ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಭಾನು ಮಂಡಲ
ನಭೋ ಮಂಡಲದ ಮಹಾವಲಯದಲಿ
ಪ್ರಭಾ ಪುಂಜ ನೀನು ;
ಚರಾಚರಗಳಿಗೆ ಪರಾಪರಗಳಿಗೆ
ಜೀವಶಕ್ತಿ ಭಾನು !
ಭೂಮಿ ಮಂಡಲಕೆ ಭಾನು ಮಂಡಲವೆ
ಅತ್ಯಮೂಲ್ಯ ಸೊತ್ತು ;
ಜೀವರಾಶಿಗಳ ಜೀವಕೋಶಗಳ
ಜೀವನಕ್ಕೆ ಪತ್ತು !
ನಿನ್ನ ಕಿರಣಗಳು ಜೀವ ಸ್ಫುರಣಗಳು
ಬದುಕಿಗದುವೆ ಮೂಲ ;
ಜೀವರಾಶಿಗಳ ಭವ್ಯ ಸಂಕುಲಕೆ
ದಿವ್ಯ ಪ್ರಾಣ ಮೂಲ !
ಚರಾಚರಗಳಲಿ ಪರಾಪರಗಳಲಿ
ನೀನು ಸುಪ್ತ ಜಾಲ ;
ಜೀವ - ಜಂತುಗಳ ಭಾವ ತಂತುಗಳ
ಮಹಾಶಕ್ತಿ ಮೂಲ !
ನಭೋ ಮಂಡಲದ ಪ್ರಭಾವಲಯದಲಿ
ಸುಪ್ತಶಕ್ತಿ ನೀನು ;
ಚರಾಚರಗಳಲಿ ಪರಾಪರಗಳಲಿ
ಸರ್ವಶಕ್ತ ಭಾನು !
***
ಬಯಕೆ
ಬಯಕೆಗಳನು ಮೊದಲು ಬಿಗಿದು
ಕಟ್ಟಿಹಾಕಬೇಕು
ಬಳಿಕ ಬಯಕೆ ಹುಟ್ಟಿಕೊಳುವು-
ದನ್ನು ತಿಳಿಯಬೇಕು !
ಕಳ್ಳನೊಬ್ಬ ಕತ್ತಲೆಯಲಿ
ಮಾಯವಾದ ಹಾಗೆ
ಬೆಳಕನೊಮ್ಮೆ ಅವನ ಕಡೆಗೆ
ಚೆಲ್ಲಿ ಮತ್ತೆ ಹೀಗೆ !
ಅಡಗಿಕೊಂಡನೆಲ್ಲಿ ಎಂದು
ಹುಡುಕಿಕೊಳ್ಳಬೇಕು
ಹುಡುಕಿಕೊಂಡ ಬಳಿಕ ತ್ವರಿತ
ಗಟ್ಟಿಗೊಳಿಸಬೇಕು !
ಕಳವು ಮಾಡುವವಗೆ ನಿಜಕು
ಇರುವುದೊಂದೆ ದಾರಿ ;
ಕಳವು ಮಾಡಿ ತಿರುಗಿ ಬರಲು
ಬೇಕು ಅದೇ ದಾರಿ !
ಬಯಕೆಗಳನು ಸೃಷ್ಟಿಮಾಡಿ
ತೂರಿಬಿಟ್ಟರೇನು?
ನಿಯತವಾಗಿ ಬಯಕೆಗಳನು
ಮೆಟ್ಟಿ ಹಾಕು ನೀನಿ !
***