ಕೆ.ಜಿ.ಸೋಮಶೇಖರ ಅಪರೂಪದ ಛಾಯಾಪತ್ರಕರ್ತ..

ಕೆ.ಜಿ.ಸೋಮಶೇಖರ ಅಪರೂಪದ ಛಾಯಾಪತ್ರಕರ್ತ..

ಬರಹ

ಕನ್ನಡಕ್ಕೆ ಪ್ರಥಮ ಜ್ನಾನಪೀಠ ಗಳಿಸಿಕೊಟ್ಟ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನಕ್ಕಿದ್ದೇ ಅಪರೂಪ!
ಸದಾ ಗಂಭೀರವದನರಾಗಿಯೇ ಇರುತ್ತಿದ್ದ ಅವರು ಅಪರೂಪಕ್ಕೆ ನಕ್ಕಾಗ ಕ್ಲಿಕ್ಕಿಸಿದ ಕಪ್ಪು-ಬಿಳುಪು ಛಾಯಾಚಿತ್ರವನ್ನು ಪ್ರಕಟಿಸದ ಯಾವೊಂದು ಪತ್ರಿಕೆಯೂ ಬಹುಶ: ನಮ್ಮ ಕನ್ನಡ ನಾಡಿನಲ್ಲಿ ಇಲ್ಲ. ರಸರುಷಿ ಕುವೆಂಪು ಸಾರಿದ ‘ವಿಶ್ವಮಾನವತೆ’ ಅರ್ಥಪೂರ್ಣವಾಗಿ ದಿಗಂತದ ಎತ್ತರಕ್ಕೆ ಬಿಂಬಿಸಿದ ಭಾವಪೂರ್ಣ ಚಿತ್ರ ಬಹುಶ: ಅದೊಂದೇ!

ಇತ್ತೀಚೆಗೆ "ಈ ಚಿತ್ರ ನನ್ನದು. ನನಗೆ ಕೊಡಬೇಕಾದ ಗೌರವಧನ ಕೊಡದೇ ಸಾವಿರಾರು ಪ್ರತಿ ಮುದ್ರಿಸಿ ಕವಿಯ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಹಂಚಲಾಗಿದೆ. ಕೊನೆ ಪಕ್ಷ ಸೌಜನ್ಯಕ್ಕಾದರೂ ಛಾಯಾಚಿತ್ರದ ಬುಡದಲ್ಲಿ ಇದು ಕೆ.ಜಿ.ಸೋಮಶೇಖರ ಕ್ಲಿಕ್ಕಿಸಿದ್ದು ಎಂದು ನಮೂದಿಸಿಲ್ಲ" ಎಂದು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅಳಲೊಂದು ಪ್ರಕಟಗೊಂಡಿದ್ದನ್ನು ತಾವು ಓದಿರಬಹುದು.
"ದೀಪದ ಬುಡಕ್ಕೆ ಕತ್ತಲೆ!" ಎಂಬಂತೆ ಕನ್ನಡಿಗರ ತಾತ್ಸಾರ, ಅಭಿಮಾನಶೂನ್ಯತೆ ಎಲ್ಲವನ್ನು ಧಿಕ್ಕರಿಸಿ; ಶರಣು ಹೊಡೆದು ಪುಣೆಯಲ್ಲಿ ನೆಲೆಸಲು ಹೊರಟಿರುವ ಹೋರಾಟಜೀವಿ ಕೆ.ಜಿ.ಸೋಮಶೇಖರ ಅವರ ಕಥೆ(ನಮ್ಮ) ವ್ಯಥೆ ಇದು.

ಜೀವನಪೂರ್ತಿ ಹೆಣಗಿ ಶೃದ್ಧೆಯಿಂದ ಕನ್ನಡ ತಾಯಿಯ ತೇರೆಳೆದ, ೪೦೦ಕ್ಕೂ ಹೆಚ್ಚು ಖ್ಯಾತನಾಮ ಕವಿ, ಸಾಹಿತಿ, ಸಂಗೀತಗಾರ, ಕಲಾವಿದರ ಅನೇಕ ಭಾವ-ಭಂಗಿಯ ವೈವಿಧ್ಯಮಯ ಕಪ್ಪು-ಬಿಳುಪು ಛಾಯಾಚಿತ್ರಗಳು ಸೋಮಶೇಖರ್ ಅವರ ಭಂಡಾರದಲ್ಲಿ ಭದ್ರವಾಗಿವೆ. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪೂರ್ಣ ದಾಡಿ ಬಿಟ್ಟಾಗ ತೆಗೆಯಲಾದ ಅಪರೂಪದ ಫೋಟೊ ನಾವು ನೋಡಿಯೇ ಇಲ್ಲ. ಜೊತೆಗೆ ಹಾಸ್ಯ ಸಾಹಿತಿ ಬೀchi ಜನಿವಾರ ಹಾಕಿಸಿಕೊಂಡು ದೇವರ ಮೇಲೆ ಭಕ್ತಿ ಹುಟ್ಟಿದ್ದಾಗಿ ನಾಟಕವಾಡಿ, ಫೋಟೊ ತೆಗೆಸಿಕೊಂಡು ಬಂಧುಗಳಿಗೆ ನೆಮ್ಮದಿ ಕರುಣಿಸಲು ಹೊರಟ ನಾಸ್ತಿಕ ಮಹಾಶಯನ ‘ಪೋಜು’ ಕನ್ನಡದ ಅದ್ಭುತಗಳಲ್ಲಿ ಒಂದು! ಸೆರೆ ಹಿಡಿದ ಏಕೈಕ ವ್ಯಕ್ತಿ ಸೋಮಶೇಖರ್!

ಕ್ಷುಲ್ಲಕ ರಾಜಕೀಯ ಕಾರಣಗಳನ್ನು ಬದಿಗಿಡೋಣ. ಮರಾಠಿಯಿಂದ ಕನ್ನಡಕ್ಕೆ ಹಾಗು ಕನ್ನಡದಿಂದ ಮರಾಠಿಗೆ ಆದ ಉಪಕಾರ, ನೆರವು ಅಷ್ಟಿಷ್ಟಲ್ಲ. ಹಾಗಾಗಿ ಮಹಾರಾಷ್ಟ್ರದ ೧೨೦ಕ್ಕೂ ಹೆಚ್ಚು ಖ್ಯಾತನಾಮ ಸಂಗೀತಗಾರರು, ಸಿನೇಮಾ ತಂತ್ರಜ್ನರು, ಸಾಹಿತಿಗಳು, ಕಲಾವಿದರ ಅನೇಖ ವಿಶಿಷ್ಠ ಭಾವ-ಭಂಗಿಯ ಸುಂದರ ಛಾಯಾಚಿತ್ರಗಳನ್ನು, ಭಾಷೆಯ ಅಂದಾಭಿಮಾನ ಬದಿಗಿಟ್ಟು ಹೃದಯ ವೈಶಾಲ್ಯತೆ ಮೆರೆದು ಕ್ಲಿಕ್ಕಿಸಿದವರು ನಮ್ಮ ಕೆ.ಜಿ.ಸೋಮಶೇಖರ್. ಅಸಂಖ್ಯಾತ ಪ್ರೇಕ್ಷಣೀಯ ಸ್ಥಳಗಳು, ಅಲ್ಲಿನ ವಾಸ್ತುಶಿಲ್ಪ, ಮಂದಿರ-ಮಠ, ಮಸೀದಿ, ಚರ್ಚುಗಳು, ರಾಷ್ಟ್ರೀಯ ಸ್ಮಾರಕಗಳು, ಜಗತ್ ವಿಖ್ಯಾತ ಗುಹೆಗಳು, ಕಾಷ್ಠಶಿಲ್ಪಗಳ ಛಾಯಾಚಿತ್ರಗಳನ್ನು ಈ ಹೋರಾಟಜೀವಿ ಕ್ಲಿಕ್ಕಿಸಿದ್ದಾರೆ.

ಯಾವುದೇ ಅಪೇಕ್ಷೆ ಇಲ್ಲದೇ, ಅವಿಚ್ಚಿನ್ನವಾಗಿ ಜೀವನದ ೩೫ ವರ್ಷಗಳನ್ನು ಸವೆಸಿ, ಸ್ವಂತ ಖರ್ಚಿನಲ್ಲಿಯೇ ಈ ಚಿತ್ರಗಳನ್ನು ಕ್ಲಿಕ್ಕಿಸಿದ ಸೋಮಶೇಖರ್ ನನಗೆ ಪ್ರಾತ:ಸ್ಮರಣೀಯರಾಗಿ ನಿಲ್ಲುತ್ತಾರೆ.

ಶ್ರೀ ಕಾಮೇಶ್ವರ ವಾಲಿ ಅವರು ಬರೆದಿರುವ ನೋಬೆಲ್ ಪ್ರಶಸ್ತಿ ವಿಜೇತ ವಿಜ್ನಾನಿ ಡಾ.ಸುಬ್ರಮಣ್ಯಂ ಚಂದ್ರಶೇಖರ್ ಅವರ ಜೀವನ ಚಿತ್ರ ‘ಚಂದ್ರ’ ದ ಮುಖಪುಟದಲ್ಲಿ ಕೆ.ಜಿ.ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರ ಅಳವಡಿಸಲಾಗಿದೆ. ಚಿಕ್ಯಾಗೋ ವಿಶ್ವವಿದ್ಯಾಲಯ ಪ್ರಕಟಿಸಿರುವ ಈ ಪುಸ್ತಕದ ಇಂಗ್ಲೀಷ್ ಆವೃತ್ತಿಯ ಮೇಲೂ ಇದೇ ಛಾಯಚಿತ್ರ ಬಳಸಲಾಗಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಲಿಯಂ ಗೋಲ್ಡಿಂಗ್ ಬರೆದ ತಮ್ಮ ಆತ್ಮಕಥೆ `My Portrait' ಪುಸ್ತಕದ ಮುಖಪುಟಕ್ಕೆ ಕೆ.ಜಿ.ಎಸ್. ತೆಗೆದ ಕಪ್ಪು-ಬಿಳುಪು ಛಾಯಾಚಿತ್ರ ಅಳವಡಿಸಲಾಗಿದೆ. ಕನ್ನಡದ ಸೂರ್ಯ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ (ಡಿ.ವಿ.ಜಿ) ಬರೆದ ‘ವೈದಿಕ ಸಂಪ್ರದಾಯಸ್ಥರು’ ಕೃತಿಯಲ್ಲಿ ಸೋಮಶೇಖರ್ ಮುಳಬಾಗಿಲಿಗೆ ಹೋಗಿ ತೆಗೆದ ಹಲವಾರು ಛಾಯಾಚಿತ್ರಗಳನ್ನು ಡಿ.ವಿ.ಜಿ. ಖುಷಿಯಿಂದ ತಮ್ಮ ಕೃತಿಯಲ್ಲಿ ಬಳಸಿಕೊಂಡಿದ್ದಾರೆ. ಕನ್ನಡದ ಅಪ್ರತಿಮ ಹಾಗು ವಸ್ತುನಿಷ್ಠ ‘ಭಯಾಗ್ರಫಿ’ ಬೀಚಿ ಬರೆದುಕೊಂಡಿರುವ ಆವೃತ್ತಿಗೆ ಮುಖಪುಟದಲ್ಲಿ ರಾಯಸಂ ಭೀಮಸೇನಾಚಾರ್ಯರು ಇಂದಿಗೂ ಮಿಂಚುತ್ತಿರುವುದು ಕೆ.ಜಿ.ಎಸ್. ಕ್ಯಾಮರಾ ಪ್ರೌಢಿಮೆಗೆ ಹಿಡಿದ ಕನ್ನಡಿ.

ಈಗ ನಮ್ಮವರ ಕಥೆ ಕೇಳಿ:
ನಮ್ಮವರೇ ಆದ ರಾಷ್ಟ್ರಕವಿ ಕುವೆಂಪು ಸ್ಮಾರಕ ಶತಮಾನೋತ್ಸವ ಟ್ರಸ್ಟ್ ನವರು ಕಳೆದ ೨೦೦೩ ಡಿಸೆಂಬರ್ ೨೯ರ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಕುವೆಂಪು ನಕ್ಕಿರುವ ಛಾಯಾಚಿತ್ರದ ೧೫೦೦ ಪ್ರತಿಗಳನ್ನು ಯಾವ ಪರವಾನಿಗೆಯನ್ನು ಕೇಳದೇ, ಹಣದ ಮುಖಸಹ ತೋರಿಸದೇ ಮಾರಾಟ ಮಾಡಿದ್ದಾರೆ! ಸೋಮಶೇಖರ್ ಅವರು ಸೊಲ್ಲೆತ್ತಿದ ಮೇಲೆ ತುಸು ಕಣ್ಣುತೆರೆದಿದ್ದಾರೆ.

ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದ ‘ಮಲ್ಲಿಗೆಯ ಮಾಲೆ’ ಕವನ ಸಂಕಲನದ ಮುಖಪುಟದಲ್ಲಿ ಮೈಸೂರು ಮಲ್ಲಿಗೆಯ ‘ಪ್ರಶಾಂತವದನ’ನನ್ನು ಮುದ್ರಿಸಲಾಗಿದೆ. ಆದರೆ ಕೆ.ಜಿ.ಸೋಮಶೇಖರ್ ತೆಗೆದ ಚಿತ್ರವಿದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ತುಮಕೂರಿನ ಚಿಕ್ಕನಾಯಕನ ಹಳ್ಳಿಯ ಶೃಂಗಾರ ಪ್ರಕಾಶನದವರು ಎಂ.ವಿ.ನಾಗರಾಜರಾವ್ ಎಂಬುವವರ ಸಂಗ್ರಹದಿಂದ ಕೆ.ಜಿ.ಸೋಮಶೇಖರ್ ಅವರು ಕ್ಲಿಕ್ಕಿಸಿದ ಡಿ.ವಿ.ಜಿ, ಜೆ.ಪಿ.ರಾಜರತ್ನಂ ಹಾಗು ಬೀಚಿ ಮೊದಲಾದವರನ್ನು ಒಳಗೊಂಡ ಖ್ಯಾತನಾಮ ಸಾಹಿತಿಗಳ ಛಾಯಾಚಿತ್ರಗಳನ್ನು ಪರವಾನಿಗೆ ಪಡೆಯದೆಯೇ ಮುದ್ರಿಸಿ ‘ಸೆಟ್’ ರೂಪದಲ್ಲಿ ಮಾರಾಟಕ್ಕಿಟ್ಟಿದ್ದಾರೆ! ೧೯೭೦ರ ದಶಕದಿಂದಲೇ ಈ ರೀತಿಯಾಗಿ ನೂರಾರು ಪ್ರಕಾಶನದವರು ಯಾವುದೋ ಕಾರಣಗಳಿಗೆ ಸೋಮಶೇಖರ್ ಅವರಿಂದ ಛಾಯಾಚಿತ್ರಗಳನ್ನು ಪಡೆದುಕೊಂಡು, ನಂತರದ ದಿನಗಳಲ್ಲಿ ಪರವಾನಿಗೆ ಪಡೆಯದೇ, ಸಂಭಾವನೆ ನೀಡದೇ, ಕೊನೆಯ ಪಕ್ಷ ಅವರ ಹೆಸರನ್ನೂ ದಾಖಲಿಸುವ, ನಮೂದಿಸುವ ಗೋಜಿಗೆ ಹೋಗದೇ ಸಾವಿರಾರು ರೂಪಾಯಿ ದಿಡ್ಡು ಮಾಡಿಕೊಂಡಿದ್ದಾರೆ!

ಮಾಮಿಯಾ ಸಿ-೩೩ ಕ್ಯಾಮೆರಾ ಸಹಾಯದಿಂದ ೧೯೭೦ರಲ್ಲಿ ವೃತ್ತಿ ಜೀವನ ಆರಂಭಿಸಿದ ಕೆ.ಜಿ.ಎಸ್., ೧೯೭೪ರಿಂದ ಇತ್ತೀಚೆಗೆ ಮಿನೋಲ್ಟಾ ಕ್ಯಾಮೆರಾ ಬಳಸಿ ನಮ್ಮ ನಾಡಿನ ಸಾಂಸ್ಕೃತಿಕ ಹಿರಿಯರನ್ನು ದಾಖಲಿಸುತ್ತ ಬಂದಿದ್ದಾರೆ. ಹೀಗೆಯೇ ಪಟ್ಟಿ ಮಾಡಿದರೆ ದೇಶದ ಉದ್ದಗಲಕ್ಕೆ ಛಲದಿಂದ ಹಗಲು-ರಾತ್ರಿ, ಊಟ-ನಿದ್ರೆ, ಮನೆ-ಮಠ, ಮಡದಿ-ಮಕ್ಕಳು ಎಲ್ಲವನ್ನು ಅವುಗಳ ಪಾಡಿಗೆ ಬಿಟ್ಟು, ಕಷ್ಟ ಕೋಟಲೆಗಳಲ್ಲಿ ಬೆಂದು, ಆಶ್ರಿತರನ್ನು ಪೀಕಲಾಟಕ್ಕೆ ಈಡು ಮಾಡಿದ ಈ ತಾಕಲಾಟದ ‘ಪ್ರಾಯೋಗಿಕ ಕನ್ನಡಿಗ’ ನಮಗೆಲ್ಲ ಹಿತ್ತಿಲ ಗಿಡವಾಗಿ ಮದ್ದು ಎನಿಸದೇ ಹೋದದ್ದು ಮಾತ್ರ ವಿಪರ್ಯಾಸ.

ಅವರ ಆತ್ಮೀಯ ಮಿತ್ರ ಚೈತನ್ಯ ಪಟೇಲ್ ಅವರ ಒತ್ತಾಯದ ಮೇರೆಗೆ, ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ನಿರ್ಮಿಸಿದ ಜಿ.ವೆಂಕಟಾಚಲಂ (೧೯೫೮) ತೋರಿಸಿದ ಗಂಧದ ಫಲಕಗಳ ಮೇಲೆ ಮೆನಿಯೇಚರ್ ಪೇಂಟಿಂಗ್ (೧೯೬೦-೭೦ ಮುಂಬೈ) ಎ.ಪಿ.ದುಬೆ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಕೆಲಸದ ನಂತರ ಪೋರ್ಟೇಟ್ ಫೋಟೊಗ್ರಫಿ ಆಯ್ದುಕೊಳ್ಳುವಂತೆ ಅವರ ಮಾರ್ಗದರ್ಶನ ಹಾಗು ದೂರದ ಬಂಧು, ಕೈಗಾರಿಕೋದ್ಯಮಿ ಸಿ.ಸಿ.ಮುಳಗುಂದ ಅವರ ೬ ಸಾವಿರ ರುಪಾಯಿಗಳ ಆರ್ಥಿಕ ಸಹಾಯದಿಂದ ಕನ್ನಡ ನಾಡಿನ ತೇರೆಳೆದ ಛಾಯಾಪತ್ರಕರ್ತ ಕೆ.ಜಿ.ಎಸ್. ಪ್ರೋತ್ಸಾಹದ ಕೊರತೆಯಿಂದ ನೊಂದು, ಜೀವನೋತ್ಸಾಹದ ಒರತೆಗೆ ಮುಖ ಮಾಡಿ ಈಗ ಮಹಾರಾಷ್ಟ್ರಕ್ಕೆ ಹೊರಟು ನಿಂತಿದ್ದಾರೆ. ಕೊನೆ ಪಕ್ಷ ತಬಲಾಸಾಧಕ ಪುತ್ರ ತ್ರಿಲೋಚನ್ ಜೀವನೋಪಾಯಕ್ಕೆ ದಾರಿಯಾಗಬಹುದು ಎಂಬ ಆಶಾಭಾವನೆ ಅವರದ್ದು.

ಕಳೆದ ೬ ವರ್ಷಗಳಿಂದ ಧಾರವಾಡದ ಮಾಳಮಡ್ಡಿಯ ಶ್ರೀ ಕಂಪ್ಲಿ ರಾಘವೇಂದ್ರರಾಯರ ಮಠದ ಹತ್ತಿರ ಅತ್ಯಂತ ಚಿಕ್ಕ ಮನೆಯಲ್ಲಿ ಪತ್ನಿ, ಓರ್ವ ಪುತ್ರ ಹಾಗು ಪುತ್ರಿಯೊಂದಿಗೆ ವಾಸವಾಗಿರುವ ಕನ್ನಡದ ವಿಶ್ವಕೋಶದಂತಿರುವ ಸೋಮಶೇಖರ್ ಧಾರವಾಡದಲ್ಲಿ ಕೆಲವರನ್ನು ಬಿಟ್ಟರೆ ಮಿಕ್ಕವರೆಲ್ಲರಿಗೂ ತೀರ ಅಪರಿಚಿತರೇ!

ದುಂಡು ಮುಖ, ಒಪ್ಪಓರಣವಾಗಿ ಚಾಚಿದ ನೆರೆತ ಕೂದಲು. ಟ್ರಿಮ್ ಮಾಡಲಾದ ನೆರೆತ ಗಡ್ಡ-ಮೀಸೆ. ಪ್ರಸನ್ನ ಮುಖ. ಸದಾ ನಗು ಮೊಗ. ಲಗುಬಗೆಯ ನಡಿಗೆ. ಜುಬ್ಬಾ-ಪ್ಯಾಂಟ್ ಜೊತೆಗೆ ಬಗಲಲ್ಲಿ ಇಳಿ ಬಿಟ್ಟ ಚೀಲ ಇದು ಅವರ ಬಾಹ್ಯ ವ್ಯಕ್ತಿತ್ವ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಜನಿಸಿದ (೧೯೩೭) ಕೆ.ಜಿ.ಎಸ್. ಅವರ ತಾಯಿ ಚೆನ್ನಬಸಮ್ಮ. ತಂದೆ ಗುರುಬಸಪ್ಪನವರು. ವೃತ್ತಿಯಲ್ಲಿ ವ್ಯಾಪಾರಿ. ವಿದ್ಯಾಭ್ಯಾಸಕ್ಕಾಗಿ ೧೯೪೬ರಲ್ಲಿ ಬೆಂಗಳೂರಿಗೆ ಸೋದರಮಾವ ನೀಲಕಂಠಪ್ಪನವರ ಮನೆಗೆ ಆಗಮಿಸಿದ ಸೋಮಶೇಖರ್, ಸವೆಸಿದ ಬಾಳ ಹಾದಿ ತೀರ ದುರ್ಗಮವಾದದ್ದು.

ಕೆ.ಜಿ.ಎಸ್. ಗೆ ಈಗ ೭೦ರ ಹರೆಯ. ನಾಡಿಗೆ ಗಣನೀಯ ಕೊಡುಗೆ ನೀಡಿದ ಪ್ರಾತ: ಸ್ಮರಣೀಯ ಗಣ್ಯರನ್ನು ಅವರ ಮರಣಾನಂತರವೂ ಭವಿಷ್ಯದ ಪೀಳಿಗೆ ನೋಡಿ, ತೃಪ್ತಿ ಪಡುವಂತಾಗಬೇಕು ಎಂಬ ಛಲದೊಂದಿಗೆ ಯಾವುದೇ ಅಪೇಕ್ಷೆ ಇಲ್ಲದೇ ರಾಷ್ಟ್ರದ ಉದ್ದಗಲಗಳನ್ನು ಸಂಚರಿಸಿ, ದ್ರಾವಿಡ ಪ್ರಾಣಾಯಾಮ ಮಾಡಿ ಹಿರಿಯರನ್ನು ಪರಿಚಯಿಸಿಕೊಂಡು, ಭೇಟಿ ಮಾಡಿ, ಗೆಳೆಯರು ಹಾಗು ಅವರ ಬಂಧುಗಳ ಮನವೊಲಿಸಿ, ‘ನಾಳೆ ಬಾ’ ಎಂದಾಗಲೂ ಬೇಸರಪಡದೇ ಶೃದ್ಧೆಯಿಂದ ತಾಳ್ಮೆವಹಿಸಿ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.

೧೯೮೨ ರಿಂದ ೧೯೯೨ರ ವರೆಗೆ ೧೦ ವರ್ಷಗಳ ಕಾಲ ಪ್ರಜಾವಾಣಿ ಹಾಗು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಛಾಯಾಪತ್ರಕರ್ತನಾಗಿ ಕೆಲಸ ಮಾಡಿದ ಕೆಲ ದಿನಗಳನ್ನು ಹೊರತು ಪಡಿಸಿದರೆ, ಅವರು ಮಾಡಿದ ಕೆಲಸ ತ್ರಿಲೋಕ ಸಂಚಾರಿಯಂತೆ ಸಾಹಿತಿ, ಕಲಾವಿದ, ಸಂಗೀತಗಾರ ಒಟ್ಟಾರೆ ಸೃಜನಶೀಲ ವ್ಯಕ್ತಿಯ ಮನೆಬಾಗಿಲಿಗೆ ಫೋಟೊ ಕ್ಲಿಕ್ಕಿಸಲು ಎಡತಾಕುವುದು. ಅವರ ಶೃದ್ಧೆ, ಕಷ್ಟ-ನಷ್ಟಗಳ ಪರಿತ್ಯಕ್ತ ಮನೋಭಾವ, ಕನ್ನಡದ ಪೂಜಾರಿಗಳ ಪ್ರತಿ ಕೃತಜ್ನತೆ, ಸದ್ಯ ಅಗಲಿದ ಹಿರಿಯರನ್ನು ನಮ್ಮ ಪೀಳಿಗೆ ಕೆ.ಜಿ.ಸೋಮಶೇಖರ್ ಕ್ಯಾಮೆರಾ ಮೂಲಕ ನೋಡುವಂತಾಗಿದೆ ಎಂದರೆ ಅತಿಶಯೋಕ್ತಿಏನಲ್ಲ.