ಕೃಷಿ ಅರಣ್ಯಕ್ಕಿಂತ ನೈಸರ್ಗಿಕ ಅರಣ್ಯವೇ ಮುಖ್ಯ

ಕೃಷಿ ಅರಣ್ಯಕ್ಕಿಂತ ನೈಸರ್ಗಿಕ ಅರಣ್ಯವೇ ಮುಖ್ಯ

ಹೊಸತಾಗಿ ಸೃಷ್ಟಿಮಾಡುವ ಅರಣ್ಯ ಕೃಷಿ ಅರಣ್ಯ. ನೈಸರ್ಗಿಕವಾಗಿ ಹುಟ್ಟಿ, ಬೀಜ ಪಸರಿಸಿ, ಸತ್ತು ಹುಟ್ಟಿ- ಸಾಯುವ ಅರಣ್ಯ ಶಾಶ್ವತ ಅರಣ್ಯ. ನೈಸರ್ಗಿಕ ಅರಣ್ಯಕ್ಕೂ ಕೃತಕ ಅರಣ್ಯಕ್ಕೂ ಬಹಳ ವ್ಯತ್ಯಾಸವಿದೆ. ಸಹಸ್ರಾರು ವರ್ಷಗಳಿಂದ ಅರಣ್ಯ ಅಭಿವೃದ್ದಿಯಾಗುತ್ತಾ ಬಂದಿರುವುದು ನೈಸರ್ಗಿಕವಾಗಿ. ಮಾನವನ ಹಸ್ತಕ್ಷೇಪ ಇಲ್ಲದೆ ಅದರಷ್ಟಕ್ಕೇ ಅಭಿವೃದ್ಧಿಯಾಗುತ್ತಿರುರುವ ಹಸುರು ರಾಶಿಯೇ ನೈಜ ಅರಣ್ಯ. ಅರಣ್ಯ ಎಂದರೆ ಸುಂದರ ಪ್ರಪಂಚ. ಅದು ಎಲ್ಲಾ ಪ್ರಕಾರದ ಸಸ್ಯ ಸಂಪತ್ತು ಪ್ರಾಣಿ, ಪಕ್ಷಿ, ಜೀವ ಜಂತುಗಳ ಗಡಣ. ಕೃಷಿ ಅರಣ್ಯ ಎಂದರೆ ಕೃಷಿಕರು ತಮ್ಮ ಸ್ವಾರ್ಥಕ್ಕಾಗಿ ಮರಮಟ್ಟುಗಳನ್ನು ಬೆಳೆಸುವುದು. ಆಪತ್ಕಾಲದಲ್ಲಿ ಅದನ್ನು ಕಡಿದು ಮಾರಾಟ ಮಾಡುವುದು. ಕೃಷಿ ಅರಣ್ಯ ಶಾಶ್ವತ ಅರಣ್ಯ ಅಲ್ಲ. ಅದು ಯಾವಾಗಲೂ ಕಡಿಯಲ್ಪಡಬಹುದು. ಹಾಗೆ ನೊಡಿದರೆ ಎಲ್ಲಾ ಕೃಷಿಕರೂ ಅರಣ್ಯ ಬೆಳೆಸುವವರೇ. ಅವರು ಬೆಳೆಸುವ ತೆಂಗು, ಅಡಿಕೆ, ರಬ್ಬರ್, ಅಥವಾ ಇನ್ಯಾವುದೇ ಹಸುರು ಎಲೆಗಳುಳ್ಳ ಬೆಳೆಗಳು ಅಂಗಾರಾಮ್ಲವನ್ನು ಹೀರಿಕೊಂಡು ಆಮ್ಲ ಜನಕವನ್ನು ಬಿಡುಗಡೆ ಮಾಡುವವವುಗಳೇ. ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ನಮ್ಮ ಇಂದಿನ ಅವಷ್ಯಕತೆ ಶಾಶ್ವತ ಅರಣ್ಯ ಪ್ರದೇಶದ ಹೆಚ್ಚಳ.

ನಮ್ಮಲ್ಲಿ ೩೩% ಅರಣ್ಯ ಪ್ರದೇಶ ಇರಬೇಕೆಂಬುದು ಲೆಕ್ಕಾಚಾರ. ಅದು ೨೭% ಇತ್ತು. ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿ ೧೭ % ಕ್ಕೆ ಕುಸಿದಿದೆ. ಇದರಿಂದಾಗಿ ವಾತಾವರಣದ ಬಿಸಿ ಹೆಚ್ಚಾಗಿದೆ. ವಾತಾವರಣದ ಬಿಸಿ ತಗ್ಗಿಸಲು ಅರಣ್ಯ ಪ್ರದೇಶದ ಹೆಚ್ಚಳ ಒಂದೇ ಪರಿಹಾರ. ಅದಕ್ಕೆ ಬೇಕಾದುದು ಶಾಶ್ವತ ಅರಣ್ಯ ಪ್ರದೇಶಗಳ ಹೆಚ್ಚಳವೇ ಹೊರತು ಕೃಷಿ ಭೂಮಿಯಲ್ಲಿ ಬೆಳೆಯುವ ಮರಮಟ್ಟುಗಳಲ್ಲ. ರೈತರು ತಮ್ಮ ಕೃಷಿ ಭೂಮಿಯಲ್ಲಿ ಮರ ಮಟ್ಟುಗಳನ್ನು ಬೆಳೆಸಿದರೆ ಒಂದಲ್ಲ ಒಂದು ದಿನ ಅದನ್ನು ಕಡಿದೇ ತೀರುತ್ತಾರೆ. ಕಾನೂನು ರೀತ್ಯಾ ( ಟ್ರೀ-ಆ್ಯಕ್ಟ್) ಅದನ್ನು ಕಡಿಯಲು ಅನುಮತಿ ನಿರಾಕರಿಸುವಂತಿಲ್ಲ. ಹಾಗಿರುವಾಗ ಅದು ಶಾಶ್ವತ ಅರಣ್ಯ ಆಗುವುದಿಲ್ಲ.

ಕೃಷಿ ವಿಸ್ತರಣೆ ಮಾಡಿ ಕೃಷಿ ಆದಾಯ ಹೆಚ್ಚಿಸಿಕೊಳ್ಳಬೇಕಾದಾಗ ಅದನ್ನು ಕಡಿಯುವುದು ಅನಿವಾರ್ಯವೂ ಸಹ. ಶಾಶ್ವತ ಅರಣ್ಯ ವೃದ್ದಿಯಾಗಲು ಅರಣ್ಯ ಭೂಮಿ ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಸಸ್ಯ ಸಂಪತ್ತನ್ನು ಹೆಚ್ಚಿಸುವುದು. ಅಥವಾ ಇಂತಹ ಅರಣ್ಯಗಳಿಗೆ ಹೋಲಿಕೆ ಇರುವ ಭೂಮಿಯನ್ನು ಅರಣ್ಯ ಪ್ರದೇಶಗಳಾಗಿ ಮಾರ್ಪಡಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳುವುದು. ಕೃಷಿಕರು ಈ ಜವಾಬ್ಧಾರಿಯನ್ನು ಹೊತ್ತುಕೊಳ್ಳುವುದು ಅಷ್ಟು ಪ್ರಸ್ತುತವಲ್ಲ. ಕೃಷಿಕ ತನ್ನ ಹೊಲದಲ್ಲಿ ಅಗತ್ಯಕ್ಕೆಬೇಕಾದ ಮರಮಟ್ಟುಗಳನ್ನು ಬೆಳೆಸಲಿ. ಅದು ಅವನ ಉಪಯೋಗಕ್ಕೆ ಇರಲಿ. ಹಾಗೆಂದು ಅರಣ್ಯ ಬೆಳೆಸುತ್ತೇನೆಂದು ಹೊರಟರೆ ಅವನಿಗೂ ತೊಂದರೆ ನೆರೆಹೊರೆಯ ಕೃಷಿಕನಿಗೂ ತೊಂದರೆಯೇ ಹೆಚ್ಚು. ಏಕೆಂದರೆ ನೈಜ ಅರಣ್ಯದ ಜೀವಿಗಳು ಇಂದು ಅಲ್ಲಿ ಆಹಾರವಿಲ್ಲದೆ ಆಹಾರ ಅರಸುತ್ತಾ ನಾಡಿಗೆ ಬರಲಾರಂಬಿಸಿವೆ. ಅವುಗಳ ಆಶ್ರಯಕ್ಕೆ ಅವಕಾಶ ಕೊಟ್ಟು ‘ಕೋಲು ಕೊಟ್ಟು ಹೊಡೆಸಿ’ಕೊಂಡಂತಾಗುತ್ತದೆ. ಸರಕಾರ ಕೃಷಿಕರ ಅರಣ್ಯ ಬೆಳೆಸಲು ಒಂದಷ್ಟು ಸಹಾಯಧನವನ್ನು ನೀಡುತ್ತದೆ. ಅದು ಪ್ರೋತ್ಸಾಹವಾದರೂ ಅದರಿಂದ ಅಂಥಃ ಪ್ರತಿಫಲ ಇರಲಾರದು.

ಕೃಷಿಕ ತನ್ನ ಬೆಳೆಗಳಿಗೆ ಪೂರಕವಾದ ಮರಮಟ್ಟು ಬೆಳೆಸಿಕೊಂಡು ತನ್ನ ಕೃಷಿ ವೃತ್ತಿಯನ್ನು ಸಾಧ್ಯವಾದಷ್ಟು ಪರಿಸರ ಪೂರಕವಾಗಿ ಮಾಡಿಕೊಂಡರಷ್ಟೇ ಸಾಕು. ಅರಣ್ಯ ಎಂದರೆ ಅದು ವೈವಿಧ್ಯಮಯ ಮರಮಟ್ಟುಗಳ ಬಳ್ಳಿ, ಹುಲ್ಲು, ಬೆತ್ತ, ಪೊದರುಗಳ ಸಮ್ಮಿಲನ. ಅಲ್ಲಿ ಮರಮಟ್ಟುಗಳು ಕಡಿಯಲ್ಪಡಬಾರದು. ಅದು ಅಲ್ಲೇ ಹುಟ್ಟಿ ತನ್ನ ಬೀಜ ಪ್ರಸಾರದಿಂದ ಸಂತತಿ ವೃದ್ದಿಸಿ ಅಲ್ಲೇ ಸಾಯಬೇಕು. ಸತ್ತ ಮರದ ಅವಶೇಷಗಳು ಉಳಿದ ಸಸ್ಯಗಳಿಗೆ ಆಹಾರವಾಗಬೇಕು. ಅಲ್ಲಿರುವ ಮರಮಟ್ಟುಗಳು ಎಲ್ಲಾ ಪ್ರಾಣಿ, ಜೀವ ಜಂತುಗಳಿಗೆ ಬೇಕಾದ ಆಹಾರ ಒದಗಿಸಿ ಕೊಡುವವವುಗಳಾಗಿರಬೇಕು. ಮಾನವ ಹಸ್ತಕ್ಷೇಪ ಇಲ್ಲದ ಅರಣ್ಯವೇ ನೈಜ ಅರಣ್ಯ. ಇಲ್ಲಿ ಸಸ್ಯ-ಜೀವ ಸಂಕುಲಗಳು ಹುಟ್ಟಿ ಬೆಳೆದಂತೆ ಉಳಿದ ಕಡೆ ಹುಟ್ಟಿ ಬೆಳೆಯಲಾರದು. ದಯವಿಟ್ಟು ಪರಿಸರ ಪ್ರಿಯರಾದ ನಾವು ವಿಷೇಷವಾಗಿ ಕೃಷಿಕರು ಸಾಧ್ಯವಾದಷ್ಟು ರಸ್ತೆ ಬದಿಗಳಲ್ಲಿ ಮರಮಟ್ಟು ಬೆಳೆಸಲು ಉತ್ತೇಜನ ಕೊಡಬೇಡಿ. ಇಂದು ಸಣ್ಣ ರಸ್ತೆಯಾದರೂ ಇನ್ನೇನು ಕೆಲವು ವರ್ಷಗಳಲ್ಲಿ ರಸ್ತೆ ಹಿರಿದಾಗುತ್ತದೆ. ಆಗ ಅದು ಕಡಿಯಲ್ಪಡುತ್ತದೆ. ತಮ್ಮ ಹೊಲದಲ್ಲೂ ಇಂತಹಃ ಮರಮಟ್ಟು ಬೆಳೆಸಬೇಡಿ. ನಮ್ಮ ಕಾಲದಲ್ಲಿ ಅಥವಾ ನಮ್ಮ ಮಕ್ಕಳ ಕಾಲದಲ್ಲಿ ಕೃಶಿ ವಿಸ್ತರಣೆಗಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ನಾವು ನೆಟ್ಟು ಬೆಳೆಸಿದ ಮರವನ್ನೇ ನಾವು ಕಡಿಯುವ ಪ್ರಮೇಯ ಬರಬಹುದು. ಅರಣ್ಯ ಇಲಾಖೆ ಕೊಡುವ ಸಸ್ಯಗಳನ್ನು ನಿಮ್ಮ ಸಮೀಪದ ಶಾಶ್ವತ ಅರಣ್ಯದ ಒಳಗೆ ಬೆಳೆಸುವ ಪ್ರಯತ್ನ ಮಾಡಿ. ನಿಮ್ಮ ಮಕ್ಕಳಿಗೆ ಎಲ್ಲಿ ಸಸಿ ನೆಟ್ಟರೆ ಅದು ಕಡಿಯದೇ ಉಳಿಯುತ್ತದೆ ಎಂಬ ತಿಳುವಳಿಕೆ ಕೊಡಿ. ಎಲ್ಲಾ ಕಡೆಯಲ್ಲೂ ಸಸ್ಯಗಳು ಹುಲುಸಾಗಿ ಬೆಳೆಯಲಾರವು. ಅದಕ್ಕೆ ಅದರದ್ದೇ ಆದ ಇತಿ ಮಿತಿಗಳಿವೆ. ಫಲವತ್ತಾದ ಮಣ್ಣಿನಲ್ಲಿ ಬಿತ್ತಿ ಬೆಳೆಸಿದ ಬೀಜ ಬೇಗ ಹುಲುಸಾಗಿ ಬೆಳೆಯುತ್ತದೆ. ಆದ ಕಾರಣ ನಾವೂ ಫಲವತ್ತತೆಯ ಆಗರವಾಗಿರುವ ಅರಣ್ಯದಲ್ಲೇ ಸಸಿ ಬೆಳೆಸೋಣ. ಸೀಡ್‌ಬಾಲ್ ಅನ್ನು ಎಸೆಯೋಣ. ಅದು ಗರಿಷ್ಟ ಪರಮಾಣದಲ್ಲಿ ಹುಟ್ಟಿ ಬೆಳೆಯುತ್ತದೆ. ಬಂಜರು ಭೂಮಿಯಲ್ಲಿ ಸಸಿ ಬೆಳೆಸಿದರೆ ಅದರಿಂದ ಪ್ರಯೋಜನ ಇಲ್ಲ.

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ