ಕೆನ್ನಾಯಿಯ ಜಾಡಿನಲ್ಲಿ...

ಕೆನ್ನಾಯಿಯ ಜಾಡಿನಲ್ಲಿ...

ಪುಸ್ತಕದ ಲೇಖಕ/ಕವಿಯ ಹೆಸರು
ಕೃಪಾಕರ-ಸೇನಾನಿ
ಪ್ರಕಾಶಕರು
ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ
162.00 ರೂ.

ಕೆನ್ನಾಯಿಯ ಜಾಡಿನಲ್ಲಿ ಒಂದು ಪಯಣ.... ಪರಿಸರದ ಕಾಳಜಿ ಹಾಗೂ ವನ್ಯಜೀವಿಗಳ ಕುರಿತು ಬರೆಯುವ ಹಾಗೂ ಛಾಯಾಚಿತ್ರ, ವಿಡಿಯೋ ಮೂಲಕ ನಮ್ಮಲ್ಲೊಂದು ಪರಿಸರದ ಕುರಿತು ಅಕ್ಕರೆ ಮೂಡಿಸುವ ಕನ್ನಡದ ಕೆಲವೇ ಕೆಲವು ಅಪರೂಪದ ಬರಹಗಾರರಲ್ಲಿ ಕೃಪಾಕರ-ಸೇನಾನಿಯವರು. ನಮ್ಮ ನಾಡಿನ ಹೆಮ್ಮೆ ಇವರು. 

ಯಾವುದೇ ಪ್ರಚಾರ, ಕೀರ್ತಿ, ತೋರಿಕೆಗಳು ಏನೊಂದನ್ನೂ ಬಯಸದೇ ತಮ್ಮ ಪಾಡಿಗೆ ತಾವು ಪರಿಸರ, ವನ್ಯಜೀವಿಗಳಿಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರಲ್ಲ ಅದೇ ನನಗೆ ಅತ್ಯಂತ ಪ್ರಿಯವಾದುದು. ಇಡೀ ಜೀವನವನ್ನೇ ಕಾಡಿನಲ್ಲಿ ಕಳೆಯುತ್ತ, ಪ್ರಕೃತಿಯೊಡನೆ ಒಡನಾಡುತ್ತ, ನಮ್ಮಲ್ಲೂ ಆ ಒಂದು ಪ್ರೀತಿ ಬೆಳೆಸ್ತಾರಲ್ಲ ಅದು ತುಂಬಾ ದೊಡ್ಡದು. 

ಇತ್ತೀಚೆಗೆ ಆನ್ ಲೈನ್ ನಲ್ಲಿ ಪುಸ್ತಕಗಳನ್ನು ಹುಡುಕುವಾಗ ಸಿಕ್ಕದ್ದು " ಕೆನ್ನಾಯಿಯ ಜಾಡಿನಲ್ಲಿ ". ಇದೆಂಥ ಅದ್ಭುತ ಕೃತಿಯೆಂದರೆ ಓದುತ್ತ ಹೋದಂತೆ ಇವರೊಂದಿಗೆ ನಾವೂ ಸುತ್ತಾಡಿಬಿಟ್ಟೆವೇನೋ ಎಂಬಂತೆ. ಕಾಡಿನ ಪ್ರತಿಯೊಂದು ವಿವರವನ್ನು ಎಷ್ಟೊಂದು ವಿಶದವಾಗಿ ತಿಳಿಸುತ್ತಾ ಹೋಗುತ್ತಾರೆಂದರೆ ಸ್ವತ: ನಾವೇ ಅಲ್ಲಿದ್ದು ಅನುಭವಿಸಿದಂತೆ. ಇದೊಂದು ಬರಹದ ಶೈಲಿ. ಎಲ್ಲರಿಗೂ ಇದು ದಕ್ಕೋದಿಲ್ಲ. 

ಕಾಡುನಾಯಿ ಅಥವಾ ಕೆನ್ನಾಯಿಗಳನ್ನು ಹುಡುಕುತ್ತ ಹೋದಾಗ ಎದುರಾಗುವ ಆನೆ, ಹುಲಿ, ಚಿರತೆ, ಕೆನ್ನಾಯಿಗಳ ಬೆನ್ನತ್ತುವ ಬಗೆ, ಅವುಗಳ ವರ್ತನೆ, ಅವುಗಳ ಕುಟುಂಬ, ಗುಂಪು, ಬೇಟೆಯಾಡುವ ವಿಧಾನ ಪ್ರತಿಯೊಂದನ್ನು ಕಟ್ಟಿಗೆ ಕಟ್ಟುವಂತೆ ಬರೀತಾ ಹೋಗ್ತಾರೆ. ಅದೇ ರೀತಿಯಲ್ಲಿ ಕಾಡಿನಲ್ಲಿ ವಾಸಿಸುವ, ಕಾಡಿನ ಎಲ್ಲವೂ ಗೊತ್ತಿರುವ ಅಲ್ಲಿನ ಜನಾಂಗದ ಕುರಿತೂ, ಅವರಿಗೆ ಕಾಡಿನ ಬಗ್ಗೆ ಇರುವ ಬುದ್ಧಿವಂತಿಕೆಯ ಕುರಿತೂ ಸೊಗಸಾಗಿ ವಿವರಿಸುತ್ತಾರೆ. ಓದುತ್ತ ಹೋದಂತೆ ಕಾಡಿನೊಳಗೆ ನಾವೂ ಒಂದಾಗುತ್ತೇವೆ. ಅಲ್ಲಿನ ಮಳೆ, ಗಾಳಿ, ತೊಂದರೆಗಳು, ಓಡಾಟಗಳು, ಅಲ್ಲಿಯ ನಿವಾಸಿಗಳು ಎಲ್ಲವೂ ನಮ್ಮ ಮನಸಿನಾಳಕ್ಕೆ ಇಳಿದುಬಿಡುತ್ತವೆ. ಬರಹದ ಸುಂದರ ನಿರೂಪಣೆ, ಶೈಲಿ ಓದುಗರನ್ನು ಹಿಡಿದಿಡುತ್ತದೆ. ಒಂದು ಒಳ್ಳೆಯ ಕೃತಿಯನ್ನು ಓದುವ ಅನುಭೂತಿಯನ್ನು ಒದಗಿಸಿಕೊಡುವ, ಪ್ರಕೃತಿಯೆಡೆ ನಮ್ಮನ್ನು ಸೆಳೆದು ಹಿಡಿದಿಡುವ ಈ ಕೃತಿ ಕನ್ನಡಕ್ಕೆ ಒಂದು ಅತ್ಯಮೂಲ್ಯ ಕೊಡುಗೆ. 

ಅಂದಹಾಗೆ ಕೃಪಾಕರ ಸೇನಾನಿಯವರು ಈ ಕಾಡುನಾಯಿಗಳನ್ನು ಸರಿಸುಮಾರು 15 ವರ್ಷಗಳ ಕಾಲ ಬೆಂಬತ್ತಿ ನಿರ್ಮಿಸಿದ ’ ದಿ ಪ್ಯಾಕ್ ’ ಎಂಬ ಚಲನಚಿತ್ರ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದೆ. ’ಅನಿಮಲ್ ಬಿಹೇವಿಯರ್’ ವಿಭಾಗದಲ್ಲಿ ಈ ಪಾರಿತೋಷಕ ಏಷ್ಯಾ ಖಂಡಕ್ಕೆ ಲಭಿಸಿದ್ದು ಇದೇ ಮೊದಲು ಎಂಬುದೂ ಇಲ್ಲಿ ಗಮರಾರ್ಹ. ಇದಲ್ಲದೆ ’ ವೈಲ್ಡ್ ಡಾಗ್ ಡೈರೀಸ್ ’ ಮತ್ತು ’ ವಾಕಿಂಗ್ ವಿತ್ ವೂಲ್ಫ ’ ಚಲನಚಿತ್ರಗಳು ಜಗತ್ತಿನಾದ್ಯಂತ ಸುದ್ದಿ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.  ಕೃಪಾಕರ ಸೇನಾನಿಯವರಿಗೆ ಪ್ರಶಸ್ತಿ, ಪುರಸ್ಕಾರ, ಪಾರಿತೋಷಕಗಳು ಇವರನ್ನೇ ಹುಡುಕಿಕೊಂಡು ಬಂದವೇ ಹೊರತು, ಇವರು ಬೆಂಬತ್ತಿದವರಲ್ಲ. 

ಅಂದ ಹಾಗೆ ಇವರ ಕೃತಿಯನ್ನು ಓದಿದ ತಕ್ಷಣ ನಾನು ಇವರು ನಿರ್ಮಿಸಿದ ಕಾಡುನಾಯಿಗಳ ಚಿತ್ರವನ್ನು ವೀಕ್ಷಿಸಬೇಕೆಂದು ಹುಡುಕಿದೆ. ಯೂಟ್ಯೂಬ್ ನಲ್ಲಿ ಚಲನಚಿತ್ರ ಸಿಕ್ಕಿತು. ಎಷ್ಟು ಖುಷಿಯಾಯಿತೆಂದರೆ ಕಾಡುನಾಯಿಗಳ ವರ್ತನೆ, ಗುಂಪು, ಅವುಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕೃಪಾಕರ ಸೇನಾನಿ ಹಿಡಿದಿಟ್ಟಿದ್ದಾರೆ. ನೀವೂ ನೋಡಬೇಕೆಂದರೆ ಈ ಕೆಳಗಿನ ಲಿಂಕ್ ನ್ನು ಒತ್ತಿ. https://www.youtube.com/watch?v=Qr5_HHM-_Bg

-ಸಿದ್ಧರಾಮ ಕೂಡ್ಲಿಗಿ