ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ

ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆಯ ( ISKCON ) ಸ್ಥಾಪಕರಾದ ಎ ಸಿ ಭಕ್ತಿ ವೇದಾಂತ ಪ್ರಭುಪಾದರು ಟಿವಿ ವಾಹಿನಿಯ ಸಂದರ್ಶನದಲ್ಲಿ ಗಾಂಧಿಯವರ ಅಹಿಂಸೆಯನ್ನು - ಸ್ವಾತಂತ್ರ್ಯ ಹೋರಾಟದ ಮಾರ್ಗಗಳನ್ನು ವ್ಯಂಗ್ಯವಾಗಿ ಮಾತನಾಡಿರುವ ಮತ್ತು ಕೃಷ್ಣ ಪಂಥದ ಶ್ರೇಷ್ಠತೆಯನ್ನು ತುಂಬಾ ಮೆಚ್ಚಿಕೊಂಡಿರುವ ವಿಡಿಯೋ ತುಣುಕೊಂದನ್ನು ಇತ್ತೀಚೆಗೆ ನೋಡಿದೆ. ಈಗ ಅವರು ಇಲ್ಲ. ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಗೌರವಿಸುತ್ತಾ ಗಾಂಧಿ ಮತ್ತು ಕೃಷ್ಣರ ಚಿಂತನೆಗಳ ಬಗ್ಗೆ  ನನ್ನ ಒಂದು ವ್ಯಾಖ್ಯಾನ....

ಇದು‌ ಗಾಂಧಿ ಮತ್ತು ಕೃಷ್ಣರ ನಡುವಿನ ಹೋಲಿಕೆಯಲ್ಲ. ವ್ಯಾವಹಾರಿಕ ಚತುರತೆಯ ಯಶಸ್ಸು ಮತ್ತು ಮಾನವೀಯ ಮೌಲ್ಯಗಳ ಅಧಃಪತನದ ಕಾರಣಗಳ ಹುಡುಕಾಟ ಮಾತ್ರ. ದಯವಿಟ್ಟು ‌ಸಂಕುಚಿತ ಮನಸ್ಸಿನಿಂದ ವಿಷಯವನ್ನು ನೋಡದೆ ಈ ನೆಲದ ಮಣ್ಣಿನ ಗುಣ ಮತ್ತು ಆಧ್ಯಾತ್ಮಿಕ ಚಿಂತನೆಗಳ ಒಟ್ಟು ಸಾರ ಹಾಗು ಭಾರತದ ಆಂತರಿಕ ಶಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸರಳವಾಗಿ ನೋಡಬೇಕು. ಏಕೆಂದರೆ ‌ಆಳವಾಗಿ‌ ವಿಷಯಗಳನ್ನು ಕೆದಕುತ್ತಾ ಹೋದರೆ ವೈವಿಧ್ಯಮಯ ಭಾರತದ ಸಾಂಸ್ಕೃತಿಕ ಮತ್ತು ‌ಸಾಮಾಜಿಕ‌ ವ್ಯವಸ್ಥೆಯಲ್ಲಿ ವಿಷಯಗಳ ಸಂಕೀರ್ಣತೆ ಸಂಘರ್ಷವಾಗಿ ವಾದಗಳಿಗೆ ಕಾರಣಗಳು ಮೇಲುಗೈ ಸಾಧಿಸಿ ಖಚಿತ ತೀರ್ಮಾನಕ್ಕೆ ಬರುವುದು ಕಷ್ಟವಾಗುತ್ತದೆ. ಸತ್ಯ ಮತ್ತು ವಾಸ್ತವದ ತಾಕಲಾಟವಾಗಿಯೂ ಇದನ್ನು ನೋಡಬಹುದು.

ಕೃಷ್ಣ ಮತ್ತು ಗಾಂಧಿ....

***

ಭಾಗ - 1

ಭಾರತೀಯರನ್ನು ಅತಿಹೆಚ್ಚು ಕಾಡುತ್ತಿರುವ - ಪ್ರಭಾವಿಸುತ್ತಿರುವ - ಚರ್ಚಿಸುತ್ತಿರುವ ಚಿಂತನೆಗಳು ವ್ಯಕ್ತಿತ್ವಗಳು ಮತ್ತು ಸಂಸ್ಕೃತಿಯ ರಾಯಭಾರಿಗಳು. ಮಹಾಭಾರತದಲ್ಲಿ ಅನೇಕ ಪಾತ್ರಗಳಿದ್ದರೂ ಅದರ ಸೂತ್ರದಾರ ಕೃಷ್ಣ, ಸ್ವಾತಂತ್ರ್ಯ ಹೋರಾಟದಲ್ಲೂ ಅನೇಕ ವ್ಯಕ್ತಿಗಳಿದ್ದರೂ ಗಾಂಧಿಯೇ ಮುಖ್ಯ ಸೂತ್ರದಾರರು. ಮಹಾಭಾರತ ಎಲ್ಲೆಲ್ಲಿಂದಲೋ ಪ್ರಾರಂಭವಾಗಿ ಕೊನೆಗೆ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಜಯದೊಂದಿಗೆ ಬಹುತೇಕ ಮುಕ್ತಾಯವಾಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಹ ಅಲ್ಲಲ್ಲಿ ನಿಧಾನವಾಗಿ ಪ್ರಾರಂಭವಾಗಿ ಬ್ರಿಟಿಷರು ಭಾರತ ಬಿಟ್ಟು ಹೋಗಿ ಸ್ವಾತಂತ್ರ್ಯ ಘೋಷಣೆಯಾಗುವುದರೊಂದಿಗೆ ಮುಕ್ತಾಯವಾಗುತ್ತದೆ.

ಪೌರಾಣಿಕ ಪಾತ್ರದಾರಿ ಕೃಷ್ಣ ಶತಶತಮಾನಗಳು ಕಳೆದರೂ ಹೊಸ ಹೊಸ ಅರ್ಥಗಳೊಂದಿಗೆ, ಹೊಸ ಹೊಸ ಪಾತ್ರಗಳೊಂದಿಗೆ ಅತ್ಯಧಿಕ ಶಕ್ತಿಯೊಂದಿಗೆ, ದೈವಸ್ವರೂಪಿಯಾಗಿ ಜನರಿಂದ ಪೂಜಿಸಲ್ಪಟ್ಟು ಬೆಳೆಯುತ್ತಲೇ ಇದ್ದಾರೆ. ಐತಿಹಾಸಿಕ ವ್ಯಕ್ತಿ ‌ಗಾಂಧಿ ವರ್ಷಗಳು ಉರುಳಿದಂತೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಅಳಿದುಳಿದ ಜನರನ್ನು ಹೊರತುಪಡಿಸಿ ಹೆಚ್ಚು ಕಡಿಮೆ ಖಳನಾಯಕರಾಗಿ ಯುವ ಸಮೂಹದಲ್ಲಿ ಬಿಂಬಿತವಾಗುತ್ತಿದ್ದಾರೆ. ಮಾಡಬಾರದ ಅಪರಾಧ ಮಾಡಿದವರಂತೆ ಹೇಡಿ ಮತ್ತು ಹಾಸ್ಯಾಸ್ಪದ ವ್ಯಕ್ತಿಯಾಗಿ ಚಿತ್ರಿಸಲಾಗುತ್ತಿದೆ.

ದ್ವಾರಕೆಯ ಕೃಷ್ಣ ಕೌರವ ಪಾಂಡವರ ದೂರದ ಸಂಬಂಧಿ. ಹಸ್ತಿನಾಪುರ ಪ್ರವೇಶಿಸಿ ಇಡೀ ಘಟನಾವಳಿಗಳಲ್ಲಿ ನೇರವಾಗಿ ಭಾಗಿಯಾಗಿ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆದು ತಾನೇ ನಿಜವಾದ ಶಕ್ತಿ ಕೇಂದ್ರವಾಗಿ ಸ್ಥಾಪಿತವಾಗುತ್ತಾರೆ. ಹಾಗೆ ಅಷ್ಟು ಶಕ್ತಿವಂತರಾದರೂ ಅವರಿಗೂ ಪ್ರತಿರೋಧವೂ ಇರುತ್ತದೆ. ಅವರನ್ನು ನಾನಾ ಕಾರಣಗಳಿಗಾಗಿ ವಿರೋಧಿಸಲಾಗುತ್ತದೆ. ಮೋಹನ್ ದಾಸ್ ಗಾಂಧಿಯವರು ಗುಜರಾತಿನಿಂದ ಇಂಗ್ಲೆಂಡ್ ಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುವಾಗ ಅಲ್ಲಿನ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ ಸಾಕಷ್ಟು ಯಶಸ್ಸು ಮತ್ತು ಪ್ರಖ್ಯಾತಿ ಪಡೆದು ಭಾರತ ಪ್ರವೇಶಿಸುತ್ತಾರೆ. ನಂತರ ನಿಧಾನವಾಗಿ ಇಡೀ ಹೋರಾಟದ ನಾಯಕತ್ವ ವಹಿಸುತ್ತಾರೆ. ಇಲ್ಲಿಯೂ ಅವರಿಗೆ ಕೃಷ್ಣ ಎದುರಿಸಿದಂತ ಬಹಳಷ್ಟು ವಿರೋಧಗಳು ಇರುತ್ತವೆ. 

ಕೃಷ್ಣ ಬಹುತೇಕ ನವರಸಗಳನ್ನು ಒಳಗೊಂಡ  64 ವಿದ್ಯೆಗಳ ಎಲ್ಲಾ ತಂತ್ರಗಳನ್ನು ಸಮಯ ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುತ್ತಾರೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಅವರಿಗೆ ಯಶಸ್ಸೊಂದೇ ಮಾನದಂಡ. ಸುಳ್ಳು ಮೋಸ ವಂಚನೆ ಕಪಟತೆ ತ್ಯಾಗ ಧೈರ್ಯ ಸಾಹಸ ಹಿಂಸೆ ಹೆದರಿಸುವುದು ಭಾವುಕತೆ ಸೇರಿ ಎಲ್ಲಾ ತಂತ್ರ ಕುತಂತ್ರಗಳನ್ನು ಬಳಸುತ್ತಾರೆ. ರಾಜ್ಯ ಮತ್ತು ಧರ್ಮದ ರಕ್ಷಣೆಯ ಅವರ ಮೂಲ ಉದ್ದೇಶ. ಆದರೆ ಪಾರದರ್ಶಕ ವ್ಯಕ್ತಿತ್ವ ಹೊಂದಿರಲಿಲ್ಲ. ಮರೆಯಲ್ಲಿಯೇ ಎಲ್ಲವನ್ನೂ ಮಾಡುತ್ತಿದ್ದರು.

ಗಾಂಧಿ ತನ್ನ ನೆಲದ ರಕ್ಷಣೆಗಾಗಿ ಎಲ್ಲಿಯೂ ಹಿಂಸೆಯನ್ನು ಪ್ರಚೋದಿಸಲಿಲ್ಲ, ಸುಳ್ಳು ಹೇಳಲಿಲ್ಲ, ವಂಚನೆ ಮಾಡಲಿಲ್ಲ, ಹೇಡಿತನ ಪ್ರದರ್ಶಿಸಲಿಲ್ಲ. ತನ್ನ ಅನುಭವದಿಂದ ಅರ್ಥಮಾಡಿಕೊಂಡ ಶಾಂತಿ, ಅಹಿಂಸೆ, ಸರಳತೆ, ಸತ್ಯಾಗ್ರಹ, ಉಪವಾಸ ಪ್ರತಿಭಟನೆಗಳ ಮುಖಾಂತರವೇ ಬ್ರಿಟೀಷರನ್ನು ಇಲ್ಲಿಂದ ಹೊರ ಕಳಿಸಿದರು. ಅತ್ಯಂತ ಹೆಚ್ಚು ಪಾರದರ್ಶಕ ವ್ಯಕ್ತಿತ್ವ ಹೊಂದಿದ್ದರು ಮತ್ತು ತಮ್ಮ ತಪ್ಪುಗಳನ್ನು ಮರೆಮಾಚದೆ ಹೇಳಿಕೊಳ್ಳುತ್ತಿದ್ದರು.

ಮಹಾಭಾರತದ ಕೃಷ್ಣ ಯಾವುದೇ ಅಧಿಕಾರದ ಆಸೆ ಪಟ್ಟವರಲ್ಲ, ಅದನ್ನು ಮೀರಿದ ವ್ಯಕ್ತಿತ್ವ ‌ಬೆಳೆಸಿಕೊಂಡಿದ್ದರು. ಧರ್ಮ ರಕ್ಷಣೆಯ ಉದ್ದೇಶ ಮಾತ್ರ ಅವರದಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಸಹ ಯಾವುದೇ ಅಧಿಕಾರವನ್ನು ಬಯಸಲಿಲ್ಲ ಮತ್ತು ಪಡೆಯಲಿಲ್ಲ. ದೇಶದ ಶಾಂತಿಯುತ ಸ್ವಾತಂತ್ರ್ಯ ಅವರ ಉದ್ದೇಶವಾಗಿತ್ತು.

ಕೃಷ್ಣ ಕೇವಲ ದುರ್ಯೋಧನನೊಂದಿಗೆ ಮಾತ್ರವಲ್ಲ ವಿವಿಧ ಹಂತಗಳಲ್ಲಿ ಧೃತರಾಷ್ಟ್ರ, ಕರ್ಣ ಮುಂತಾದ ವಿವಿಧ ಜನರೊಡನೆ ಸಂಘರ್ಷ ಮತ್ತು ಸಂಧಾನಗಳನ್ನು ನಡೆಸುತ್ತಾರೆ. ಗಾಂಧಿಯೂ ಸಹ ಬ್ರಿಟಿಷರೊಂದಿಗೆ ಮಾತ್ರವಲ್ಲ ದೇಶದ ಆಂತರಿಕ ವಲಯದಲ್ಲಿಯೂ ಭಿನ್ನ ಅಭಿಪ್ರಾಯ ಹೊಂದಿದ್ದ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದವರೊಂದಿಗೆ ಸಂಘರ್ಷ ಮತ್ತು ಸಂಧಾನ ನಡೆಸುತ್ತಾರೆ.

(ನಾಳೆ ಮುಂದುವರಿಯುವುದು)

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ