ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೨

ರಾಗವಾವುದೊ…
ರಾಗವಾವುದೊ ತಾಳವಾವುದೊ
ಹಾಡನಂತೂ ಹಾಡುವೆ
ಕೇಳುಗರ ಮನ ತಣಿಯದಿದ್ದರು
ತಣಿದರೂ ನಲಿದಾಡುವೆ !
ನನ್ನ ಹಾಡನು ತೇಲಿ ಬಿಡುವೆನು
ಹೊತ್ತು ನಡೆವನು ಮಾರುತ
ಸುತ್ತಲೆಲ್ಲಾ ತೂರಿ ಕೊಡುವನು
ಹಾಡಿನೊಸಗೆಯ ಸಾರುತ !
ನಾ ಕಲಾವಿದನೆಂಬ ಹೆಸರನು
ಪಡೆದೆನೆಂದೋ ಅಂದಿಗೆ ;
ಬಿಟ್ಟಿಹೆನು ಜನಜಂಗುಳಿಯ ಮನ-
ದಿಂದ ಬರುತಿಹ ನಿಂದಗೆ !
ನಾ ಕಲಾವಿದ ನನ್ನ ಜೀವನ
ಕಲೆಗೆ ಮೀಸಲಾಗಿದೆ ;
ನನ್ನ ಜೀವನದೊಳಿತು ಕೆಡುಕುಗ-
ಳೆಲ್ಲ ಕಲೆಗೇ ಸೇರಿದೆ ;
ನಾನು ನಂಬಿದ ಕಲೆಯ ಬದುಕಿಗೆ
ಸಾನುರಾಗದ ಬೆಂಬಲ ;
ಕೋದುಕೊಂಡುದೆ ಧನ್ಯತೆಯ ಛಲ
ಮಾಸಿಹೋಗದ ಹಂಬಲ !
***
ರಾವಣ
ಹತ್ತು ಮುಖಗಳನು ಹೊತ್ತ ರಾವಣನಿ-
ಗಿತ್ತೆ ಸ್ವಸ್ಥ ಚಿತ್ತ?
ಮತ್ತೆ - ಮತ್ತೆ ಭುಗಿಲೆದ್ದ ಕಾಮನೆಗ-
ಳತ್ತ ಅವನು ವ್ಯಸ್ಥ !
ಸರ್ವಶಕ್ತನೆಂದೆನಿಸಿಕೊಂಡರೂ
ಮನಸಿಗಿರದ ಹಿಡಿತ ;
ಗರ್ವದಿಂದ ತುಂಬಿರುವ ಬುದ್ಧಿ-
ಗಾಸರೆಯು ಬಿಡದ ತುಡಿತ !
ಹತ್ತು ಮುಖಗಳನು ಹುತ್ತವಾಗಿ ಬೆಳೆ-
ದಿರುವ ದುಷ್ಟ ಬುದ್ಧಿ ;
ಸುತ್ತುತ್ತಿತ್ತು ಸುಳಿಯಾಗಿ ಸುತ್ತಿ
ಬಳಿಕಲ್ಲಿ ಇಷ್ಟಸಿದ್ಧಿ !
ಸುಪ್ತವಾಗಿ ಬೆಳೆದಿರುವ ಕಾಮನೆಗೆ
ಇಲ್ಲದಿರುವ ಹಿಡಿತ ;
ಸ್ವಸ್ಥವಲ್ಲದಸ್ವಸ್ಥ ಭಾವನೆಗೆ
ಸಲ್ಲದಂಥ ತುಡಿತ !
ಹತ್ತು ಮುಖಗಳನು ಹೊತ್ತ ರಾವಣನಿಗೆ
ಇತ್ತೆ ಸ್ವಸ್ಥ ಚಿತ್ತ ?
ಹೊತ್ತಿಕೊಂಡ ಕಾಮನೆಯ ಕಾಮಲೆಗೆ
ಅವನು ವ್ಯಸ್ತ - ವ್ಯಸ್ತ !