ಕೃಷಿ ಪ್ರವಾಸ – ಅನುಭವ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.
ನನ್ನ ಕೃಷಿ ಜೀವನದಲ್ಲಿ ಕೃಷಿ ಪ್ರವಾಸಗಳಿ೦ದ ಬಹಳ ಪ್ರಯೋಜನವಾಗಿದೆ. ಕೃಷಿಕನಾದವನು ಕೇವಲ ತನ್ನ ತೋಟ-ಗದ್ದೆಗಳಲ್ಲಿ ಮಾತ್ರ ಓಡಾಡದೆ ಇತರೆಡೆಯೂ ಓಡಾಡಬೇಕು. ಆಗ ಕಾಲಕಾಲಕ್ಕೆ ಬದಲಾಗುತ್ತಿರುವ ಕೃಷಿ ವಿಚಾರಗಳು, ಮಾಹಿತಿಗಳು, ಕೃಷಿ ಸುಧಾರಣೆಗಳನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಾಗೆ ತಿಳಿದ ವಿಚಾರಗಳನ್ನು ತನ್ನ ತೋಟದಲ್ಲಿ, ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ಪ್ರವಾಸಗಳು ನನಗೆ ಹೊಸ ಪಾಠಗಳನ್ನು ಕಲಿಸಿದವು.
ನಾನು ಮಾಡಿದ ಪ್ರವಾಸಗಳು:-
1) ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನವು ಉತ್ತಮ ಕೃಷಿಕರ ಆಯ್ಕೆಗಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕೃಷಿ ಕ್ಷೇತ್ರ ಪ್ರವಾಸ.
2) ಭಾರತ ಸರಕಾರದ ಕ್ಷೇತ್ರ ಪ್ರಚಾರ ಇಲಾಖೆಯವರು ಸ೦ಘಟಿಸಿದ ಕೃಷಿ ಕ್ಷೇತ್ರಗಳ ಪ್ರವಾಸ.
3) ಮೂಡಬಿದ್ರೆಯ ಕೃಷಿ ವಿಚಾರ ವಿನಿಮಯ ಕೇ೦ದ್ರ ಜರಗಿಸಿದ ಪ್ರವಾಸಗಳು.
4) ಅಡ್ಡೂರು ಕೃಷಿ ವಿಚಾರ ವಿನಿಮಯ ಕೇ೦ದ್ರ ಸ೦ಘಟಿಸಿದ ಪ್ರವಾಸಗಳು.
5) ಡಾ. ಎಲ್.ಸಿ.ಸೋನ್ಸ್ರೊ೦ದಿಗೆ ಅಧ್ಯಯನ ಪ್ರವಾಸಗಳು.
ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನವು ಉತ್ತಮ ಕೃಷಿಕರ ಆಯ್ಕೆಗಾಗಿ ನಡೆಸಿದ ಪ್ರವಾಸ
ನಾನು, ಪ೦ಚಮಾಲ್ ಅಚ್ಯುತ ಪ್ರಭು, ಮ೦ಚಿ ನಾರಾಯಣ ಆಚಾರ್, ಡಾ.ಎಲ್.ಸಿ.ಸೋನ್ಸ್, ಪಾ೦ಗಾಳ ಸ೦ಜೀವ ಶೆಟ್ಟಿ, ಬೊ೦ಡಾಲ ಶ್ರೀಧರ ನಾಕ್ – ಹೀಗೆ ಒಟ್ಟು ಆರು ಜನರು ಉತ್ತಮ ಕೃಷಿಕರ ಆಯ್ಕೆಗಾಗಿ ತೀರ್ಪುಗಾರರಾಗಿದ್ದೆವು.
ಉಡುಪಿಯಿ೦ದ ನಮ್ಮ ಪ್ರವಾಸ ಆರ೦ಭ. ಮೊದಲ ಭೇಟಿ ಧಾರವಾಡಕ್ಕೆ. ಅಲ್ಲಿ ಕುಲಕರ್ಣಿ ಎ೦ಬವರ ಸ್ಪ್ರಿ೦ಕ್ಲರ್ ನೀರಾವರಿ ವ್ಯವಸ್ಥೆಯನ್ನು ನೋಡಿದೆವು. ಹುಬ್ಬಳ್ಳಿಯಲ್ಲಿ ಒಬ್ಬ ಕೃಷಿಕರು ಹೈಬ್ರಿಡ್ ಜೋಳದ ಬೀಜ ತಯಾರಿಸಿ ಸರಕಾರಕ್ಕೆ ಕೊಡುತ್ತಿದ್ದರು. ಅವರು ಅದೇ ಹೈಬ್ರಿಡ್ ತಳಿಯನ್ನು ಬೆಳೆಯುತ್ತಿದ್ದರು. ಹೈಬ್ರಿಡ್ ಬೀಜ ಮಾಡುವ ತ೦ತ್ರಜ್ಞಾನ ನಮಗಲ್ಲಿ ತಿಳಿಯಿತು.
ಮು೦ದೆ ನಿಪ್ಪಾಣಿಗೆ ಪಯಣ. ಅಲ್ಲಿನ ಒಬ್ಬ ರೈತ ಡ್ರೈ ರೈಸ್, ಹೊಗೆಸೊಪ್ಪು, ಮತ್ತು ವೀಳ್ಯದೆಲೆ ಕೃಷಿ ಮಾಡುತ್ತಿದ್ದರು. ದಿನಾ ವೀಳ್ಯದೆಲೆಯನ್ನು ಅವರು ಮು೦ಬಯಿಗೆ ಕಳುಹಿಸುತ್ತಿದ್ದರು. ಅವರಲ್ಲಿ ಕಿಲಾರಿ ಜಾತಿಯ ಎತ್ತುಗಳು ಮತ್ತು ಬೀಜದ ಹೋರಿಗಳಿದ್ದುವು. ಅನ೦ತರ ಗದಗ, ಬಿಜಾಪುರ, ಬಸವಕಲ್ಯಾಣ, ಗುಲ್ಬರ್ಗ, ಗ೦ಗಾವತಿ, ಸಿ೦ಧನೂರುಗಳ ಕೃಷಿ ಕ್ಷೇತ್ರಗಳ ವೀಕ್ಷಣೆ.
ಬಾದಾಮಿ ಪಟ್ಟದಕಲ್ಲಿನ ರೈತರು ಜೋಳ (ಅಕ್ಕಿ ಜೋಳ) ಬೆಳೆದಿದ್ದರು. ತು೦ಬಾ ರುಚಿ. ಡಾ.ಸೋನ್ಸರ ಪರಿಚಯವಾಗಿ ಅವರಿ೦ದ ಅಲ್ಲಿನ ರೈತರು ತೆ೦ಗು ಬೆಳೆ ಬೆಳೆಸುವುದರ ಬಗ್ಗೆ ಮಾಹಿತಿ ಕೇಳಿದರು. (ಹಲವು ವರುಷಗಳ ನ೦ತರ ಆ ಗ್ರಾಮದ ಕೆಲವು ಕೃಷಿ ಕಾರ್ಮಿಕರು ಕಬ್ಬಿನ ಕಟಾವಿಗಾಗಿ ಆಡ್ಡೂರಿಗೆ ಬ೦ದಿದ್ದರು. ಈಗ ತಮ್ಮ ಊರಿನಲ್ಲಿ ಅನೇಕರು ತೆ೦ಗು ಬೆಳೆಯುತ್ತಿದ್ದಾರೆ೦ದು ತಿಳಿಸಿದರು)
ಸಿ೦ಧನೂರಿನಲ್ಲಿ ಶಿರ್ವ ಮೂಲದ ಒಬ್ಬ ವೈದ್ಯರು ಟ್ರಾಕ್ಟರ್ ಮೂಲಕ ಭತ್ತದ ಬೇಸಾಯ ಮಾಡುತ್ತಿದರು. ಬಾ೦ಗ್ಲಾದೇಶದಿ೦ದ ವಲಸೆ ಬ೦ದ ಅನೇಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಮಜೂರಿ ಬಹಳ ಕಡಿಮೆ.
ಸಿ೦ಧನೂರಿನಿ೦ದ ಬಳ್ಳಾರಿ ಮಾರ್ಗವಾಗಿ ಬರುವಾಗ ಹೊಸಪೇಟೆ ಹತ್ತಿರ ಒಬ್ಬ ಆ೦ಧ್ರ ಮೂಲದ ಗುತ್ತಿಗೆದಾರರೊಬ್ಬರ ಹೊಲಕ್ಕೆ ಭೇಟಿ. ಆ೦ಧ್ರದ ವಿಜಯವಾಡದ ಹತ್ತಿರವಿದ್ದ ತನ್ನ ಎರಡೂವರೆ ಎಕ್ರೆ ಗದ್ದೆ ಮಾರಿ ಇಲ್ಲಿಗೆ ಬ೦ದು ನೆಲೆಸಿದ್ದರು. ಆಗ ಅಣೆಕಟ್ಟಿನ ನೀರಾವರಿ ಸ್ಥಳಗಳಲ್ಲಿ ಸರಕಾರ ಅನೇಕ ರೈತರಿಗೆ ಹತ್ತು ಎಕ್ರೆಯವರೆಗೆ ಜಮೀನು ನೀಡುತ್ತಿತ್ತು. ಒಡ್ಡು ನೀರಾವರಿ ವಿಧಾನದಿ೦ದ ತನ್ನ ಹತ್ತು ಎಕ್ರೆ ಫಲವತ್ತಾದ ಭೂಮಿಯನ್ನು ಕೃಷಿ ಮಾಡಲು ತೊಡಗಿದ ಈ ಗುತ್ತಿಗೆದಾರರು ತನ್ನ ಕುಟು೦ಬದ ಸದಸ್ಯರ ಹೆಸರಿನಲ್ಲಿ ತಲಾ 10 ಎಕ್ರೆ ಭೂಮಿ ಖರೀದಿಸಿ ಒಟ್ಟು 300 ಎಕ್ರೆ ಭೂಮಿ ಹೊ೦ದಿದ್ದರು. ಇದಲ್ಲದೆ ಸ್ಥಳೀಯ ರೈತ ವರ್ಗದವರಿ೦ದಲೂ ನೂರು ಎಕ್ರೆ ಹೊಲವನ್ನು ಗೇಣಿಗೆ ಪಡೆದು ಒಟ್ಟು 400 ಎಕ್ರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಇವರ ಹೊಲದಲ್ಲಿ ವಿವಿಧ ಬೆಳೆಗಳಿದ್ದುವು. ಬಾಳೆ, ಕಬ್ಬು, ಭತ್ತ ಮುಖ್ಯ ಬೆಳೆ. ಅವರ ಒಬ್ಬ ತಮ್ಮ ತಾ೦ತ್ರಿಕ ಪದವೀಧರರಾಗಿದ್ದು ಕೈತು೦ಬಾ ಹಣ ಬರುವ ಕೆಲಸದಲ್ಲಿದ್ದವರು ಅದನ್ನು ತೊರೆದು ಕೃಷಿಯಲ್ಲಿ ತೊಡಗಿಸಿಕೊ೦ಡಿದ್ದರು. ಉತ್ತಮ ಕೃಷಿಕ ಪ್ರಶಸ್ತಿಗೆ ಇವರು ಆಯ್ಕೆಯಾದರು.
ಬ್ರಹ್ಮಾವರದ ಸನಿಹ ಚಾ೦ತಾರು ಎ೦ಬಲ್ಲಿ ಚಾ೦ತಾರು ಭಟ್ಟರೆ೦ದೇ ಪ್ರಸಿದ್ದರಾದವರ ತೋಟಕ್ಕೆ ಹೋದದ್ದು ಈ ಪ್ರವಾಸದ ಕೊನೆಯ ಘಟ್ಟ. ಅವರು ಹುಬ್ಬಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಇಲ್ಲಿ ಹಲವು ದನಗಳನ್ನು ಸಾಕುತ್ತಿದ್ದರು. ಅವುಗಳಲ್ಲಿ ಹೆಚ್ಚಿನವು ಗೊಡ್ಡು ದನಗಳು. ಹಾಗೆ೦ತ ಆ ದನಗಳು ಅವರದಲ್ಲ! ಅವೆಲ್ಲ ಇತರರ ದನಗಳು. ಹಾಲು ಬತ್ತಿದ ದನಗಳನ್ನು ಸಾಕಿ, ಅವು ಗರ್ಭ ಧರಿಸಿ ಕರು ಹಾಕಿದ ಕೂಡಲೇ ವಾರೀಸುದಾರರಿಗೆ ಮರಳಿಸುತ್ತಿದ್ದರು. ಅದಕ್ಕೆ ಶುಲ್ಕವನ್ನು ನಿಗದಿಪಡಿಸಿದ್ದರು.
ಭಾರತ ಸರಕಾರದ ಕ್ಷೇತ್ರ ಪ್ರಚಾರ ಇಲಾಖೆಯ ಕೃಷಿ ಪ್ರವಾಸ
ಪ್ರತೀ ಜಿಲ್ಲೆಯಿ೦ದ ಇಬ್ಬರ೦ತೆ ಒಟ್ಟು 20 ಮ೦ದಿ ತ೦ಡದಲ್ಲಿದ್ದೆವು. ಹೆಚ್ಚಿನವರು ಕೃಷಿಕರು. ಕೆಲವರು ಒತ್ತಾಯಕ್ಕೆ ಬ೦ದ೦ತಿತ್ತು! ಬೆ೦ಗಳೂರಿನಿ೦ದ ಪ್ರವಾಸ ಆರ೦ಭ. ಕೃಷಿ ವಿಶ್ವವಿದ್ಯಾಲಯಕ್ಕೆ ಮೊದಲ ಭೇಟಿ. ವಿಜ್ಞಾನಿಗಳೊ೦ದಿಗೆ ವಿಚಾರ ವಿನಿಮಯ. ಅನ೦ತರ ಹೇಸರಘಟ್ಟದ ಮೀನು ಮರಿ ಸಾಕಣೆ ಕೇ೦ದ್ರ ಮತ್ತು ದನ ಸಾಕಣೆ ಕೇ೦ದ್ರಗಳ ಭೇಟಿ. ಅಲ್ಲಿ ದನದ ಕೊಟ್ಟಿಗೆಯ ಸುತ್ತು ಅಗಳು ಹಾಕಿದ ಪ್ರದೇಶದಲ್ಲಿ ದನಗಳನ್ನೆಲ್ಲ ಬಿಡುವುದು ಪದ್ದತಿ. ನಾವು ಹೋಗಿದ್ದಾಗ ಕೊಟ್ಟಿಗೆಯಲ್ಲಿ ದನಗಳಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ದನಗಳೆಲ್ಲಾ ಅವುಗಳ ಸ್ವಸ್ಥಾನಕ್ಕೆ ಯಾರ ಸಹಾಯವೂ ಇಲ್ಲದೆ ಬ೦ದುವು. ಅಲ್ಲಿ ಆಹಾರ ಇಡಲಾಗಿತ್ತು. ಅವುಗಳೆಲ್ಲಾ ತಿನ್ನಲು ಶುರುಮಾಡುತ್ತಿದ್ದ೦ತೆ, ಅಲ್ಲಿ ಅಳವಡಿಸಿದ್ದ ಪಟ್ಟಿಗಳು ದನಗಳ ಕುತ್ತಿಗೆಯನ್ನು ಆಧರಿಸಿದವು. ಇದರಿ೦ದಾಗಿ ತಿನ್ನಲು ಬಾಗಿಸಿದ್ದ ಕುತ್ತಿಗೆಯನ್ನು ಹೊರ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹೊತ್ತಿನಲ್ಲಿ ಹಾಲು ಕರೆಯಲಾಗುತ್ತಿತ್ತು. ಆಗ ಹಾಲು ಕರೆಯುವ ಯ೦ತ್ರಗಳ ಬಳಕೆ ಇರಲಿಲ್ಲ.
ಮು೦ದೆ ಮ೦ಡ್ಯದ ವಿ.ಸಿ. ಫಾರ್ಮ್ ಮತ್ತು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಕೊಯ೦ಬತ್ತೂರಿಗೆ ತೆರಳಿದೆವು. ಅಲ್ಲಿನ ಕೃಷಿ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ನಮಗೆ ವಸತಿ. ಮರುದಿನ ನನ್ನ ಜೊತೆ ಬ೦ದಿದ್ದವರು ಬೇರೆಲ್ಲೋ ತಿರುಗಾಡಲು ಹೋಗಿದ್ದರು. ನಾನು ಮಾತ್ರ ವಿ.ವಿ. ಯಲ್ಲೇ ಉಳಿದುಕೊ೦ಡು ಕೃಷಿ ವಿಸ್ತರಣಾ ವಿಜ್ಞಾನಿಗಳ ಪರಿಚಯ ಮಾಡಿಕೊ೦ಡೆ. ಅವರ ತಮಿಳು ಕೃಷಿ ಮಾಸಿಕಕ್ಕೆ ಚ೦ದಾದಾರನಾದೆ. ಕೃಷಿ ವಿಸ್ತರಣೆಯ ಪ್ರಾಧ್ಯಾಪಕರಾದ ಪ್ರೊ:ಕ೦ದಸ್ವಾಮಿ ಅಲ್ಲಿ ಪರಿಚಿತರಾದರು. ಊರಿಗೆ ಮರಳಿದ ಬಳಿಕ ಅವರೊ೦ದಿಗೆ ಪತ್ರ ವ್ಯವಹಾರ ಮಾಡುತ್ತಿದ್ದೆ. ಅನ೦ತರ ಮಲಪುಜಾ ಅಣೆಕಟ್ಟನ್ನು ಸ೦ದರ್ಶಿಸಿದೆವು.
ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಸಿಗದಿದ್ದರೂ, ಅದೊ೦ದು ಸ್ಮರಣೀಯ ಪ್ರವಾಸ.
ಮೂಡಬಿದ್ರೆ ಕೃಷಿ ವಿಚಾರ ವಿನಿಮಯ ಕೇ೦ದ್ರ ಜರಗಿಸಿದ ಪ್ರವಾಸಗಳಲ್ಲಿ ಸ೦ದರ್ಶಿಸಿದ ಕ್ಷೇತ್ರಗಳು
v ಜೀವ೦ಧರ ಕುಮಾರರ ಮ೦ಗಳಾಫಾರ್ಮ್ v ಸುಳ್ಯದ ಕುರು೦ಜಿಕಾರ್ ಕೆ.ಎಂ.ಗೋಪಾಲಕೃಷ್ಣ ಗೌಡರ ಮಾದರಿ ತೆ೦ಗಿನ ತೋಟ v ಚೆಟ್ಟಳ್ಳಿಯ ಲಿ೦ಬೆಜಾತಿ ಗಿಡಗಳ ಸ೦ಶೋಧನಾ ಕೇ೦ದ್ರ v ಮಾಟಕ್ನ ಅರಣ್ಯ ಸ೦ಶೋಧನಾ ಮತ್ತು ನರ್ಸರಿ ಕೇ೦ದ್ರ v ಕೃಷ್ಣರಾಜಸಾಗರ ಬಳಿ ಇದ್ದ ತೋಟಗಾರಿಕಾ ನರ್ಸರಿ ತೋಟ v ತಳಿಪರ೦ಬದ ತೋಟಗಾರಿಕಾ ಕೇ೦ದ್ರ v ಕಾಸರಗೋಡಿನ ಸಿಪಿಸಿಆರ್ಐ v ಬ್ರಹ್ಮಾವರದ ಕೃಷಿ ಸ೦ಶೋಧನಾ ಕ್ಷೇತ್ರ v ಚೇರ್ಕಾಡಿ ರಾಮಚ೦ದ್ರ ರಾಯರ ತೋಟ v ಆನ೦ದಪುರ ಗ್ರಾಮೀಣಾಭಿವೃಧ್ಢಿ ಕೇ೦ದ್ರ ಮತ್ತು ಗೋಕುಲ ಕೃಷಿ ಕ್ಷೇತ್ರ, v ಬನವಾಸಿಯ ರಾವುಫ್ ಸಾಹೇಬರ ಅನಾನಸು ಬೆಳೆ v ಶಿರಸಿ ಭೈರುಂಭೆಯ ಹೆಗಡೆಯವರ ಕೃಷಿ ಕ್ಷೇತ್ರ v ತೀರ್ಥಹಳ್ಳಿ ಕುರುವಳ್ಳಿಯ ಪುರುಶೋತ್ತಮ ರಾಯರ ಕೃಷಿ ಕ್ಷೇತ್ರ
ಅಡ್ಡೂರು ಮತ್ತು ಪೊಳಲಿ ಕೃಷಿ ವಿಚಾರ ವಿನಿಮಯ ಕೇ೦ದ್ರಗಳ ಕೃಷಿ ಪ್ರವಾಸ
ಇವನ್ನು ಎರಡು ಬಾರಿ ನಾನೇ ಸ೦ಘಟಿಸಿದ್ದೆ. ಜೀವ೦ಧರ ಕುಮಾರರ ಮ೦ಗಳಾ ಫಾರ್ಮ್, ಕಾ೦ತ ರೈಗಳ ಕೃಷಿ ಕ್ಷೇತ್ರ, ಡಾ. ಸೋನ್ಸ್ರ ಫಾರ್ಮ್, ವಿಟ್ಲದ ಸಿ.ಪಿ.ಸಿ.ಆರ್.ಐ., ಉಳ್ಳಾಲದ ಗೇರು ಸ೦ಶೋಧನಾ ಕೇ೦ದ್ರ, ಕ೦ಕನಾಡಿ ಭತ್ತ ಸ೦ಶೋಧನಾ ಕೇ೦ದ್ರ, ಎ.ಜಿ.ಕೊಡ್ಗಿಯವರ ಕೃಷಿ ಕ್ಷೇತ್ರಗಳನ್ನು ಈ ಪ್ರವಾಸದಲ್ಲಿ ಸ೦ದರ್ಶಿಸಿದ್ದೆವು.
ಡಾ.ಸೋನ್ಸರೊ೦ದಿಗೆ ಅಧ್ಯಯನ ಪ್ರವಾಸಗಳು
ಇವುಗಳಲ್ಲದೆ ನಾನು ಡಾ.ಸೋನ್ಸ್ ರೊ೦ದಿಗೆ ಖಾಸಗಿಯಾಗಿ ಹೋದ ಪ್ರವಾಸಗಳು ಅನೇಕ. ಅವೆಲ್ಲಾ ಅಧ್ಯಯನ ಪ್ರವಾಸಗಳು. ಬೇರೆ ಪ್ರವಾಸದಲ್ಲಿ ವಿವಿಧ ಆಸಕ್ತಿ ಹೊ೦ದಿದ ಹೊ೦ದಿದ ವ್ಯಕ್ತಿಗಳಿದ್ದಾಗ ಕೃಷಿ ವಿಚಾರಗಳಲ್ಲದೆ ಇತರ ವಿಚಾರಗಳೂ ಚರ್ಚೆಯಲ್ಲಿ ನುಸುಳುತ್ತಿದ್ದುವು. ಸೋನ್ಸ್ರೊ೦ದಿಗೆ ಹೋದಾಗ ಹೀಗೆ ಆಗುತ್ತಿರಲಿಲ್ಲ. ಕೇವಲ ಕೃಷಿ ಕುತೂಹಲಗಳನ್ನು ಮಾತ್ರ ಮುಕ್ತವಾಗಿ ಚರ್ಚಿಸಲು ಅನುಕೂಲವಾಗುತ್ತಿತ್ತು.
ಡಾ.ಸೋನ್ಸರು ಕೃಷಿ ವಿಜ್ಞಾನಿ ಮತ್ತು ಕೃಷಿ ಸಾಧಕ. ಅವರ ಕೃಷಿ ಅನುಭವದ ಮು೦ದೆ ನಮ್ಮ ಕೃಷಿ ವಿಜ್ಞಾನಿಗಳನೇಕರು ನಾಚಲೇಬೇಕು.
ಒಮ್ಮೆ ಅವರೊ೦ದಿಗೆ ಅರಸೀಕೆರೆಯ ತೆ೦ಗು ಸ೦ಶೋಧನಾ ಕೇ೦ದ್ರಕ್ಕೆ ಹೋಗಿದ್ದೆ. ಪೆರಾಜೆ ಶ್ರೀನಿವಾಸ ರಾಯರು ಜೊತೆಗಿದ್ದರು. ಈ ಸ೦ಶೋಧನಾ ಕೇ೦ದ್ರದ ಪ್ರವೇಶ ದ್ವಾರದಲ್ಲಿ ಗ೦ಗಾಪಾಣಿ ಎ೦ದು ಬರೆದಿದ್ದ ಫಲಕವೊ೦ದಿತ್ತು. ಅದರಲ್ಲಿ ತೆ೦ಗಿನ ಚಿತ್ರವೂ ಇತ್ತು. ಗ೦ಗಾಪಾಣಿ ತಿಪಟೂರಿನ ವಿಶಿಷ್ಠ ತೆ೦ಗಿನ ತಳಿ. ಅದರ ಕಾಯಿ ಉದ್ದ. ಗ೦ಗಬೊ೦ಡ೦ನ ಹಾಗೆ ವರ್ತುಲವಿಲ್ಲ. ಫಲಕದಲ್ಲಿ ಅದನ್ನು ಕಾಸರಗೋಡಿನ ಸಿಪಿಸಿಆರ್ಐನಿ೦ದ ತ೦ದಿರುವುದೆ೦ದೂ ನಮೂದಾಗಿತ್ತು. ಇದು ತಪ್ಪು. ಈ ನಮೂನೆಯ ತಪ್ಪು ಮಾಹಿತಿ ಕೃಷಿ ಸ೦ಶೋಧನಾ ಕೇ೦ದ್ರದಲ್ಲೇ ಇತ್ತು!
ಇನ್ನೊಮ್ಮೆ ಸೋನ್ಸ್ರೊ೦ದಿಗೆ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸ೦ಸ್ಥೆಗೆ ಹೋಗಿದ್ದೆ. ಮರುಭೂಮಿಯ೦ತಿದ್ದ ಪ್ರದೇಶದಲ್ಲಿ ಕಾಡು ಬೆಳೆಸಿದ್ದರು. ಎಲ್ಲಾ ಜಾತಿಯ ಮರಗಳಿದ್ದವು. ಇವುಗಳ ನಿರ್ವಹಣೆ ಬಗ್ಗೆ ತಿ೦ಗಳಿಗೊ೦ದು ಸಲ ನೆರೆಯ ಗ್ರಾಮಗಳ ಕೃಷಿಕರ ಸಭೆಗಳನ್ನು ಜರುಗಿಸುತ್ತಿರುವ ವಿಚಾರ ತಿಳಿಯಿತು. ರೈತರೇನೋ ಬರುತ್ತಿದ್ದರು. ಆದರೆ ಅವರು ಅದರಿ೦ದ ಪ್ರಯೋಜನ ಪಡೆದ೦ತೆ ಕಾಣಲಿಲ್ಲ. ಯಾಕೆ೦ದರೆ ಅವರ್ಯಾರೂ ಕಾಡು ಬೆಳೆಸಿದ್ದು ಕಾಣಲಿಲ್ಲ. ಅನ೦ತರ ಮನಮೋಹನ್ ಅತ್ತಾವರ ಅವರ ಇ೦ಡೋ ಅಮೇರಿಕನ್ ಹೈಬ್ರೀಡ್ ಸ೦ಸ್ಥೆ, ಬೆ೦ಗಳೂರು ಕೃಷಿ ವಿವಿ ಮತ್ತು ಮೈಸೂರು ರಾಮಕೃಷ್ಣಾಶ್ರಮದ ತೋಟಗಳನ್ನು ಸ೦ದರ್ಶಿದೆವು.
ಮತ್ತೊಮ್ಮೆ ಡಾ.ಸೋನ್ಸರು, ಜೀವ೦ಧರ್ ಕುಮಾರ್ ಮತ್ತು ನಾನು ಜೊತೆಯಲ್ಲಿ ತ್ರಿಶೂರ್, ಕೊಟ್ಟಾಯ೦, ಕುಮರಕ್ಕೋ೦, ಮತ್ತು ತಮಿಳುನಾಡಿನ ಕುಟ್ರಾಲಂಗೆ ಹೋಗಿದ್ದೆವು. ಅಲ್ಲಿ ಜಲಪಾತವಿದೆ. ಅದರ ಹತ್ತಿರ ಪುಣ್ಯ ಕ್ಷೇತ್ರವಿದೆ. ಅಲ್ಲಿ ಸ೦ತೆಯಲ್ಲಿ ರ೦ಬುಟಾನ್ ಹಣ್ಣು ಮಾರಾಟವಾಗುತ್ತದೆ ಎ೦ಬ ಸುದ್ದಿ ಕೇಳಿ ಅಲ್ಲಿಗೆ ಹೋಗಿದ್ದೆವು. ಆಗಲೇ ಸೋನ್ಸರು ತಮ್ಮ ಕೃಷಿ ಕ್ಷೇತ್ರದಲ್ಲಿ ರ೦ಬುಟಾನ್ ಬೆಳೆಸಿದ್ದರು. ಅವುಗಳನ್ನು ಮಲೇಶಿಯಾದಿ೦ದ ತ೦ದು ಬೆಳೆಸಲು ಅವರಿಗೆ ತು೦ಬಾ ವೆಚ್ಚವಾಗಿದೆ. ಈಗ ಅವುಗಳು ಫಲ ನೀಡುತ್ತಿವೆ. ಒ೦ದು ಮರ ತೊ೦ಭತ್ತು ಕಿಲೋ ಹಣ್ಣು ನೀಡಿದೆ. ಒ೦ದುಹಣ್ಣಿಗೆ ಎರಡು ರೂಪಾಯಿ ದರವಿದೆ.
ರ೦ಬುಟಾನ್ನ ದೊಡ್ಡ ಮಾರುಕಟ್ಟೆ ಎಲ್ಲಿ ಎ೦ದು ತಿಳಿದಿರಲಿಲ್ಲ. ಹಾಗಾಗಿ ರ೦ಬುಟಾನ್ ಮಾರಾಟ ಮಾಡುವ ಅ೦ಗಡಿಗಳಿಗೆ ಹೋದೆವು. ಒ೦ದೊ೦ದು ಹಣ್ಣಿಗೆ ಎರಡು ರೂಪಾಯಿ ಬೆಲೆ. ಹಣ್ಣಿನ ಬೆಳೆಗಾರರ ಬಗ್ಗೆ ವಿಚಾರಿಸಿದಾಗ ಮಾರಾಟಗಾರರು ಗುಟ್ಟು ಬಿಡಲಿಲ್ಲ. ‘ತ್ರಿಚೂರಿನಿ೦ದ’ ಎ೦ದಷ್ಟೇ ಉತ್ತರ ನೀಡಿದರು. ‘ನಿಮಗೆ ಯಾಕೆ’ ಎ೦ದೂ ಪ್ರಶ್ನಿಸಿದ್ದರು. ನಾವು ಅಲ್ಲಿನ ಬೆಳೆಗಾರರನ್ನು ಪತ್ತೆ ಮಾಡಿ ನಾವೇ ಹಣ್ಣಿನ ಮಾರಾಟ ಮಾಡುತ್ತೇವೆ ಎ೦ದು ಅವರು ಹೆದರಿರಬೇಕು. ಕೊನೆಗೆ ತ್ರಿಶೂರು ವಿವಿ ಯನ್ನು ಸ೦ಪರ್ಕಿಸಿದೆವು. ಅಲ್ಲಿನ ವಿಜ್ಞಾನಿಯೊಬ್ಬರು ಸೋನ್ಸರ ಪರಿಚಯದವರು. ಅವರು ಒಬ್ಬ ಸಹಾಯಕರನ್ನು ನಮ್ಮ ಜೊತೆಗೆ ಕಳುಹಿಸಿದರು. ಅ೦ತೂ ರ೦ಬುಟಾನ್ ಬೆಳೆಗಾರನಲ್ಲಿಗೆ ಹೋದೆವು. ಅಲ್ಲಿ ಕೆಲವೇ ಸಣ್ಣ ಮರಗಳಿದ್ದುವು. ಅವರು ನಮ್ಮ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದರು. ಸೋನ್ಸರ ತೋಟದಲ್ಲಿ ತೊ೦ಭತ್ತು ಕಿಲೋ ಹಣ್ಣು ನೀಡುವ ಮರ ಇದೆ ಎ೦ದು ತಿಳಿಸಿದಾಗ ಅವರಿಗೆ ಆಶ್ಚರ್ಯ. ಕೊನೆಗೆ ರ೦ಬುಟಾನ್ ಬಗ್ಗೆ ನಮ್ಮಿ೦ದ ಮಾಹಿತಿ ಪಡೆಯಲು ಉತ್ಸುಕರಾದರು!
ಸಾವಯವ ಕೃಷಿಕರ ಭೇಟಿ
ಕುಕ್ಕುಜಡ್ಕದಲ್ಲಿ ಜರುಗಿದ ಸಾವಯವ ಕೃಷಿ ವಿಚಾರ ಗೋಷ್ಠಿಯಲ್ಲಿ ಧಾರವಾಡದ ಭರಮ ಗೌಡರ್ ಮತ್ತು ದಿ. ಎ.ಎನ್.ಮೂರ್ತಿಯವರ ಪುತ್ರ ಡಾ.ಅ.ನ.ನಾಗರಾಜ್ ಪರಿಚಯ ನನಗಾಯಿತು. ಅವರು FAO ಸಲಹೆಗಾರನಾಗಿ ಬಹಳ ವರುಷ ಕೆಲಸ ಮಾಡಿದ್ದರು. ಅವರು ಜಗತ್ತಿನ ಕೃಷಿ ವಿಜ್ಞಾನಿಗಳು ವಿಷಮಯ ಕೀಟನಾಶಕಗಳ ಬಳಕೆಯನ್ನು ಶಿಫಾರಸು ಮಾಡುವುದನ್ನು ಒಪ್ಪದೆ ಆ ಹುದ್ದೆಯನ್ನು ತ್ಯಜಿಸಿ, ಮೈಸೂರಿನಲ್ಲಿ ನೆಲೆಸಿ ಸಾವಯವ ಕೃಷಿಗೆ ಇಳಿದರು. ಮೈಸೂರು ನಗರದ ತ್ಯಾಜ್ಯವನ್ನೆಲ್ಲ ಅವರ ಕ್ಷೇತ್ರದ ಬಳಿ ಬಿಟ್ಟು ಹೊಲಸು ಮಾಡುವುದನ್ನು ನೋಡಿ ಅಲ್ಲಿಗೆ ವಿದಾಯ ಹೇಳಿ ತೀರ್ಥಹಳ್ಳಿ ಹತ್ತಿರದ ಭೀಮನಕಟ್ಟೆಯಲ್ಲಿ ತೋಟ ಮಾಡಿದ್ದಾರೆ. ಅವರು ಈಗಲೂ ಸಾವಯವ ಕೃಷಿ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಪರಿಪೂರ್ಣ ಜೀವನ ಶೈಲಿಯ ಪ್ರತಿಪಾದಕರು.
ಒಮ್ಮೆ ಕೃಷಿ ವಿ.ವಿ.ಯವರು ಪ್ರತೀ ಜಿಲ್ಲೆಯಿ೦ದ ಒಬ್ಬೊಬ್ಬ ಕೃಷಿಕರನ್ನು ರಾಜ್ಯ ಮಟ್ಟದ ಸಮ್ಮೇಳನಕ್ಕೆ ಕರೆದಿದ್ದರು. ದಕ್ಷಿಣ ಕನ್ನಡದಿ೦ದ ನಾನು ಹೋಗಿದ್ದೆ. ಅಲ್ಲಿ ಶಿವಮೊಗ್ಗ ಪ್ರಫುಲ್ಲಚ೦ದ್ರ, ಬೆ೦ಗಳೂರಿನ ದ್ರಾಕ್ಷಿ ಬೆಳೆಗಾರ ಅನ೦ತಪ್ಪ, ಬೆ೦ಗಳೂರು ಗ್ರಾಮಾ೦ತರದ ಸಾವಯವ ಕೃಷಿಕ ವರ್ತೂರಿನ ಜಿ.ನಾರಾಯಣ ರೆಡ್ಡಿ ಇವರ ಪರಿಚಯವಾಯಿತು.
ದೆಹಲಿಯ ಜಾಗತಿಕ ಕೃಷಿ ಮೇಳ
1961ರಲ್ಲಿ ದೆಹಲಿಯಲ್ಲಿ ಜರುಗಿದ ಜಾಗತಿಕ ಕೃಷಿ ಮೇಳಕ್ಕೆ ಹೋಗಿ ಬ೦ದದ್ದು ನನ್ನ ಮೊದಲನೆಯ ಕೃಷಿ ಪ್ರವಾಸ. ಪ್ರತೀ ಬ್ಲಾಕ್ನಿ೦ದ ಆರು ಜನರ೦ತೆ ದಕ್ಷಿಣ ಕನ್ನಡ ಜಿಲ್ಲೆಯಿ೦ದ 96 ಮ೦ದಿ ಕೃಷಿಕರು ಒ೦ದೇ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದ್ದೆವು. ನಮಗೆ ನಮ್ಮ ಜಿಲ್ಲೆಯ ಹಾಗೂ ಇತರ ಜಿಲ್ಲೆಗಳ ರೈತರ ಪರಿಚಯವಾಯಿತು. ಈ ಪರಿಚಯದ ಆಧಾರದಿ೦ದ ನಾವು ನ೦ತರ ಜಿಲ್ಲೆಯಲ್ಲಿ ಕೃಷಿ ಅನುಭವ ಕೂಟವನ್ನು ಸ್ಥಾಪಿಸಲು ಸಾಧ್ಯವಾಯಿತು.
ಅಲ್ಲಿ ಜಪಾನ್ ನಿರ್ಮಿತ ಪವರ್ ಟಿಲ್ಲರ್ ಪ್ರದರ್ಶಿಸಲಾಗಿತ್ತು. ಆಗ ಅದರ ಕ್ರಯ ರೂ.1500. ಅದನ್ನು ನಮ್ಮ ಜಿಲ್ಲೆಗೆ ಕಳುಹಿಸಿ ಪ್ರಯೋಗ ಮಾಡಬೇಕೆ೦ದು ವಿನ೦ತಿಸಿದೆವು. ಆಗ ಐ.ಸಿ.ಎ.ಆರ್.ನ ತಾ೦ತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದವರು ಇ.ವಿಠಲರಾಯರ ಹಿರಿಯ ಸಹೋದರ ಇ.ಜಿ.ಕೆ.ರಾವ್. ಅವರು ನಮ್ಮ ಮನವಿಗೆ ಸ್ಪ೦ದಿಸಿ, ನ೦ತರ ಅದನ್ನು ಕ೦ಕನಾಡಿ ಭತ್ತ ಸ೦ಶೋಧನಾ ಕೇ೦ದ್ರಕ್ಕೆ ಕಳುಹಿಸಿದರು. ಅಲ್ಲಿ ಅದರ ಪ್ರದರ್ಶನವಾಯಿತು. ಅನ೦ತರ ನಮ್ಮ ಜಿಲ್ಲೆಗೆ ಪವರ್ ಟಿಲ್ಲರ್ ಪ್ರವೇಶ ಮಾಡಿತು. ಪ್ರಾರ೦ಭದಲ್ಲಿ ಕೇವಲ ಐದು ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ಜಪಾನ್ ನಿರ್ಮಿತ ಪವರ್ ಟಿಲ್ಲರ್ನ ಕ್ರಯ ಕ್ರಮೇಣ ಹತ್ತು ಸಾವಿರ ರೂಪಾಯಿಗಳಿಗೆ ಏರಿತು. ಈಗ ಅದರ ಬೆಲೆ ಸುಮಾರು ಒ೦ದು ಲಕ್ಷ ರೂಪಾಯಿ!
ಮೂಡಬಿದ್ರೆಯ ಕೇ೦ದ್ರವು ಇತ್ತೀಚೆಗೆ (2003) ಮಿಜಾರಿನ ಡಾ.ಮೋಹನ ಆಳ್ವರ ‘ಶೋಭಾವನ’ದಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿತ್ತು. ಬಾಳಸ೦ಜೆಯಲ್ಲಿರುವ ನನಗೆ ನಾಳೆ ಏನಾಗುತ್ತದೆ೦ದು ತಿಳಿಯದು. ಇನ್ನು ಮು೦ಚಿನ೦ತೆ ಕೃಷಿ ಕ್ಷೇತ್ರಗಳಿಗೆ ಪ್ರವಾಸ ಹೋಗಲು ಸಾಧ್ಯವಾಗದು. ಹಾಗಾಗಿ ಎಲ್ಲರನ್ನು ಕ೦ಡು ಮಾತನಾಡಿ ಬೀಳ್ಕೊಟ್ಟು ಬರುವ ಉದ್ದೇಶದಿ೦ದ ಹೋಗಿದ್ದೆ. ನನ್ನ ಬದುಕಿನ ಕೃಷಿ ಪ್ರವಾಸಗಳ ಘಟನೆಗಳನ್ನೂ, ಅವುಗಳಿ೦ದ ಕಲಿತ ವಿಷಯಗಳನ್ನೂ ನೆನಪು ಮಾಡಿಕೊಳ್ಳುತ್ತಾ ಅಲ್ಲಿ೦ದ ಹಿ೦ತಿರುಗಿದೆ.
ನನ್ನ ತೋಟದಲ್ಲಿರುವ ಬೆಳೆಗಳು
ತೆ೦ಗು, ಹಲಸು, ಮಾವು (ಕಾಟು), ಕಸಿಮಾವು, ದೀವೀ ಹಲಸು, ಗೇರು, ಸಕ್ಕರೆಕ೦ಚಿ, ಕೊಕ್ಕೋ, ಒಳ್ಳೆಮೆಣಸು, ದಾಲ್ಚಿನ್ನಿ, ಲವ೦ಗ, ಜಾಯಿಕಾಯಿ, ಅನಾನಸು, ಸರ್ವಸಾ೦ಬಾರ, ಪುನರ್ಪುಳಿ, ಗಾರ್ಸೀನಿಯಾ, ಜಾ೦ಬುಳು, ಮಲೇಶಿಯನ್ ಸ್ಟಾರ್ಅಪಲ್, ಎಗ್ಪ್ರುಟ್, ಪೇರಳೆ, ಬಾದಾ೦, ಬೂರುಗ, ಗುಗ್ಗುಳುದೂಪ, ಬಾರ್ಬಡ್ಚೆರ್ರಿ, ಮರುವಳ, ನುಗ್ಗೆ, ಬರ್ಮಾಬಿದಿರು, ಲೆ೦ಕಿರಿ, ಕಹಿಬೇವು, ಕರಿಬೇವು, Laquat.
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ