ಕೆಂಪೇಗೌಡರೆ ಬನ್ನಿ ಹೀಗೆ

ಕೆಂಪೇಗೌಡರೆ ಬನ್ನಿ ಹೀಗೆ

ಜಯಪ್ರಕಾಶರ ಕೆಂಪೇಗೌಡರು (ಕೆಂಪೇಗೌಡರ ಪ್ರವಾಸ ಪ್ರಸಂಗ - 15.09.2013, ಸಂಪದ) ಬರುವ ಮೊದಲೆ ನಾರದರ ಹತ್ತಿರ ವಿವರ ಕೇಳಿ ಮುಂಜಾಗರೂಕರಾಗಿಬಿಟ್ಟರು. ಆದರೆ ಸುಮಾರು 21 ವರ್ಷಗಳ ಹಿಂದೆ ನಾರದರು 'ಸಿಕ್ ಲೀವ್' ಹಾಕಿದ್ದರಿಂದಲೊ ಏನೊ (ಅಥವ ಇಪ್ಪತ್ತು ವರ್ಷದ ಮೊದಲಿದ್ದ ಹುಮ್ಮಸ್ಸೊ ಏನೊ) - ನೇರ ಬೆಂಗಳೂರಿಗೆ ಬಂದು ತುಸು ಅಡ್ಡಾಡುವ ಮನಸು ಮಾಡಿದಾಗ ಆದ ಅನುಭವ ಈ ಪದ್ಯ - ಜೂನ್ 92 ರ ಹೊತ್ತಿನಲ್ಲಿ ಬರೆದಿದ್ದು. ಅಲ್ಲಿಂದಿಲ್ಲಿಯತನಕ ಕಾವೇರಿಯಲ್ಲಿ ಸಾಕಷ್ಟು ಹೊಸ ನೀರು ಹರಿದಿದೆ.  ಎರಡು ದಶಕಗಳ ಹಿಂದಿನ ಪರಿಸ್ಥಿತಿಯನ್ನು ಮನಸಲಿಟ್ಟುಕೊಂಡು ಓದಿದರೂ ಇಂದಿಗೂ ಸುಸಂಗತವಾಗಿರುವ ಹೋಲಿಕೆಯನ್ನು ಕಾಣಬಹುದು.  ಜಯಪ್ರಕಾಶರ ಕೆಂಪೇಗೌಡರ ಜೋಡಿ ಓದಿಕೊಳ್ಳಲು ಚೆನ್ನಾಗಿರುತ್ತದೆ ಎಂಬ ಅನಿಸಿಕೆಯೊಡನೆ ಪ್ರಕಟಿಸುತ್ತಿದ್ದೇನೆ. 

ಕೆಂಪೇಗೌಡರೆ ಬನ್ನಿ ಹೀಗೆ ......
__________________________

ಕೆಂಪೇಗೌಡರೆ 
ಬನ್ನಿ ಹೀಗೆ ;
ಸ್ವರ್ಗ ಬೋರಾಗಿ 
ವಾಕ್ ಬಂದಿರಾ ?
ಹೀಗೇಕೆ 
ನಿಂತೇ ಬಿಟ್ಟಿರಿ ?
ತಬ್ಬಿಬ್ಬಾಗಬೇಡಿ 
ಇದು 
ಬೆಂದಕಾಳೂರೆ ..

ಹಾಂ..
ಸಾಲು ಮರಗಳೆಂದಿರ ?
ಸೊಂಪಾಗಿ ಬೆಳೆಯಲೆಂದು 
ಕಾಡಿಗಟ್ಟಿದ್ದೇವೆ..
ನೀವಿಟ್ಟ
ಗಡಿ ಮೀರಿ 
ಬೆಳೆದ ಮೇಲೆ 
ಬೇಕೇ ಬೇಕಲ್ಲ 
ತಲೆಗೊಂದು ಸೂರು ?
ಒಹ್! 
ಗೌಡರೆ, ಜೋಪಾನ ;
ಇದು ಬಿಟಿಎಸ್ ಬಸ್ಸು .
ಹಾಗೆಲ್ಲ ನುಗ್ಗೀರಿ 
ತೋಳು ಮುರಿದೀತು ..
ಕೆಮ್ಮು ಬಂತೆ ?
ಬಿಡಿ, ಬೀಡಿ
ಅಭ್ಯಾಸವಾದೀತು :-)

ಆಹಾ..
ಅದನೇಕೆ ನೋಡೀರಿ ಹಾಗೆ 
ತೆರೆದ ಬಾಯಲ್ಲಿ ?
ಏನೆಂದಿರ 
ಬಣ್ಣದ ದೀಪಗಳು ?
ಅದಕೆನ್ನುತಾರೆ 
ಬಾರು - ರೆಸ್ಟೋರೆಂಟು ;
ಇಲ್ಲೂ
ಆಸ್ಥಾನ ನರ್ತಕಿಯರಿದ್ದಾರೆ
ನೋಡುವಿರಾ ಒಳಗೆ,
ಬಿಸಿ ಬಿಸಿ ರೋಮ್ಯಾನ್ಸ್ 
ಫ್ಲೋರ ಡಾನ್ಸ್ 
ಅರೆ ಬೆತ್ತಲೆ ನೀರೆ 
ಜತೆಗೆ ಕುಡಿಯುವುದಿದ್ದರೆ 
ಮದಿರೆ  
ಒಂದು ಮಗ್ ಬೀರೆ !

ಅರೆ...
ಹಸಿವಾಯಿತೆ 
ಕ್ಷಮಿಸಿ ತಿಳಿಯಲಿಲ್ಲ 
ಮುದ್ದೆ ?
ಹಾಗೆಂದರೇನು ?
ಬನ್ನಿ
ಇಲ್ಲಿ ಕೂಡಿ.
ಏನು ಬೇಕು ಹೇಳಿ -
ಕಟ್ಲೆಟ್ಟು, ಆಮ್ಲೆಟ್ಟು..
ತಿನ್ನೋದಾದರೆ 
ಒಂದು ಪ್ಲೇಟು 
ಚಿಕನ್ ಕಬಾಬು , 
ದಬಾಬು..
ಬಾಯರಿತೆಂದಿರ?
ಚೆಲ್ಲಬೇಡಿ ದೊರೆ 
ಎರಡನೇ ಲೋಟ 
ಸಿಗುವುದಿಲ್ಲ ..
ಪದೇ ಪದೇ ಕೇಳೀರಿ
ಇದು
ಬೆಂಗಳೂರು !

ಅರೆರೆ ...
ಗೌಡರೆ 
ನಿಲ್ಲಿ 
ಎಲ್ಲಿ ಓಡುವಿರಿ ?
ಇನ್ನೂ 
ಲಾಲ್ ಭಾಗ್ ಇದೆ ,
ಕಬ್ಬನ್ ಪಾರ್ಕಿದೆ ,
ವಿಧಾನ ಸೌಧವಿದೆ
ಇಲ್ಲೇ 
ಹತ್ತಿರದಲ್ಲೇ 
ನಿಮ್ಮ ಪ್ರತಿಮೆಯು ಇದೆ !
ರಸ್ತೆಗೂ ನಿಮ್ಮ ಹೆಸರೇ ಇದೆ
ನೋಡಿ ಹೋಗುವಿರಂತೆ ..
ಹೊರಟೆ ಬಿಟ್ಟಿರಾ ?
ಸರಿ ಬಿಡಿ ನಿಮ್ಮಿಷ್ಟ 
ಮತ್ತೆ ನೋಡೋಣ, 
(ದೊಡ್ಡ) ನಮಸ್ಕಾರ.

================================================
ನಾಗೇಶ ಮೈಸೂರು
ದಿನಾಂಕ : ೨೩.ಜೂನ್.೧೯೯೨, 
ಬೆಂಗಳೂರು 
================================================
ಭೂನಾರದ ಉವಾಚ : ಈ ತಿಂಗಳು ಕೆಂಪೆಗೌಡರ ಹುಟ್ಟುಹಬ್ಬ ಇಲ್ಲಾ ತಾನೆ?  :-)
ಕಲಹ ಪ್ರಿಯ ಉವಾಚ: ಮೋದಿಯವರದಂತೂ ಇವತ್ತೆ ಎಂದು ಓದಿದೆ!

Comments

Submitted by partha1059 Wed, 09/18/2013 - 11:41

ಚೆನ್ನಾಗಿದೆ ನಾಗೇಶ್ ನೀವು ಅಂದ ಹಾಗೆ ಇಂದು ಕೆಂಪೆಗೌಡರು ಬೆಂಗಳೂರಿಗೆ ಬಂದರೆ ತಬ್ಬಿಬ್ಬು ಆಗುವುದು ಖಚಿತ! ಏಕೆಂದರೆ ಅವರು ಎನು ಕೊಂಡರು ಇನ್ನೊಂದು ಉಚಿತ ! :-)))
Submitted by nageshamysore Thu, 09/19/2013 - 13:52

In reply to by partha1059

ಪಾರ್ಥಾ ಸಾರ್, ಹಾಗಾದರೆ ಬೆಂಗಳೂರನ್ನೆ ಕೊಂಡರೆ ಇನ್ನೊಂದು ಬೆಂಗಳೂರೆ ಸಿಕ್ಕುವುದಲ್ಲಾ? ಹಾಗೇನಾದರೂ ಅದರೆ ಕನಿಷ್ಠ ಅದನ್ನಾದರೂ ನೆಟ್ಟಗೆ ಬೆಳೆಸಬಹುದೋ ಏನೊ :-)   ಧನ್ಯವಾದಗಳೊಂದಿಗೆ  ನಾಗೇಶ ಮೈಸೂರು  
Submitted by venkatb83 Wed, 09/18/2013 - 17:52

"ಲಾಲ್ ಭಾಗ್ ಇದೆ , ಕಬ್ಬನ್ ಪಾರ್ಕಿದೆ ," ಅದರ ಅವುಗಳ ದೇಖಾರೆಕಿ ನಮ್ ಗಣೇಶ್ ಅಣ್ಣ ಅವರಿಗೆ ಒಪ್ಪಿಸಿದ್ದಾರೆ ಗೌಡರು . ... . ಅಬ್ಬಾ - ನೀವ್ ಬರೆದು ಇಷ್ಟು ವರ್ಷಗಳು ಆದ ಮೇಲೆ ಇದು ಇಂದೂ ಮುಂದೂ ಪ್ರಸ್ತುತ ಆಗೋ ಬರಹ ... ನಗರೀಕರಣ -ಅದರ ಪರಿಣಾಮ ಇಡೀ ಬರಹದಲ್ಲಿ ಸಮರ್ಥವಾಗಿ ಹಿಡಿದಿಟ್ಟಿರುವಿರಿ .. ಇದು ಕೆಂಪೇಗೌಡ ಮಾತ್ರ ಅಲ್ಲ -ಇಲ್ಲಿಯೇ ಯಾವ್ದರ ಹತ್ತಿರದ ಹಳ್ಳಿಯಿಂದ ಯಾರೇ ಬಂದರೂ ಅವರೇ ತಬ್ಬಿಬ್ಬಾಗೋದು ನಿಜ ...!! ನಿಮ್ಮ ಎಲ್ಲ ಹಳೆಯ -ಅಪ್ರಕಟಿತ ಬರಹಗಳು ಈಗ ಬೆಳಕಿಗೆ ಬರಲಿ . ಶುಭವಾಗಲಿ \।
Submitted by ಗಣೇಶ Thu, 09/19/2013 - 00:05

In reply to by venkatb83

ಇದು ಕೆಂಪೇಗೌಡ ಮಾತ್ರ ಅಲ್ಲ -ಇಲ್ಲಿಯೇ ಯಾವ್ದರ ಹತ್ತಿರದ ಹಳ್ಳಿಯಿಂದ ಯಾರೇ ಬಂದರೂ ಅವರೇ ತಬ್ಬಿಬ್ಬಾಗೋದು ನಿಜ ...!! ಸಪ್ತಗಿರಿವಾಸಿ, ಇಲ್ಲೇ ೩೦ ವರ್ಷದಿಂದ ಇರುವ ನಾನೇ ಈಗಿನ ೫-೬ ವರ್ಷದ ಬೆಳವಣಿಗೆಯಿಂದ ತಬ್ಬಿಬ್ಬಾಗಿದ್ದೇನೆ. ಇದು ನನ್ನ ಬೆಂಗಳೂರಾ! ನಮ್ಮ ಕವಿನಾಗರಾಜರು ನೂರಾರು ವರ್ಷ ಬದುಕುವ ಬಗ್ಗೆ ಲೇಖನ ಬರೆದಿದ್ದಾರೆ, ಇಲ್ಲಿ ಇನ್ನು ೬೦ ವರ್ಷದವರು ರಸ್ತೆ ದಾಟಲು ಸಾಧ್ಯವೇ? ಬದುಕಲು ಸಾಧ್ಯವೇ? ಈ ದಿನ ಸಂಜೆ ೨-೩ ದನಗಳು ರಸ್ತೆಯುದ್ದಕ್ಕೂ ಓಡುತ್ತಿದ್ದುದನ್ನು ನೋಡಿದೆ. ಒಂದು ಪಕ್ಕದಲ್ಲಿ ರಸ್ತೆ ಡಿವೈಡರ್(ಹಾರಿ ದಾಟಲು ಸಾಧ್ಯವಿಲ್ಲ)ರಸ್ತೆ ಪಕ್ಕಕ್ಕೆ ಹೋಗಲು ವೇಗದಿಂದ ಹೋಗುತ್ತಿರುವ ವಾಹನಗಳು ಬಿಡುತ್ತಿಲ್ಲ..:( ಜನರಿಗೂ ಸಹ- ರಸ್ತೆ ಡಿವೈಡರ್‌ನಿಂದಾಗಿ ಇನ್ನು ಮುಂದೆ, ರಸ್ತೆಯ ಈ ಬದಿಯಿಂದ ಎದುರುಬದಿಗೆ ಹೋಗಬೇಕಾದರೆ ಎರಡು ಬಸ್ ಹಿಡಿಯ ಬೇಕಾಗಬಹುದು.:) ನಾಗೇಶರೆ, ಕವನ ಚೆನ್ನಾಗಿದೆ. ಸಪ್ತಗಿರಿವಾಸಿ ಬರೆದಂತೆ ನಿಮ್ಮ ಹಳೆಯ ಅಪ್ರಕಟಿತ ಬರಹಗಳು ಈಗ ಬೆಳಕಿಗೆ ಬರಲಿ.
Submitted by nageshamysore Thu, 09/19/2013 - 13:59

In reply to by ಗಣೇಶ

ಸಪ್ತಗಿರಿಗಳೆ, ಗಣೇಶ್ ಜಿ, ಬೆಂಗಳೂರಿಗೆ ನಾನು ಬಂದ ಹೊಸದರಲ್ಲಿ ನನ್ನ ಸ್ಥಿತಿಯೂ ಸುತ್ತಲ ಹಳ್ಳಿಯವರದಕ್ಕಿಂತ ಭಿನ್ನವಾಗೇನೂ ಇರಲಿಲ್ಲ ಅಂದುಕೊಳ್ಳಿ! ಹಳೆಯ ಸಂಗ್ರಹ ತೀರಾ ಹೆಚ್ಚೇನೂ ಇಲ್ಲ - ಆಗ ಈಗಿನ ಸ್ಪೀಡ್ ಇರಲಿಲ್ಲ :-) ಒಂದಿಪ್ಪತ್ತು, ಇಪ್ಪತ್ತೈದಿರಬಹುದೋ ಏನೊ - ಒಂದೊಂದಾಗಿ ಪ್ರಕಟಿಸುತ್ತೇನೆ.   ಧನ್ಯವಾದಗಳೊಂದಿಗೆ ನಾಗೇಶ ಮೈಸೂರು