ಕೆಂಪು ಮಾಣಿಕ್ಯದ ಉಂಗುರ
ಒಂದಾನೊಂದು ಕಾಲದಲ್ಲಿ ಜೂಲಿಯಾ ಎಂಬ ರಾಜಕುಮಾರಿ ಇದ್ದಳು. ಅವಳು ರೂಪವತಿ. ಆದರೆ ಅವಳು ಮಹಾ ಸ್ವಾರ್ಥಿ. ಅವಳಿಗೆ ಯಾವಾಗಲೂ ತನ್ನ ದುಬಾರಿ ಉಡುಪುಗಳು ಮತ್ತು ಬೆಲೆಬಾಳುವ ಆಭರಣಗಳದ್ದೇ ಯೋಚನೆ.
ಒಂದು ದಿನ ಮಹಾರಾಜ (ಅವಳ ತಂದೆ) ಜೂಲಿಯಾಳಿಗೆ ಒಂದು ಕೆಂಪು ಮಾಣಿಕ್ಯದ ಉಂಗುರ ಕೊಟ್ಟ. ಅದರ ಮಾಣಿಕ್ಯ ಮಿಂಚುತ್ತಿತ್ತು. ಅವಳು ಅದನ್ನು ಕೈಬೆರಳಿಗೆ ಹಾಕಿಕೊಂಡಳು. ಅದನ್ನು ಆಗಾಗ ನೋಡುತ್ತಾ, ಖುಷಿ ಪಡುತ್ತಾ ಇರುತ್ತಿದ್ದಳು.
ಅದೊಂದು ದಿನ ಜೂಲಿಯಾಳ ತಲೆಗೂದಲನ್ನು ಸೇವಕಿ ಅನ್ನಾ ಬಾಚುತ್ತಿದ್ದಳು. ಕಿಟಕಿಯ ಎದುರು ಕುಳಿತಿದ್ದ ಜೂಲಿಯಾ ತನ್ನ ಕೆಂಪು ಮಾಣಿಕ್ಯದ ಉಂಗುರವನ್ನು ಪಕ್ಕದ ಮೇಜಿನಲ್ಲಿ ಇಟ್ಟಿದ್ದಳು. ಅದು ಸೂರ್ಯನ ಬೆಳಕಿಗೆ ಹೊಳೆಯುತ್ತಿತ್ತು. ಆಗ ಕಾಗೆಯೊಂದು ಚಕ್ಕನೆ ಬಂದು ಮಾಣಿಕ್ಯದ ಉಂಗುರವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿ ಹೋಯಿತು. ಜೂಲಿಯಾ ಸಿಟ್ಟಿನಿಂದ ಕುದ್ದು ಹೋದಳು. "ಆ ಕಾಗೆಯನ್ನು ಹಿಡಿಯಿರಿ; ನನ್ನ ಉಂಗುರವನ್ನು ವಾಪಾಸು ತನ್ನಿ” ಎಂದು ಕಿರುಚಿದಳು.
ಅನ್ನಾ ಹೊರಗೆ ಓಡಿ ಉದ್ಯಾನಕ್ಕೆ ಹೋದಳು. ಅಲ್ಲೊಂದು ಮರದ ಕೊಂಬೆಯಲ್ಲಿ ಆ ಕಾಗೆ ಕುಳಿತಿತ್ತು. ಅವಳು ಆ ಮರದ ಹತ್ತಿರ ಹೋದಾಗ ಕಾಗೆ ಅಲ್ಲಿಂದ ಹಾರಿ ಹೋಯಿತು. ಆದರೆ ಅದರ ಕೊಕ್ಕಿನಿಂದ ಜಾರಿದ ಮಾಣಿಕ್ಯದ ಉಂಗುರ ಕೆರೆಗೆ ಬಿತ್ತು. “ಛೇ, ನನಗಿನ್ನು ಆ ಉಂಗುರ ಸಿಗೋದಿಲ್ಲ. ನಾನು ರಾಜಕುಮಾರಿಯ ಬಯ್ಗಳು ತಿನ್ನಬೇಕು” ಎಂದು ಬೇಸರಿಸಿದಳು ಅನ್ನಾ.
ಅಷ್ಟರಲ್ಲಿ ಕೆರೆಯ ನೀರಿನಿಂದ ಒಂದು ಮೀನು ಮೇಲಕ್ಕೆ ಜಿಗಿಯಿತು. ಅದರೆ ಬಾಯಿಯಲ್ಲಿ ಕೆಂಪು ಮಾಣಿಕ್ಯದ ಉಂಗುರ ಕಂಡು ಅನ್ನಾಳಿಗೆ ಅಚ್ಚರಿ. ಆ ಮೀನು ಮಾತಾಡಿದಾಗ ಅವಳಿಗೆ ಇನ್ನೂ ಅಚ್ಚರಿ. "ಪ್ರತಿದಿನವೂ ನನಗೆ ಒಂದು ಸಿಹಿಲಾಡು ತಂದು ಕೊಡುತ್ತೇನೆಂದು ನೀನು ಭಾಷೆ ಕೊಟ್ಟರೆ ನಿನಗೆ ಈ ಉಂಗುರ ಕೊಡ್ತೇನೆ” ಎಂದಿತು ಮೀನು!
ಅನ್ನಾ ಮೀನಿಗೆ ಹಾಗೆಯೇ ಭಾಷೆ ಕೊಟ್ಟಳು. ಮೀನು ಉಂಗುರವನ್ನು ಅನ್ನಾಳಿಗೆ ಕೊಟ್ಟಿತು. ಅದನ್ನು ರಾಜಕುಮಾರಿ ಜೂಲಿಯಾಳಿಗೆ ಕೊಟ್ಟು, ನಡೆದ ಸಂಗತಿಯನ್ನೆಲ್ಲ ಅನ್ನಾ ತಿಳಿಸಿದಳು. "ಆ ಬಾಲಂಗೋಚಿ ಮೀನಿನ ಸಂಗತಿ ಬಿಟ್ಟು ಬಿಡು. ಉಂಗುರ ನಮ್ಮ ಕೈಗೆ ಸಿಕ್ಕಿದೆ, ಇನ್ನೇನೂ ಆಗಬೇಕಾಗಿಲ್ಲ” ಎಂದು ನಕ್ಕು ಬಿಟ್ಟಳು ಜೂಲಿಯಾ.
ಆದರೆ ಅನ್ನಾ ತಾನಿತ್ತ ಭಾಷೆ ಉಳಿಸಿಕೊಳ್ಳಲು ನಿರ್ಧರಿಸಿದಳು. ಪ್ರತಿದಿನವೂ ಒಂದು ಸಿಹಿಲಾಡನ್ನು ಒಯ್ದು ಕೆರೆಯಲ್ಲಿರುವ ಮೀನಿಗೆ ಕೊಡುತ್ತಿದ್ದಳು. ಅದೊಂದು ದಿನ ಸಿಹಿಲಾಡನ್ನು ಅರಮನೆಯಲ್ಲಿ ಮಾಡಲೇ ಇಲ್ಲ. ಯಾಕೆಂದರೆ ಅವತ್ತು ಜೂಲಿಯಾ ಭೋಜನಕ್ಕಾಗಿ ಎಲ್ಲಿಗೋ ಹೋಗಿದ್ದಳು. ಅನ್ನಾ ಅಡುಗೆ ಕೋಣೆಗೆ ಹೋಗಿ ಸಿಹಿಲಾಡು ಎಲ್ಲಾದರೂ ಇದೆಯೋ ಎಂದು ಹುಡುಕಾಡಿದಳು. ಆಗ ಅಡುಗೆಯಾತ ಅವಳನ್ನು ನೋಡಿದ.
ಅವನು ಮಹಾರಾಜನ ಹತ್ತಿರ ಅನ್ನಾಳನ್ನು ಎಳೆದೊಯ್ದು ದೂರು ಕೊಟ್ಟ - ಅನ್ನಾ ಏನನ್ನೋ ಕದಿಯಲು ಬಂದಿದ್ದಳೆಂದು. ಮಹಾರಾಜ ಅವಳನ್ನು ಕೆಲಸದಿಂದ ಕಿತ್ತು ಹಾಕಿದ. ಅನ್ನಾ ಕೆರೆಯ ಹತ್ತಿರ ಹೋಗಿ, ಮೀನಿಗೆ ಹೇಳಿದಳು, “ನನ್ನನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಹಾಗಾಗಿ ನಾನಿತ್ತ ಭಾಷೆಯನ್ನು ಇನ್ನು ಉಳಿಸಿಕೊಳ್ಳಲಾಗದು.” ಮೀನು ನೀರಿನಿಂದ ಮೇಲಕ್ಕೆ ತಲೆಯೆತ್ತಿ ಹೇಳಿತು, “ರಾಜಕುಮಾರಿಯ ಉದ್ಯಾನದಿಂದ ನನಗೊಂದು ಕೆಂಪು ಗುಲಾಬಿ ತಂದು ಕೊಟ್ಟರೆ ನೀನಿತ್ತ ಭಾಷೆಯಿಂದ ನಿನ್ನನ್ನು ಬಿಡುಗಡೆ ಮಾಡ್ತೇನೆ.”
"ಈಗಲೇ ಕೆಂಪು ಗುಲಾಬಿ ತಂದು ಕೊಡ್ತೇನೆ” ಎನ್ನುತ್ತಾ ಅನ್ನಾ ಉದ್ಯಾನಕ್ಕೆ ಓಡಿದಳು. ಅಲ್ಲಿ ಗುಲಾಬಿ ಗಿಡದಲ್ಲಿ ಒಂದೇ ಒಂದು ಗುಲಾಬಿ ಹೂವಿತ್ತು. ಅದರ ಪಕ್ಕದಲ್ಲೇ ಜೂಲಿಯಾ ಬೆಂಚಿನಲ್ಲಿ ಕುಳಿತಿದ್ದಳು. ಅವಳ ಪಕ್ಕದಲ್ಲೇ ಕೆಂಪು ಮಾಣಿಕ್ಯದ ಉಂಗುರವನ್ನು ಬೆಂಚಿನಲ್ಲಿ ಇಟ್ಟಿದ್ದಳು. ಸ್ವಾರ್ಥಿ ರಾಜಕುಮಾರಿ ಕೆಂಪು ಗುಲಾಬಿ ಕೇಳಿದರೆ ಕೊಡೋದಿಲ್ಲವೆಂದು ಅನ್ನಾಗೆ ಗೊತ್ತಿತ್ತು. ಆದ್ದರಿಂದ ಅವಳು ಸದ್ದಾಗದಂತೆ ರಾಜಕುಮಾರಿಯ ಹಿಂಬದಿಯಿಂದ ಹೋಗಿ ಕೆಂಪು ಗುಲಾಬಿ ಮೆಲ್ಲಗೆ ಕಿತ್ತಳು. ರಾಜಕುಮಾರಿ ಒಮ್ಮೆಲೇ ಹಿಂದಕ್ಕೆ ತಿರುಗಿದಳು. ಅನ್ನಾಳನ್ನು ಕಂಡು ಅವಳಿಗೆ ಗೊಂದಲವಾಯಿತು.
ಆಗಲೇ ರಾಜಕುಮಾರಿ ತನ್ನ ಕೆಂಪು ಮಾಣಿಕ್ಯದ ಉಂಗುರ ಬೆಂಚಿನಲ್ಲಿ ಇಲ್ಲದಿರುವುದನ್ನು ಗಮನಿಸಿದಳು. “ಅನ್ನಾಳನ್ನು ಹಿಡಿಯಿರಿ. ಅವಳು ನನ್ನ ಕೆಂಪು ಉಂಗುರ ಕದ್ದಿದ್ದಾಳೆ” ಎಂದು ಕಿರುಚಿದಳು ರಾಜಕುಮಾರಿ.
ಅನ್ನಾ ಅಲ್ಲಿಂದ ಓಡಿ ಹೋಗಿ, ಕೆಂಪು ಗುಲಾಬಿಯನ್ನು ಕೆರೆಗೆ ಎಸೆದಳು. ಅಷ್ಟರಲ್ಲಿ ಕಾವಲುಗಾರರು ಧಾವಿಸಿ ಬಂದು ಅನ್ನಾಳನ್ನು ಹಿಡಿದರು. ಅವಳನ್ನು ಮಹಾರಾಜನ ಎದುರು ಒಯ್ದು ನಿಲ್ಲಿಸಿದರು. "ನನ್ನ ಮಗಳ ಉಂಗುರ ಎಲ್ಲಿದೆ?’ ಎಂದು ಅಬ್ಬರಿಸಿದ ಮಹಾರಾಜ. ಅನ್ನಾ ತನಗೇನೂ ಗೊತ್ತಿಲ್ಲ, ಕೆರೆಯ ಮೀನಿಗೆ ಕೊಡಲಿಕ್ಕಾಗಿ ತಾನು ಗುಲಾಬಿ ಹೂವನ್ನು ಮಾತ್ರ ಕಿತ್ತೆ
ಎಂದು ಪರಿಪರಿಯಾಗಿ ಹೇಳಿದಳು. “ಮೀನಿಗೆ ಯಾರಾದರೂ ಗುಲಾಬಿ ಹೂ ಕೊಡ್ತಾರೇನು?” ಎಂದು ಕೇಳಿದ ಮಹಾರಾಜ.
ಅನ್ನಾಳ ಮಾತನ್ನು ಯಾರೂ ನಂಬಲಿಲ್ಲ. ಅವಳನ್ನು ಜೈಲಿಗೆ ಹಾಕಲಾಯಿತು. ಅನ್ನಾ ಅಸಹಾಯಕಳಾಗಿ ಕಣ್ಣೀರು ಹಾಕಿದಳು. ಅಷ್ಟರಲ್ಲಿ ಜೈಲಿನ ಬಾಗಿಲಿನ ಸರಳುಗಳ ಮೂಲಕ ಪಾರಿವಾಳವೊಂದು ಹಾರಿ ಒಳಗೆ ಬಂತು. ಅದರ ಕೊಕ್ಕಿನಲ್ಲಿ ಒಂದು ಸಿಹಿಲಾಡು ಇತ್ತು. "ಕೆರೆಯ ಮೀನು ನಿನ್ನನ್ನು ಮರೆತಿಲ್ಲ. ಇದನ್ನು ತಗೋ" ಎಂದಿತು ಪಾರಿವಾಳ.
ಅನ್ನಾ ಕೆಂಪು ಮಾಣಿಕ್ಯದ ಉಂಗುರವನ್ನು ಕೆರೆಯ ಹತ್ತಿರ ಬಚ್ಚಿಟ್ಟಿದ್ದಾಳೆ ಎಂದು ರಾಜಕುಮಾರಿ ಜೂಲಿಯಾ ನಂಬಿದ್ದಳು. ಆದ್ದರಿಂದ ಅವಳು ಅಲ್ಲಿಗೆ ಹೋಗಿ ಹುಡುಕಾಡ ತೊಡಗಿದಳು. ಅಷ್ಟರಲ್ಲಿ ಅಲ್ಲೊಂದು ಪವಾಡ ನಡೆಯಿತು. ಕೆರೆಯಿಂದ ಬಿಳಿ ಕುದುರೆಯ ಮೇಲೆ ಕುಳಿತು ಸುಂದರಾಂಗ ರಾಜಕುಮಾರನೊಬ್ಬ ಎದ್ದು ಬಂದ. ಆತ ಅರಮನೆಯತ್ತ ಕುದುರೆಯನ್ನು ಮುನ್ನಡೆಸಿದ. ಜೂಲಿಯಾಳಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.
ರಾಜಕುಮಾರಿ ತಕ್ಷಣ ಅರಮನೆಗೆ ಓಡಿ ಬಂದು, ಮಹಾರಾಜನಿಗೆ ಹೇಳಿದಳು, “ಸುಂದರಾಂಗ ರಾಜಕುಮಾರನೊಬ್ಬ ಅರಮನೆಗೆ ಬರುತ್ತಿದ್ದಾನೆ. ಅವನು ಖಂಡಿತವಾಗಿ ನನ್ನನ್ನು ಮದುವೆ ಮಾಡಿ ಕೊಡಬೇಕೆಂದು ಕೇಳಲು ಬರುತ್ತಿದ್ದಾನೆ.”
ಅತ್ತ ಅರಮನೆಯ ಮಹಾದ್ವಾರಕ್ಕೆ ಬಂದ ರಾಜಕುಮಾರ ಕಾವಲುಗಾರರ ಬಳಿ ತನ್ನನ್ನು ತಕ್ಷಣವೇ ಮಹಾರಾಜನ ಬಳಿಗೆ ಕರೆದೊಯ್ಯಬೇಕೆಂದು ಹೇಳಿದ. ಅಂತೆಯೇ ಆತನನ್ನು ಅರಮನೆಯೊಳಕ್ಕೆ ಕರೆದೊಯ್ದರು.
ಅಲ್ಲಿ ಸಿಂಹಾಸನದಲ್ಲಿ ಮಹಾರಾಜ ಮತ್ತು ಆತನ ಪಕ್ಕದಲ್ಲಿ ರಾಜಕುಮಾರಿ ಜೂಲಿಯಾ ಕುಳಿತಿದ್ದರು. ರಾಜಕುಮಾರ ನೇರವಾಗಿ ಕೇಳಿದ, “ಮಹಾರಾಜಾ, ಅನ್ನಾ ಎಲ್ಲಿದ್ದಾಳೆ?” ಮಹಾರಾಜ ಉತ್ತರಿಸಿದ, "ಅವಳು ನನ್ನ ಜೈಲಿನಲ್ಲಿದ್ದಾಳೆ. ಯಾಕೆಂದರೆ ಅವಳು ಒಂದು ಬೆಲೆಬಾಳುವ ಮಾಣಿಕ್ಯದ ಉಂಗುರ ಕದ್ದಿದ್ದಾಳೆ.”
“ಮಹಾರಾಜಾ, ನೀವು ತಪ್ಪು ತಿಳಿದಿದ್ದೀರಿ. ಆ ಉಂಗುರ ರಾಜಕುಮಾರಿಯ ಉಡುಪಿನಲ್ಲೇ ಸಿಕ್ಕಿ ಹಾಕಿಕೊಂಡಿದೆ" ಎಂದು ಬೆರಳು ಮಾಡಿ ತೋರಿಸಿದ ರಾಜಕುಮಾರ. ಆಸ್ಥಾನದಲ್ಲಿದ್ದ ಎಲ್ಲರೂ ಅದನ್ನು ನೋಡಿದರು: ಮಾಣಿಕ್ಯದ ಉಂಗುರ ರಾಜಕುಮಾರಿಯ ಉಡುಪಿನ ಒಂದು ಎಳೆಗೆ ಸಿಕ್ಕಿ ಹಾಕಿಕೊಂಡಿತ್ತು; ಅವಳು ಆ ದಿನ ಫಕ್ಕನೆ ಹಿಂದಕ್ಕೆ ತಿರುಗಿ ಗುಲಾಬಿ ಗಿಡದತ್ತ ನೋಡಿದಾಗ ಬೆಂಚಿನಲ್ಲಿದ್ದ ಉಂಗುರ ಅವಳ ಉಡುಪಿನ ಎಳೆಗೆ ಸಿಲುಕಿಕೊಂಡಿತ್ತು!
“ಅನ್ನಾಳನ್ನು ತಕ್ಷಣವೇ ಬಿಡುಗಡೆ ಮಾಡಿ" ಎಂದ ರಾಜಕುಮಾರ. ತನ್ನ ತಪ್ಪು ಅರಿವಾದ ಮಹಾರಾಜ ಅನ್ನಾಳನ್ನು ಬಿಡುಗಡೆ ಮಾಡಿದ. ರಾಜಕುಮಾರ ಅನ್ನಾಳ ಜೊತೆ ಅರಮನೆಯಿಂದ ಹೊರ ನಡೆಯುತ್ತ ಹೇಳಿದ, “ಅನ್ನಾ, ಒಂದು ಶಾಪದಿಂದಾಗಿ ನಾನು ಮೀನಾಗಿದ್ದೆ. ಯಾರಾದರೂ ನನ್ನ ಮಾತನ್ನು ಪಾಲಿಸಿದಾಗ ನನಗೆ ಶಾಪ ವಿಮೋಚನೆ. ನಿನ್ನಿಂದಾಗಿ ನನ್ನ ಶಾಪ ವಿಮೋಚನೆ ಆಯಿತು. ಈಗ ನಾನು ನಿನ್ನನ್ನೇ ಮದುವೆಯಾಗುತ್ತೇನೆ.”
ಅನಂತರ ರಾಜಕುಮಾರ ಅನ್ನಾಳನ್ನು ಕುದುರೆಯ ಮೇಲೆ ಕೂರಿಸಿಕೊಂಡು ತನ್ನ ರಾಜ್ಯಕ್ಕೆ ಕರೆದೊಯ್ದು, ಅವಳನ್ನು ವಿಜೃಂಭಣೆಯಿಂದ ಮದುವೆಯಾದ. ಅನ್ನಾಳಿಗೆ ರಾಜಕುಮಾರ ಒಂದು ಚಂದದ ಕೆಂಪು ಮಾಣಿಕ್ಯದ ಉಂಗುರವನ್ನೇ ಮದುವೆಯ ಉಡುಗೊರೆಯಾಗಿ ಕೊಟ್ಟ!