ಕೆನಡಾ - ಭಾರತ ಸಂಘರ್ಷ…!

ಕೆನಡಾ - ಭಾರತ ಸಂಘರ್ಷ…!

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ,( ಜಿಆರ್ಯು ) ಇಸ್ರೇಲಿನ ಮೊಸಾದ್, ಪಾಕಿಸ್ತಾನದ ಐಎಸ್ಐ, ಭಾರತದ ರಾ, ಚೀನಾದ ಎಂಎಸ್ಎಸ್, ಜರ್ಮನಿಯ ಬಿಎನ್ಡಿ, ಇಂಗ್ಲೆಂಡ್ ಎಂಒನ್6....ಇತ್ಯಾದಿ ವಿಶ್ವದ ಕೆಲವು ಪ್ರಬಲ ಸರ್ಕಾರಿ ಬೇಹುಗಾರಿಕೆ ಸಂಸ್ಥೆಗಳು. ಅಧಿಕೃತವಾಗಿ ಹೇಳುವುದಕ್ಕಿಂತ ಅನಧಿಕೃತ ಕೆಲಸಗಳಲ್ಲಿಯೇ ಸದಾ ಮುಂಚೂಣಿಯಲ್ಲಿ ಇರುತ್ತವೆ.

ದೇಶದ ಒಳಗೆ ಅಥವಾ ಹೊರಗೆ ಮುಖ್ಯವಾಗಿ ಹೊರಗೆ ಕುಳಿತು ದೇಶದಲ್ಲಿ ಅರಾಜಕತೆ ಉಂಟುಮಾಡುವ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ, ಆರ್ಥಿಕ ಅಪರಾಧಿಗಳನ್ನು ಮಾಡುವ, ರಾಜಕೀಯ ವಿದ್ರೋಹ ಮಾಡುವ, ಪ್ರತ್ಯೇಕತೆಯ ವಿಷ ಬೀಜ ಬಿತ್ತುವ ವ್ಯಕ್ತಿ ಮತ್ತು ಸಂಘಟನೆಗಳನ್ನು ಅದೇ ರೀತಿಯ ತಂತ್ರಗಾರಿಕೆಯನ್ನು ಉಪಯೋಗಿಸಿ ನಾಶಪಡಿಸುವ ಬೇಹುಗಾರಿಕೆ ಸಂಸ್ಥೆಗಳಂತೆ ಕೆಲಸ ಮಾಡುತ್ತವೆ. ತಮ್ಮ ‌ದೇಶದ ಒಟ್ಟು ಹಿತಾಸಕ್ತಿಯೇ ಇವುಗಳ ಪ್ರಥಮ ಆದ್ಯತೆ. ಅದೇ ರೀತಿಯ ಅನುಮಾನದಿಂದಲೇ ಆ ದೇಶದಲ್ಲಿ ಆದ ವ್ಯಕ್ತಿಯ ಕೊಲೆಯ ಕಾರಣ ಕೆನಡಾ ಭಾರತದ ವಿರುದ್ಧ ಮಾತನಾಡುತ್ತಿದೆ. ಭಾರತವು ಸಹ ಕೆನಡಾ ಪ್ರತ್ಯೇಕವಾದಿಗಳಿಗೆ ಬೆಂಬಲ ಕೊಡುತ್ತಿರುವ ಆರೋಪವನ್ನು ಆ ದೇಶದ ಮೇಲೆ ಹೊರಿಸಿದೆ.

ಎಲ್ಲಾ ದೇಶಗಳು ತಮ್ಮದೇ ಆದ ವಿದೇಶಾಂಗ ನೀತಿಯನ್ನು ಅನುಸರಿಸಿದರು ಸಹ ಅದನ್ನು ಮೀರಿ ಒಳಗೊಳಗೆ ತನ್ನ ಭದ್ರತೆಯ ದೃಷ್ಟಿಯಿಂದ ಅಂತರರಾಷ್ಟ್ರೀಯ ನ್ಯಾಯಾಲಯದ ಕಾನೂನುಗಳನ್ನು ಉಲ್ಲಂಘಿಸಿ ಒಂದಷ್ಟು ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಅಮೆರಿಕದ ಸಿಐಎ ವಿಶ್ವವ್ಯಾಪಿಯಾಗಿ ಕಾರ್ಯನಿರ್ವಹಿಸಿ ತನ್ನ ವಿರೋಧಿಗಳನ್ನು ನಾಶ ಮಾಡಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಪಾಕಿಸ್ತಾನದ ಐಎಸ್ಐ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಸದಾ ಹೊಂಚು ಹಾಕುತ್ತಿರುತ್ತದೆ. ಇಸ್ರೇಲ್ ನ ಮೊಸಾದ್ ವಿಶ್ವದ ಯಾವುದೇ ಭಾಗದಲ್ಲಿ ಇರುವ ತನ್ನ ವಿರೋಧಿಗಳನ್ನು ಟಾರ್ಗೆಟ್ ಮಾಡುತ್ತದೆ. ಈಗ ಕೆನಡಾ ಭಾರತದ ಮೇಲೆ  ಕೆನಡಾದ ಖಾಲಿಸ್ತಾನ್ ಬೆಂಬಲಿಗರನ್ನು ರಾ ಕೊಂದಿದೆ ಎಂದು ಆರೋಪಿಸುತ್ತಿದೆ.

ಈ ಘಟನೆಗಳು ತುಂಬಾ ಗೌಪ್ಯವಾಗಿ ನಡೆಯುತ್ತವೆ ಮತ್ತು ಇದು‌ ದೇಶದ ಭದ್ರತೆಗೆ ಸಂಬಂಧಿಸಿದ ವಿಷಯ. ಇದು ದೇಶದ ಸಾಮಾನ್ಯ ಜನರಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಮತ್ತು ಇದಕ್ಕೆ ಅಧೀಕೃತತೆ ಇರುವುದಿಲ್ಲ. ಭಾರತ ಮತ್ತು ಕೆನಡಾ ನಡುವೆ ಮೊದಲಿನಿಂದಲೂ ಅತ್ಯುತ್ತಮ ಸಂಬಂಧವಿದೆ. ಅನೇಕ ಭಾರತೀಯರು ಅದರಲ್ಲೂ ಮುಖ್ಯವಾಗಿ ಪಂಜಾಬಿಗಳು‌ ಸಾಕಷ್ಟು ಸಂಖ್ಯೆಯಲ್ಲಿ ಕೆನಡಾದಲ್ಲಿ ನೆಲೆಸಿದ್ದಾರೆ. ಕೆನಡಾದ ಪ್ರಜೆಗಳು ಸಹ ಭಾರತದಲ್ಲಿ ಇದ್ದಾರೆ. ಒಂದು ಹಿಡಿಯಷ್ಟು ಹುಳಿ ಎಷ್ಟೋ ಲೀಟರ್ ಹಾಲು ಕೆಡುವಷ್ಟು ಪರಿಣಾಮ ಬೀರುತ್ತದೆ. ಒಂದು ಮಿಲಿಗ್ರಾಂ ವಿಷ ಮನುಷ್ಯನನ್ನೇ ಕೊಲ್ಲುತ್ತದೆ. ಹಾಗೆಯೇ ಕೆಲವೇ ಕೆಲವು ವಿಭಜಕ ಶಕ್ತಿಗಳು ದೇಶಗಳ ನಡುವಿನ ಸಂಬಂಧವನ್ನೇ ಹಾಳು ಮಾಡುತ್ತವೆ.

ಖಾಲಿಸ್ತಾನ್ ಚಳವಳಿ ಮತ್ತು ಬೇಡಿಕೆ ಬಹುತೇಕ ಮುಗಿದ ಅಧ್ಯಾಯ. ಭಾರತದ ಪ್ರಧಾನಿಯನ್ನೇ ಬಲಿ ತೆಗೆದುಕೊಂಡ ರಕ್ತಸಿಕ್ತ ಇತಿಹಾಸ. ಈಗ ಎಲ್ಲವೂ ಮರೆಯಾಗಿ ಪಂಜಾಬ್ ಒಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಜ್ಯ. ಆದರೂ ಕೆಲವು ವಿದೇಶಿ ಶಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಖಾಲಿಸ್ತಾನ್ ಹೋರಾಟವನ್ನು ಜೀವಂತವಾಗಿ ಇಟ್ಟಿವೆ. ಅದರಲ್ಲೂ ಕೆನಡಾದಲ್ಲಿ ಇದು ಇನ್ನೂ ಹೆಚ್ಚು ಪ್ರಚಲಿತದಲ್ಲಿದೆ. 

ಅಲ್ಲಿನ ಖಾಲಿಸ್ತಾನ್ ಮುಖ್ಯಸ್ಥನನ್ನು ಅಪರಿಚಿತರು ಗುಂಡಿಕ್ಕಿ ಕೊಂದರು. ‌ಇದು ಗ್ಯಾಂಗ್ ವಾರ್ ಎಂದು ಬಿಂಬಿಸಲಾಗಿತ್ತು. ಆದರೆ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಮತ್ತು ಸೀಕ್ರೆಟ್ ಏಜೆನ್ಸಿಗಳು ಇದರಲ್ಲಿ ಭಾರತದ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿವೆ. ಇದು ಈಗಾಗಲೇ ರಾಜತಾಂತ್ರಿಕ ಮಟ್ಟದಲ್ಲಿ ದೊಡ್ಡ ವಿವಾದವಾಗಿ ಬೆಳೆದಿದೆ. ಮನುಷ್ಯ ಸಂಬಂಧಗಳ ನಡುವಿನ ಅಪನಂಬಿಕೆಗಳು ದೇಶಗಳ ಮಟ್ಟದಲ್ಲಿ ಬೆಳೆದು ಅದರ ಲಾಭವನ್ನು ಮತ್ಯಾರೋ ಪಡೆಯುತ್ತಾರೆ. ಜನರ ಭಾವನೆಗಳ ಮೇಲೆ ಆಟವಾಡುತ್ತಾ ಯಾರೋ ಕೆಲವರು ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಖಾಲಿಸ್ತಾನ್ ಚಳವಳಿ ಸಹ ಇದೇ ರೀತಿಯ ಒಂದು ಹಾದಿ ತಪ್ಪಿದ ಜನರ ಕೂಟ. ಅದನ್ನು ವಿಭಜಕ ಶಕ್ತಿಗಳು ಮುನ್ನಡೆಸುತ್ತವೆ. ಅದನ್ನು ಕುತಂತ್ರದಿಂದಲೇ ಮಟ್ಟ ಹಾಕಬೇಕು. ಆಗ ದೇಶದ ಸಾರ್ವಭೌಮತ್ವದ ಪ್ರಶ್ನೆ ಎದುರಾಗುತ್ತದೆ.‌ ಒಟ್ಟಿನಲ್ಲಿ ಆಧುನಿಕ ರಾಜಕೀಯ ವ್ಯವಸ್ಥೆ ಕಾರ್ಯನಿರ್ವಹಿಸುವುದೇ ಹೀಗೆ…

ಭೂಗತ ಲೋಕದವರು, ಡ್ರಗ್ ಮಾಫಿಯಾದವರು, ದರೋಡೆಕೋರರು, ಭಯೋತ್ಪಾದಕರು, ದೇಶ ವಿರೋಧಿಗಳು, ಸರ್ಕಾರದ ವಿರುದ್ಧ ಕಾರ್ಯತಂತ್ರ ರೂಪಿಸುವವರು ಹೀಗೆ ಕೆಲವು ಅಸಹಜ ಕೆಲಸಗಳಲ್ಲಿ ಭಾಗಿಯಾಗುವವರು ಪ್ರತಿಕ್ಷಣ ಸಾವಿನ ಸುಳಿಯಲ್ಲಿಯೇ ಬದುಕುತ್ತಿರುತ್ತಾರೆ. ಅವರಿಗೆ ಅಷ್ಟೇ ಅಪಾಯಕಾರಿ ವಿರೋಧಿಗಳು ಇರುತ್ತಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅವರ ಸಾವಿಗೆ ನಿರ್ಧಿಷ್ಟವಾಗಿ ಇಂತಹವರೇ ಎಂದು ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ ಅದೊಂದು ಕತ್ತಲ ಜಗತ್ತು. ಅಲ್ಲಿ ಎಲ್ಲಾ ರೀತಿಯ ಸಾಧ್ಯತೆಗಳು ಇರುತ್ತವೆ. ಅಷ್ಟೇ ಏಕೆ ಮೇಲೆ ಹೇಳಿದ ಸೀಕ್ರೆಟ್ ಏಜೆನ್ಸಿಗಳು ವರ್ಷಾನುಗಟ್ಟಲೆ ಜೊತೆಯಲ್ಲೇ ಆತ್ಮೀಯತೆಯಿಂದ ಇದ್ದು ಅವಕಾಶ ಸಿಕ್ಕಾಗ ಯಾರಿಗೂ ಗೊತ್ತಾಗದಂತೆ ಮುಗಿಸುತ್ತಾರೆ. 

ಆಡಳಿತ ಮಾಡುವವರು ಈ ವಿಷಯದಲ್ಲಿ ತುಂಬಾ ಸಂಯಮದಿಂದ ವರ್ತಿಸಬೇಕು. ಈ ರೀತಿಯ ಘಟನೆಗಳು ಹೊಸದೇನು ಅಲ್ಲ. ಆದರೆ ಕೆನಡಾದ ಈಗಿನ ಪ್ರಧಾನಿ ಟ್ರುಡೋ ಅನವಶ್ಯಕವಾಗಿ ರಾಜಕೀಯ ಪ್ರೇರಿತವಾಗಿ ಮಾತನಾಡಿದ ಪರಿಣಾಮ ಎರಡು ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಅಧುನಿಕ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಸರಿ ತಪ್ಪುಗಳ ವಿಮರ್ಶೆ ತನ್ನ ಅರ್ಥ ಕಳೆದುಕೊಂಡಿದೆ. ಕೇವಲ ಬಲಾಡ್ಯರು, ಸ್ವಾರ್ಥಿಗಳು, ತಂತ್ರಗಾರಿಕೆಯ ನಿಪುಣರು, ತನ್ನ ಹಿತಾಸಕ್ತಿಯ ರಕ್ಷಕರು ಮಾತ್ರ ಮೇಲುಗೈ ಪಡೆಯುತ್ತಾರೆ. ಅವರ ದೃಷ್ಟಿಯಲ್ಲಿ ಇದು ದೇಶ ಸೇವೆ. ಬೇಹುಗಾರಿಕೆ ಅಥವಾ ಸೀಕ್ರೆಟ್ ಏಜೆನ್ಸಿಗಳ ಕೆಲಸವೇ ಅದು.

ಇದನ್ನು ಕೆನಡಾ ಪ್ರಧಾನಿ ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾದರು ಎನಿಸುತ್ತದೆ. ಇಡೀ ವಿಶ್ವದ ಬಹುತೇಕ ಆಡಳಿತ ವ್ಯವಸ್ಥೆ ಸತ್ಯದ ಸಮಾಧಿಯ ಮೇಲೆಯೇ ನಡೆಯುತ್ತಿದೆ. " ಬಲಿಷ್ಠರೇ ಉಳಿಯುತ್ತಾರೆ " ಎಂಬ ಡಾರ್ವಿನ್‌ನ ಸಿದ್ದಾಂತ ಸಾರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ರುಜುವಾತಾಗುತ್ತಿದೆ. ಇದನ್ನು ಅರಿತು ಭಾರತ - ಕೆನಡಾದ ಸಂಬಂಧ ಮತ್ತೆ ಉತ್ತಮವಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ