ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೪

ಮೃತ್ಯುವೆಂದರೇನು?
ಮೃತ್ಯುವನ್ನು ಮನಸಿನಲ್ಲಿ
ನೆನಪಿಸುತ್ತ ನೀನು ;
ಸತ್ಯವನ್ನು ಅರಿಯಬೇಕು
ನಿತ್ಯದಲ್ಲು ತಾನು !
ಮೃತ್ಯುವೆಂದರೇನು ಎಂದು
ಮೊದಲು ತಿಳಿಯಬೇಕು ;
ಸತ್ಯವನ್ನು ತಿಳಿಯಲದುವೆ\
ಮೊದಲ ಪಾಠ ಸಾಕು !
ಆಸೆಯೆಂಬ ಮೂಸೆಗಳಿಗೆ
ಪ್ರಮುಖ ತಾಣವೆಲ್ಲಿ?
ಸೋಸಿ ತೆಗೆದರೂನು ಕೂಡ
ಮತ್ತೆ ಮನಸಿನಲ್ಲಿ !
ಮನಸು ಎಂಬ ಕನಸಿನೊಡೆಯ
ಅವಿತುಕೊಂಡನೇನು?
ಕನಲಿ ಅವನ ಹುಡುಕಿ ತಂದು
ಬಿಗಿದು ಕಟ್ಟು ನೀನು !
ಬಿಡಿಸಿಕೊಂಡು ಹೋದರವಗೆ
ಇಹುದೆ ಬೇರೆ ಜಾಗ?
ತುಡಿಸಿಕೊಂಡು ಪುನಃ ಸೇರ
ಬೇಕು ಅದೇ ಜಾಗ!
ಮೃತ್ಯುವನ್ನು ಮನಸಿನಲ್ಲಿ
ನೆನಪಿಸುತ್ತ ಈಗ ;
ಸತ್ಯವಾದುದೇನು ಎಂದು
ತಿಳಿಯಬೇಕು ಬೇಗ !
***
ಅದೇ ಬಾನು
ಅದೇ ಬಾನು ಅದೇ ಸೂರ್ಯ
ಪಾರವಿರದ ಅದ್ಭುತ ;
ಅದೇ ಸತ್ಯ ಅದೇ ನಿತ್ಯ
ಸಾರ-ಸತ್ಯ ಭೂಷಿತ !
ಅದೇ ಭೂಮಿ ಅದೇ ಶರಧಿ
ಬದಲಾಗದ ಚಿತ್ರಣ ;
ಅದೇ ಚಿತ್ರ ಬಲು ವಿಚಿತ್ರ
ಪ್ರತಿ ಕ್ಷಣಕೂ ನೂತನ !
ಅದೇ ಸಂಜೆ ಅದೇ ಬೆಳಗು
ನಿತ್ಯ ಒಂದೆ ಹಾಡು ;
ಅದೇ ಸ್ಪಂದನಕ್ಕೆ ಜಾಡು
ಕೃತ -ಕೃತ್ಯತೆಗೀಡು !
ಅದೇ ಜನ ಅದೇ ಮನ
ಬದಲಾಗದ ಭೂಷಣ ;
ಅದೇ ನಡೆ ಅದೇ ತಡೆ
ಒಂದಕೊಂಡು ಪೋಷಣ !
ಅದೇ ಹಾವ ಅದೇ ಭಾವ
ಅದಕು- ಇದಕು ಸಂಗತ ;
ಅದೇ ಬದುಕು ಅದೇ ತದಕು
ಬಿಡಲಾಗದ ಇಂಗಿತ !