ಕೆ.ಎಸ್.ಟಿ.ಡಿ.ಸಿ - ಕರ್ನಾಟಕ ಪ್ರವಾಸೊದ್ಯಮ ನಿಗಮದ ಟ್ಯಾಕ್ಸಿಗಳು

ಕೆ.ಎಸ್.ಟಿ.ಡಿ.ಸಿ - ಕರ್ನಾಟಕ ಪ್ರವಾಸೊದ್ಯಮ ನಿಗಮದ ಟ್ಯಾಕ್ಸಿಗಳು

ಬರಹ

ಬೆಂಗಳೂರು ಅಂತರರಾಷ್ತ್ರೀಯ ವಿಮಾನ ನಿಲ್ದಾಣ ಪಾರಂಭವಾಗಿ ಒಂದು ವರ್ಷಕ್ಕೂ ಹುಚ್ಚು ದಿನಗಳಾದುವು. ಆಡಳಿತಾತ್ಮಕವಾಗಿ ಉದ್ಘಾಟನೆ ಆಗಲೇ ಇಲ್ಲ. ಸರ್ಕಾರ ಸಮೇತ ಎಲ್ಲರೂ ಮರೆತೇಹೋಗಿದ್ದಾರೆ. ಹಳೆಯ ವಿಮಾನ ನಿಲ್ದಾಣವನ್ನೇ ನಂಬಿ ಬದುಕುತ್ತಿದ್ದ ಜನರನ್ನೂ ಎಲ್ಲರೂ ಮರೆತಹಾಗಿದೆ. ಅಲ್ಲಿದ್ದ ಎಲ್ಲರಿಗೂ ಹೊಸ ನಿಲ್ದಾಣದವರು ತಮ್ಮಲ್ಲಿ ಕೆಲಸ ಒದಗಿಸಲಿಲ್ಲ. ಎಲ್ಲದಕ್ಕೂ ಹೊರಗಿನವರೇ ಬೇಕು ಅವರಿಗೆ. ಬೆಂಗಳುರಿನವರೇ ಆದ ವಿಜಯ ಮಲ್ಯ ಅವರ ಕಿಂಗ್‍ಫಿಶರ್ ಏರ್-ಲೈನ್ಸ್ ನಲ್ಲೂ ಎಲ್ಲರೂ ಹೊರಗಿನವರೇ. ಹೊಸ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಉದ್ಯೊಗಾಸಕ್ತರಿಗೆ ಏನೂ ಪ್ರಯೋಜನವಾಗಿಲ್ಲ.

ಅಲ್ಲಾರೀ ಟ್ಯಾಕ್ಸಿ ಓಡಿಸಲೂ ಹೊರಗಿನವರೇ ಬೇಕೇ? ಬೆಂಗಳೂರಿನಲ್ಲಿ ಟ್ಯಾಕ್ಸಿ ಮಾಲಿಕರೇ ಇಲ್ಲವೇ? ಹಳೆಯವಿಮಾನ ನಿಲ್ದಾಣದಲ್ಲಿ ಕೆ.ಎಸ್.ಟಿ.ಡಿ.ಸಿ.ನವರು ಟ್ಯಾಕ್ಸಿ ನಡೆಸುತ್ತಿದ್ದರು. ಹತ್ತು ವಷಕ್ಕೂ ಹೆಚ್ಚು ದಿನಗಳಕಾಲ ಟ್ಯಾಕ್ಸಿ ನಡೆಸುತ್ತಿದ್ದ ಇವರಿಗೂ ಹೊಸ ವಿಮಾನ ನಿಲ್ದಾಣದಲ್ಲಿ ಅನುಮತಿ ಸಿಗಲಿಲ್ಲ. ಇಂಥ ಅನುಭವ ಅದೇನುಬೇಕಿತ್ತು ಒಂದು ಟ್ಯಾಕ್ಸಿ ಓಡಿಸಲು? ನನಗಂತೂ ಅರ್ಥ ಆಗೋದಿಲ್ಲ. ಇದಕ್ಕೆ ಹೊಸ ವಿಮಾನ ನಿಲ್ದಾಣ ಪ್ರಾರಂಭವಾಗುವ ಸಮಯದಲ್ಲಿ ಅಧಿಕಾರದಲ್ಲಿದ್ದ ಸರಕಾರ ಹಾಗೂ ಕೆ.ಎಸ್.ಟಿ.ಡಿ.ಸಿ.ಯನ್ನು ನಿಭಾಯಿಸುತ್ತಿದ್ದ ಅಧಿಕಾರ ವರ್ಗದವರು ಸೇರಿ ಸರ್ಕಾರಕ್ಕೇ ಮೋಸ ಮಾಡಿಬಿಟ್ಟರಲೇ ಬೇಕು. ಅವರ ಕೈ ಇದರಲ್ಲಿರದಿದ್ದರೆ ಈ ತರಹ ಆಗುತ್ತಲೇ ಇರಲಿಲ್ಲ. ಕೆ.ಎಸ್.ಟಿ.ಡಿ.ಸಿ.ಯವರನ್ನೇ ನಂಬಿಕೊಂಡಿದ್ದ ಮೂರುನೂರಕ್ಕೂ ಹೆಚ್ಚು ಜನ ವಾಹನ ಚಾಲಕರು ಬೀದಿಗೆ ಬಂದರು. ಕೆಲವರು ಈ ಆಸೆ ಬಿಟ್ಟು ಮೇರುನೋ ಅಥವಾ ಈಸಿ ಯವರನ್ನೋ ಸೇರಿಕೊಂಡರು. ಬೇರೆಯವರನ್ನು ಸೇರಿಕೊಳ್ಳದೇ ಇದರ ವಿರುಧ್ಧ ಸೆಟೆದು ನಿಂತವರ ಪರಿಸ್ಥಿತಿ ಕೇಳುವುದು ಬೇಡ. ಗಾಂಧೀವಾದಿ ದೊರೆಸ್ವಾಮಿಯವರು, ಕನ್ನಡ ಹೋರಾಟಗಾರರು ಹಾಗು ಸಂಘ ಸಂಸ್ಥೆಗಳು ದಿಲ್ಲಿಯ ವರೆಗೆ ಹೋಗಿ ಇವರ ಪರವಾಗಿ ನಿಂತು ಹೋರಾಟ ಮಾಡಿ ಹಾಗೂ ಹೀಗೂ ಕೆ.ಎಸ್.ಟಿ.ಡಿ.ಸಿ.ಯವರ ಪರವಾಗಿ ಅನುಮತಿ ತಂದೇ ಬಿಟ್ಟರು. ನನಗೆ ತಿಳಿದ ಮಟ್ಟಿಗೆ ಇದರಲ್ಲಿ ಕೆ.ಎಸ್.ಟಿ.ಡಿ.ಸಿ.ಯವರ ಅಧಿಕಾರಿಗಳು ಏನೂ ಸಹಾಯ ಮಾಡಲಿಲ್ಲ. ನಾಗರಿಕ ವಿಮಾನಯಾನ ಇಲಾಖೆಯವರು ಹೋರಾಟ ಮಾಡಲು ಹೋದವರಿಗೆ ಹೇಳಿದ್ದೇನೆಂದರೆ, ಕೆ.ಎಸ್.ಟಿ.ಡಿ.ಸಿ.ಯವರು ಮೊದಲಿನಿಂದಲೇ ಟ್ಯಾಕ್ಸಿ ಓಡಿಸುತ್ತಿದ್ದರೆ ತಮಗೇನೂ ಅಭ್ಯಂತರವಿರಲಿಲ್ಲ, ಮೊದಲೇ ಅಂದರೆ ವಿಮಾನ ನಿಲ್ದಾಣ ಪ್ರಾರಂಭವಾಗುವಾಗಲೇ ಬಂದಿದ್ದರೆ ಅನುಮತಿ ಸಿಕ್ಕೇಸಿಗುತ್ತಿತ್ತು. ಇದರ ಅರ್ಥ ಆವಾಗ ಅಧಿಕಾರದಲ್ಲಿದ್ದವರ ’ಕೃಪಾಕಟಾಕ್ಷ’ದಿಂದ ನಮ್ಮವರ ಹೊಟ್ಟೆ ಮೇಲೆ ಬರೆ ಬಿತ್ತು.

ಅನುಮತಿ ಬಂದಮೇಲೆಯಾದರೂ ಇದನ್ನು ತಮ್ಮದೇ ಎಂದು ಭಾವಿಸಿ ಕೆಲಸ ಮಾಡಿ ಹೋರಾಟ ಮಾಡಿದ ಚಾಲಕರಿಗೆ ಅನುಕೂಲವಾಗುವ ತರಹ ನಿಯಮಗಳನ್ನು ರೂಪಿಸಿ ಟ್ಯಾಕ್ಸಿ ಗಳನ್ನು ಓಡಿಸಬಹುದಿತ್ತು. ಇವತ್ತಿನವರೆಗೂ ಅವರು ಇಂಥದ್ದೇನೂ ಮಾಡಿಲ್ಲ. ಅವರಿಗೆ ತೊಂದರೆ ಆಗುವಂಥ ಕೆಲಸವನ್ನೇ ಮಾಡುತ್ತಿದ್ದಾರೆ. ಚಾಲಕರಿಗೆ ಬಾಡಿಗೆ ವಿಜಯನಗರದವರೆಗೂ ಸಿಕ್ಕರೂ ಆಯಿತು ಯಲಹಂಕದವರೆಗೂ ಸಿಕ್ಕರೂ ಆಯಿತು ವಿಮಾನ ನಿಲ್ದಾಣಕ್ಕೆ ಒಮ್ಮೆ ಹೋದರೆ ೧೫೦ ರೂಪಾಯಿಗಳನ್ನು ಕೊಡಬೇಕು. ಒಂದು ಕಾಲ್‍ಸೆಂಟ‍ ರ್ ಪ್ರಾರಂಭಿಸಲೂ ಕೆ.ಎಸ್.ಟಿ.ಡಿ.ಸಿ.ಯವರು ಏನೂ ಮಾಡಿಲ್ಲ ಚಾಲಕರೇ ಸೇರಿ ಪ್ರಾಂಭಿಸಿದ್ದಾರೆ. ಜಾಗತಿಕ ಆರ್ಥಿಕ ಸಂಕಷ್ಟದ ಈ ದಿನಗಳಲ್ಲಿ ಈ ಚಾಲಕರು ಇನ್ನಷ್ಟು ಕಷ್ಟದಲ್ಲಿದ್ದಾರೆ. ವಾಹನಗಳನ್ನ ಸಾಲಮಾಡಿ ಖರೀದಿಸಿದ್ದಾರೆ. ತಿಂಗಳಿಗೆ ೧೦೦೦೦- ೧೫೦೦೦ ರೂಪಾಯಿಗಳ ವರೆಗೆ ಸಾಲಕೊಟ್ಟವರಿಗೆ ಕೊಡಬೇಕು. ಅದರ ಮೇಲೆ ಕೆ.ಎಸ್.ಟಿ.ಡಿ.ಸಿ.ನವರ ಕಡೆಯಿಂದ ಸ್ವಲ್ಪವೂ ಸಹಾಯವಿಲ್ಲ.

ಪತ್ರಿಕೆಗಳಲ್ಲಿ ಹಾಗೂ ಅಂತರ್ ಜಾಲದಲ್ಲಿ ಇದರ ಬಗ್ಗೆ ಸಾಕಷ್ಟು ಪ್ರಚಾರ ಕೊಡಬೇಕಿತ್ತು. ಬೆಂಗಳೂರಿನಲ್ಲಿ ಎಷ್ಟೋ ಜನರಿಗೆ ಕೆ.ಎಸ್.ಟಿ.ಡಿ.ಸಿ. ಟ್ಯಾಕ್ಸಿ ಬಗ್ಗೆ ಗೊತ್ತೇ ಇಲ್ಲ. ಹೊರ ಊರಿನಿಂದ ಬರುವವರಿಗೆ ಇದರಬಗ್ಗೆ ಗೊತ್ತೇ ಇರುವುದಿಲ್ಲ. ಹಾಗಾಗಿ ಅವರೆಲ್ಲಾ ಮೇರು ಹಾಗೂ ಈಸಿ ವಾಹನಗಳನ್ನೇ ಬಳಸುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಅಂದರೆ ನಮ್ಮವರೂ ಸೇರಿ ನಮ್ಮವರ ಹೊಟ್ಟೆಯ ಮೇಲೆ ದೊಡ್ಡದಾದ ಬರೆ ಎಳೆದಿದ್ದಾರೆ ಮತ್ತು ಬರೆ ಮೇಲೆ ಬರೆ ಎಳೆಯುವುದನ್ನು ಮುಂದೆವರೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರಕಾರದ ಹಾಗೆಯೇ ಕೆ.ಎಸ್.ಟಿ.ಡಿ.ಸಿ.ಯವರ ಸಹಾಯವಿಲ್ಲದೇ ಅಭಿಮಾನದಿಂದ ಕೆ.ಎಸ್.ಟಿ.ಡಿ.ಸಿ.ಯವರ ಜೊತೆಗೇ ಉಳಿದ ಚಾಲಕರ ಗತಿ ಸುಧಾರಿಸದು. ಕೂಡಲೇ ಇದನ್ನು ಅರಿತು ಚಾಲಕರಿಗೆ ಸಹಾಯವಾಗುವಂತೆ ನಿಯಮಗಳನ್ನು ಬದಲಾಯಿಸಿ ಇವರನ್ನೇ ನಂಬಿಕೊಂಡ ಹಾಗೂ ಕನ್ನಡಿಗರಿಗೇ/ ಕರ್ನಾಟಕ್ಕೆ ಸಹಾಯವಾಗಲೆಂದು ತ್ಯಾಗ ಮಾಡಿದವರೆಲ್ಲರು ಬೀದಿಗೆ ಬರದಂತೆ ತಡೆಯುವುದೆ ಒಳ್ಳೆಯದು.

ಇದನ್ನೆಲ್ಲ ನಾನು ಕೆಲವುದಿನಗಳಿಂದ ನೋಡಿ ನೊಂದು ಬರೆಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet