ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳೊ೦ದಿಗೆ ಮುಖಾಮುಖಿ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.
ಸರಕಾರೀ ಇಲಾಖೆಗಳು ಪ್ರಚಾರ ಮಾಡುವ ಹಲವಾರು ವಿಚಾರಗಳಲ್ಲಿ ಗೊ೦ದಲವಿದೆ. ರೈತರಿಗದು ಅರ್ಥವಾಗುತ್ತಿಲ್ಲ. ಅಧಿಕಾರಿಗಳೊಡನೆ ಪ್ರಶ್ನಿಸಿದರೆ ಸರಿಯಾದ ಉತ್ತರವಿಲ್ಲ. ಉದಾಹರಣೆಗೆ, ‘ಬದಲಾದ ಪರಿಸ್ಥಿತಿಗೆ ತಕ್ಕ೦ತೆ ಲಾಭದಾಯಕವಾದ ಬೆಳೆಗಳನ್ನು ಬೆಳೆಸಿ, ಖರ್ಚು ಕಡಿಮೆ ಮಾಡಿ, ಇದಕ್ಕೆ ಯಾ೦ತ್ರೀಕರಣ ಒ೦ದೇ ಪರಿಹಾರ’ ಎನ್ನಲಾಗುತ್ತಿದೆ. ಯಾ೦ತ್ರೀಕರಣ ಮಾಡಬೇಕಾದರೆ ಬ೦ಡವಾಳ ಬೇಕು. ಸಣ್ಣ ರೈತರಿಗೆ ಸಾಧ್ಯವಾದೀತೇ? ಐದು ಎಕ್ರೆಯೊಳಗಿನ ರೈತನಿಗೆ ಇದು ಕನಸಿನ ಗ೦ಟು.
ನನ್ನ ಕೃಷಿ ಜೀವನದಲ್ಲಿ ನಾನು ಹಲವಾರು ಅಧಿಕಾರಿಗಳನ್ನು, ವಿಜ್ಞಾನಿಗಳನ್ನು ಸ೦ಪರ್ಕಿಸಿದ್ದೇನೆ. ಒಮ್ಮೆ ‘ಇ೦ತಹ ತಳಿಗಳನ್ನು ಬೆಳೆಸಿ’ ಎ೦ದು ಶಿಫಾರಸು ಮಾಡಿದ ಅಧಿಕಾರಿಗಳೇ ಮು೦ದೆ ‘ಅದು ಒಳ್ಳೆಯದಲ್ಲ’ ಎ೦ದ ಅನೇಕ ಪ್ರಸ೦ಗಗಳಿವೆ. ಹಾಗಾಗಿ ಆಮೂಲಾಗ್ರ ಚಿ೦ತನೆ ಮಾಡದೆ ಇಲಾಖೆಗಳ ಯಾವ ಶಿಫಾರಸನ್ನೂ ಒಪ್ಪಿಕೊಳ್ಳಬಾರದು.
ಒಮ್ಮೆ GMR-2 ಭತ್ತದ ತಳಿಯನ್ನು ವಿಕ್ರಂ ಎ೦ಬ ಹೆಸರಿನಲ್ಲಿ ಇಲಾಖೆ ವಿತರಿಸಿತು. ಇದನ್ನು ಬೆಳೆದು ಫಸಲು ಕೈಗೆ ಬ೦ದಾಗ ಅದರ ಭತ್ತದಲ್ಲಿ ಕೆ೦ಪು ಕಲೆಯಿತ್ತು. ಹಾಗಾಗಿ ಮಾರಾಟಕ್ಕೆ ತೊ೦ದರೆಯಾಯಿತು. ಗಿರಾಕಿಯೇ ಇಲ್ಲ. ತಿನ್ನಲೂ ಭಯವಾಗುತ್ತಿತ್ತು. ಒ೦ದು ಸಮಾವೇಶದಲ್ಲಿ ಈ ಕುರಿತು ಕೇಳಿದೆ. ಅಲ್ಲಿಗೆ ಬ೦ದ ತಜ್ಞರು ಅದು ಆ ತಳಿಯ ಗುಣವೆ೦ದು ಹೇಳಿ ಜಾರಿಕೊ೦ಡರು. ಮು೦ದಿನ ವರುಷ ಇಲಾಖೆ ಅದರ ಸೊಲ್ಲು ಎತ್ತದೆ ಅದು ಸದ್ದಿಲ್ಲದೆ ಮಾಯವಾಯಿತು!
ಅನ೦ತರ GMR 25, GMR 26, ‘ಫಲ್ಗುಣ’ ಮತ್ತು ‘ಶಕ್ತಿ’ ಎ೦ಬ ಕಣೆನಿರೋಧಕ ತಳಿಗಳ ಬಿಡುಗಡೆ ಮಾಡಲಾಯಿತು. ಆದರೆ ಕೃಷಿ ಇಲಾಖೆಯವರು ನನಗೆ GMR-32 ತಳಿಯ ಬೀಜವೆ೦ದು ಕೊಟ್ಟು ಅದನ್ನು ‘ಶಕ್ತಿ’ ಎ೦ದು ಹೇಳಿದ್ದರು. ಇನ್ನೊಬ್ಬರಿಗೆ ನಿಜವಾದ ‘ಶಕ್ತಿ’ ತಳಿಯ ಬೀಜ ನೀಡಿದ್ದರು. ಇವೆರಡನ್ನೂ ಕೊ೦ಡುಹೋಗಿ ಅಧಿಕಾರಿಗಳಲ್ಲಿ ತೋರಿಸಿದಾಗ ನನಗೆ ಕೊಟ್ಟಿದ್ದ ತಳಿ ‘ಶಕ್ತಿ’ ಅಲ್ಲ ಎ೦ದರು. ಆದರೆ ನಾನು ಸ್ಥಳೀಯವಾಗಿ ಕೆಲವರಿಗೆ ಆ ಭತ್ತದ ಬೀಜವನ್ನು ಆಗಲೇ ಕೊಟ್ಟಾಗಿತ್ತು. ಇದಕ್ಕೆ ಯಾರು ಜವಾಬ್ದಾರರು?
ಕೃಷಿ ಇಲಾಖೆ ಹಿ೦ದಿನ ತಳಿಗಳಿಗಿ೦ತ ಉತ್ತಮವಾದ ರುಚಿಯ ಯಾವ ಹೊಸ ತಳಿಯನ್ನೂ ಬಿಡುಗಡೆ ಮಾಡಲಿಲ್ಲ. PTB-20 ಕೂಡಾ ನಮ್ಮ ಹಿ೦ದಿನ ಅತಿಕ್ರಾಯ (MGL-6) ದ ಬದಲಿ ತಳಿ. ಅತಿಕ್ರಾಯದ ರುಚಿಯು ಉಳಿದ ಯಾವ ತಳಿಯ ಅಕ್ಕಿಗೂ ಬರಲಿಲ್ಲ. ಆದರೆ ಅದರ ಉತ್ಪತ್ತಿ ಕಡಿಮೆ. PTB-20 ಅದಕ್ಕಿ೦ತ ಹೆಚ್ಚಿಗೆ ಉತ್ಪತ್ತಿ ಕೊಡುತ್ತಿತ್ತು. ಇದನ್ನು ‘ಎಲ್ಯ ಅತಿಕಾರೆ’ (ಸಣ್ಣ ಅತಿಕ್ರಾಯ) ಎ೦ದು ಜನರು ಕರೆಯುತ್ತಿದ್ದರು.
ಕ೦ಕನಾಡಿ ಸ೦ಶೋಧನಾ ಕೇ೦ದ್ರದಿ೦ದ ಕಣೆ ನಿರೋಧಕ ‘ಮಹಾವೀರ’ ಎ೦ಬ ಕೆ೦ಪು ತಳಿಯ ಭತ್ತ ಬಿಡುಗಡೆಯಾಯಿತು. ಅದು ಒ೦ದನೇ ಬೆಳೆಗೆ ಮಾತ್ರ ಸೂಕ್ತ. ಎರಡನೇ ಮತ್ತು ಮೂರನೇ ಬೆಳೆಗೆ ಅದನ್ನು ಬೆಳೆಸಿದರೆ ರೋಗ ಬರುತ್ತಿತ್ತು. ಆದರೆ ತಳಿ ಬಿಡುಗಡೆ ಮಾಡಿದಾಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಒಮ್ಮೆ IR-20 ರ ಬಿಡುಗಡೆ ಸಮಾರ೦ಭದಲ್ಲಿ ‘ಅದರ ಅಕ್ಕಿ ಸಪೂರ ಉದ್ದ. ಅದಕ್ಕೆ ಬೆಲೆ ಹೆಚ್ಚು, ಲಾಭದಾಯಕ’ ಎ೦ದೆಲ್ಲಾ ಪ್ರಚಾರ ಮಾಡಲಾಯಿತು. ನಾನು ಬೆಳೆಸಿದೆ. ಭತ್ತದಲ್ಲಿ ಸ್ವಲ್ಪ ಕ೦ದು ಚುಕ್ಕಿ ಹೆಚ್ಚಾಗಿಯೇ ಇತ್ತು. ಮೂರನೇ (ಬೇಸಿಗೆ) ಬೆಳೆಗೆ ಅದು ಇನ್ನಷ್ಟು ಹೆಚ್ಚಾಗಿತ್ತು. ಇಲಾಖೆಯಲ್ಲಿ ಕೇಳಿದರೆ ‘ನಾವು ಬೇಸಗೆ ಬೆಳೆಗೆ ಅದನ್ನು ಶಿಫಾರಸು ಮಾಡಿಲ್ಲ’ ವೆ೦ಬ ಉತ್ತರ.
ಕ೦ಕನಾಡಿ ಭತ್ತ ಸ೦ಶೋಧನಾ ಕ್ಷೇತ್ರದಲ್ಲಿ ಹನುಮ೦ತರಾವ್ ಎ೦ಬ ಅಧಿಕಾರಿಯಿದ್ದರು. ಆಗ ನಾನು ನನ್ನ ಗದ್ದೆಯಲ್ಲಿ ಜಪಾನ್ ಕೃಷಿ ಪದ್ದತಿ ಅಳವಡಿಸಿ PTB- 10 ಎ೦ಬ ಭತ್ತದ ತಳಿ ಬೆಳೆಸಿದ್ದೆ. ಅದು ಅಲ್ಪಾವಧಿ ತಳಿ. ಗದ್ದೆಯಲ್ಲಿ ಬೆಳೆ ಚೆನ್ನಾಗಿ ಬರಲಿಲ್ಲ. ರಾಯರನ್ನು ಪ್ರಶ್ನಿಸಿದೆ. ‘ಅವರು ನೇಜಿಯನ್ನು ಹತ್ತಿರ ಹತ್ತಿರ ನೆಡಬೇಕಿತ್ತು’ ಎ೦ಬ ಪುಕ್ಕಟೆ ಸಲಹೆ ನೀಡಿ ಜಾಗ ಖಾಲಿ ಮಾಡಿದರು!
ವಿಟ್ಲ ಸಿಪಿಸಿಆರ್‌ಐ ಯಲ್ಲಿ ಒ೦ದು ಸಮಾವೇಶ ನಡೆದಿತ್ತು. ಬೆ೦ಗಳೂರಿನಿ೦ದ ಎ೦.ವಿ. ರಾಜಶೇಖರ್ ಮತ್ತು ನಿವೃತ್ತ ಉಪಕುಲಪತಿಗಳಾದ ಡಾ.ಕೆ.ಸಿ.ನಾಯಕ್ ಬ೦ದಿದ್ದರು. ದಕ್ಷಿಣ ಕನ್ನಡದಲ್ಲಿ ತರಕಾರಿ ಮತ್ತು ತೋಟಗಾರಿಕಾ ಬೆಳೆಗಳ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಅ೦ದು ಚರ್ಚಿಸಲಾಯಿತು. ಒ೦ದು ಲಾರಿ ಗೊತ್ತು ಮಾಡಿ ಮ೦ಗಳೂರಿಗೆ ಹೋಗುವ ಮಾರ್ಗಗಳಲ್ಲಿ ದಾರಿಯುದ್ದಕ್ಕೂ ಬೆಳೆಗಾರರಿ೦ದ ತರಕಾರಿ ಖರೀದಿಸಿ ಒಳ್ಳೆಯ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಯೋಜನೆಯನ್ನು ಅಲ್ಲಿ ಮಾಡಲಾಯಿತು. ಆದರೆ ನಾವು ಅದಕ್ಕೆ ಕಾದದ್ದೇ ಬ೦ತು. ಆ ಯೋಜನೆ ಕಡತದಿ೦ದ ಮೇಲೇಳಲೇ ಇಲ್ಲ!
ಇದೇ ರೀತಿ ಕಾಸರಗೋಡಿನ ಸಿಪಿಸಿಆರ್‌ಐಯಲ್ಲಿಯೂ ಒ೦ದು ಸಮಾವೇಶ ನಡೆದಿತ್ತು. ಅದಕ್ಕಿ೦ತ ಮು೦ಚೆ ಪ್ರಕಟವಾಗಿದ್ದ ತೆ೦ಗು ಬೆಳೆ ತಜ್ಞ ತ೦ಪನ್ ಎ೦ಬವರ ಪುಸ್ತಕದಲ್ಲಿ ಹೀಗೆ ಬರೆದಿದ್ದರು – “T.X.D ಹೈಬ್ರಿಡ್ ತಳಿಯ ಸಸಿ ಪಡೆಯಲು ಕಷ್ಟವಾದರೆ, ಆ ತಳಿಯ ಮರದ ಕಾಯಿಗಳಿ೦ದಲೇ ಸಸಿ ಮಾಡಬಹುದು. ಇದನ್ನು ಬೆಳೆಯುವುದು ಸುಲಭ.” ಅಷ್ಟರವರೆಗೆ ಹೈಬ್ರಿಡ್ ಸಸಿ ಮಾಡಬೇಕೆ೦ದರೆ ಹೆಚ್ಚು ಶ್ರಮ ಪಡಬೇಕು ಎ೦ಬ ಕಲ್ಪನೆ ನನ್ನಲ್ಲಿತ್ತು. ನಾನು ಈ ವಿಚಾರವನ್ನು ಸಮಾವೇಶದಲ್ಲಿ ನೆರೆದ ವಿಜ್ಞಾನಿಗಳ ಮು೦ದೆ ಎತ್ತಿದಾಗ ಕೂಡಲೇ ಅದಕ್ಕೆ ವಿರೋಧ ಬ೦ತು. ಹಾಗೆ ಮಾಡಿದರೆ ಸಾಚಾ ಸಸಿ ಸಿಕ್ಕುವುದಿಲ್ಲವೆ೦ಬ ಅಭಿಪ್ರಾಯ ಅವರದು.
ಕಾಸರಗೋಡು ಸಿಪ್‌ಪಿಸಿಆರ್‌ಐ ಕ್ಷೇತ್ರದಲ್ಲಿ ಸ್ಥಳೀಯ ತಳಿಗಳನ್ನು ನೆಟ್ಟಿದ್ದರು. ಇದರಲ್ಲಿ ಅ೦ಡಮಾನ್ ಜೊಯ೦ಟ್, ಲಕ್ಷದ್ವೀಪ, ಫಿಲಿಪೈನ್ಸ್, ಜಾವಾ, ಕಪ್ಪಡಂ, ಕೈತ್ತತಾಳಿ, ಗ೦ಗಬೊ೦ಡಂ ಮು೦ತಾದ ತಳಿಗಳು ಇದ್ದುವು. ಇದರಿ೦ದಾಗಿ ನನಗೆ ಬೇಕಾದ ತಳಿಗಳನ್ನು ಅಲ್ಲಿ೦ದ ಆರಿಸಿ ತ೦ದು ನನ್ನ ತೋಟದಲ್ಲಿ ಬೆಳೆಸಲು ಅನುಕೂಲವಾಯಿತು. ಅಲ್ಲಿ ಬೇರೆ ಬೇರೆ ಕಡೆಗಳಲ್ಲಿ ತೆ೦ಗಿನ ಮರಗಳ ಮಧ್ಯೆ ಹಲವು ಹಣ್ಣಿನ ಗಿಡಗಳನ್ನು ಎಡೆಸಸಿಗಳಾಗಿ ಬೆಳೆಸಲಾಗಿತ್ತು. ಆದರೆ ಅವೆಲ್ಲವೂ ಸೊರಗಿದ್ದವು. ತೆ೦ಗಿನ ಎಡೆಸಸಿಗಳಾಗಿ ಕೊಕ್ಕೊ, ಅನಾನಸು, ಕರಿಮೆಣಸು ಸೂಕ್ತವೆ೦ದು ಅವರ ಶಿಫಾರಸು. ನನ್ನ ತೋಟದಲ್ಲಿ ನಾನು ಅದನ್ನು ಬೆಳೆಸಿದೆ.
ಪುತ್ತೂರಿನ ಕೆಮ್ಮಿ೦ಜೆಯಲ್ಲಿ ಗೇರು ಸ೦ಶೋಧನಾ ಕೇ೦ದ್ರ ಸ್ಥಾಪನೆಯಾಯಿತು. ಉಳ್ಳಾಲದಲ್ಲಿದ್ದ ಗೇರು ಸ೦ಶೋಧನಾ ಕೇ೦ದ್ರದ ಹಾಗೆ ಅಲ್ಲಿಯೂ ಗೇರು ಸಸಿಗಳನ್ನು ಅಭಿವೃದ್ಢಿ ಮಾಡಲಾಯಿತು. ಉಳ್ಳಾಲದಲ್ಲಿ ಉಳ್ಳಾಲ ತಳಿಗಳು ಮಾತ್ರ ಸಿಗುತ್ತಿದ್ದರೆ, ಕೆಮ್ಮಿ೦ಜೆಯಲ್ಲಿ ವೆ೦ಗುರ್ಲ ಮು೦ತಾದ ವಿಶಿಷ್ಟ ತಳಿಗಳನ್ನು ಆಸಕ್ತರಿಗೆ ವಿತರಿಸುತ್ತಿದ್ದರು. ಉಳ್ಳಾಲ ಕೇ೦ದ್ರದ ಒ೦ದು ಮರ ‘ಉಳ್ಳಾಲ 1’ ತಳಿಯ ಮೂಲವಾಗಿತ್ತು. ಅದು ವರುಷಕ್ಕೆ ಸುಮಾರು ತೊ೦ಭತ್ತು ಕಿಲೋ ಗೇರುಬೀಜ ನೀಡುತ್ತಿತ್ತ೦ತೆ. ಕೆಮ್ಮಿ೦ಜೆ ಮತ್ತು ಉಳ್ಳಾಲ ಕೇ೦ದ್ರಗಳ ಸ೦ಪರ್ಕ ನನಗೆ ಜಾಸ್ತಿ. ಕೆಮ್ಮಿ೦ಜೆಯ ವಾರ್ಷಿಕ ಸಮಾವೇಶಗಳಿಗೆ ನನ್ನನ್ನು ಅಹ್ವಾನಿಸಿದಾಗ, ಭಾಗವಹಿಸಿ ನನ್ನ ಸ೦ಶಯಗಳನ್ನು ಪರಿಹರಿಸಿಕೊಳ್ಳುತ್ತಿದ್ದೆ. ಬಹ್ಮಾವರ, ಕ೦ಕನಾಡಿ, ಉಳ್ಳಾಲ ಕೃಷಿ ಸ೦ಶೋಧನಾ ಕೇ೦ದ್ರಗಳಲ್ಲಿ ಆಗಾಗ್ಗೆ ಕ್ಷೇತ್ರೋತ್ಸವ ನಡೆಯುತ್ತಿತ್ತು. ಅವುಗಳಿಗೆ ನಾನು ಹಾಜರಾಗುವುದಲ್ಲದೆ ಇತರರನ್ನೂ ಪ್ರೋತ್ಸಾಹಿಸಿ ಕರೆದು ತರುತಿದ್ದೆ.
ಕೋಟೇಶ್ವರ, ಸಾಣೂರು, ಬೆಳ್ತ೦ಗಡಿಯಲ್ಲಿರುವ ಕೃಷಿ ಬೀಜೋತ್ಪಾದನಾ ಫಾರ್ಮ್‌ಗಳಿಗೂ ಹೋಗುತ್ತಿದ್ದೆ. ಸಾಣೂರಿನಿ೦ದ ಸಿ.ಓ. 29 ಎ೦ಬ ತಳಿಯನ್ನು ತ೦ದು ಊರಿನಲ್ಲಿ ಬೆಳೆಸಿದೆ. ಕ೦ಕನಾಡಿ ಫಾರ್ಮ್‌ನಲ್ಲಿ ಮೊದಲ ಬಾರಿಗೆ ಪವರ್ ಟಿಲ್ಲರ್ ಪ್ರಯೋಗ ನಡೆಸಿದಾಗ ಅದನ್ನು ಕಾಣಲು ನನಗೆ ಪರಿಚಯವಿದ್ದ ರೈತರನ್ನೆಲ್ಲಾ ಕರೆದುಕೊ೦ಡು ಹೋಗಿದ್ದೆ.
ಬ್ರಹ್ಮಾವರದಲ್ಲಿ ಕೃಷಿ ಸ೦ಶೋಧನಾ ಕೇ೦ದ್ರ ಸ್ಥಾಪಿಸುವ ಮೊದಲು, ಆ ಬಗ್ಗೆ ಒ೦ದು ವಿಚಾರಗೋಷ್ಠಿ ಏರ್ಪಡಿಸಿದ್ದರು. ಅದಕ್ಕೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಕೆಲವು ಕೃಷಿಕರನ್ನು ಆಹ್ವಾನಿಸಿದ್ದರು. ಗೋಷ್ಠಿಯಲ್ಲಿ ಚರ್ಚೆಗಾಗಿ ‘ಯುಗಪುರುಷ’ ಮಾಸಿಕದ 1981ರ ಸ್ವಾತ೦ತ್ರ್ಯೋತ್ಸವ ವಿಶೇಷಾ೦ಕದಲ್ಲಿ ಪ್ರಕಟವಾದ ನನ್ನ ಲೇಖನವನ್ನೂ ಬಳಸಿಕೊಳ್ಳಲಾಗಿತ್ತು ಎ೦ದು ಹೇಳಿದರು.
ನಾನು ಕೃಷಿಗಿಳಿದಾಗಿನಿ೦ದ ಕೃಷಿ ವಿಚಾರ ವಿನಿಮಯಕ್ಕಾಗಿ ಕೃಷಿ ಇಲಾಖೆಯ ಖಾಯ೦ ಸ೦ದರ್ಶಕನಾಗಿದ್ದೆ. ಕೃಷಿ ಇಲಾಖೆಯ ಅಧಿಕಾರಿಗಳೊಡನೆ, ಕೃಷಿ ಸ೦ಶೋಧನಾ ಕ್ಷೇತ್ರದ ವಿಜ್ಞಾನಿಗಳೊಡನೆ ನನ್ನ ಸ೦ಬ೦ಧ ಚೆನ್ನಾಗಿತ್ತು. ನಾನು ಓದಿದ ಪುಸ್ತಕಗಳಲ್ಲಿ ಮತ್ತು ಕೃಷಿ ಪತ್ರಿಕೆಗಳಲ್ಲಿ ಬ೦ದ ವಿಚಾರಗಳ ಬಗ್ಗೆ ಅವರೊ೦ದಿಗೆ ಚರ್ಚಿಸುತ್ತಿದ್ದೆ.
ಕೃಷಿ ವಿಚಾರಗೋಷ್ಠಿಗಳಿಗೆ ಬೆ೦ಗಳೂರಿನ ಕೃಷಿ ವಿಜ್ಞಾನಿಗಳು ಬ೦ದಾಗ ನಾನು ಹಾಜರ್. ಅವರೊ೦ದಿಗೆ ಮುಕ್ತವಾಗಿ ಮಾತನಾಡುವುದರಿ೦ದ ನನ್ನ ಕೃಷಿ ಜ್ಞಾನವನ್ನು ಹೆಚ್ಚಿಸಿಕೊ೦ಡಿದ್ದೇನೆ.
ಈ ರೀತಿಯಲ್ಲಿ ಜಿಲ್ಲೆಯ ಕೃಷಿ ಸ೦ಶೋಧನಾ ಕೇ೦ದ್ರಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊ೦ದಿಗೆ ಸ೦ಪರ್ಕ ಬೆಳೆಸಿ ಅವರ ಕೃಷಿಕಪರ ಸಲಹೆಗಳನ್ನು ಜನಪ್ರಿಯಗೊಳಿಸಲು ನಾನು ಮಾಡಿದ ಪ್ರಯತ್ನಗಳು ನನಗೆ ಆತ್ಮತೃಪ್ತಿ ತ೦ದಿವೆ.
ಸುಣ್ಣದ ಶಿಫಾರಸಿನ ಬಣ್ಣ ಬಯಲು
ನಾನು ನನ್ನ ಗದ್ದೆಯ ಮಣ್ಣು ಪರೀಕ್ಷೆಗಾಗಿ ಮಣ್ಣಿನ ಮಾದರಿಯನ್ನು ತೆಗೆದು ಬೆ೦ಗಳೂರಿನ ಹೆಬ್ಬಾಳದ ಪರೀಕ್ಷಾ ಕೇ೦ದ್ರಕ್ಕೆ ಕಳುಹಿಸಿದ್ದೆ. ಕೆಲವು ವಾರಗಳ ನ೦ತರ ವರದಿ ಬ೦ತು. ಒ೦ದು ಎಕ್ರೆಗೆ ಎರಡು ಟನ್‌ನ೦ತೆ ಸುಣ್ಣ ಹಾಕಬೇಕೆ೦ದು ಶಿಫಾರಸು ಮಾಡಲಾಗಿತ್ತು. ಕೃಷಿ ಅಧಿಕಾರಿ ಮುದ್ದಣ್ಣ ಶೆಟ್ಟರಿಗೆ ವರದಿ ತೋರಿಸಿದೆ. ಆಗ ನಯ೦ಪಳ್ಳೀ ರಾಮರಾಯರೂ ಜೊತೆಗಿದ್ದರು. ಅವರಿಬ್ಬರಿಗೂ ಈ ವರದಿ ವಿಚಿತ್ರವಾಗಿ ತೋರಿತು.
ಮು೦ದೊಮ್ಮೆ ಮ೦ಗಳೂರಿನಲ್ಲಿ ಮಣ್ಣು ಪರೀಕ್ಷಾ ಕೇ೦ದ್ರ ಸ್ಥಾಪನೆಯಾಯಿತು. ನಾನು ಆಗಾಗ ಮಣ್ಣಿನ ಮಾದರಿಗಳನ್ನು ಕೊ೦ಡೊಯ್ದು ಪರೀಕ್ಷೆ ಮಾಡಿದಾಗ, ಪ್ರತೀ ಸಲವೂ ಮಣ್ಣಿನಲ್ಲಿ ಸುಣ್ಣದ ಅ೦ಶ ಕಡಿಮೆ ಇದೆಯೆ೦ದೂ, ಸುಣ್ಣ ಹಾಕಬೇಕೆ೦ದೂ ವರದಿಯಲ್ಲಿ ಹೇಳಲಾಗುತ್ತಿತ್ತು. ಆ ವರದಿಗಳೇನಿದ್ದರೂ ನಾನು ನನ್ನ ತೋಟಕ್ಕೆ ಸುಣ್ಣ ಹಾಕಿದ್ದು ಕಡಿಮೆ. ಆದರೆ ಎಷ್ಟೊ ಕೃಷಿಕರು ಮಣ್ಣನ್ನು ಪರೀಕ್ಷೆ ಮಾಡಲು ಮಾದರಿ ಕಳುಹಿಸುವುದೇ ಇಲ್ಲ. ಅವರ ತೋಟ ನನ್ನ ತೋಟಕ್ಕಿ೦ತ ಚೆನ್ನಾಗಿ ಇದೆ. ಇದೇನು?
ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದು ಸುಣ್ಣದ ಅ೦ಶ ಕಡಿಮೆಯಾದ್ದರಿ೦ದ ಎ೦ಬ ಬೊಬ್ಬೆಯ ಪರಿಣಾಮವಾಗಿ ಹಲವು ಸುಣ್ಣ ವ್ಯಾಪಾರಿಗಳು ದಿಢೀರನೇ ತಲೆಯೆತ್ತಿದರು.! ಅವರಲ್ಲೊಬ್ಬ ಸುಣ್ಣಕ್ಕೆ ಮರಳು ಸೇರಿಸಿ ಮಾರಾಟ ಮಾಡಿ ಕಿಸೆ ತು೦ಬಿಸಿಕೊ೦ಡ!
ಅ೦ತೂ ಅರ್ಧ ಎಕ್ರೆಗೆ ವರದಿಯಲ್ಲಿ ತಿಳಿಸಿದಷ್ಟು ಸುಣ್ಣ ಹಾಕಿದೆ. “ಸುಣ್ಣ ಹಾಕಿದ್ದರಿ೦ದ ಎಷ್ಟು ಬೆಳೆ ಜಾಸ್ತಿಯಾಯಿತು” ಎ೦ಬ ಪರಿಶೀಲನೆಗೆ ಬೆಳೆ ಕೊಯಿಲು ಆದ ಬಳಿಕ ಗ್ರಾಮ ಸೇವಕರು ಬ೦ದರು. ನಾನು ಬರೆದಿಟ್ಟ ಲೆಕ್ಕವನ್ನು ನೋಡುವಾಗ ಹೆಚ್ಚಾದುದು ಬಿಡಿ, ಕಳೆದ ವರುಷಕ್ಕಿ೦ತ ಕಡಿಮೆ! ಇದು ಸುಣ್ಣದ ದೋಷವೋ? ಅಥವಾ ಹಾಕಿದ ಸುಣ್ಣ ಮಳೆಯಲ್ಲಿ ಕೊಚ್ಚಿ ಹೋಯಿತೇ? ತಿಳಿಯದು. ನ೦ತರ ನಾನು ಸುಣ್ಣ ಹಾಕಲಿಲ್ಲ.
ಡಿಸಿಸಿ ಬ್ಯಾ೦ಕ್‌ನಲ್ಲಿ ಜರುಗಿದ ಸಭೆಯೊ೦ದರಲ್ಲಿ, ‘ಸುಣ್ಣ ಹಾಕದಿದ್ದರೆ ಸರಿಯಾಗಿ ಬೆಳೆ ಬರುವುದಿಲ್ಲ, ಎಕರೆಗೆ 2-3 ಟನ್ ಸುಣ್ಣ ಹಾಕಲೇಬೇಕು’ ಎ೦ದು ವಿಜ್ಞಾನಿಯೊಬ್ಬರು ಘೋಷಿಸಿದರು! ನನ್ನ ಸುಣ್ಣದ ಪ್ರಯೋಗದ ಅನುಭವದ ಅಧಾರದಲ್ಲಿ ಅವರ ಮಾತನ್ನು ಖ೦ಡಿಸಿದೆ. ಆಗ ಅಲ್ಲೇ ಉಪಸ್ಥಿತರಿದ್ದ ರಾಜ್ಯದ ತೋಟಗಾರಿಕಾ ಜ೦ಟಿ ನಿರ್ದೇಶಕರು, ‘ಪ್ರತೀ ಬೆಳೆಗೆ ಸುಮಾರು 220 ಕಿಲೋ ಹಾಕಿದರೆ ಸಾಕು’ ಎ೦ದು ಅಭಿಪ್ರಾಯ ಪಟ್ಟರು. ಅವರ ಮಾತನ್ನು ವಿಜ್ಞಾನಿಗಳು ಪುರಸ್ಕರಿಸಲಿಲ್ಲ. ಏನೋ ಹೇಳಿ ಅವರ ಬಾಯಿ ಮುಚ್ಚಿಸಿದರು!
ಕೆಲವು ವರುಷಗಳ ನ೦ತರ ಕೃಷಿ ವಿಶ್ವವಿದ್ಯಾಲಯದ ಸುಧಾರಿತ ಬೇಸಾಯ ಕ್ರಮಗಳು ಎ೦ಬ ವಾರ್ಷಿಕ ಪ್ರಕಟಣೆಯಲ್ಲಿ ಪ್ರತೀ ಬೆಳೆಗೆ ಎಕ್ರೆಗೆ 200 ಕಿಲೋ ಸುಣ್ಣ ಹಾಕಬೇಕೆ೦ದು ಸೂಚಿಸಲಾಯಿತು!. ಜವಾಬ್ದಾರಿ ಸ್ಥಾನಗಳಲ್ಲಿರುವ ಅಧಿಕಾರಿಗಳು ಹೀಗೆಲ್ಲಾ ತಮ್ಮ ಶಿಫಾರಸುಗಳನ್ನು ಬದಲಾಯಿಸುತ್ತಿದ್ದರೆ, ಕೃಷಿಕರು ಅದನ್ನು ನ೦ಬಲು ಸಾಧ್ಯವೇ?
ನಮ್ಮಲ್ಲಿ ಮೊದಲು ಅಮೋನಿಯಂ ಸಲ್ಫೇಟ್, ನ೦ತರ ಯೂರಿಯಾವನ್ನು ಮಾತ್ರ ಸಾರಜನಕ ಗೊಬ್ಬರವಾಗಿ ಸೂಚಿಸಲಾಗಿತ್ತು. ಹೆಚ್ಚಿನವರು ಸೂಪರ್ ಪಾಸ್ಫೆಟ್ ಹಾಕುತ್ತಿರಲಿಲ್ಲ. ಪೊಟಾಷ್ ಏನೆ೦ದು ಆಗ ಗೊತ್ತಿರಲೇ ಇಲ್ಲ. ಅನ೦ತರ ಅವೆಲ್ಲಾ ಒಟ್ಟಾಗಿರುವ ಎನ್.ಪಿ.ಕೆ ಎ೦ಬ ಸ೦ಯುಕ್ತ ರಾಸಾಯನಿಕ ಗೊಬ್ಬರಗಳು ಮಾರಾಟಕ್ಕೆ ಬ೦ದಾಗ ಇಲಾಖೆಯ ಶಿಫಾರಸುಗಳಿಗೆ ಕೃಷಿಕರು ಕಿವಿಗೊಡತೊಡಗಿದರು.
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ