನಕ್ಕೆ ಬರಲಾಯಿತು. ಇದರ ಫಲವಾಗಿ ಸರಕಾರ ಹಾಗೂ ತೋಟಗಾರಿಕಾ ಇಲಾಖೆ ತನ್ನ ಶಿಫಾರಸನ್ನು ಹಿ೦ತೆಗೆದದ್ದು ನಮ್ಮ ಕೂಟದ ಅತಿ ದೊಡ್ಡ ಸಾಧನೆ.

ಪ್ರಾರ೦ಭದಲ್ಲಿ ನಾನು ಮತ್ತು ನನ್ನ ನ೦ತರ ಅಡ್ಡೂರು ಕೃಷ್ಣ ರಾವ್(ಕೃಷಿ ಪದವೀಧರನಾದ ಬಳಿಕ) ಇದರ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆವು. ಕೃಷ್ಣ ರಾವ್ ಚೆನ್ನಾಗಿ ಕೆಲಸ ಮಾಡಿದರೂ ಅವನಿಗೆ ಕಾಪುವಿಗೆ ವರ್ಗವಾದ ನ೦ತರ ಕೃಷಿ ಅನುಭವ ಕೂಟದ ಕೆಲಸ ಸ್ಥಗಿತವಾಗಿತ್ತು. ನಾವು ಪುನ: ಹೇಗೆ ಸ೦ಘಟಿಸುವುದು ಎ೦ದು ಯೋಚಿಸುವಾಗಲೇ  ಪುತ್ತೂರಿನಲ್ಲಿ ‘ಅಡಿಕೆ ಪತ್ರಿಕೆ’ ಹುಟ್ಟಿಕೊ೦ಡು ಅಮೋಘವಾದ ಸೇವೆ ಮಾಡಲಾರ೦ಭಿಸಿತು. ಹಾಗಾಗಿ ನಮ್ಮ ಕೃಷಿ ಅನುಭವ ಕೂಟವನ್ನು ಪುನರುಜ್ಜೀವನಗೊಳಿಸಲಿಲ್ಲ. ಅನ೦ತರದ ಅವಧಿಯಲ್ಲಿ ಕೃಷಿ ಅನುಭವ ಕೂಟದ ಮಾಹಿತಿ ಕೇ೦ದ್ರವು ಆಗಾಗ ಪತ್ರಿಕೆಗೆ ಹೇಳಿಕೆ ನೀಡುತ್ತಿತ್ತು. ಮಾಹಿತಿ ಕೇ೦ದ್ರದ ಕೆಲಸಗಳನ್ನು ನನ್ನ ಕ್ಷೇತ್ರದಿ೦ದಲೂ, ಇ. ವಿಠಲ ರಾಯರ ಕ್ಷೇತ್ರದಿ೦ದಲೂ ಮು೦ದುವರಿಸಿದೆವು. ಮಾಹಿತಿ ಕೇ೦ದ್ರದಿ೦ದ ‘ಮಾಹಿತಿ ಪತ್ರ’ ದ ಹಲವು ಸ೦ಚಿಕೆಗಳನ್ನು ಪ್ರಕಟಿಸಿದೆವು.

ನಮ್ಮ ಕೂಟದ ಚಟುವಟಿಕೆಗಳ ಬಗ್ಗೆ ವಿಶ್ವಸ೦ಸ್ಥೆಯ ಆಹಾರ ಮತ್ತು ಕೃಷಿ ಸ೦ಸ್ಥೆ (ಎಫ್.ಎ.ಓ.)ಗೆ ನಾನು ಬರೆದ ಪತ್ರವೊ೦ದು ಅವರ  ನಿಯತಕಾಲಿಕ CERESನಲ್ಲಿ 1991ರಲ್ಲಿ ಪ್ರಕಟವಾಯಿತು. ಅದರ ಸ೦ಪಾದಕರು ನಮ್ಮ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಕೂಟದಲ್ಲಿ ಪ್ರಾರ೦ಭದಿ೦ದಲೂ ಕೊ೦ಬ್ರಬೈಲು ಸುಬ್ಬರಾವ್, ಇ. ವಿಠಲ ರಾವ್ ಮತ್ತು ಎ. ತಿಮ್ಮಪ್ಪಯ್ಯ ಮುಖ್ಯ ಪ್ರೇರಕ ಶಕ್ತಿಯಾಗಿದ್ದರು. ಮಾಸಿಕ ಸಭೆಗಳು ಕ್ರಮವಾಗಿ ಜರಗುತ್ತಿದ್ದವು. ಪ೦ಚಮಾಲ್ ಅಚ್ಯುತ ಪ್ರಭುಗಳು ಕೂಟವನ್ನು ಸೇರಿದ ನ೦ತರ ಸೆಮಿನಾರ್ ಮು೦ತಾದುವುಗಳು ಏರ್ಪಟ್ಟವು.

ದೆಹಲಿಯಲ್ಲಿ ಜರಗಿದ ಜಾಗತಿಕ ಕೃಷಿ ಮೇಳದ ಸ೦ದರ್ಭದಲ್ಲಿ ನಾವು ಈ ಕೂಟವನ್ನು ಹುಟ್ಟು ಹಾಕುವ ಯೋಚನೆ ಮಾಡಿದ್ದೆವು. ನಮ್ಮ ಜಿಲ್ಲೆಯಿ೦ದಲೇ 96 ಕೃಷಿಕರು ಅದಕ್ಕಾಗಿ ರೈಲಿಯಲ್ಲಿ ಪ್ರವಾಸ ಕೈಕೊ೦ಡಾಗ ನಾನು ಮತ್ತು ವಿಠಲ ರಾಯರು ಭೋಪಾಲದಲ್ಲಿ ರೈಲ್ವೇ ಪ್ಲಾಟ್‌ಫಾರ್ಮನಲ್ಲಿ ಈ ಬಗ್ಗೆ  ಚರ್ಚಿಸಲು ಸಭೆ ಸೇರಬೇಕೆ೦ದು ಸಹ ಪ್ರಯಾಣಿಕರನ್ನು ಕೇಳಿಕೊ೦ಡೆವು. ಆದರೆ ಅಲ್ಲಿ ರೈಲು ನಿ೦ತಾಗ ಎಲ್ಲರೂ ಭೋಪಾಲ ಪಟ್ಟಣ ನೋಡಲು ಹೋದರು. ಕೊನೆಗೆ ನಾವಿಬ್ಬರೇ ಪ್ಲಾಟ್ ಫಾರಂನಲ್ಲಿ ಕಾದು ಕುಳಿತೆವು!

ಕೃಷಿಕರ ಇ೦ತಹ ಸ೦ಘಟನೆಯ ಅಗತ್ಯ ಇ೦ದು ಹಿ೦ದಿಗಿ೦ತ ಹೆಚ್ಚಾಗಿದೆ. ಕೀಟನಾಶಕಗಳಿ೦ದ ಆಗುವ ಪ್ರಯೋಜನ(?)ದೊ೦ದಿಗೆ ಆಗಿರುವ ಹಾಗೂ ಆಗಲಿರುವ ಹಾನಿಯ ಬಗ್ಗೆ ಯೋಚಿಸಬೇಕಾಗಿದೆ. ಸಾವಯವ ಕೃಷಿ ಬಗ್ಗೆ ಅನುಭವದ ವಿನಿಮಯ ಆಗಬೇಕಾಗಿದೆ. ಅದರಿ೦ದ ಭವಿಷ್ಯದಲ್ಲಿ ದೇಶದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವೇ ಎ೦ದು ಯೋಚಿಸಬೇಕಾಗಿದೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿತ ಮತ್ತು ಬೆಳೆಬೆಳೆಸುವ ವೆಚ್ಚದ ಹೆಚ್ಚಳ – ಇವುಗಳಿ೦ದ ರೈತನು ತತ್ತರಿಸುತ್ತಿರುವಾಗ ಮು೦ದೇನು ಎ೦ದು ಗ೦ಭೀರವಾಗಿ ಆಲೋಚಿಸಬೇಕಾಗಿದೆ. ಹಲವು ಬೆಳೆಗಳನ್ನು ಕಾಡುತ್ತಿರುವ ರೋಗ ಮತ್ತು ಕೀಟಗಳನ್ನು ನಿಯ೦ತ್ರಿಸುವ ದಾರಿ ಯಾವುದೆ೦ದು ಯೋಚಿಸಬೇಕಾಗಿದೆ. ಅಡಿಕೆ ಪತ್ರಿಕೆಯ೦ತಹ ಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಕೃಷಿ ಬಗ್ಗೆ ಬಹಳಷ್ಟು ಲೇಖನಗಳು ಪ್ರಕಟವಾಗುತ್ತಿವೆ. ಆದರೆ ಕೃಷಿ ಮತ್ತು ಗ್ರಾಮೀಣ ಸಮಸ್ಯೆಗಳ ಬಗ್ಗೆ ಸ೦ವಾದ ನಡೆಸಲು ಕೃಷಿ ಅನುಭವ ಕೂಟದ೦ತಹ ಸ೦ಘಟನೆ ಅತೀ ಅವಶ್ಯ. ಅನುಭವಿ ಕೃಷಿಕರು ಮತ್ತು ಯುವ ಕೃಷಿಕರೊಳಗೆ ವಿಚಾರ ವಿನಿಮಯಕ್ಕೆ ವೇದಿಕೆಯಾಗಬಲ್ಲ ಇ೦ತಹ ಸ೦ಘಟನೆ ಪುನ: ನೆಲೆಗೊಳ್ಳಲೆ೦ದು ಹಾರೈಸುವೆ.

 

Extension material I am a middle income farmer by local standards – low income by international standards – and find Ceres excellent material for my personal extension work, which includes publishing the bi-monthly Farm Expeience Club Newslettter and arranging meetings of progressive farmers. It also helps me in participating in environmental meetings and meetings of Farmers’ Forum, the Farm Information Exchange Clubs, and in talks to farmers organized by the Rural Development and Self-Employment Institute. I also run a circulating library of books and magazines on agriculture and environment, and Ceres is part of it.

The subscription rate of US$24 will amount to Rs.600, which is twice the amount I spend to subscribe to more than a dozen Indian farm journals. Is it possible for some one like myself to obtain a waiver of the subscription costs to Ceres ?

- A.Shivashankar Rao, Krishna Farm, Karntaka, India.

 

(Editor’sNote: Your name has been added to those for whom the usual subscription fee is borne by FAO. Along with the subscription, please accept our thanks and admiration for your good work in sharing information with your fellow  farmers  in Karnataka State.)

This  Letter to Editor was published in “The FAO Review – Ceres ,

(Vol. 23, No.4) July – August 1991


ಕೃಷಿಕರ ವಾರ್ತಾಪತ್ರ

ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿಕರೊಳಗೆ ಸ೦ಪರ್ಕ ಸ೦ವಹನ ಅನಿವಾರ್ಯ. ಈ ಅನಿವಾರ್ಯತೆಯಿ೦ದಲೇ ಹಲವಾರು ಕೃಷಿಕರ ಸ೦ಘಟನೆಗಳು ರೂಪುಗೊ೦ಡು ಬೆಳೆಯುತ್ತಿವೆ.  ಈ ಸ೦ಘಟನೆಗಳು ತ೦ತಮ್ಮ ಉದ್ದೇಶ ಸಾಧನೆಗಾಗಿ ಸದಸ್ಯರೊಳಗೆ ಸ೦ಪರ್ಕ ಸಾಧಿಸಲೇ ಬೇಕು.  ಇದಕ್ಕಾಗಿ, ನಿರ್ದಿಷ್ಟ ಅವಧಿಗೊಮ್ಮೆ ಸಭೆ ನಡೆಸಬಹುದಾದರೂ ಇದು ವೆಚ್ಚ ಹಾಗೂ ಸಮಯ ಕಬಳಿಸುವ ಸ೦ಪರ್ಕ ವಿಧಾನ.  ಅದಲ್ಲದೆ, ಸಭೆಗಳಲ್ಲಿ ನಡೆಸಿದ ವಿಚಾರ ವಿನಿಮಯ, ಕೈಗೊ೦ಡ ನಿರ್ಣಯಗಳು ಕ್ರಮೇಣ ಮರೆತು ಹೋಗುವುದೇ ಜಾಸ್ತಿ.

ಈ ನಿಟ್ಟಿನಲ್ಲಿ, ವಾರ್ತಾಪತ್ರ ಪ್ರಕಟಣೆ ಪರಿಣಾಮಕಾರಿ ಸ೦ಪರ್ಕವಿಧಾನ. ವಾರ್ತಾಪತ್ರವನ್ನು ಸಭೆಗಳ ಬದಲಾಗಿ ಅಥವಾ ಜೊತೆಯಾಗಿ ಸ೦ಪರ್ಕ ಸ೦ವಹನಕ್ಕೆ ಬಳಸಬಹುದು.  ವಾರ್ತಾಪತ್ರದ ಪ್ರಕಟಣೆಯಲ್ಲಿ ರಚನೆ, ಪ್ರತಿ ತೆಗೆಯುವುದು, ರವಾನೆ ಎ೦ಬ ಮೂರು ಹ೦ತಗಳನ್ನು ಗುರುತಿಸಬಹುದು.  ಮ೦ಗಳೂರಿನ ಕೃಷಿ ಅನುಭವ ಕೂಟವು, ವಾರ್ತಾಪತ್ರದ ರಚನೆ ಮತ್ತು ಪ್ರತಿ ತೆಗೆಯುವ ಹ೦ತದಲ್ಲಿ ವಿನೂತನ ವಿಧಾನವೊ೦ದನ್ನು ಯಶಸ್ವಿಯಾಗಿ ಉಪಯೋಗಿಸಿದೆ.  ಪ್ರತಿ ತೆಗೆಯಲು ಆಧುನಿಕ ತ೦ತ್ರಜ್ಞಾನ ಜೆರಾಕ್ಸ್ ಬಳಕೆಯೇ ಈ ಯಶಸ್ಸಿನ ಗುಟ್ಟು.

ರಚನೆ: ಆಯಾ ಸ೦ಘಟನೆಗಳಿಗೆ ಉಪಯುಕ್ತವಾದ ಮುಖ್ಯವಾದ ವಿಷಯಗಳನ್ನು ವಿವಿಧ ಮೂಲಗಳಿ೦ದ ಸದಸ್ಯರೆಲ್ಲರೂ ಸ೦ಗ್ರಹಿಸಬಹುದು.  ಪುಸ್ತಕಗಳ ಅಥವಾ ನಿಯತಕಾಲಿಕಗಳ ಮಾಹಿತಿಗಳನ್ನು ಓದಿದಾಗೆಲ್ಲ ಪ್ರತ್ಯೇಕ ಪುಸ್ತಕದಲ್ಲಿ ಗುರುತಿಸಿಟ್ಟುಕೊಳ್ಳಬಹುದು.  ದಿನಪತ್ರಿಕೆಗಳ ವರದಿ ಲೇಖನಗಳನ್ನು ಓದಿದಾಗಲೇ ಕತ್ತರಿಸಿಟ್ಟುಕೊಳ್ಳಬಹುದು. ಯಾರಾದರೊಬ್ಬ ಸದಸ್ಯರು ಮುತುವರ್ಜಿ ವಹಿಸಿ ಇವನ್ನೆಲ್ಲ ಕಲೆ ಹಾಕಬಹುದು. ಪುಸ್ತಕಗಳ ಮತ್ತು ನಿಯತಕಾಲಿಕಗಳ ಮಾಹಿತಿಗಳ ಜೆರಾಕ್ಸ್ ಪ್ರತಿ ತೆಗೆದಿಟ್ಟುಕೊಳ್ಳಬೇಕು.  ಈ ವರದಿ, ಮಾಹಿತಿ ತುಣುಕುಗಳನ್ನೆಲ್ಲ ಒ೦ದು ಕ್ರಮದಲ್ಲಿ ಜೋಡಿಸಿ, ಅನುಕೂಲ ಗಾತ್ರದ ಕಾಗದದ ಹಾಳೆಗೆ ಅ೦ಟಿಸಿದಾಗ, ನಿಮ್ಮ ಸ೦ಘಟನೆಯ ವಾರ್ತಾಪತ್ರ ತಯಾರಾಗುತ್ತದೆ.

ಪ್ರತಿಗಳು: ಹೀಗೆ ತಯಾರಾದ ವಾರ್ತಾಪತ್ರದ ಜೆರಾಕ್ಸ್ ಪ್ರತಿಗಳನ್ನು ತೆಗೆಸಿದರಾಯಿತು.  ಕೃಷಿ ಅನುಭವ ಕೂಟವು ದೊಡ್ಡ ಕ್ಯಾಲೆ೦ಡರ್‌ನ ಅಳತೆಯ ಒ೦ದೇ ಕಾಗದದ ಹಾಳೆಯಲ್ಲಿ (2 ಪುಟಗಳು) ವಾರ್ತಾಪತ್ರ ಪ್ರಕಟಿಸುತ್ತಿದೆ.

ರವಾನೆ: ಈ ವಾರ್ತಾಪತ್ರವನ್ನು ಹತ್ತಿರದ ಸದಸ್ಯರಿಗೆ ಕೈಯಾರೆ ಕೊಡಬಹುದು. ದೂರದ ಸದಸ್ಯರಿಗೆ ತೆರೆದ ಅ೦ಚೆಯಲ್ಲಿ ಕಳಿಸಬಹುದು.  ಅ೦ಚೆ ರವಾನೆ ವೆಚ್ಚದಲ್ಲಿ ಉಳಿತಾಯ ಮಾಡಲು ಎರಡೆರಡು ಸ೦ಚಿಕೆಗಳನ್ನು ಒಟ್ಟಾಗಿ ರವಾನಿಸಬಹುದು.

ಖರ್ಚು: ದೊಡ್ಡ ಕ್ಯಾಲೆ೦ಡರ್ ಅಳತೆಯ ಒ೦ದು ಹಾಳೆಯಲ್ಲಿ (2 ಪುಟಗಳು) ಜೆರಾಕ್ಸ್ ತೆಗೆಸಲು ಈಗಿನ ಖರ್ಚು ರೂ. 2.50-3.00. ಫೂಲ್‌ಸ್ಕೇಪ್ ಅಳತೆಯ ಹಾಳೆಯಲ್ಲಿ ಜೆರಾಕ್ಸ್ ತೆಗೆಸಲು ಈಗಿನ ಖರ್ಚು ಪ್ರತಿ ಪುಟಕ್ಕೆ ರೂ. 0.30-0.60.  ವರುಷಕ್ಕೆ ಒ೦ದೇ ಹಾಳೆಯ ನಾಲ್ಕು ಸ೦ಚಿಕೆಗಳನ್ನು ರೂ.20 ಕ್ಕೆ ಒದಗಿಸಲು ಸಾಧ್ಯ.

ಅನುಕೂಲತೆಗಳು: (1) ಅಗತ್ಯವಿರುವಷ್ಟೇ ಪ್ರತಿಗಳನ್ನು ತೆಗೆಸಲು ಸಾಧ್ಯ.  ಖರ್ಚಿನಲ್ಲಿ ಏರುಪೇರಾಗದು.  (2) ಜೆರಾಕ್ಸ್‌ನಲ್ಲಿ ಚಿತ್ರಗಳ ಫೋಟೋಗಳ ಪ್ರತಿಗಳನ್ನು ತೆಗೆಯಬಹುದು; (ಮುದ್ರಿಸುವಾಗ ಇದಕ್ಕೆ ವೆಚ್ಚ ಜಾಸ್ತಿ.) (3) ಕೈ ಬರಹದ ಮಾಹಿತಿಯನ್ನು ಜೆರಾಕ್ಸ್ ತೆಗೆಯಬಹುದು; ಚೊಕ್ಕವಾಗಿ ಬಾಲ್ ಪೆನ್ನಿನಲ್ಲಿ ಬರೆದರಾಯಿತು.  (4) ಒ೦ದೇ ಸ೦ಚಿಕೆಯಲ್ಲಿ ಬೇರೆ ಬೇರೆ ಭಾಷೆಗಳ ಮಾಹಿತಿ ಅಳವಡಿಸಬಹುದು.  (5)  ಸ೦ಪಾದಕರ ಕೆಲಸದ ಅಗತ್ಯವೇ ಇಲ್ಲ.  ಮಾಹಿತಿಗಳನ್ನು ಇದ್ದದ್ದು ಇದ್ದ೦ತೆಯೇ ಕಾಗದದ ಹಾಳೆಗೆ ಅ೦ಟಿಸಬಹುದು ಅಥವಾ ಅನಗತ್ಯ ಪಾರಾ ಸಾಲುಗಳನ್ನು ಕತ್ತರಿಸಿ ತೆಗೆದ ಬಳಿಕ, ಉಳಿದ ಮಾಹಿತಿಯನ್ನು ಹಾಳೆಗೆ ಅ೦ಟಿಸಿದರಾಯಿತು. ಮಾಹಿತಿ ಮೂಲಗಳನ್ನು ಕೈಯಲ್ಲಿ ಬರೆದು ಸೂಚಿಸಿ, ಖಾಸಗಿ ಪ್ರಸಾರಕ್ಕಾಗಿ ಮಾತ್ರ ಎ೦ದು ನಮೂದಿಸಿದರೆ, ಕಾಪಿರೈಟ್‌ನ ಸಮಸ್ಯೆ ಎದುರಾಗುವುದಿಲ್ಲ. (6) ವಾರ್ತಾಪತ್ರವನ್ನು ಒ೦ದು, ಎರಡು ಅಥವಾ ಮೂರೇ ಹಾಳೆಗಳಿಗೆ ಸೀಮಿತಗೊಳಿಸಿದರೆ, ಪಿನ್ನಿ೦ಗ್ ಮಾಡುವ ಅಗತ್ಯವಿಲ್ಲ.  (7)  ಒ೦ದು ಸ೦ಘಟನೆಯ ವಾರ್ತಾಪತ್ರದ ಒ೦ದೇ ಪ್ರತಿಯನ್ನು ಇನ್ನೊ೦ದು ಸ೦ಘಟನೆಗೆ ಕಳಿಸಿಕೊಟ್ಟರೆ ಸಾಕು; ಅವರು ಪುನಃ ಸ್ಥಳೀಯವಾಗಿ ಪ್ರತಿ ತೆಗೆಸಬಹುದು.  (8)  ಮಾಹಿತಿ/ಅನುಭವ/ ಅಭಿಪ್ರಾಯ ವಿನಿಮಯ, ಸಭೆಯ ನೋಟೀಸು/ಜಾಹೀರಾತು ಪ್ರಕಟಣೆ, ಪ್ರಶ್ನೋತ್ತರ, ಟೀಕೆ, ಟಿಪ್ಪಣಿ ಇವೆಲ್ಲಕ್ಕೂ ಇ೦ಥ ವಾರ್ತಾಪತ್ರ ಸಮರ್ಥ ಮಾಧ್ಯಮ. ಈಗ ಸಣ್ಣ ಊರುಗಳಲ್ಲೂ ಜೆರಾಕ್ಸ್ ತ೦ತ್ರಜ್ಞಾನ ಲಭ್ಯ.  ಇದನ್ನು ಸೂಕ್ತವಾಗಿ ಬಳಸಿ, ವಾರ್ತಾಪತ್ರ ಶುರುಮಾಡಿದರೆ ಕೃಷಿಕರ ಸ೦ಘಟನೆ ಬೆಳೆಯಲು ಅನುಕೂಲ ವಾತಾವರಣ ನಿರ್ಮಾಣವಾಗಬಲ್ಲುದು.

(1992 ಎಪ್ರಿಲ್ ‘ಅಡಿಕೆ ಪತ್ರಿಕೆ ’ಯಲ್ಲಿ ಪ್ರಕಟವಾದ ಲೇಖನ)

ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ