ಕೆಂಬೂತದ ವಿಶೇಷತೆ ಗೊತ್ತೇ?

ಕೆಂಬೂತದ ವಿಶೇಷತೆ ಗೊತ್ತೇ?

ಇದು ದಕ್ಷಿಣ ಭಾರತದ ಎಲ್ಲಾ ಕಡೆ ಸಾಮಾನ್ಯವಾಗಿ ಕಾಣಲು ಸಿಗುವ ಹಕ್ಕಿ. ನೀವೂ ಖಂಡಿತ ಈ ಹಕ್ಕಿಯನ್ನು ನೋಡಿಯೇ ಇರ್ತೀರ. ಇದರ ಕೆಂಪಾದ ದೊಡ್ಡ ಕಣ್ಣುಗಳ ಕಾರಣದಿಂದ ಇವಕ್ಕೆ ಕೆಂಬೂತ ಅಂತ ಹೆಸರು ಬಂದಿರಬೇಕು. ಕಾಗೆ ಗಾತ್ರದ ಈ ಹಕ್ಕಿಯ ಕೆಂಪು ಕಣ್ಣು , ಕಪ್ಪು ದೇಹ, ತಾಮ್ರ ಬಣ್ಣ ( Rufus colour )ದ ರೆಕ್ಕೆ ಅಗಲವಾದ ಬಾಲ ಮುಂದೆ ಮತ್ತು ಹಿಂದೆ ಎರಡೆರಡು ಬೆರಳುಗಳು ಇರುವ ಕಾಲುಗಳು ಇದರ ಪ್ರಮುಖ ಲಕ್ಷಣ. ನೆಲದ ಮೇಲೆ ನಡೆದಾಡುತ್ತಾ, ಮರದ ಮೇಲೆ ಬೇಲಿಮೇಲೆ ಕುಪ್ಪಳಿಸುತ್ತಾ, ಓಡಾಡುವ ಈ ಹಕ್ಕಿಯನ್ನು ಬಹಳಷ್ಟುಕಡೆ ನೀವು ನೋಡಿರ್ತೀರಿ. ಇಲ್ಲೆಲ್ಲಾ ಯಾಕೆ ಓಡಾಡ್ತದೆ ಅಂತ ಗೊತ್ತಾ? 

ಈ ಹಕ್ಕಿಯ ಮುಖ್ಯ ಆಹಾರ ಹುಳ, ಹುಪ್ಪಟೆ, ಕೀಟಗಳು,ಚೇಳು,ಹಲ್ಲಿ, ಬೇರೆ ಚಿಕ್ಕ ಹಕ್ಕಿಗಳ ಮೊಟ್ಟೆ ಮಾತ್ರವಲ್ಲ ಸಣ್ಣ ಪುಟ್ಟ ಹಾವುಗಳನ್ನೂ ಕೂಡ ಹಿಡಿದು ತಿನ್ತದೆ. ಹಾಗಾಗಿಯೇ ನನ್ನ ಅಜ್ಜಿ ಹೇಳುವುದನ್ನು ಕೇಳಿದ್ದೇನೆ ಏನಂದ್ರೆ ಈ ಹಕ್ಕಿ ಇದ್ರೆ ವಿಷಜಂತುಗಳು ಕಡಿಮೆಯಾಗ್ತವೆ ಅಂತ. ಕೆಲವು ವಿಷಪೂರಿತ ಹಣ್ಣುಗಳನ್ನೂ ತಿಂದು ಜೀರ್ಣಿಸಿಕೊಳ್ಳುವ ತಾಕತ್ತು ಇವುಗಳಿಗೆ ಇದೆಯಂತೆ. 

ಬೆಳಗ್ಗಿನ ಹೊತ್ತು ಎಲ್ಲಾದರೂ ಎತ್ತರದ ಸ್ಥಳದಲ್ಲಿ ಕೂತು, ರೆಕ್ಕೆ ಬಿಡಿಸಿ ಕೊಂಡು ಸೂರ್ಯನ ಬೆಳಕಿನಲ್ಲಿ ಮೈಬೆಚ್ಚಗೆ ಮಾಡಿಕೊಳ್ಳುವುದನ್ನು ಎಂದಾದರೂ ನೋಡಿದ್ದೀರಾ. ಪ್ರತಿದಿನ ಗಮನಿಸ್ತಾ ಇರಿ ನಿಮಗೂ ನೋಡ್ಲಿಕ್ಕೆ ಸಿಗಬಹುದು. ಬೆಳಗ್ಗೆ ಮತ್ತು ಸಂಜೆ ಯಾವುದಾದರೂ ಎತ್ತರದ ಮರಹತ್ತಿ ಹೊಟ್ಟೆತುಂಬಾ ಗಾಳಿತುಂಬಿಕೊಂಡು ಹೂಬ್ ಹೂಬ್ ಹೂಬ್ ಹೂಬ್ ಅಂತ ಕೂಗ್ತವೆ.. ಕೆಲವೊಮ್ಮೆ ಸ್ಕೀ...ವ್ ಅಂತ ಕರ್ಕಷವಾಗಿಯೂ ಕೂಗ್ತವೆ..

ಜೂನ್ ನಿಂದ ಸಪ್ಟೆಂಬರ್ ತಿಂಗಳ ನಡುವೆ ಇವುಗಳ ಸಂತಾನಾಭಿವೃದ್ಧಿ ಕಾಲ. ಎತ್ತರದ ಪೊದೆಗಳ ನಡುವೆ ಯಾರಿಗೂ ಕಾಣಿಸದಂತೆ ಗೂಡುಮಾಡುತ್ತವೆ. ಮಳೆಗಾಲ ಮತ್ತು ಆನಂತರ ಹುಳಹುಪ್ಪಟೆಗಳು ಯಥೇಚ್ಛವಾಗಿ ಸಿಗುವುದರಿಂದ ಮಳೆಗಾಲದಲ್ಲಿ ಮರಿಗಳಿಗೆ ಆಹಾರ ದೊರಕಿಸಿಕೊಳ್ಳುವುದು ಸುಲಭ. ನಿಮ್ಮ  ಮನೆಯ ಗಾರ್ಡನ್ ನಲ್ಲಿ ಯಾವುದಾದರೂ ಗಿಡಕ್ಕೆ ತುಂಬಾ ಕಂಬಳಿಹುಳು ಹತ್ತಿಕೊಂಡಿದ್ದರೆ ಇವು ಅಲ್ಲಿ ಖಂಡಿತಾ ಹಾಜರಾಗುತ್ತವೆ. ಒಂದು ದಿನ ಸಂಜೆ ನಮ್ಮ ಮನೆ ಮುಂದಿನ ನಂದಿ ಬಟ್ಟಲು ಹೂವಿನ ಗಿಡದಲ್ಲಿ ಬಂದಿದ್ದ ಕಂಬಳಿ ಹುಳ ತಿನ್ಲಿಕ್ಕೆ ಇವು ಹಾಜರಾಗಿದ್ದವು. ಒಂದೊಂದನ್ನೇ ಹಿಡಿದು ತಿನ್ನಲು ಶುರು ಮಾಡಿದವು. ನಾನು ಲೆಕ್ಕ ಮಾಡುತ್ತಾ ಕೂತೆ. ಬರೋಬ್ಬರಿ 40 ಕಂಬಳಿಹುಳಗಳನ್ನು ಎರಡು ಹಕ್ಕಿಗಳು ಸೇರಿ ಅರ್ಧಗಂಟೆಯಲ್ಲಿ ಹಿಡಿದು ತಿಂದು ಮುಗಿಸಿದ್ದವು.  ಆಗ ಅನಿಸಿತ್ತು ಕೀಟನಿಯಂತ್ರಣಕ್ಕೆ ಔಷಧಿ ಸಿಂಪಡಿಸುವ ಬದಲು ಇಂತಹಾ ಹಕ್ಕಿಗಳು ಇದ್ದರೆ ಸಾಕಲ್ಲಾ. ಆದರೆ ಅವುಗಳು ಬದುಕಲು ತಮ್ಮ ಸಂತಾನ ಬೆಳೆಸಲು ಒಂದಿಷ್ಟು ಕಾಡು ಬೇಕು. ಅವೂ ನಮ್ಮಂತೆಯೇ ಜೀವಿಗಳಲ್ಲವೇ? ಸರಿ ಹಾಗಾದ್ರೆ ಹಕ್ಕಿಯನ್ನು ನೋಡಿ, ಅವುಗಳ ಜೀವನಕ್ರಮವನ್ನು ಗಮನಿಸಿ, 

ಹಕ್ಕಿಯ ಕನ್ನಡ ಹೆಸರು:    ಕೆಂಬೂತ,   ಸಾಂಬಾರ್ ಕಾಗೆ,  ರತ್ನಪಕ್ಷಿ  ( ತುಳುವಿನಲ್ಲಿ  ಕುಪುಳು ಅಂತಾರೆ)

English name : Southern Coucal  or  Crow pheasant

Scientific name :  Centropus parroti 

ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ