ಕೃಷ್ಣಂ ವಂದೇ ಜಗದ್ಗುರುಂ
ಆದೌ ದೇವಕೀ ದೇವಿ ಗರ್ಭಜನನಂ ಗೋಪಿಗೃಹೇವರ್ಧನಂ/
ಮಾಯಾಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ//
ಕಂಸಚ್ಛೇದನ ಕೌರವಾದಿ ಹರಣಂ ಕುಂತೀಸುತಾ ಪಾಲನಂ/
ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣಲೀಲಾಮೃತಂ//
“ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ ಮಾಸದ ಕೃಷ್ಣ ಪಕ್ಷದ ಸಿಂಹಮಾಸ ರೋಹಿಣಿ ನಕ್ಷತ್ರದಂದು ಮಧ್ಯರಾತ್ರಿಯ ಸಮಯದಲ್ಲಿ ಶ್ರೀಕೃಷ್ಣನ ಜನನ,ದೇವಕಿಯ ಗರ್ಭದಿಂದ ಮಥುರಾದ ಕಾರಾಗೃಹದಲ್ಲಿ ಕಾವಲುಗಾರರ ಬಂಧನದಲ್ಲಿ. ಆದರೇನಂತೆ ಪವಾಡವೆಂಬಂತೆ ಕ್ರೂರ ಕಂಸನಿಗೆ ತಿಳಿಯದಂತೆ ಶಿಶುವನ್ನು ಗೋಕುಲದ ನಂದರಾಜನ ಅರಮನೆಗೆ ಒಯ್ದು, ಅಲ್ಲಿದ್ದ ಯಶೋದೆಯ ಮಡಿಲಲ್ಲಿದ್ದ ಪುಟ್ಟ ಹಸುಳೆಯನ್ನು ದೇವಕಿಯ ಮಗ್ಗುಲಲ್ಲಿ ಮಲಗಿಸಿದ ತಂದೆ ವಸುದೇವ.ಅದೇ ಶಿಶು ಕಂಸನ ಖಡ್ಗದ ಬಾಯಿಯಿಂದ ತಪ್ಪಿಸಿ ಆಗಸಕ್ಕೆ ನೆಗೆದು, ಎಚ್ಚರಿಕೆಯ ಸಂದೇಶ ನೀಡಿದ ದುರ್ಗೆಯ ಅಂಶ.
ಕೃಷ್ಣನ ಅವತಾರಗಳು ಲೀಲಾವಿನೋದಗಳು ಹೇಳಿದಷ್ಟು ಮುಗಿಯದು. ಸುಧಾಮ ಕೃಷ್ಣರ ಗೆಳೆತನ ‘ಹೃದಯ ಶ್ರೀಮಂತಿಕೆ’ಯ ಪ್ರತೀಕ. ರಾಧಾ ಮಾಧವನಾಗಿ ಪ್ರಿಯ ಸಖನಾಗಿ, ನಂಬಿದ ಭಕ್ತರನ್ನು ಕಾಯುವ ದಿವ್ಯಶಕ್ತಿಯಾಗಿ, ಭಕ್ತರ ದೇವನಾಗಿ, ರುಕ್ಮಿಣಿ ವಲ್ಲಭನಾಗಿ ಜಗತ್ತನ್ನು ಕಾಯುವ ತಂದೆಯಾಗಿ ಸಕಲರ ಗುರುವಾಗಿ ದೇವನೊಬ್ಬ ನಾಮಹಲವು ಶ್ರೀಕೃಷ್ಣನ ವೈಶಿಷ್ಟ್ಯ.
ಜೀವರಾಶಿಗೆ ಚೈತನ್ಯ ಸ್ವರೂಪಿಯಾಗಿ ಮೆರೆದವನೆಂದರೆ ಗೋಕುಲಬಾಲ ಕೃಷ್ಣ. ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಗುರುವಾದವ, ಕಣ್ಣಾದವ. ಕಾಯಕದ ಶ್ರಮಕ್ಕೆ ಸರಿಯಾದ ಕರ್ಮಫಲ ನೀಡುವವ.ವೇದಾಂತಿ. ಮನೋಹರ, ಹಿರಿಯರಿಗೆ ಜಗದ್ಗುರು. ನಾವು ಯಾವಾಗ ಹೇಗಿರಬೇಕೆಂದು, ಹೇಗೆ ಎಲ್ಲಿ ಎಷ್ಟು ಮಾತನಾಡಬೇಕೆಂದು ಸಾರಿದ ಮಹಾನ್ ಪಂಡಿತ. ಅದ್ಭುತ ಸಲಹೆಗಾರ, ತೂಕ ನೋಡಿ ಹದವರಿತ ಮಾತುಗಾರ, ಮನಸಿಜಪಿತ ಬಿರುದಾಂಕಿತ, ಮನವರಿತು ಸಹಕರಿಸುವವ. ಸೂಕ್ಷ್ಮತೆಯ ಹರಿಕಾರ ಕೃಷ್ಣ.
ಸಕಲಕಲಾವಲ್ಲಭನಾತ.ಮಾನವ ಸಂಬಂಧಗಳ ಬೆಲೆಯನ್ನು ಪ್ರತಿ ಹಂತದಲ್ಲೂ ಸಾರಿದ ಮಾರ್ಗದರ್ಶಿ.ಮನುಷ್ಯ ಸಂಬಂಧಗಳನ್ನು ಹಲವಾರು ಉದಾಹರಣೆ,ಘಟನೆಗಳ ಮೂಲಕ ತೋರಿಸಿ ಕೊಟ್ಟ ಹೃದಯವಂತ.ಸಹನಾಶೀಲ ಎನ್ನುವುದಕ್ಕೆ ಶಿಶುಪಾಲನ ಪ್ರಕರಣವೇ ಸಾಕ್ಷಿ.ಸರ್ವವೂ ವಿಧಿಲಿಖಿತದಂತೆ ಎಂದ ಮಹಾತ್ಮ.ಗೋವುಗಳ ರಕ್ಷಿಸಿದ ಗೋಪಾಲಕ.ರಾಧೆಗೆ ಸ್ಥಾನಮಾನ ನೀಡಿದ ರಾಧಾಮಾಧವ.ಪಾಪಪುಣ್ಯ,ಎಸಗಿದ ಕರ್ಮಾನುಸಾರ ಬದುಕೆಂದ ತ್ಯಾಗಿ,ಯೋಗಿ.ಕುತಂತ್ರವೆಂದರೂ ಅದರಲ್ಲೊಂದು ತಂತ್ರವೆಸಗಿ ನಯವಾಗಿ ತಕ್ಕ ಶಿಕ್ಷೆ ನೀಡಿದ ಧೀಮಂತ.ತನ್ನ ಅವತಾರದ ಬಗ್ಗೆ ಸೂಕ್ಷ್ಮವಾಗಿ ಲೋಕಮುಖಕ್ಕೆ ತೋರಿಸಿಕೊಟ್ಟ ಭಗವಂತ.ಆದಿ-ಅಂತ್ಯಗಳ ಮಧ್ಯೆ ಹೇಗಿರಬೇಕೆಂಬ ಸಂದೇಶ ನೀಡಿದ ದೇವನಾದ.'ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ 'ಪಾಂಡವರ ಮೂಲಕ ತೋರಿಸಿ ಕೊಟ್ಟ.ಲೋಕಾಪವಾದಗಳನ್ನು ನಗುತ್ತಲೇ ಸ್ವೀಕರಿಸಿ ಪರಿಹರಿಸಿದವ.ಯಾರದೇ ತಪ್ಪುಗಳಿಗೆ ತಕ್ಷಣ ಶಿಕ್ಷೆ ನೀಡದೆ,ಯಾವ ತಪ್ಪೆಂದು ಹೇಳಿ ತಿದ್ದಿಕೊಳ್ಳಲು ಸಮಯ ನೀಡಿ,ಅನಂತರ ಶಿಕ್ಷೆ ನೀಡಿದ ಪರಿ ಆದರ್ಶ.
ವಿಧಿಯಾಟದಂತೆ ನಡೆಯಬೇಕೆಂದು ತೋರಿಸಿಕೊಟ್ಟ ಧೀರ. ನಿರ್ಧಾರ, ಗುರಿ, ಸಾಧನೆ ಯಶಸ್ಸಿನ ಮೆಟ್ಟಿಲೆಂದ ದಾರ್ಶನಿಕ. ಮಾನವ ಸಹಜ ದೌರ್ಬಲ್ಯಗಳನ್ನುಕಿತ್ತೆಸೆದು ಹೊರಬರೋಣ, ಧರ್ಮಕ್ಕೆ ಯಾವತ್ತೂ ಜಯವೆಂದು ಹೇಳಿದವ, ನಡೆದವ. ಇಂಥ ಧೀಮಂತ ನಾಯಕ, ಓರ್ವ ವ್ಯಕ್ತಿಯಾಗದೆ ಮಹಾನ್ ಶಕ್ತಿಯಾಗಿ ಯುಕ್ತಿಯಿಂದ ಎಲ್ಲವನ್ನೂ ಸಾಧಿಸಿ ತೋರಿಸಿದವ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸುತ್ತಾರೆ. ಪುಟ್ಟ ಮಕ್ಕಳಿಗೆ ರಾಧಾಕೃಷ್ಣರ ವೇಷ ತೊಡಿಸುವುದು, ಮೊಸರುಕುಡಿಕೆ ಉತ್ಸವ, ಆಟೋಟಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು ಭಗವಾನ್ ಶ್ರೀಕೃಷ್ಣನನ್ನು ಪೊರೆಯುವ ಶಕ್ತಿಯಾಗಿ ನೋಡೋಣ.
ನಾವು ಯಾವುದೇ ಒಂದು ಕಾರ್ಯ ಮಾಡುವಾಗಲೂ ಎಡರುತೊಡರು ಸಾಮಾನ್ಯ, ಅದನ್ನು ದೂರಮಾಡಿ ಮುನ್ನುಗ್ಗುವ ಛಲ ನಮ್ಮಲ್ಲಿರಲಿ. ಋಣಾತ್ಮಕ ಅಂಶಗಳನ್ನು ಬೇರು ಸಹಿತ ಕಿತ್ತು ಎಸೆಯೋಣ. ಧನಾತ್ಮಕವಾಗಿ ಯೋಚಿಸಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗೋಣ. ಇವೆಲ್ಲವೂ ಭಗವಂತನ ತಂತ್ರಗಾರಿಕೆ ಎಂಬುದರ ಅರಿವಿರಬೇಕು. ಆತನ ಅನುಮತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡದು. ಆತ ಪ್ರೇರಣಾಶಕ್ತಿ.
ವಸುದೇವ ಸುತಂ ದೇವಂ ಕಂಸ ಚಾಣೂರ* *ಮರ್ದನಮ್|
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್||
ಜಗತ್ತಿಗೆ ನೀಡಿದ ಗೀತಾಮೃತವೆಂಬ ಹಾಲನ್ನು ಸೇವಿಸಿ ಜ್ಞಾನಿಗಳಾಗೋಣ. ಭಯಂಕರವಾದ ರಣನದಿಯನ್ನು ಪಾಂಡವರೊಂದಿಗೆ ಅಂಬಿಗನಾಗಿ ದಾಟಿಸಿದ ಮಹಾನ್ ಶಕ್ತಿ ಶ್ರೀಕೃಷ್ಣ. ಈತನ ಆದಿ ಅಂತ್ಯವನ್ನು ಅರಿತವರೇ ಜ್ಞಾನಿಗಳು, ಜನಸಾಮಾನ್ಯರಿಗೆ ಕೇವಲ ಗೋಪಾಲಕ, ಲೀಲಾವಿನೋದಿ, ಗೋಪಿಕಾಸ್ತ್ರೀಯರೊಂದಿಗೆ ಕಾಲಕಳೆಯುವವ, ರಾಧಾ ಮಾಧವ, ಮುರವೈರಿ, ಅಸುರಾರಿ ಅಷ್ಟೆ. ಭ್ರಷ್ಟರಿಗೆ ಮಣೆ ಹಾಕಬಾರದೆಂದು ಹೇಳಿದವನು. ಉತ್ತಮರಿಗೆ ಎಂದೂ ಕೆಡುಕಿಲ್ಲ ಬಂದರೂ ಕ್ಷಣಿಕ. ಹೊನ್ನನ್ನು ಒರೆಹಚ್ಚುವಂತೆ ಪರೀಕ್ಷಿಸಿ, ಸೋಸಿ ಭಗವಂತ ನೋಡುವನಷ್ಟೆ. ಅದನ್ನು ದಾಟುವ ಸಾಮರ್ಥ್ಯವಿರಬೇಕು, ಕಷ್ಟ ಬಂತೆಂದು ಕೈಕಟ್ಟಿ ಕೂರಬಾರದು. ಅಹಮನ್ನು ಸಂಪೂರ್ಣವಾಗಿ ಬಿಡಬೇಕು. ಅದು *"ಮರದ ಹುಳದಂತೆ"* ತನ್ನನ್ನು ತಾನೇ ನಾಶ ಮಾಡಬಹುದು ಎಂಬ ಸಂದೇಶವನ್ನು ನೀಡಿದ ಭಗವಂತನ ಆರಾಧನೆ ಇಂದು ಬಹು ಸಂಭ್ರಮ ಸಡಗರದಿಂದ ಹಮ್ಮಿಕೊಳ್ಳುವರು.
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ/
ನಾವು ನೆಟ್ಟ ಫಲ ನಮಗೇ ಸಿಗಬೇಕೆಂಬ ಬಯಕೆ ಬೇಡ. ಕರ್ಮ, ಕೆಲಸ, ಕಾಯಕ ಮಾಡು, ಫಲ ಭಗವಂತನಿಚ್ಛೆ. ಮುಖ್ಯವಾಗಿ ದುಡಿದು ಉಣ್ಣು ಎನುವ ಸಂದೇಶ. ಭಗವಂತನ ಕೊಳಲು ಬರಿಯ ಕಣ್ಣಿಗೆ ಕೊಳಲಷ್ಟೆ. ಅದರ ನಾದದಲ್ಲಿ ಉತ್ತಮ ಸಂದೇಶವಿದೆ. ಗಂಟುಗಳಿಲ್ಲದ ಕೊಳಲಿನ ಹಾಗೆ ನಮ್ಮ ಬದುಕೂ ಇರಬೇಕೆಂಬ ತತ್ವ. ನವಿಲುಗರಿಯ ಬಣ್ಣ ಸಮಚಿತ್ತವನ್ನು ಕಾಯಬೇಕೆಂಬುದನ್ನು ಸೂಚಿಸುತ್ತದೆ. ಸಕಲಕಲಾವಲ್ಲಭ, ರುಕ್ಮಿಣಿಗೆ ಪ್ರಿಯ, ಭಾಮಾಕಾಂತ, ರಾಧಾಕೃಷ್ಣ, ಚೈತನ್ಯರೂಪಿ, ಅಸುರಾರಿ, ಭಕ್ತವತ್ಸಲ, ದೇವರದೇವ, ಪಾಂಡವರ ಭಾವ ಶ್ರೀಕೃಷ್ಣನಿಗೆ ನಮೋ ನಮಃ
ಮೂಕಂ ಕರೋತಿವಾಚಾಲಂ ಪಂಗುಂ ಲಂಘಯತೇ ಗಿರಿಮ್/
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್//
ಶ್ರೀಕೃಷ್ಣ ಸ್ತೋತ್ರಗಳು ಕೃಪೆ : ನಿತ್ಯ ಸ್ತೋತ್ರ ದೀಪಿಕಾ
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು