ಕೆಂಪು ಕತ್ತಿನ ಪಿಕಳಾರ ಎಂಬ ಹಕ್ಕಿ

ಕೆಂಪು ಕತ್ತಿನ ಪಿಕಳಾರ ಎಂಬ ಹಕ್ಕಿ

ಪುತ್ತೂರಿನ ಗೆಳೆಯ ಚಂದ್ರಣ್ಣ ಒಮ್ಮೆ ಫೋನ್ ಮಾಡಿದ್ದರು. ಅವರ ಮನೆ ಮತ್ತು ನರ್ಸರಿಯ ಆಸುಪಾಸಿನಲ್ಲಿ ಹಲವಾರು ಗಿಡಮರಗಳನ್ನು ಬೆಳೆಸಿದ್ದರು. ಮನೆ ಮತ್ತು ಅದರ ಸುತ್ತಲಿನ ಪರಿಸರ ಒಂದು ಪುಟ್ಟ ಕಾಡು ಎಂದೇ ಹೇಳಬಹುದು. ಅಲ್ಲಿ ಬೆಳೆಯುವ ಹಣ್ಣುಗಳನ್ನು ತಿನ್ನಲು ಹಲವು ಪಕ್ಷಿಗಳು ಬರುತ್ತಿದ್ದವು. ಫೋನ್ ಮಾಡಿದ ಚಂದ್ರಣ್ಣ ಹೇಳಿದ್ರು ನಮ್ಮ ಮನೆಯ ಹತ್ತಿರದ ಪೊದೆಯೊಂದರಲ್ಲಿ ಸರಿಯಾಗಿ ಕಾಣುವ ಹಾಗೆಯೇ ಹಕ್ಕಿಗಳೆರಡು ಗೂಡು ಮಾಡುತ್ತಿವೆ. ನಾವಿಬ್ಬರು ಆ ಕಡೆ ನೋಡಿದರೆ ಅಥವಾ ಹೋದರೂ ಹೆದರುವುದಿಲ್ಲ. ನೋಡಲಿಕ್ಕೆ ಹಳದಿ ಬಣ್ಣದ ದೇಹ, ತಲೆ ಕಪ್ಪು ಬಣ್ಣ, ಕುತ್ತಿಗೆಯ ಹತ್ರ ಸ್ವಲ್ಪ ಕೆಂಪು ಉಂಟು ಯಾವ ಹಕ್ಕಿ ಇರಬಹುದು ಅಂತ ಕೇಳಿದ್ರು. 

ಅವರು ಹೇಳಿದ ಲಕ್ಷಣಗಳ ಹಕ್ಕಿ ಯಾವುದು ಎಂದು ಗೊತ್ತಾಗಲಿಲ್ಲ. ಅದೇ ವಾರ ಆ ಕಡೆ ಹೋಗುವುದು ಇದ್ದುದರಿಂದ ಹಕ್ಕಿಯ ಚಟುವಟಿಕೆಯನ್ನು ಗಮನಿಸಲು ಹೇಳಿದೆ. ಅದೇ ಶನಿವಾರ ಹೋದಾಗ ದೂರದಿಂದ ನನಗೆ ಗೂಡನ್ನು ತೋರಿಸಿದರು. ಅವರದ್ದೇ ಮನೆಯ ಪರಿಸರವಾದ್ದರಿಂದ ಅವರಿಗೆ ಕಾಣಿಸಿದರೂ ನನಗೆ ಗೂಡಿನ ಇರುವಿಕೆ ಗೊತ್ತಾಗಲು ಸ್ವಲ್ಪ ಹೊತ್ತು ಬೇಕಾಯಿತು. ಆಸುಪಾಸಿನಲ್ಲಿ ಹಕ್ಕಿ ಕಾಣಲಿಲ್ಲ. ನಿಧಾನವಾಗಿ ಹತ್ತಿರ ಹೋಗಿ ನೋಡಿದೆ. ಬಟ್ಟಲಿನ ಆಕಾರದ ಪುಟಾಣಿ ಗೂಡು. ಯಾವುದೋ ಹುಲ್ಲು, ಎಲೆಗಳನ್ನೆಲ್ಲ ತಂದು ಹೆಣೆದು ಗೂಡು ಮಾಡಿತ್ತು. ತಿಳಿಗುಲಾಬಿ ಬಣ್ಣದ ಕಂದು ಚುಕ್ಕೆಗಳಿದ್ದ ಮೂರು ಮೊಟ್ಟೆಗಳಿದ್ದವು. ಗೂಡಿನ ಜಾಗ ಮತ್ತು ಆಕಾರ ನೋಡಿ ಪಿಕಳಾರ ಇರಬೇಕು ಎಂದು ಯೋಚಿಸುವಾಗಲೇ ಪಕ್ಕದ ಮರದ ಮೇಲೆ ಹಕ್ಕಿ ಬಂದು ಗಾಬರಿಯಿಂದ ನೋಡುತ್ತಿತ್ತು. ನಾವು ನಿಧಾನವಾಗಿ ದೂರ ಬಂದೆವು. ಕೆಂಪು ಕತ್ತಿನ ಪಿಕಳಾರ ಹಕ್ಕಿ ಮಾನವನ ಆವಾಸದ ಹತ್ತಿರ ಗೂಡು ಮಾಡಿದ್ದನ್ನು ನಾನು ಯಾವತ್ತೂ ಕೇಳಿರಲಿಲ್ಲ. 

ಒಂದು ಹಕ್ಕಿ ಯಾವಾಗಲೂ ಗೂಡಿನಲ್ಲಿ ಕೂತಿರುತ್ತದೆ. ಮನೆಯವರಾದ ನಮ್ಮನ್ನು ಚೆನ್ನಾಗಿ ಪರಿಚಯವಾಗಿದೆ. ಆಕಡೆ ಓಡಾಡಿದರೂ ಬೆದರಿ ಹಾರುವುದಿಲ್ಲ. ಗಾರ್ಡನ್ ನಲ್ಲಿ ನೀರು ಹಾಕುವಾಗಲೂ ಗಮನಿಸುತ್ತೇವೆ. ಮೊಟ್ಟೆ ಒಡೆದು ಮರಿಗಳು ಬಂದಿರಬೇಕು, ಗಂಡು ಹೆಣ್ಣು ಎರಡೂ ಬಹಳ ಓಡಾಡಿ ಹುಳುಗಳನ್ನು ತಂದು ತಿನ್ನಿಸುತ್ತಿವೆ. ಎಂದೆಲ್ಲ ಆಗಾಗ ಕರೆ ಮಾಡಿ ಚಂದ್ರಣ್ಣ ಹೇಳುತ್ತಿದ್ದರು. ಅವರ ಮಿತ್ರರಾದ ವಿನಾಯಕರು ಆ ಕಡೆ ಬಂದಾಗಲೆಲ್ಲ ತಮ್ಮ ಕ್ಯಾಮರಾದಲ್ಲಿ ಈ ಹಕ್ಕಿಗಳ ಗೌಜಿಯನ್ನು ಅವುಗಳಿಗೆ ತೊಂದರೆಯಾಗದಂತೆ ದೂರದಿಂದಲೇ ಸೆರೆಹಿಡಿಯುತ್ತಿದ್ದರು. ಕೊನೆಗೊಮ್ಮೆ ಈಗ ಮರಿಗಳ ರೆಕ್ಕೆ ಬಲಿತಿದೆ. ಗೂಡಿನಿಂದ ಹೊರಗೆ ಹಾರುತ್ತವೆ. ಹಾರಿ ಕೂತರೆ ತಂದೆ ತಾಯಿ ಮೊದಲು ಆಹಾರ ಕೊಡುತ್ತಿದ್ದವು. ಈಗ ಅವುಗಳೇ ಆಹಾರ ಹುಡುಕಲಿ ಎಂದು ಬಿಟ್ಟಿವೆ. ಮರಿಗಳ ಕುತ್ತಿಗೆಯ ಕೆಳಗೆ ಇನ್ನೂ ಸರಿಯಾಗಿ ಕೆಂಪು ಬಣ್ಣ ಬಂದಿಲ್ಲ, ಅವು ನಮ್ಮ ಮನೆಯ ಪರಿಸರದಲ್ಲೇ ಇರುತ್ತವೆ. ಇನ್ನು ಅವುಗಳು ಹಾರಿ ಹೋಗಲು ಹೆಚ್ಚು ದಿನ ಇಲ್ಲ ಎನ್ನುತ್ತಿದ್ದರು.

ಮರುದಿನವೇ ಕ್ಯಾಮರಾ ಹೆಗಲಿಗೆ ಏರಿಸಿಕೊಂಡು ಹೋದೆ. ಪೋಷಕರೂ ಮರಿಗಳೂ ಅವರ ತೋಟದಲ್ಲೇ ಓಡಾಡುತ್ತಿದ್ದವು. ಗೂಡು, ಹಾರುತ್ತಿರುವ ಮರಿಗಳು, ಅವುಗಳ ಆಟ, ಪೋಷಕರ ಪಾಠ ಎಲ್ಲ ನೋಡಿ ಸಂತೋಷವಾಯಿತು. ಅದಾಗಿ ಒಂದು ವಾರದಲ್ಲಿ ಹಕ್ಕಿಗಳು ಹಾರಿ ಹೋಗಿದ್ದವು. ಮತ್ತೆ ಆಗಾಗ ಬರುತ್ತಿರುತ್ತವೆ ಎಂದು ಚಂದ್ರಣ್ಣ ಹೇಳುತ್ತಿರುತ್ತಾರೆ. ಭಾರತದ ಮಲೆನಾಡು ಭಾಗದಲ್ಲಿ ಮಾತ್ರ ಕಾಣಸಿಗುವ ಪಿಕಳಾರ ಜಾತಿಯ ಈ ಹಕ್ಕಿಯ ಒಂದಿಷ್ಟು ಕ್ಷಣಗಳನ್ನು ಹತ್ತಿರದಿಂದ ನೋಡಿ ನಾವು ಸಂತೋಷಪಟ್ಟೆವು.

ಕನ್ನಡ ಹೆಸರು: ಕೆಂಪು ಕತ್ತಿನ ಪಿಕಳಾರ

ಇಂಗ್ಲೀಷ್ ಹೆಸರು: Flame-throated Bulbul

ವೈಜ್ಞಾನಿಕ ಹೆಸರು: Pycnonotus gularis

ಚಿತ್ರ- ಬರಹ : ಅರವಿಂದ ಕುಡ್ಲ, ಬಂಟ್ವಾಳ