ಕೃಷ್ಣದಾಸ್ ಕವನಗಳು...

ಕೃಷ್ಣದಾಸ್ ಕವನಗಳು...

ಕವನ

ಕೃಷ್ಣ ನಾದ

ಕೊಳಲ ದನಿಯಲಿ 

ಒಲಿದು ಬರುವೆಯ

ಉಸಿರ ಸೇರಲು ಗೆಳತಿಯೆ|

ಅಳಲ ಕೇಳಲು

ಎದೆಯು ಮಿಡಿದಿದೆ 

ಭಾವ ಮೀಟಿದೆ ಒಡತಿಯೆ!|

 

ಮಳೆಯು ತುಂತುರು 

ಮನಕೆ ಸುರಿದಿದೆ 

ಒಲವೆ ಕುಣಿಯಲು ಬಾರೆಯ|

ಇಳೆಯು ತಣಿದಿದೆ 

ಮನದ ತೋಟದಿ 

ಹೂವು ಅರಳಿದೆ ತಾರೆಯ!|

 

ಭಾವ ಚಂದನ 

ಘಮವ ಬೀರಿದೆ

ಗಮನ ಹರಿಯಲಿ ನನ್ನೆಡೆ|

ಯಾವ ಮೋಡಿಯೊ 

ಮನವು ಸೋತಿದೆ 

ಒಲುಮೆ ಸೇರಲು ಮುನ್ನಡೆ!|

 

ಮನದ ಹಕ್ಕಿಗೆ ಎಲ್ಲೆ ಎಲ್ಲಿದೆ

ಗೆಲುವು ಸಿಗಲೇ ಬೇಕಿದೆ|

ಕನಸ ಕಾಣುವ 

ಕಾಲ ಮುಗಿಯಿತು

ಬಾರೆ ಅಂತರ ಏಕಿದೆ!|

***

ಮದುವೆ

*ಮದುವೆ ಸುಂದರ*

*ಮೂರು ಅಕ್ಷರ*

*ಖುಷಿಯ ನೇಸರ ಮೂಡಿದೆ*

*ಮಧುರ ಜೀವನ*

*ಪತಿಯ ಮನೆಯಲಿ*

*ಪ್ರೀತಿ ಮನೆಯನು ಮಾಡಿದೆ*

 

*ಅಪ್ಪ ಅಮ್ಮನ*

*ಅಣ್ಣ ತಮ್ಮನ*

*ಬದುಕ ಪೂರ್ತಿ ಮರೆಯಳು|*

*ತುಪ್ಪ ದೀಪವ*

*ಹಚ್ಚಿ ನಿತ್ಯವು*

*ಅತ್ತೆ ಮನೆಯಲಿ ಬೆರೆವಳು|*

 

*ಪತಿಯೆ ದೇವರು* 

*ಎನುತ ಬಾಳುವ*

*ಹೆಣ್ಣು ತಾನೇ ಪೂಜಿತೆ|*

*ಸತಿಯ ಧರ್ಮವ*

*ಸತತ ಮಾಡುತ*

*ಮನೆಗೆ ಅವಳೇ ದೇವತೆ|*

 

*ಸಪ್ತ ಪದಿಗಳ*

*ವಚನ ಮರೆಯದೆ*

*ಮನವು ಮಾಗಿತು ಒಲವಲಿ|*

*ಸುಪ್ತ ಕನಸನು*

*ನನಸ ಮಾಡುವ*

*ಪಥದ ಒಸಗೆಯು ಒಲಿಯಲಿ|*

 

- ಕಾ.ವೀ.ಕೃಷ್ಣದಾಸ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್