ಕೆನಡಾದ ಅತಿರೇಕ

ಕೆನಡಾದ ಅತಿರೇಕ

ಕೆನಡಾದಲ್ಲಿ ಕೆಲವು ತಿಂಗಳ ಹಿಂದೆ ಸಾವಿಗೀಡಾದ ಖಲಿಸ್ಥಾನವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರಕಾರವೇ ಹತ್ಯೆ ಮಾಡಿಸಿದೆ ಎಂಬಂತಹ ಗುರುತರ ಆಪಾದನೆಯೊಂದನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿದ್ದಾರೆ. ಒಂದು ಸರಕಾರದ ಮೇಲೆಯೇ ಈ ರೀತಿಯಾಗಿ ಆಪಾದನೆ ಹೊರಿಸುವುದು, ಅದೂ ಸಂಸತ್ತಿನಲ್ಲಿ, ಅಪರೂಪದ ಪ್ರಸಂಗ. ಅದೂ ಸಾಲದೆಂಬಂತೆ ಕೆನಡಾ ದೇಶವು ಭಾರತದ ರಾಯಭಾರಿಯೊಬ್ಬರನ್ನು ತನ್ನಿಂದ ಉಚ್ಛಾಟಿಸಿದೆ. ಅದಕ್ಕೆ ಪ್ರತಿಯಾಗಿ ಭಾರತವೂ ಕೆನಡಾದ ರಾಯಭಾರಿಯೊಬ್ಬರನ್ನು ಉಚ್ಛಾಟಿಸಿರುವುದು ಬೇರೆ ಮಾತು. ಹೀಗೆ ಗುರುತರ ಆರೋಪ ಹೊರಿಸಿದ ಟ್ರುಡೋ ಅವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡಲು ವಿಫಲರಾಗಿದ್ದಾರೆ. ಅವರ ಈ ಹೇಳಿಕೆ ಮತ್ತು ರಾಯಭಾರಿ ಉಚ್ಛಾಟನೆಯ ಕ್ರಮದಿಂದ ಉಭಯದೇಶಗಳ ನಡುವಿನ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿದೆ.

ಕೆನಡಾ ಈಗ ಭಾರತ ವಿರೋಧಿ ಶಕ್ತಿಗಳಿಗೆ, ಅದರಲ್ಲಿಯೂ ಮುಖ್ಯವಾಗಿ ಖಲಿಸ್ಥಾನವಾದಿ ಶಕ್ತಿಗಳಿಗೆ, ಅದರಲ್ಲಿಯೂ ಮುಖ್ಯವಾಗಿ ಖಲಿಸ್ತಾನವಾದಿ ಶಕ್ತಿಗಳಿಗೆ ಆಡುಂಬೋಲದಂತಾಗಿದೆ. ಅಲ್ಲಿ ಭಾರತೀಯ ಹಿತಾಸಕ್ತಿಗಳ ಮೇಲೆ ನಿರಂತರ ದಾಳಿಯಾಗುತ್ತಿದೆ. ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚುವ, ರಾಯಭಾರಿಗಳ ಮೇಲೆ ಹಲ್ಲೆ ನಡೆಸುವ, ಹಿಂದೂ ದೇವಾಲಯಗಳ ಮೇಲೆ ಭಾರತ ವಿರೋಧಿ ಘೋಷಣೆ ಬರೆಯುವ ವಿದ್ಯಮಾನಗಳು ಹೆಚ್ಚುತ್ತಿವೆ. ಸಿಕ್ಖರ ಪಕ್ಷವೊಂದು ಟ್ರುಡೋ ಸರಕಾರಕ್ಕೆ ಬೆಂಬಲ ನೀಡುವ ಕಾರಣದಿಂದಾಗಿ  ಅವರು ಖಲಿಸ್ಥಾನವಾದಿ ಸಿಕ್ಖರ ಇಂತಹ ಕೃತ್ಯಗಳಿಗೆ ಕುರುಡುಗಣ್ಣಾಗಿದ್ದಾರೆ. ಕೆನಡಾದಲ್ಲಿ ಪೌರರಾಗಿರುವ ಸಿಕ್ಖರು ಕೂಡಾ ಭಾರತದಲ್ಲಿ ಪ್ರತ್ಯೇಕ ರಾಜ್ಯವೊಂದನ್ನು ಆಗ್ರಹಿಸುತ್ತಿರುವ ಔಚಿತ್ರವಾದರೂ ಏನು? ಎಂಬುದು ಪ್ರಶ್ನಿಸಬೇಕಾಗಿರುವ ವಿಚಾರ. ಆದರೆ ಇಂತಹ ಪ್ರಶ್ನೆಗಳನ್ನು ಕೇಳುವ ಬದಲಾಗಿ ಟ್ರುಡೋ ಸರಕಾರವು ಅವರ ಬೆಂಬಲಕ್ಕೆ ನಿಂತಿರುವುದು ಭಾರತ ಮತ್ತು ಕೆನಡಾಗಳ ನಡುವಿನ ಸಂಬಂಧವು ಕೆಡುವಂತೆ ಮಾಡುತ್ತಿರುವುದು ದುರದೃಷ್ಟಕರ. ಅಂದು ೩೨೯ ಮಂದಿಯನ್ನು ಬಲಿತೆಗೆದುಕೊಂಡ ಕನಿಷ್ಕಾ ವಿಮಾನ ಸ್ಫೋಟಕ್ಕೆ ಕೂಡಾ ಇದೇ ಖಲಿಸ್ಥಾನವಾದಿ ಸಿಕ್ಖರು ಕಾರಣ ಎಂಬುದನ್ನು ಟ್ರುಡೋ ಸರಕಾರ ಕಡೆಗಣಿಸುತ್ತಿರುವುದು ವಿಪರ್ಯಾಸ. ಇದೀಗ ಖಲಿಸ್ಥಾನವಾದಿ ಸಂಘಟನೆಯೊಂದನ್ನು ಕೆನಡಾದಲ್ಲಿರುವ ಹಿಂದೂಗಳನ್ನು ಕೊಲ್ಲುವ ಬೆದರಿಕೆ ಒಡ್ಡುತ್ತಿದ್ದರೂ ಆ ಕುರಿತಂತೆ ಸರಕಾರವು ಕಣ್ಣುಮುಚ್ಚಿ ಕೂತಿದೆ.

ಟ್ರುಡೋ ಸರಕಾರವು ಭಾರತದ ಮೇಲೆ ಗೂಬೆ ಕೂರಿಸುವ ಬದಲಾಗಿ ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕಾಗಿರುವುದು ಮುಖ್ಯ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೦೯-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ