ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೮

ಕೊರಡಿನಲ್ಲಿ ಕೂಡ…
ಕೊರಡಿನಲ್ಲಿ ಕೂಡ ಉರಿವ
ಸತ್ವ ತುಂಬಿದೆ ;
ಬರಡಿನಲ್ಲು ಕೂಡ ಮೊಳೆವ
ತತ್ವದಿಂಬಿದೆ !
ಮಣ್ಣಿನಲ್ಲು ಪಾರವಿರದ -
ಪಾರ ಗುಣಗಳು ;
ಹೊನ್ನಿಗಿರದಪಾರ ಶಕ್ತಿ-
ಸಾರದಣುಗಳು !
ಚರ್ಮಚಕ್ಷುಗಳಿಗೆ ಕಾಣ-
ದಿರುವ ವಿಸ್ಮಯ ;
ಸರ್ವ ಪ್ರಾಣಿಗಳಲು ಹುದುಗಿ-
ಕೊಂಡ ಸಂಭ್ರಮ !
ಗಾಳಿ ಸರ್ವ ಪ್ರಾಣಿಗಳಿಗು
ಪ್ರಾಣ ನೀಡುತ
ಕಾಣದಂತೆ ಕಾರ್ಯಗೈದು
ತ್ರಾಣವೀಯುತ !
ಕಣ್ಣುಗಳಿಗೆ ಕಾಣದಂತೆ
ತನ್ನ ಕಾಯಕ -
ವನ್ನು ಮಾಡಿ ಮುಗಿಸುವಂಥ
ಸ್ಪರ್ಶದಾ ಸುಖ !
ಕೊರಡಿನಲ್ಲಿ ಕೂಡ ಉರಿವ
ಸತ್ವ ತುಂಬಿದೆ ;
ಬರಡಿನಲ್ಲಿ ಕೂಡ ಬೆಳೆವ
ಶಕ್ತಿಗಿಂಬಿದೆ !
***
ದೇಹವೆಂಬ ದೇಗುಲ
ದೇಹದ ದೇಗುಲದಲ್ಲಿ ಮನೆ ಮಾಡಿಹ
ಆತ್ಮಕೆ ದಿಕ್ಕಿನ ಕಟ್ಟಿಲ್ಲ
ದಿಕ್ಕುಗಳೆಲ್ಲಕು ದಿಕ್ಕಾಗಿರುವುದು
ಮಿಕ್ಕೆಲ್ಲಕು ದಿಶೆ ಬಿಟ್ಟಿಲ್ಲ
ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ
ದಿಕ್ಕುಗಳಿಗೆ ದಕ್ಕದ ದೃಷ್ಟಿ
ಮೇಲ್ಗಡೆ ಕೆಳಗಡೆ ಆಚೆಗೆ ಈಚೆಗೆ
ಲೆಕ್ಕಕೆ ಸಿಕ್ಕದ ಈ ಸೃಷ್ಟಿ !
ಅಪರಂಪಾರದ ಪಾರಾವಾರಕೆ
ಪರಿಧಿಯ ಗೆರೆಯಿದೆಯೇ?
ಪ್ರಕಾಶಮಾನದ ವಿಕಾಸದದ್ಭುತ
ಶರಧಿಗೆ ನೆಲೆಯಿದೆಯೇ?
ಕಣ್ಣಿಗೆ ಕಾಣದ ತಿಳಿವಿಗೆ ನಿಲುಕದ
ಅದೃಶ್ಯದೀ ಶಕ್ತಿ
ವಿಸ್ಮಯ ಹುಟ್ಟಿಸಿ ನಿರಾಶೆ ಸೃಷ್ಟಿಸಿ
ನೀಡಲಿದೆಯೆ ಮುಕ್ತಿ?
ಮುಕ್ತನಾಗಬೇಕು ಎಂಬ
ಮುಕ್ತವಾದ ಭಾವನೆ
ಭುಕ್ತಿಯಾಗಿ ಶಕ್ತಿಯಾಗ-
ಲೆಂಬುದೇ ನಿವೇದನೆ !
***