ಕೃಷಿ ತ್ಯಾಜ್ಯಗಳ ಸದ್ಭಳಕೆ ಮತ್ತು ನೀರಿನ ಸಂರಕ್ಷಣೆ.
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%A8%E0%B3%80%E0%B2%B0%E0%B3%81_0.jpg?itok=TXEaAtQd)
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%85%E0%B2%AD%E0%B2%BF.jpg?itok=R5Z-OXCK)
ಮಳೆ ಬರುತ್ತದೆ, ಭೂಮಿ ಒದ್ದೆಯಾಗಿ ನೀರು ಉಳಿಯುತ್ತದೆ ಎಂದು ನಾವು ಬೇಕಾಬಿಟ್ಟಿ ನೀರಿನ ಉಪಯೋಗ ಮಾಡುತ್ತಿದ್ದರೆ, ಒಂದೆಡೆ ಮಳೆ ಕೈಕೊಡುತ್ತದೆ, ಕುಡಿಯುವ ನೀರಿಗೇ ಬರವಾಗುತ್ತದೆ. ಇತೀಚಿನ ವರ್ಷಗಳಲ್ಲಿ ದೇಶದಲ್ಲೇ ಅತೀ ಕಡಿಮೆ (ಸರಾಸರಿ) ಮಳೆಯಾಗಿರುವುದು ಕರ್ನಾಟಕದಲ್ಲಿ ಎಂಬ ವರದಿ ಕೇಳಿ ಬರುತ್ತಿದೆ. ಕಾವೇರಿ ನದಿಯ ನೀರನ್ನು ಭತ್ತ, ಕಬ್ಬು ಮುಂತಾದ ಅಧಿಕ ನೀರು ಬಯಸುವ ಬೆಳೆಗೆ ಬಳಸಬಾರದು ಎಂಬುದಾಗಿ ಸರಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ಇದರಿಂದಲೇ ತಿಳಿಯುತ್ತದೆ, ನೀರಿನ ಕ್ಷಾಮ ಎಷ್ಟು ಇದೆ ಎಂಬುದು. ಯಾವ ಜಲಾಶಯದಲ್ಲೂ ನೀರಿನ ಮಟ್ಟ ತುಂಬಿರಲಿಲ್ಲ. ಆದ ಕಾರಣ ಕಳೆದ ವರ್ಷ ನೀರಿನ ಕ್ಷಾಮ ಉಂಟಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾದಂತೆ ತೋರುತ್ತಿದೆ.
ಬರುವ ಮಳೆ ನೀರನ್ನು ಸದುಪಯೋಗ ಮಾಡಿಕೊಂಡು ,ಬಳಕೆ ಮಾಡುವ ನೀರಿನಲ್ಲಿ ಮಿತವ್ಯಯ ಮಾಡಿಕೊಂಡು ಬಂದರೆ ಸ್ವಲ್ಪ ಮಟ್ಟಿಗೆ ಬರಗಾಲದಿಂದ ಪಾರಾಗಬಹುದು. ನೀರು ದುಬಾರಿಯಾಗದಿರುವಂತೆ ಮಾಡುವುದು ನಮ್ಮ ಕೈಯಲ್ಲೇ ಇದೆ. ಮುಖ್ಯವಾಗಿ ಈಗ ಆಗಿರುವುದು ನೀರಿನ ಅತಿಯಾದ ಬಳಕೆ. ಇನ್ನೊಂದೆಡೆ ನೀರಿನ ಆವೀಕರಣ. ಒಂದು ಬಿಸಿಲು ಬಂದರೆ ನಮ್ಮ ನೆಲದಲ್ಲಿ ಧೂಳು ಹಾರುತ್ತದೆ, ಅಂದರೆ ಎಷ್ಟೊಂದು ಪ್ರಮಾಣದಲ್ಲಿ ನೆಲದ ತೇವಾಂಶ ಆವೀಕರಣ ಆಗುತ್ತದೆಯಲ್ಲವೇ?
ಆವೀಕರಣ ನಷ್ಟ ಒಂದು ದೊಡ್ಡ ಸಮಸ್ಯೆ. ಒಂದು ೪೦೦ ಚದರ ಅಡಿಯ ಈಜು ಕೊಳದಿಂದ ವರ್ಷಕ್ಕೆ ೧೦,೦೦೦ ಗ್ಯಾಲನ್ ನಷ್ಟು ನೀರು ಆವೀಕರಣವಾಗಿ ನಷ್ಟವಾಗುತ್ತದೆ. ದಿನಕ್ಕೆ ಇದು ೭.೪೮ ಗ್ಯಾಲನ್ಗಳಷ್ಟು. ನಮ್ಮ ಕೆರೆ, ಇಂಗು ಗುಂಡಿಗಳ ನೀರೂ ಸಹ ಇದೇ ರೀತಿ ಆವೀಕರಣಕ್ಕೊಳಗಾಗಿಯೇ ಬಹುತೇಕ ನೀರು ನಷ್ಟವಾಗುವುದು. ಸೂರ್ಯನ ಶಾಖದಿಂದ ಭೂಮಿಯ ಮೇಲಿನ ತೇವಾಂಶ ಆವೀಕರಣಗೊಂಡು ಅದು ಮತ್ತೆ ಮಳೆಯಾಗಿ ಭೂಮಿಗೇ ಬೀಳುತ್ತದೆ. ಆದರೆ ಅದು ಇಂತಲ್ಲಿಗೇ ಬೀಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.
ನಾವು ಬೆಳೆಗಳಿಗೆ ಉಣಿಸುವ ನೀರಿನಲ್ಲಿ ಅರ್ಧಕ್ಕೂ ಹೆಚ್ಚಿನ ಪಾಲು ಆವೀಕರಣದಿಂದ ನಷ್ಟವಾಗುತ್ತದೆ. ಒಂದು ಕಿಲೋ ತೇವಾಂಶ ಭರಿತ ಕೃಷಿ ಉತ್ಪನ್ನವನ್ನು ತೂಕ ಮಾಡಿ ಬಿಸಿಲಿನಲ್ಲಿ ಇಡಿ. ಬಿಸಿಲು ಆರಿದ ತರುವಾಯ ಅದನ್ನು ಮರಳಿ ತೂಕ ಮಾಡಿ. ಆಗ ಉಂಟಾಗುವ ತೂಕ ನಷ್ಟ ಏನಿದೆಯೋ ಅದು ಆ ಒಂದು ದಿನದಲ್ಲಿ ಆವೀಕರಣದಿಂದಾಗಿ ಉಂಟಾದ ನಷ್ಟ. ಇದೇ ಸಿದ್ದಾಂತ ತೆರೆದ ಭೂಮಿಗೂ ಅನ್ವಯ.
ಇತ್ತೀಚೆಗಿನ ದಿನಗಳಲ್ಲಿ ಆವೀಕರಣ ನಷ್ಟ ಅಧಿಕವಾಗುತ್ತಿದೆ. ಎಲ್ಲೆಂದರಲ್ಲಿ ಮರಮಟ್ಟುಗಳು ನಾಶವಾಗುತ್ತಿವೆ. ಮರಮಟ್ಟುಗಳು, ಕುರುಚಲು ಗಿಡ ಗಂಟಿಗಳನ್ನು ಕಡಿದು ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಮನೆ, ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಮರಮಟ್ಟುಗಳು ಮೋಡವನ್ನು ತಂಗುವಂತೆ ಮಾಡಿ ಮಳೆ ಸುರಿಯಲು ಸಹಾಯಕವಾಗುತ್ತದೆ ಎಂಬುದಾಗಿ ಹೇಳುತ್ತಾರೆಯಾದರೂ, ಅವು ಬರೇ ಅಷ್ಟೇ ಅಲ್ಲದೆ ನೆಲದ ಮೇಲೆ ನೇರ ಸೂರ್ಯನ ಬೆಳಕನ್ನು ಬೀಳದಂತೆ ತಡೆಯಲು ಇರುವ ನೈಸರ್ಗಿಕ ಹೊದಿಕೆ. ಈಗಲೂ ಸಹ ದಟ್ಟ ಅರಣ್ಯದಲ್ಲಿ, ಮರಮಟ್ಟುಗಳ ಬುಡದಲ್ಲಿ ಕಡು ಬೇಸಿಗೆಯ ಸಮಯದಲ್ಲಿ ಅಗೆದರೂ ಸಹ ತೇವದಿಂದ ಕೂಡಿದ ಮಣ್ಣು ಇರುತ್ತದೆ. ಇದು ಮರ ಹಿಡಿದಿಟ್ಟುಕೊಂಡ ತೇವಾಂಶ ಅಲ್ಲ. ನೆಲದ ಮೇಲೆ ಸೂರ್ಯನ ಬಿಸಿಲು ಬೀಳದೆ ಅಲ್ಲಿಂದ ನೀರು ತೀವ್ರವಾಗಿ ಆವೀಕರಣ ಆಗದೆ ಉಳಿದ ತೇವಾಂಶ. ಮರಮಟ್ಟುಗಳು ಕುರುಚಲು ಸಸ್ಯಗಳು ಮೇಲ್ಭಾಗದಲ್ಲಿ ತಮ್ಮ ಎಲೆಗಳ ಮೂಲಕ ಮತ್ತು ನೆಲದ ಮೇಲ್ಮೈಯಲ್ಲಿ ಉದುರಿಸಿದ ತರಗೆಲೆಗಳ ಮೂಲಕ ಒಂದು ನೈಸರ್ಗಿಕ ಹೊದಿಕೆ ನಿರ್ಮಿಸುತ್ತವೆ. ಈ ನೈಸರ್ಗಿಕ ಹೊದಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಭೂಮಿಯ ಮೇಲೆ ಸೂರ್ಯನ ಬೆಳಕು ಸದಾ ಬಿದ್ದು ನೆಲದ ತೇವಾಂಶ ಕಡಿಮೆಯಾಗುತ್ತಿದೆ. ಕಳೆದ ೧೦- ೧೫ ವರ್ಷಗಳಿಂದ ನಮ್ಮಲ್ಲಿ ಕೆರೆ ನೀರಾವರಿ ತೆರೆಮರೆಗೆ ಸರಿದುದಕ್ಕೆ ಕಾರಣವೂ ಇದೆ. ಹೊಳೆಗಳಲ್ಲಿ ನೀರು ಮಾರ್ಚ್ ತಿಂಗಳಿಗೇ ಬರಿದಾಗುವುದಕ್ಕೂ ಕಾರಣ ಇದೆ. ಜಲಾಶಯಗಳಲ್ಲಿನ ನೀರು ಬರಿದಾಗುವುದೂ ಇದರಿಂದಲೇ.
ನೆಲದ ಮೇಲೆ ಸೂರ್ಯನ ಬೆಳಕು ಬೀಳಲೇ ಬೇಕು. ಅದನ್ನು ತಡೆಯುವುದು ಮನುಷ್ಯರಿಗೆ ಅಸಾಧ್ಯವಾದ ಕೆಲಸ. ಆದರೆ ಎಷ್ಟು ಬೀಳಬೇಕೊ ಆಷ್ಟೇ ಬಿದ್ದರೆ ಒಳ್ಳೆಯದು. ಅದಕ್ಕಾಗಿ ನೈಸರ್ಗಿಕ ವಿಧಾನಗಳಿಂದ ನೆಲಕ್ಕೆ ಬಿಸಿಲು ಬೀಳದಂತೆ ತಡೆಯುವ ವ್ಯವಸ್ಥೆಗಳನ್ನು ಹಾಳು ಮಾಡಬಾರದು. ಆಗಿರುವ ನಷ್ಟವನ್ನು ತಡೆಯಲು ಸಾಧ್ಯವಾದಷ್ಟು ವಿವೇಕವುಳ್ಳ ಕ್ರಮಗಳನ್ನು ಕೈಗೊಳ್ಳಬೇಕು.
ನಾವು ನೀರಿನ ಉಳಿತಾಯ, ಭೂಮಿಗೆ ನೀರು ಇಂಗಿಸುವ ಸಾಮಾಜಿಕ ಕೆಲಸಗಳಲ್ಲಿ ಬಹಳಷ್ಟು ತೊಡಗಿಸಿಕೊಂಡಿದ್ದೇವೆ. ನೀರು ಇಂಗಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶ ವಿದೇಶಗಳಲ್ಲಿ ಸಾವಿರಾರು ಜನ ಕಂಕಣ ಬದ್ದರಾಗಿದ್ದಾರೆ. ಇದು ಉತ್ತಮ ಬೆಳವಣಿಗೆ. ಆದರೆ ಅದರ ಜೊತೆಗೆ ನೀರಿನ ಆವೀಕರಣ ಮತ್ತು ಹಿಡಿದಿಟ್ಟುಕೊಳ್ಳುವ ಬಗ್ಗೆ ಕೆಲಸ ಮಾಡಲೇ ಬೇಕಾಗಿದೆ. ಒಂದು ಕೃಷಿ ಹೊಂಡ ಅಥವಾ ಟ್ರೆರೇಸಿಂಗ್ ಮಾಡಿದ ಹೊಲದಲ್ಲಿ ಮಳೆ ಬರುವ ಸಮಯದಲ್ಲಿ ಯತೇಚ್ಚ ನೀರು ಸಂಗ್ರಹವಾಗಬಹುದು, ಸುಂದರವಾಗಿ ಕಾಣಬಹುದು. ಆದರೆ ಆ ನೀರು ಅಲ್ಲಿ ಉಳಿಯುವುದು ಎಷ್ಟು ಸಮಯ? ಕೆಲವೇ ಸಮಯ ಮಾತ್ರ. ಬೇಸಿಗೆಯ ಬಿಸಿಲು ಬಿದ್ದ ತಕ್ಷಣ ಭೂಮಿಯ ಮೇಲು ಪದರವೆಲ್ಲಾ ಒಣಗಿ ಕರಟಿ ಹೋಗುತ್ತದೆ. ಬಿಸಿ ಹೆಚ್ಚಾದಂತೆ ಕೆಳಸ್ಥರದ ಮಣ್ಣಿನ ತೇವಾಂಶವೂ ಸಹ ಆವೀಕರಣ ಹೊಂದುತ್ತದೆ. ಶ್ರಮ ಪಟ್ಟು ಸ್ವಂತ ಭೂಮಿಯಲ್ಲಿ, ಸಾರ್ವಜನಿಕ ಭೂಮಿಯಲ್ಲಿ ನೀರು ಸಂಗ್ರಹವಾಗಿ ಇಂಗಲಿಕ್ಕಾಗಿ ಮಾಡಿದ ವ್ಯವಸ್ಥೆಗಳಿಂದ ಹೆಚ್ಚಿನ ಪ್ರಮಾಣದ ನೀರು ಆವೀಕರಣದಲ್ಲಿ ನಷ್ಟವಾಗುತ್ತದೆ.
ಇದನ್ನು ತಡೆಯಲು ಇರುವ ಉಪಾಯ ನೀರನ್ನು ಸಾವಯವ ತ್ಯಾಜ್ಯಗಳ ಜೊತೆಗೆ ವಿಲೀನಗೊಳಿಸಿ ಅವು ಅದನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದು. ತಮಿಳುನಾಡಿನ ಪೊಲ್ಲಾಚಿಯ ಮಿತ್ರರೊಬ್ಬರು ಕೃಷಿ ಹೊಂಡಗಳಿಗೆ ತೆಂಗಿನ ಕಾಯಿ ಸಿಪ್ಪೆಯನ್ನು ಮುಚ್ಚಿ ಅದರೊಳಗೆ ನೀರು ಇಂಗುವಂತೆ ಮಾಡುವ ವಿಧಾನವನ್ನು ತಿಳಿಸಿದರು. ಇದು ನಿಜಕ್ಕೂ ಉತ್ತಮ ಕ್ರಮ. ನಾವು ಸಾಕಷ್ಟು ಖರ್ಚು ಮಾಡಿ ನೀರು ಇಂಗಿಸುವ ಕೆಲಸ ಮಾಡುತ್ತೇವೆ. ಅದರ ಪ್ರತಿಫಲ ಗರಿಷ್ಟ ಪ್ರಮಾಣದಲ್ಲಿ ದೊರೆಯಲು ಇಂಗಿದ ನೀರು ಆವೀಕರಣಕ್ಕೊಳಗಾಗದಂತೆ ತಡೆಯಬೇಕು. ಇಂಗು ಗುಂಡಿಗಳಿಗೆ ಕೃಷಿ ತ್ಯಾಜ್ಯಗಳಾದ ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆ, ಭತ್ತದ ಹೊಟ್ಟು, ಮರದ ಹುಡಿ, ಕಾರ್ಖಾನೆಗಳ ಕರಗಬಲ್ಲ ಸಾವಯವ ತ್ಯಾಜ್ಯ, ಕಬ್ಬಿನ ತ್ಯಾಜ್ಯಗಳನ್ನು ಹಾಕಿ ಅದಕ್ಕೆ ನೀರನ್ನು ಇಳಿಯುವಂತೆ ಮಾಡಿದಾಗ ಆ ತ್ಯಾಜ್ಯಗಳು ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ವಿದೇಶಗಳಲ್ಲಿ ಕೆರೆ, ಮುಂತಾದ ಕಡೆ ನೀರು ಆವೀಕರಣ ತಡೆಯಲು ಉಸುಕು ತುಂಬುವ ವಿಧಾನ ಇದೆಯಂತೆ. ಇದರರಂತೆ ಕೆಲವು ಹೊಸ ವಿಧಾನಗಳನ್ನು ಚಿಂತನೆ ಮಾಡಿ ಅಳವಡಿಸಿಕೊಳ್ಳಬಹುದು. ಹೊಲದ ಬಳಕೆಯ ತೆರೆದ ಕೆರೆ ನೀರು ಅವೀಕರಣ ಆಗದಂತೆ ತಡೆಯಲು ಸುತ್ತಲೂ ಮರಮಟ್ಟು ಬೆಳೆಸುವುದು ಸೂಕ್ತ. ಅದಲ್ಲದೆ ಪಾಲಿಥೀನ್ ಶೀಟಿನ ಮಾಡು ಸಹ ಮಾಡಬಹುದು. ಹೊಲಕ್ಕೆ ನೀರುಣಿಸುವಾಗ ಸಾಧ್ಯವಾದಷ್ಟು ಎಷ್ಟು ಬೇಕೋ ಆಷ್ಟು ನೀರು ಒದಗಿಸಬಲ್ಲ ಹನಿ ನೀರಾವರಿ ವ್ಯವಸ್ಥೆ, ಮಾಡಿಕೊಳ್ಳಬೇಕು. ಬೆಳೆಗಳ ಬುಡಕ್ಕೆ ಕೃಷಿ ತ್ಯಾಜ್ಯಗಳನ್ನು ತಪ್ಪದೇ ಹಾಕಬೇಕು. ನಿರುಪಯುಕ್ತ ಸೆಣಬಿನ ಚೀಲ ಹಾಗೆಯೇ ಬಿಸಿಲಿಗೆ ಕರಗುವ ಪ್ಲಾಸ್ಟಿಕ್ ಚೀಲಗಳನ್ನು ಬೆಳೆಗಳ ಬುಡಕ್ಕೆ ಹರಡಿ ಅದನ್ನು ಕರಗಲು ಬಿಡುವುದರ ಜೊತೆಗೆ ಆವೀಕರಣ ನಷ್ಟವನ್ನು ಕಡಿಮೆ ಮಾಡಬೇಕು. ಒಟ್ಟಿನಲ್ಲಿ ನೀರು ಅಮೂಲ್ಯ. ಇದನ್ನು ನೆಲಕ್ಕೆ ಇಂಗಿಸಿದರೆ ಎಲ್ಲವೂ ಮುಗಿಯಿತೆಂದಲ್ಲ. ಅದು ಆವೀಕರಣ ಆಗದಂತೆ ಅದನ್ನು ಸಂರಕ್ಷಣೆ ಮಾಡುವುದು ನಮ್ಮ ಅದ್ಯಕರ್ತವ್ಯ.
ಚಿತ್ರ ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ