ಕೃಷಿ ಸಂಶೋಧನಾ ವ್ಯವಸ್ಥೆಯ ಓರೆಕೋರೆ….

ಕೃಷಿ ಸಂಶೋಧನಾ ವ್ಯವಸ್ಥೆಯ ಓರೆಕೋರೆ….

ನಮ್ಮ ದೇಶದ ಕೃಷಿ ಸಂಶೋಧನಾ ವ್ಯವಸ್ಥೆ ಬಗ್ಗೆ ನಮಗೀರೋದು ರಮ್ಯ ಕಲ್ಪನೆ. ಆದರೆ ಅಲ್ಲಿ ಆಗುತ್ತಿರೋದು ಏನು?
ರಾಷ್ಟ್ರೀಯ ಸಸ್ಯ ಜೈವಿಕ ತಂತ್ರಜ್ನಾನದ ಸಂಶೋಧನಾ ಕೇಂದ್ರದ (ಎನ್ಆರ್-ಸಿಪಿಬಿ) ಮುಖ್ಯಸ್ಥ ಎಸ್. ಕೆ. ರೈನಾ ಕೆಲವು ವರುಷಗಳ ಮುಂಚೆ ದೊಡ್ಡ ಸುದ್ದಿ ಮಾಡಿದರು. ದೆಹಲಿಯ ಪುಸಾ ಕಾಂಪ್ಲೆಕ್ಸಿನಲ್ಲಿರುವ ಆ ಸಂಸ್ಥೆಯಿಂದ “ಇಂಡಿಕಾ ಭತ್ತದ ತಳಿಗಳ ದಕ್ಷ ಜೈವಿಕ ಪರಿವರ್ತನಾ ವ್ಯವಸ್ಥೆ ರೂಪಿಸಿದ ಭಾರತದ ಮೊದಲ ಸಂಸ್ಥೆ ನಮ್ಮದು” ಎಂಬ ಘೋಷಣೆ. ಇವರ ಸಂಶೋಧನಾ ತಂಡದ ಬಗ್ಗೆ ಟ್ರಾನ್ಸ್-ಜೆನಿಕ್ ಬಿಟಿ ಭತ್ತದ ಕ್ಷೇತ್ರ ಪ್ರಯೋಗಗಳನ್ನು 1999ರಲ್ಲಿ ನಡೆಸಿದ ಮೊದಲ ವಿಜ್ನಾನಿನಳ ತಂಡ ಎಂಬ ಹೆಗ್ಗಳಿಕೆಯೂ ಭಾರತದ ರಾಷ್ಟ್ರೀಯ ವಿಜ್ನಾನ ಅಕಾಡೆಮಿಯ ವೆಬ್-ಸೈಟಿನಲ್ಲಿದೆ.
ಆದರೆ 2004ರಲ್ಲಿ ರೈನಾ ಸ್ವಯಂ ನಿವೃತ್ತಿ ಪಡೆದು, ಔರಂಗಾಬಾದಿನ ಖಾಸಗಿ ಬೀಜ ಕಂಪೆನಿಯಾದ ನಾಥ್ ಗ್ರೂಪಿನಲ್ಲಿ ದೊಡ್ಡ ಹುದ್ದೆಗೆ ಸೇರಿಕೊಂಡರು. ಈಗ ಎನ್‌ಆರ್-ಸಿಪಿಬಿಯನ್ನು ಬಿಟಿ ಭತ್ತದ ಸಂಶೋಧನಾ ಯೋಜನೆಯಿಂದ ಏನಾಯಿತು? ಎಂದು ಪ್ರಶ್ನಿಸಿದರೆ, ಅದರ ಬಳಿ ಉತ್ತರವಿಲ್ಲ.
ಇನ್ನೊಂದು ಆತಂಕದ ಸುದ್ದಿಯೂ ಎನ್‌ಆರ್-ಸಿಪಿಬಿಗೆ ಸಂಬಂಧಿಸಿದ್ದು. ಅಲ್ಲಿನ ಪ್ರಧಾನ ವಿಜ್ನಾನಿಯಾಗಿದ್ದ ಕೆ. ಸಿ. ಬನ್ಸಾಲ್ ಅಕ್ಟೋಬರ 2011ರಲ್ಲಿ ಅದನ್ನು ತೊರೆದು, ಭಾರತದ ಜೀನ್ ಬ್ಯಾಂಕಿನ ನಿರ್ದೇಶಕರಾಗಿ ಸೇರಿಕೊಂಡರು. ಆ ಸಂಸ್ಥೆಯಲ್ಲಿ ಅವರು ಈ ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರು: ಜೈವಿಕವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆ, ನಿಧಾನವಾಗಿ ಮಾಗುವ ಟೊಮೆಟೊ, ಕ್ಲೋರೋಪ್ಲಾಸ್ಟ್ ಪರಿವರ್ತಿತ ಸಾಸಿವೆ. ಆದರೆ ಇವುಗಳಿಗೆ ಸಂಬಂಧಿಸಿದ ವಸ್ತುದಾಖಲೆಗಳನ್ನು ಬನ್ಸಾಲ್ ಹಸ್ತಾಂತರಿಸಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಆಗಿನ ಯೋಜನಾ ನಿರ್ದೇಶಕ ಪಿ. ಆನಂದ ಕುಮಾರ್ ಅವರು ಬನ್ಸಾಲರಿಗೆ ಹಲವು ಪತ್ರ ಬರೆದರು. ಅನಂತರ, ಬನ್ಸಾಲರ ಮೇಲಧಿಕಾರಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ಉಪಮಹಾ ನಿರ್ದೇಶಕ ಸ್ವಪನ್ ಕುಮಾರ್ ದತ್ತರಿಗೂ ಪತ್ರ ಬರೆದರು. ಆದರೆ ಇವೆಲ್ಲ ಪತ್ರಗಳಿಂದ ಏನೂ ಆಗಿಲ್ಲ.
ಕೆ. ಸಿ. ಬನ್ಸಾಲರಿಗೆ 2007 - 2008ರಲ್ಲಿ ಐಸಿಎಆರ್ ಅತ್ಯುನ್ನತ ಪ್ರಶಸ್ತಿಯಾದ ರಫಿ ಅಹ್ಮದ್ ಕಿದ್ವಾಯಿ ಪ್ರಶಸ್ತಿ ನೀಡಲಾಯಿತು – ಅವರು ಮೂರು ಪೇಟೆಂಟುಗಳಿಗೆ ಅರ್ಜಿ ಸಲ್ಲಿಸಿದ್ದರು ಎಂಬ ಕಾರಣಕ್ಕಾಗಿ. ಅವುಗಳಲ್ಲೊಂದು: ಜೈವಿಕವಾಗಿ ಮಾರ್ಪಡಿಸಿದ ಬದನೆಗಾಗಿ ಪೇಟೆಂಟ್ ಅರ್ಜಿ. ಆದರೆ, 16 ಜುಲಾಯಿ 2009ರಂದು ಪ್ರಶಸ್ತಿ ನೀಡುವ ದಿನದ ತನಕ ಆ ಪೇಟೆಂಟಿನ ಅರ್ಜಿ ಸಲ್ಲಿಸಿರಲೇ ಇಲ್ಲ! ಇದರ ಬಗ್ಗೆ ಡಿಸೆಂಬರ್ 2012ರಲ್ಲಿ ಐಸಿಎಆರ್ ಆರಂಭಿಸಿದ ತನಿಖೆ ಇನ್ನೂ ಮುಗಿದಿಲ್ಲ!
ವಿಪರ್ಯಾಸವೆಂದರೆ, ಜಿಎಂ ಹತ್ತಿಯ ಸಂಶೋಧನೆಯ ಹಗರಣದಲ್ಲಿ ಆನಂದ ಕುಮಾರ್ ಅವರ ಪಾತ್ರದ ಬಗ್ಗೆ ಸಮಿತಿಯೊಂದು ತನಿಖೆ ನಡೆಸಿದ್ದರೂ, ಅದರ ವರದಿ ಆಧರಿಸಿ ಈ ವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಎಲ್ಲದಕ್ಕಿಂತ ಮುಖ್ಯವಾಗಿ, ಐಸಿಎಆರ್ ಸಂಶೋಧನೆಗಳ ಬಗ್ಗೆ “ದಿನದಿನದ ಪ್ರಯೋಗಾಲಯ ಫೈಲ”ನ್ನು ದಾಖಲು ಮಾಡಬೇಕೆಂಬ ನಿಯಮವೇ ಇಲ್ಲ. ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್ಐಆರ್) ಮತ್ತು ಜೈವಿಕ ತಂತ್ರಜ್ನಾನ ಇಲಾಖೆಯ ಸಂಶೋಧನೆಗಳ ಬಗ್ಗೆ ಆ ಫೈಲನ್ನು ದಾಖಲು ಮಾಡಲಾಗುತ್ತಿದೆ. ಅದರ ಬದಲಾಗಿ, ಐಸಿಎಆರ್-ನಲ್ಲಿ ಸಂಶೋಧನಾ ಯೋಜನಾ ಫೈಲನ್ನು (ಆರ್ಪಿಎಫ್) ದಾಖಲು ಮಾಡಲಾಗುತ್ತಿದೆ. ಇವೆರಡರ ನಡುವಿನ ವ್ಯತ್ಯಾಸ ಏನೆಂದರೆ, ಪ್ರಯೋಗಾಲಯ ಫೈಲಿನಲ್ಲಿ ಪ್ರಯೋಗಾಲಯ ಅಥವಾ ಕ್ಷೇತ್ರದಲ್ಲಿ ಪ್ರತಿದಿನ ಏನೇನು ನಡೆಯಿತು ಎಂಬುದರ ದಾಖಲೆ ಇರುತ್ತದೆ; ಸಂಶೋಧನಾ ಯೋಜನಾ ಫೈಲಿನಲ್ಲಿ ಈ ವಿವರಗಳು ಇರುವುದಿಲ್ಲ. ಆದ್ದರಿಂದ, ಸಂಶೋಧನೆಯಲ್ಲಿ ಕಂಡುಬಂದ ಅನುಕೂಲವಲ್ಲದ ದತ್ತಾಂಶಗಳನ್ನು ಅನುಕೂಲವಾಗುವಂತೆ ಬದಲಾಯಿಸಲು ಅವಕಾಶ ಒದಗಿಸಿದಂತಾಗುತ್ತದೆ!
ಇನ್ನೊಬ್ಬರ ಸಂಶೋಧನಾ ಪ್ರಬಂಧಗಳನ್ನು – ಭಾಗಶಃ ಅಥವಾ ಸಂಪೂರ್ಣ – ಕದ್ದು ಪ್ರಕಟಿಸುವುದರ ಬಗ್ಗೆ ಆ ಸಂಶೋಧನಾ ಸಂಸ್ಥೆಗಳಲ್ಲಿ ಹಲವು ಆಪಾದನೆಗಳು ಕೇಳಿ ಬಂದಿವೆ.
ಹಾಗಂತ, ಕೃಷಿ ಸಂಶೋಧನಾ ಸರ್ವಿಸಿನ (ಎಆರ್ಎಸ್) ವಿಜ್ನಾನಿಗಳಿಗೆ ಸಂಬಳವೇನೂ ಕಡಿಮೆಯಿಲ್ಲ. ಅವರಿಗೆ ಯುಜಿಸಿ ಶ್ರೇಣಿಯ ವೇತನ ಹಾಗೂ ಭಡ್ತಿ ಸಿಗುತ್ತಿದೆ. ಅಂದರೆ, ಉನ್ನತ ಹುದ್ದೆ ಖಾಲಿ ಇರಲಿ ಅಥವಾ ಇಲ್ಲದಿರಲಿ; ಎಆರ್ಎಸ್ ವಿಜ್ನಾನಿಗಳಿಗೆ 9 ವರುಷಗಳ ಸೇವೆಯ ನಂತರ ಹಿರಿಯ ವಿಜ್ನಾನಿಯಾಗಿ, 15 ವರುಷಗಳ ಸೇವೆಯ ನಂತರ ಪ್ರಧಾನ ವಿಜ್ನಾನಿಯಾಗಿ ಭಡ್ತಿ ಗ್ಯಾರಂಟಿ. ಅದಲ್ಲದೆ, ಇವರ ನಿವೃತ್ತಿ ವಯಸ್ಸು 62.
ಇತರ ವಿಜ್ನಾನಿಗಳಿಗೆ ಸಿಗದಿರುವ ಇಷ್ಟೆಲ್ಲ ಸವಲತ್ತುಗಳು ಕೃಷಿ ಸಂಶೋಧನಾ ಸರ್ವಿಸಿನ ವಿಜ್ನಾನಿಗಳಿಗೆ ಲಭ್ಯ. ಅದಕ್ಕಾಗಿಯಾದರೂ, ಈ ವಿಜ್ನಾನಿಗಳು ನಮ್ಮ ದೇಶದ ಹಾಗೂ ರೈತರ ಸಮಸ್ಯೆಗಳನ್ನು ಪರಿಹರಿಸಬಲ್ಲ ಸಂಶೋಧನೆಗಳನ್ನು ನಡೆಸುವಂತಾಗಲಿ.
ಫೋಟೋ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ