ಕೆಂಪು ಗುಲಾಬಿ !

ಕೆಂಪು ಗುಲಾಬಿ !

ಇಂದು ನಾನು ಏನೋ ಗೊಂದಲದಲ್ಲಿದ್ದೇನೆ..... ಇಂದು ನನ್ನ ಹುಟ್ಟುಹಬ್ಬ. ಇವತ್ತು ಆಫೀಸಿನಿಂದ ಸಮಯಕ್ಕೆ ಸ್ವಲ್ಪ ಮುಂಚೆಯೇ ಹೊರಟಿದ್ದೇನೆ. ಪ್ರತಿದಿನ ಶಾಲಿನಿ ನನ್ನನ್ನು ಛತ್ರಪತಿ ಶಿವಾಜಿ ಟರ್ಮಿನಲ್ಸ್ (ಸಿಎಸ್‌ಟಿ) ರೈಲ್ವೇ ಸ್ಟೇಷನ್‌ನಲ್ಲಿ ಭೇಟಿಯಾಗುತ್ತಾಳೆ. ನಂತರ ನಾವು ಮುಂಬೈ ಬೀಚ್‌ಗೆ ಹೋಗಿ ಸುತ್ತಾಡಿ ನಂತರ ಮನೆಗೆ ಹೋಗುತ್ತೇವೆ.

ಶಾಲಿನಿ ಅಕೌಂಟೆಂಟ್. ಆಕೆಯ ಶಿಫ್ಟ್ ಬೆಳಿಗ್ಗೆ ೧೦ ರಿಂದ ೭.೩೦ರವರೆಗೆ. ನಾನು ಮೆಕ್ಯಾನಿಕಲ್ ಇಂಜಿನಿಯರ್. ನಾವಿಬ್ಬರೂ ಕಾಲೇಜ್‌ಮೇಟ್. ಆ ಸಮಯದಿಂದಲೇ ನಾವಿಬ್ಬರೂ ಫ್ರೆಂಡ್ಸ್. 

ಇವತ್ತು ನಾನು ಆಕೆ ಬರುವ ಅರ್ಧ ಗಂಟೆ ಮುಂಚೆಯೇ ಸಿಎಸ್‌ಟಿಗೆ ಬಂದು ಆಕೆಗಾಗಿ ಕಾಯುತ್ತಿದ್ದೆ. ಆಕೆಯ ಖಾಯಂ ರೈಲು ನನ್ನ ಮುಂದೆ ನಿಂತಿತು, ನಾನು ಅವಳಿಗೆ ಇಂದು ಪ್ರಪೋಸ್ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಆಕೆ ರೈಲಿನಿಂದ ಇಳಿಯುತ್ತಿದ್ದಾಳೆ... ನನ್ನ ಹೃದಯ ಬಡಿತದ ವೇಗವನ್ನು ಹೆಚ್ಚಿಸಿತು. ಅವಳು ನನ್ನ ಬಳಿಗೆ ಬಂದು, ಹೂಗುಚ್ಛ ನೀಡಿ, ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ ಎಂದು ನನ್ನ ಕೈ ಕುಲುಕಿದಳು.

`ಥ್ಯಾಂಕ್ಯೂ...? ಹೇಳಿದೆ.

ಥ್ಯಾಂಕ್ಯೂ ಯಾಕೆ... ನೋ ಥ್ಯಾಂಕ್ಸ್, ನೋ ಸೊರ್ರಿ ಇನ್ ಫ್ರೆಂಡ್‌ಶಿಪ್... ಆಕೆಯೆಂದಳು.

ನಾನು ನಿನ್ನಲ್ಲಿ ಏನೋ ಹೇಳಬೇಕೆಂದಿದ್ದೇನೆ...!

ಹೌದಾ, ಹಾಗಾದರೆ ಯೋಚಿಸಬೇಡ. ಫಟ್ ಅಂತ ಹೇಳು... ಆಕೆ ನಕ್ಕಳು.

ಆದರೆ ನೀನು ನನಗೊಂದುಪ್ರಾಮಿಸ್ ಮಾಡಬೇಕು. ನಾನು ಕೇಳಿದ ಮೇಲೆ ನೀನು ನನ್ನ ಫ್ರೆಂಡ್‌ಶಿಪ್ ಮುರಿಯಬಾರದು. ನಮ್ಮ ಫ್ರೆಂಡ್‌ಶಿಪ್ ಹೀಗೇ ಮುಂದುವರಿಯಬೇಕು... ಈಗ ನಾವು ಹೇಗಿದ್ದೇವೋ ಮುಂದೆಯೂ ಹಾಗೇ ಇರಬೇಕು...

ಅಯ್ಯೋ, ಇವತ್ತು ಯಾಕೆ ಹೀಗೆ ಮಾತಾಡ್ತಿದ್ದೀಯಾ... ಏನು ಬೇಕು ಕೇಳು... ನಾನು ಪ್ರಾಮಿಸ್ ಮಾಡುತ್ತೇನೆ. ಏನೇ ಆದರೂ ನಮ್ಮ ಫ್ರೆಂಡ್‌ಶಿಪ್ ಹೀಗೇ ಮುಂದುವರಿಯುತ್ತೆ...

ಆಕೆ ನನಗೆ ಕೊಟ್ಟ ಹೂಗುಚ್ಛವನ್ನು ಆಕೆಯ ಕೈಗಿತ್ತು... ನಾನು ಹಿಂದಿನ ಜೇಬಲ್ಲಿ ಅಡಗಿಸಿಟ್ಟಿದ್ದ  ಕೆಂಪು ಗುಲಾಬಿ ಹೂವನ್ನು ಬಲಕೈಯಲ್ಲಿ ಹಿಡಿದು, ಆಕೆಗೆ ಮುಂದೆ ಚಾಚಿ... ಕಾಲೇಜು ದಿನದಿಂದಲೇ ನಾನು ನಿನ್ನನ್ನು ಇಷ್ಟಪಡುತ್ತಿದೇನೆ. ಈವರೆಗೂ ನಾನು ನಿನ್ನ ಪ್ರತಿಕ್ರಿಯೆ ಹೇಗಿರಬಹುದೆಂದು ಭಯಪಟ್ಟಿದ್ದೆ... ಇವತ್ತು ಧೈರ್ಯ ತಂದು ಕೇಳುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ...?!

ಆ ಕ್ಷಣ ನನ್ನ ಭುಜದ ಮೇಲೊಂದು ಕೈ ಬಿತ್ತು. 

ಸಚಿನ್... ಈ ಹೂವನ್ನು ಹಿಡಿದು ಯಾರತ್ರ ಮಾತಾಡುತ್ತಿದ್ದೀಯಾ…?

ಮೂರು ವರ್ಷ ನಮ್ಮೊಂದಿಗೆ ಕಾಲೇಜ್‌ನಲ್ಲಿದ್ದ ಗೆಳೆಯ ಸಮೀರ್ ಅಲ್ಲಿದ್ದ. ಬಹುಶಃ ಬಹಳ ಸಮಯದಿಂದ ಆತ ನನ್ನ ಚಲನವಲನಗಳನ್ನು ನೋಡುತ್ತಿದ್ದ ಅನ್ಸುತ್ತೆ... ಆಚೆ ನೋಡಿ ಈಚೆ ನೋಡುವಾಗ ಆಕೆ ಮಾಯವಾಗಿದ್ದಳು. ಆಕೆ ಎಲ್ಲಿ ಹೋದಳು... ನನ್ನ ಕಣ್ಣುಗಳು ಆಕೆಯನ್ನು ಹುಡುಕಾಡುತ್ತಿದ್ದವು... ನಾನು ಒಂದು ಕ್ಷಣ ಮೌನವಾದೆ. 

ಸಮೀರ್ ನನ್ನನ್ನು ಕರೆದ. ನಾನು ಏನೂ ಮಾತನಾಡದೆ ಆತನನ್ನು ಹಿಂಬಾಲಿಸಿದೆ. ಆತ ನನ್ನನ್ನು ರೈಲ್ವೇ ಪ್ಲಾಟ್‌ಫಾರ್ಮ್‌ನ ಒಂದು ಮೂಲೆಗೆ ಕರೆದೊಯ್ದು ಅಲ್ಲಿ ತೂಗು ಹಾಕಿದ್ದ ಲಿಸ್ಟ್ ತೋರಿಸಿದ. ಮುಂಬೈ ಸಿಎಸ್‌ಟಿ ಉಗ್ರರ ದಾಳಿಯಲ್ಲಿ ಹುತಾತ್ಮರಾದವರ ಪಟ್ಟಿ ಅದು. ಅದರಲ್ಲಿ ಶಾಲಿನಿ ಹೆಸರೂ ಇತ್ತು. ನಾನು ಭ್ರಮಾಲೋಕದಿಂದ ಹೊರಗೆ ಬಂದಿದ್ದೆ... ನಾನು ಅವನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅತ್ತೆ. ಆತ ನನ್ನನ್ನು ಎಬ್ಬಿಸಿ ಸಂತೈಸತೊಡಗಿದ.

ಸಚಿನ್, ನಿನಗೆ ತಿಳಿದಿದೆ, ನಾನು ಸೈಕಿಯಾಟ್ರಿಸ್ಟ್, ನೀನು ಏಕಾಂಗಿಯಾಗಿ ಮಾತನಾಡುವುದನ್ನು ನೋಡಿ ನಿನ್ನ ಮಾನಸಿಕ ಸ್ಥಿತಿಯನ್ನು ಅಬ್ಸರ್ವ್ ಮಾಡುತ್ತಿದ್ದೆ. ಇಲ್ಲಿನ  ಅಧಿಕಾರಿಗಳೊಂದಿಗೆ ವಿಚಾರಿಸಿ, ನೀನು ದಿನನಿತ್ಯ ಇಲ್ಲಿ ಬರುತ್ತೀಯಾ ಏನೇನೋ ಮಾತನಾಡುತ್ತೀಯಾ ಎಂದು ತಿಳಿದುಕೊಂಡೆ. 

ಅಲ್ಲಿ ಕಡ್ಲೆಪುರಿ ಮಾರುತ್ತಿದ್ದ ಅಜ್ಜಿಯನ್ನು ವಿಚಾರಿಸಿದಾಗ, ಆ ದಿನ.... ನೀನು ಹುಡುಗಿಗೆ ಹೂ ಕೊಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಸುರಿದ ಗುಂಡಿನ ಸುರಿಮಳೆ ಹೂವಿನೊಂದಿಗೆ ನಿನ್ನ ಹುಡುಗಿಯ ಹೃದಯವನ್ನು ಹೊಕ್ಕಿತ್ತೆಂದು ತಿಳಿದುಕೊಂಡೆ. ಹೃದಯದಿಂದ ಸುರಿದ ರಕ್ತ ನೀನು ಕೊಟ್ಟ ಹೂವನ್ನು ರಕ್ತಮಯವಾಗಿಸಿದ್ದನ್ನೂ ಆಕೆ ವಿವರಿಸಿದಳು. ಆಕೆ ನಿನ್ನ ತೋಳಿನಲ್ಲಿಯೇ ಪ್ರಾಣ ಬಿಟ್ಟಿದ್ದಳಂತೆ. ಇದಾಗಿ ಕೆಲವು ದಿನಗಳ ನಂತರದಿಂದ ಪ್ರತಿದಿನ ಇಲ್ಲಿ ಬಂದು ನೀನು ಒಬ್ಬಂಟಿಯಾಗಿ ಮಾತನಾಡುತ್ತಿದ್ದೀಯಂತೆ. 

ಸಮೀರ್ ಹೇಳಿದ ಈ ಸತ್ಯ ನನಗೆ ಬಲವಾಗಿ ತಟ್ಟಿತು. ಸತ್ಯ ತಿಳಿದು ನಾನು ಬಹುಶಃ ಮೂರ್ಛೆ ಹೋಗಿದ್ದೆ, ಎಚ್ಚರವಾದಾಗ, ನಾನು ವಿಚಿತ್ರವಾದ ಮನೆಯಲ್ಲಿದ್ದೆ, ಸಮೀರ್ ಅಲ್ಲಿಗೆ ಬಂದು ನನಗೆ ಬೆಡ್ ಟೀ ಕೊಟ್ಟು ಎಬ್ಬಿಸಿದ. ಬರೋಬ್ಬರಿ ಒಂದು ವರ್ಷ ಇಲ್ಲೇ ಇದ್ದು ನನ್ನ ಆರೈಕೆ ಮಾಡಿದ. 

ಇಂದಿನಿಂದ ನೀನು ಸಂಪೂರ್ಣವಾಗಿ ಗುಣಮುಖನಾದೆ ಗೆಳೆಯಾ.... ಇದುವರೆಗೆ ನೀನು ಮಾನಸಿಕ ಅಸ್ವಸ್ಥನಾಗಿದ್ದೆ. ಈಗ ನೀನು ಸಂಪೂರ್ಣ ಗುಣಮುಖನಾಗಿದ್ದೀಯ. ನಿನನ್ನು ಮನೆಗೆ ಬಿಟ್ಟು ಬರುತ್ತೇನೆ ಎಂದು ಆತ ನನ್ನನ್ನು ನನ್ನ ಮನೆ ಕಡೆ ತಲುಪಿಸಿದ. 

ಬರೋಬ್ಬರಿ ಒಂದು ವರ್ಷದ ನಂತರ ಇಂದು ಪುನಃ ನಾನು ಅದೇ ಸಿಎಸ್‌ಟಿ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದೇನೆ. ಅದೇ ಕೆಂಪು ಬಣ್ಣದ ಗುಲಾಬಿ ಹೂವಿನೊಂದಿಗೆ. ಇಲ್ಲ ಹಾಗೇನೂ ಇಲ್ಲ... ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ.. ಅವಳು ಇಂದು ಬರುವುದಿಲ್ಲ ಎಂದು ನನಗೆ ತಿಳಿದಿದೆ. ಇಂದು ಅವಳ ಸ್ಮರಣಾರ್ಥ ಆಕೆ ಪ್ರಾಣ ಬಿಟ್ಟ ಜಾಗದಲ್ಲಿ, ಅವಳ ನೆನಪಿಗಾಗಿ ಈ ಹೂವನ್ನು ತಂದಿದ್ದೇನೆ ಅಷ್ಟೇ.

ಮಿಸ್ಸ್ ಯೂ... ಶಾಲೂ...

ಮರಾಠಿ ಮೂಲ: ಅನಾಮಿಕ , ಕನ್ನಡ ಸಂಗ್ರಹ : ಮನು ಶಕ್ತಿನಗರ

ಚಿತ್ರ ಕೃಪೆ: ಇಂಟರ್ನೆಟ್ ತಾಣ