ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೩

ಮಲ್ಲಿಗೆ, ಸಂಪಿಗೆ, ಸೇವಂತಿಕೆ
ಯಾರನ್ನು ಮೆಚ್ಚಿಸಲು ನೀನಿಂತು ಅರಳಿರುವೆ
ಮಲ್ಲಿಗೆಯೆ, ಸಂಪಿಗೆಯೆ, ಸೇವಂತಿಗೆ?
ಊರೆಲ್ಲ ಕಮನೀಯ ಕಂಪುಗಳ ಕಂಪನದಿ
ಉಲ್ಲಸಿತಗೊಳಿಸುವೀ ಜೀವಂತಿಕೆ !
ಮಲ್ಲಿಗೆಯೆ ನಿನ್ನರಳು ಚೆಲ್ಲಿರುವ ಹೂಗಂಪು
ಮನವನ್ನು ಮುದಗೊಳಿಪ ಶ್ರೀಮಂತಿಕೆ
ಅಲ್ಲಿಗೆಯೆ ಮುಗಿದಿಲ್ಲ ಮಲ್ಲಿಗೆಯ ನಿನ್ನ ನೆಲೆ
ಕನಸಿಗರ ಕಾಮನೆಯ ಕೈದೀವಿಗೆ !
ಸಂಪಿಗೆಯ ಕಂಪಿನಲಿ ನಿನಗಾರು ಎಣೆಯುಂಟು
ಕಂಪನಕೆ ಕೈರವವ ಸೂಸುವಲ್ಲಿ?
ಕಂಪೆಸೆವ ಕೈಂಕರ್ಯದಲ್ಲಿ ನಿನ್ನದೆ ಹಿರಿಯ
ಹೆಸರುಂಟು ತೀವ್ರತೆಯ ಓಘದಲ್ಲಿ !
ಸೇವಂತಿಕೆಯ ನಿನ್ನ ಸಿರಿವಂತಿಕೆಯ ನೋಟ
ಅರಿವಂತೆ ಇರುವಂಥ ಮುದಗಾರಿಕೆ
ಶಾಂತ-ಸುಂದರ-ಸ್ನಿಗ್ಧತನವು ತುಂಬಿರುವಂಥ
ಮುಗ್ಧ ಮುಖವನು ಹೊತ್ತು ಇರುವಂತಿಕೆ !
ಯಾರನ್ನು ಮೆಚ್ಚಿಸಲು ನೀನಂತು ಅರಳಿರುವೆ
ಮಲ್ಲಿಗೆಯೆ, ಸಂಪಿಗೆಯೆ, ಸೇವಂತಿಕೆ
ಊರೆಲ್ಲ ನಿಮ್ಮನ್ನು ಮನದುಂಬಿ ಸ್ಮರಿಸುತ್ತ
ಗೌರವವ ತೋರಿಸುವ ದೊಡ್ಡಸ್ತಿಕೆ !
***
ತಿಂಗಳ ಬಂದನು
ತಿಂಗಳ ಬಂದನು ಕಂಗೊಳಿಸುತ ಬೆಳ-
ದಿಂಗಳ ಹರಡುತ್ತ ;
ಕಣ್ಮನ ತಣಿಸುವ ಮಂದದ ಬೆಳಕನು
ಅಂದದಿ ಸೂಸುತ್ತ !
ತಿಳಿಗೊಳದಲಿ ಪ್ರತಿಬಿಂಬವ ಮೂಡಿಸಿ
ನಲಿವಿನ ನೆಲೆ ಅಲ್ಲಿ ;
ಚಿರುರೆಲೆ-ಹೂಬನಗಳ ತಾ ಮುದ್ದಿಸಿ
ಒಲವಿನ ಸೆಲೆ ಚೆಲ್ಲಿ !
ಮೆಲುಗಾಳಿಯ ಮನತಣಿಯುವ ಸಂಭ್ರಮ
ಪಡಿ ಮೂಡುವುದಲ್ಲಿ ;
ಚೆಲುವಿನ ಹೂಗಿಡ-ಮರ ಲತೆಗಳಿಗೂ
ಸಡಗರವಿಹುದಲ್ಲಿ !
ನೆತ್ತಿಯ ಮೇಲೇರಿದನದೊ ಚಂದಿರ
ಅತ್ತ ಹರಿಸು ದೃಷ್ಟಿ ;
ಸುತ್ತಲು ಬತ್ತಲೆ ಆಕಾಶದ ನೆಲೆ
ಚಿತ್ತಹರಣ ಸೃಷ್ಟಿ !
ತಿಂಗಳ ಬಂದನು ಕಂಗೊಳಿಸುತ ಬೆಳ-
ದಿಂಗಳ ಹರಡುತ್ತ ;
ಕಣ್ಮನ ತಣಿಸುವ ಮಂದದ ಬೆಳಕನು
ಅಂದದಿ ಸೂಸುತ್ತ !
***