ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೦

ಕೆ.ಪಿ.ಭಟ್ಟರ ‘ನನ್ನ ಮಾತು’ ಮುಂದಿನ ಭಾಗ
ಟ್ರೆಡಲ್ ಮುದ್ರಣ ಯಂತ್ರಗಳನ್ನು ಹೊಂದಿದ್ದ ನನಗೆ ಆ ಕಾಲದಲ್ಲಿ ಸಾಕಷ್ಟು ಕೆಲಸದ ಒತ್ತಡಗಳಿರುತ್ತಿತ್ತು. ಹಲವು ಪುಸ್ತಕಗಳನ್ನೂ ನಾನು ಮುದ್ರಿಸಿದ್ದೆ. "ರಮಣ ಸಂದೇಶ” ಎಂಬ ಒಂದು ಚಿಕ್ಕ ವಿಶೇಷಾಂಕ ನನ್ನಿಂದಲೇ ಮುದ್ರಿತವಾಗಿ ಪ್ರಕಾಶಿತವಾಯಿತು. ಮುಂದೆ ಅದು ತ್ರೈಮಾಸಿಕವೂ ಆಯಿತು. ಅದನ್ನು ಮುದ್ರಣ ಮಾಡಿಸಿದವರು ಕುಮಟೆಯ ಶ್ರೀ ರಮಣ ಸೇವಾ ಸಂಘದವರು. ಆ ಸಂಘದ ಸಕ್ರಿಯ ಸದಸ್ಯನಾದ ನಾನು ೫೦ ವರುಷಗಳಿಂದ ತಿರುವಣ್ಣಾಮಲೈಯ ಶ್ರೀ ರಮಣಾಶ್ರಮವನ್ನು ಸಂದರ್ಶಿಸುತ್ತಲೇ ಇದ್ದೇನೆ. ನನ್ನ ಮನಸ್ಸಿಗೆ ತುಂಬಾ ನೆಮ್ಮದಿಯನ್ನು ಕೊಟ್ಟ ಆಶ್ರಮವದು.
ಒಂದು ದಿನ, ಮುನ್ನುಡಿಯಲ್ಲಿ ವಿವರಿಸಿದಂತೆ ಶ್ರೀ ಬಿ. ಎ. ಸನದಿ ಯವರಿಂದ ಒಂದು ಅಂಚೆ ಕಾರ್ಡ ನನಗೆ ಬಂತು. ನಾನು ಅತ್ಯಂತ ಚಕಿತನೂ, ವಿಸ್ಮಿತನೂ ಆದೆ. ಏಕೆಂದರೆ ಆಗಿನ ಕಾಲದಲ್ಲಿ ಶ್ರೇಷ್ಠ ಮುದ್ರಣಕ್ಕಾಗಿ ಮುಂಬಯಿಯಂಥ ನಗರವನ್ನೇ ಎಲ್ಲರೂ ಆರಿಸಿಕೊಳ್ಳುತ್ತಿದ್ದರು. ನಾನು ಒಂದು ದೇವಸ್ಥಾನದ ಸ್ಮರಣ ಸಂಚಿಕೆ ಮುದ್ರಿಸಿದ್ದೆ. ಅದರ ರಕ್ಷಾ ಕವಚ ಮುಂಬಯಿಯಿಂದಲೇ ಮುದ್ರಿತವಾಗಿ ಬಂದಿತ್ತು. ಹಾಗಾಗಿ ಶ್ರೀ ಸನದಿಯವರ ಪತ್ರ ನನ್ನನ್ನು ತುಂಬಾ ಚಕಿತಗೊಳಿಸಲು ಕಾರಣವಾಯಿತು.
ಇಲ್ಲಿ ಇನ್ನೊಂದು ವಿಚಾರ ನೆನಪಿಗೆ ಬರುತ್ತಿದೆ. ಗೋಕರ್ಣದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಶ್ರೀ ಗೌರೀಶ ಕಾಯ್ಕಿಣಿಯವರು ಕರ್ನಾಟಕದ ಒಬ್ಬ ಸುಪ್ರಸಿದ್ದ ಸಾಹಿತಿಗಳಾಗಿದ್ದವರು. ಶಿಕ್ಷಣ ತಜ್ಞರೂ ಹೌದು. ಅತ್ಯಂತ ಸರಳ, ಸಜ್ಜನರು ಕೂಡ. ಅವರು 'ಜನಸೇವಕ' ವಾರ ಪತ್ರಿಕೆಯಲ್ಲಿ ಕನಿಷ್ಟ ಎರಡು ಬಾರಿ ನನ್ನ ಮುದ್ರಣದ ಬಗ್ಗೆ ಮೆಚ್ಚಿ ಬರೆದಿದ್ದರು. ನನ್ನ ಪ್ರಥಮ ಪ್ರಯತ್ನದ "ರಮಣ ಸಂದೇಶ" ಪ್ರಥಮ ಸಂಚಿಕೆಯ ವಿಮರ್ಶೆಯ ಸಂದರ್ಭದಲ್ಲಿ ಹುಬ್ಬಳ್ಳಿಯ “ಸಂಯುಕ್ತ ಕರ್ನಾಟಕ" ದಿನಪತ್ರಿಕೆಯಲ್ಲಿ ಮುದ್ರಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಕೆಲದಿನಗಳ ನಂತರ ಶ್ರೀ ಸನದಿಯವರು ನನ್ನ ಮುದ್ರಣಾಲಯಕ್ಕೆ ಬಂದರು. ಮತ್ತು ತಮ್ಮ ಸಮಗ್ರ ಕಾವ್ಯವನ್ನು ನನ್ನಿಂದಲೇ ಮುದ್ರಣ ಮಾಡಿಸಿಕೊಳ್ಳುವ ಅಭಯವಿತ್ತರು. ಕುಮಟೆಯ ಕೆನರಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀ ಗೋಪಾಲಕೃಷ್ಣ ಅಡಿಗ, ಶ್ರೀ ಬಿ. ಎಚ್. ಶ್ರೀಧರ, ಡಾ. ಕೃಷ್ಣಮೂರ್ತಿ, ಶ್ರೀ ಜಿ. ಎಸ್. ಅಮೂರ, ಹೊನ್ನಾವರ ಕಾಲೇಜಿನಲ್ಲಿ ಪ್ರಿನ್ಸಿಪಾಲರಾದ ಶ್ರೀ ವಿ. ಸೀ. ಮೊದಲಾದ ಶ್ರೇಷ್ಠರನ್ನು ಹತ್ತಿರದಿಂದ ನೋಡಿದ ಭಾಗ್ಯ ನನ್ನದಾಗಿತ್ತು. ಅನಂತರ ಬಹಳ ವರ್ಷಗಳ ನಂತರ ಇನ್ನೊಬ್ಬ ಪ್ರಸಿದ್ಧ ಕವಿ ಶ್ರೀ ಸನದಿಯವರನ್ನು ತೀರ ಹತ್ತಿರದಿಂದ ನೋಡುವ, ಅವರ ಜೊತೆ ಒಡನಾಡುವ ಭಾಗ್ಯ ನನ್ನದಾಯಿತು.
ಮೊದಲ ಭೆಟ್ಟಿಯಲ್ಲಿಯೇ ಅವರು ನನಗೆ ತುಂಬಾ ಹತ್ತಿರವಾದರು. ಅಷ್ಟೇ ಅಲ್ಲ, ಅನೇಕ ವರ್ಷಗಳ ಒಡನಾಡಿಗಳಂತೆ ಭಾಸವಾದರು. ಅವರ ನಗುವಿನಲ್ಲಿ ಏನೋ ಒಂದು ಚುಂಬಕ ಶಕ್ತಿ ಅಡಗಿರಬೇಕು ! ಅವರ ಮಾನವೀಯತೆ, ಸರಲತೆ, ಸಭ್ಯತೆ, ನನ್ನನ್ನು ಅವರತ್ತ ತೀರಾ ಹತ್ತಿರಕ್ಕೆ ಸೆಳೆದುಕೊಂಡಿತು.
(ಕೊನೆಯ ಭಾಗ ಮುಂದಿನ ವಾರ)
***
ದೇವ ನಿನ್ನೊಡನೇನ ಬೇಡಲಿ?
ದೇವ ನಿನ್ನೊಡನೇನ ಬೇಡಲಿ
ಯಾವ ವರವನು ಕೇಳಲಿ?
ನಿನ್ನ ಬಗೆಗಾಗೆನ್ನ ಹೃದಯದಿ
ಯಾವ ಭಾವವ ಹೂಳಲಿ?
ಅಷ್ಟ- ಸಂಪದ ಬಯಸಿ ನಿನ್ನೊಳು
ಕರವ ಜೋಡಿಸಿ ನಿಲ್ಲಲೆ?
ಕ್ಲಿಷ್ಟವಾದೀ ಜೀವನವ ನೀ-
ನುದ್ಧರಿಸು ಎಂದೆನ್ನಲೆ?
ಯಾವ ಬೇಡಿಕೆಯಿಟ್ಟು ನೀನದ
ನೀಡು ಎನ್ನಲಿ ನಿನ್ನಲಿ?
ನೆಚ್ಚಿಕೊಳ್ಳುವ ಇಚ್ಛೆಯನು ನೀ
ಹೆಚ್ಚಿಸುವೆಯಾ ನನ್ನಲಿ?
ಮೆಚ್ಚಿಕೊಂಡುಡೆ ಮೆಚ್ಚುಗೆಯ ಬಗೆ
ಹೊತ್ತಿಕೊಳ್ಳುವದದರಲಿ
ಹೆಚ್ಚಿ ಹೋಗುವ ಹುಸಿಯ ಪಸೆಗಳು
ಸುಟ್ಟುಹೋಗುವದದದಲಿ !
‘ನಿತ್ಯ’ವೆನ್ನುವ ‘ಸತ್ಯ’ವನು ತಿಳಿ-
ದಾಗಲೇ ನಿಜ ಜೀವನ ;
‘ಮೃತ್ಯು’ವೆನ್ನುವುದೊಂದು ಮಿಥ್ಯದ
ರೂಪವೆನೆ ಸಂಜೀವನ !
***