ಕೆಂಪು ಕೊರಳಿನ ನೊಣಹಿಡುಕ ಹಕ್ಕಿಯ ಕರಾಮತ್ತು !
ಕಳೆದ ವಾರ ಸಲೀಂ ಅಲಿಯವರ ಜನ್ಮದಿನಾಚರಣೆಗಾಗಿ ಮೈಸೂರಿಗೆ ಹೋಗಿದ್ದ ನಾವು ಗೆಳೆಯ ವಜ್ರಮುನಿಯವರ ಮನೆಯಲ್ಲಿ ಉಳಿದುಕೊಂಡಿದ್ದೆವು. ಕುಕ್ಕರಹಳ್ಳಿ ಕೆರೆಯಲ್ಲಿ ಓಡಾಡುವಾಗ ತೆಗೆದ ಫೋಟೋಗಳನ್ನು ನೋಡುತ್ತಾ ಸಂಜೆ ಹಕ್ಕಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಬೆಳಗ್ಗೆ ಹಕ್ಕಿಗಳನ್ನು ನೋಡಿ ಬಹಳ ಖುಷಿಪಟ್ಟಿದ್ದ ಎಲ್ಲರೂ ಮತ್ತೊಮ್ಮೆ ಅವುಗಳ ಚಿತ್ರ ಮತ್ತು ವಿಡಿಯೋ ನೋಡಿ ಚರ್ಚೆ ಮಾಡಿ ಖುಷಿಪಟ್ಟೆವು. ಮರುದಿನ ಬೆಳಗ್ಗೆ ಆರಭಿ ಮೇಡಂ ಮಾತನಾಡುತ್ತಾ ತಮ್ಮ ಮನೆಯಲ್ಲಿ ಹಕ್ಕಿಯೊಂದು ಗೂಡು ಮಾಡಿದ ವಿಚಾರ ಹಂಚಿಕೊಂಡರು. ಅವರೊಮ್ಮೆ ಕೆಲವು ದಿನ ಮನೆಯಲ್ಲಿ ಇಲ್ಲದೇ ಇದ್ದಾಗ ಮನೆಯ ಹೊರಗಡೆ ಇಟ್ಟಿದ್ದ ನೆಲ ಒರಸುವ ಕೋಲಿನ ತುದಿಯಲ್ಲಿ ಹಳದಿ ಬಣ್ಣದ ಕತ್ತಿನ ಚಂದದ ಹಕ್ಕಿಯೊಂದು ಗೂಡು ಮಾಡಿತ್ತಂತೆ. ಪುಟಾಣಿ ಗಾತ್ರದ ಚಂದದ ಹಕ್ಕಿ ಬಟ್ಟಲಿನಾಕಾರದ (cup shape) ಗೂಡು ಮಾಡಿ ಮೂರು ಮೊಟ್ಟೆಗಳನ್ನು ಇಟ್ಟಿತ್ತಂತೆ. ಗೂಡು ನೋಡಿದ ನಾವು ಆ ಕೋಲನ್ನು ತೆಗೆಯುವುದಾಗಲೀ, ಆ ಕಡೆ ಹೆಚ್ಚು ಓಡಾಡುವುದಾಗಲೀ ಮಾಡುತ್ತಿರಲಿಲ್ಲ. ಆ ಬದಿಗೆ ಹೋಗುವ ಬಾಗಿಲನ್ನೇ ಕೆಲವು ದಿನ ತೆರೆದಿರಲಿಲ್ಲ. ಕಿಟಕಿಯಿಂದಲೇ ಅವುಗಳ ಚಲನವಲನವನ್ನು ನೋಡುತ್ತಿದ್ದೆವು.
ಮರಿಗಳು ಹೊರಬಂದು ಪೋಷಕರಿಬ್ಬರೂ ಅವುಗಳಿಗೆ ಹುಳ ಹುಪ್ಪಟೆ ತಿನ್ನಿಸುವುದು ಜೋರಾಗಿಯೇ ನಡೆದಿತ್ತು. ಪೋಷಕರು ತಂದು ಗುಟುಕು ತಿನ್ನಿಸುವುದನ್ನು ನಾವು ಕಿಟಕಿಯ ಮರೆಯಿಂದಲೇ ನೋಡುತ್ತಿದ್ದೆವು. ಆದರೆ ಅವುಗಳಲ್ಲಿ ಒಂದು ಮರಿ ಬದುಕಲಿಲ್ಲ. ಇನ್ನೆರಡು ಬೆಳೆದು ಹಾರುವುದನ್ನು ಕಲಿತವು. ಆ ನಂತರವೂ ಹಲವು ದಿನ ಮನೆಯ ಪಕ್ಕದ ಮರದಲ್ಲಿ ನೋಡಲಿಕ್ಕೆ ಸಿಗುತ್ತಿದ್ದವು ಎಂದು ಹಕ್ಕಿ ಗೂಡುಕಟ್ಟಿದ ಕಥೆಯನ್ನು ಹೇಳಿದರು. ಅಷ್ಟರಲ್ಲಿ ಅವರ ಮಗ ಓಂಕಾರ್ ಹಕ್ಕಿ ಗೂಡುಕಟ್ಟಿದ ಜಾಗವನ್ನು ತೋರಿಸಿದ. ಅವನ ಕೈಯಲ್ಲಿ ಬೈನಾಕುಲರ್ ಕೂಡ ಇತ್ತು. ಪಕ್ಕದ ಮರವನ್ನು ನೋಡುತ್ತಿದ್ದವನೇ ಕೂಗಿ ಆರೆಂಜ್ ಕುತ್ತಿಗೆ ಹಕ್ಕಿ ಇದೆ ಎಂದ. ನನಗೂ ಹಕ್ಕಿ ನೋಡುವ ಕುತೂಹಲ. ಇವರು ಹೇಳುತ್ತಿರುವ ಆರೆಂಜ್ ಕತ್ತಿನ ಹಕ್ಕಿ ಯಾವುದು ಅಂತ ನೋಡಲು ನಾನೂ ಕ್ಯಾಮರಾ ಹಿಡಿದು ನಿಧಾನವಾಗಿ ಹೊರಬಂದೆ. ಅವರ ಮನೆಯ ಪಕ್ಕದ ಮರದಲ್ಲಿ ಹಕ್ಕಿ ಕೂತಿತ್ತು.
ತಲೆ, ರೆಕ್ಕೆಗಳು ಬಾಲ ಎಲ್ಲವೂ ಚಂದದ ನೀಲಿ ಬಣ್ಣ. ಹೊಟ್ಟೆಯ ಭಾಗ ತಿಳಿ ಹಳದಿ ಬಣ್ಣ. ಕುತ್ತಿಗೆಯ ಭಾಗ ಮಾತ್ರ ಚಂದದ ಕಿತ್ತಳೆ ಬಣ್ಣ. ಕತ್ತಿನ ಕೆಳಗಿನ ಕಿತ್ತಳೆ ಬಣ್ಣ ಮಾಸುತ್ತಾ ಹೋಗಿ ಬಾಲದ ಕೆಳಗೆ ಬಿಳಿಬಣ್ಣ ಕಾಣುತ್ತದೆ. ಪುಟಾಣಿ ಕೊಕ್ಕು. ಬಾಲ ಮತ್ತು ಕೊಕ್ಕಿನ ಆಕಾರ ಮತ್ತು ಗಾತ್ರ ನೋಡಿದಾಗ ನೊಣಹಿಡುಕ ಜಾತಿಯ ಹಕ್ಕಿ ಎನ್ನುವುದು ಖಚಿತವಾಯಿತು. ಹಾರಾಡುವ ಪುಟ್ಟ ನೊಣದಂತಹ ಕೀಟಗಳೇ ಇದರ ಮುಖ್ಯ ಆಹಾರ. ಗಂಡು ಹಕ್ಕಿಗೆ ಮಾತ್ರ ಈ ಚಂದದ ನೀಲಿ ಬಣ್ಣ. ಹೆಣ್ಣು ಹಕ್ಕಿಗೆ ನೀಲಿಯ ಬದಲು ಬೂದುಮಿಶ್ರಿತ ಕಂದು ಬಣ್ಣ ಇರುತ್ತದೆ. ಬಹುಶಃ ಕಾವು ಕೊಡುವಾಗ ತಕ್ಷಣ ಕಾಣದೇ ಇರಲಿ ಎಂಬುದು ಇದಕ್ಕೆ ಕಾರಣವಾಗಿರಬಹುದು. ಕುರುಚಲು ಕಾಡು ಇರುವಲ್ಲಿ, ನೀರಿನ ಆಸುಪಾಸಿನಲ್ಲಿ ವಾಸಿಸುತ್ತದೆ. ನೋಡಲಿಕ್ಕೆ ಬುಲ್ ಬುಲ್ ಗಿಂತ ಸ್ವಲ್ಪ ಕಿರಿದಾದ ಪುಟಾಣಿ ಸುಂದರ ಹಕ್ಕಿ. ನಿಮ್ಮ ಆಸುಪಾಸಿನಲ್ಲೂ ಇರಬಹುದು.
ಕನ್ನಡ ಹೆಸರು: ಕೆಂಪು ಕೊರಳಿನ ನೊಣಹಿಡುಕ
ಇಂಗ್ಲಿಷ್ ಹೆಸರು: Tickell’s Blue-Flycatcher
ವೈಜ್ಞಾನಿಕ ಹೆಸರು: Cyornis tickelliae.
ಚಿತ್ರ-ಬರಹ : ಅರವಿಂದ ಕುಡ್ಲ, ಬಂಟ್ವಾಳ