ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೫

ಸಮುದ್ರರಾಜನಿಗೆ
ಒಡೆಯುತ್ತಿತ್ತು ತೆರೆ ನಡುಗುತ್ತಿತ್ತು ತಿರೆ
ಭೋರ್ಗರೆಯುವ ಕಡಲಬ್ಬರ ಕರಕರೆ
ಹುಟ್ಟುತಿತ್ತು ಹುಟ್ಟಳಿಯುತಿತ್ತು ತೆರೆ
ನಿಮಿಷ-ನಿಮಿಷಕೆಡೆಬಿಡದ ತೆರೆಯ ಮೊರೆ !
ಯಾವ ಕಾರಣಕೆ ನೀನು ಬೊಬ್ಬಿಡುವೆ
ಕಡಲದೊರೆ ಕುಬೇರ?
ಜೀವಸಂಕುಲಕೆ ಜಲಜ ಸಂಪದಕೆ
ನೆಲೆಯ ನಿಧಿ ಸಮೀರ !
ಮಗಳು ಲಕ್ಷ್ಮಿ ನಿನ್ನೇಕನಾಡಿ ನಿಜ
ಚಿತ್ತಚಂಚಲವತಿ
ನಿಂತ ಕಡೆಗೆ ನೆಲೆಯಾಗಿ ನಿಲ್ಲದೈ -
ಸಿರಿಯ ಹಿರಿಯ ದಾತ್ರಿ !
ಏಕಪುತ್ರ ನಿನಗಿರುವುದೇನೊ ದಿಟ
ಆದೋಡೇನು ತೋಷ?
ಪೂರ್ಣಚಂದ್ರನಾಗಿರುವುದೊಂದೆ ದಿನ -
ದಿನವು ಬೇರೆ ವೇಷ !
ಒಡೆಯನಾದರೂ ಸಿರಿಯ ಸಂಪದಕೆ
ಕೊರಗುತಿರುವೆ ಏಕೆ?
ತಡೆಯಲಾರದೀ ದುಃಖದಳ್ಳುರಿಗೆ
ಬೇರೆ ಉಪಮೆ ಬೇಕೆ?
***
ಹೆಜ್ಜೆ ಗುರುತು
ಬಿಟ್ಟು ಹೋದ ಹೆಜ್ಜೆ ಗುರುತು
ಅಳಿಯದಂತೆ ಉಳಿದುಕೊಂಡು
ಕಳೆದುಹೋದ ದಿನಗಳನ್ನು
ನೆನೆಪಿಸುತ್ತಲಿರುವುದು ;
ಮರೆಯಬೇಕು ಹಳೆಯದನ್ನು
ತೊರೆಯಬೇಕು ತಳಕುಗಳನು
ಆದರೇನು? ನೆನಪು ತಾನೆ
ತೂರಿಕೊಂಡು ಬರುವುದು !
ಕಟ್ಟಿಕೊಂಡ ಹಲವು ಕನಸ-
ನಿಟ್ಟುಕೊಡು ಮನಸ್ಸಿನಲ್ಲಿ
ಹುಟ್ಟಿಕೊಳುವ ಯೋಚನೆಗಳು
ಗಟ್ಟಿಯಾಗತೊಡಗಲು ;
ಬಿಟ್ಟು ಬಿಡುವ ಯೋಚನೆಗಳ
ಕಟ್ಟುಗಳನು ನಾಶಗೊಳಿಸಿ
ಕಟ್ಟಕಡೆಗೆ ನಿರಾತಂಕ
ಭಾವಗಳಲಿ ಮುಳುಗಲು !
ಬೇಡವೆನುವ ಭಾವಬಿಂಬ
ಕೂಡಿಕೊಂಡು ಮನದ ತುಂಬ
ಕಾಡುವಂತೆ ಗಮನವಿಟ್ಟು
ತಾನೆ ಬಲಿಯುತಿರುವುದು ;
ಮರೆತು ಬಿಡುವ ಮನೋಧೈರ್ಯ
ನಿರತವಾಗಿ ಭರಿತವಾಗಿ
ಸ್ಫುರಣಗೊಳುತ ಅನುರಣಿಸುತ
ಜೀವ ತಳೆದು ನಿಲುವುದು !
ಸೇರಿ ಬರುವ ನೆನಪುಗಳಿಗೆ
ಸಾರಿ-ಸಾರಿ ಹೇಳಿ-ಹೇಳಿ
ತೀರದಂಥ ಸೆಳೆತಗಳನು
ಕರಣಗೊಳಿಸಿಕೊಳುವುದು ;
ಬಿಟ್ಟು ಹೋದ ಹೆಜ್ಜೆ ಗುರುತು
ಅಳಿಯದಂತೆ ಉಳಿಸಿಕೊಂಡು
ಕಳೆದುಹೋದ ನೆನಪುಗಳನು
ಮರಳಿ- ಮರಳಿ ತರುವುದು !
***