ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೦

ಪುಲಕಿತವಾಯಿತು ನೆಲ
ಪುಲಕಿತವಾಯಿತು ನೆಲ, ನೀ ಸುರಿಯಲು
ಮುಂಗಾರಿನ ಮಳೆಯೆ
ಕಲುಷಿತವೆಲ್ಲವ ತೊಳೆಯುತ ಹರಿಯುವ
ಜಲಧಾರೆಯ ಸೆಲೆಯೆ!
ಸುಡು-ಸುಡು ಬಿಸಿಲಿಗೆ ಬಣ - ಬಣ ಒಣಗುತ
ಮೈಯೊಡ್ಡಿದ ಭೂಮಿ
ಕಣ-ಕಣದಲು ಜಲಧಾರೆಯ ಹೀರುತ
ಜಲಾವರ್ತಗಾಮಿ !
ಭೂತಾಯಿಗೆ ಹಸಿರುಡುಗೆಯನುಡಿಸುತ
ಮಾತಾಯಿಯ ಚೆಲುವು
ಮಾತಾಡಿತು ಚೆಲುವು
ಮಾತಾಡಿತು ಕಂಗೊಳಿಸುತ ಕಂಗಳ
ಆ ತಾಯಿಯ ಒಲವು !
ಹೊಸ ಚಿಗುರಿಗೆ ಹೊಸ ಜೀವವ ತುಂಬುವ
ಮನಮೋಹಕ ದಾತೆ
ಕಸಗಳಿಗೂ ಸಹ ಕಸುವನು ನೀಡುವ
ಮೃತ್ಯುಂಜಯ ಮಾತೆ !
ಪುಲಕಿತವಾಯಿತು ನೆಲ ನೀ ಸುರಿಯಲು
ಮುಂಗಾರಿನ ಮಳೆಯ
ಕಲುಷಿತವೆಲ್ಲವ ತೊಳೆಯುವ ಕಳೆಯುವ
ಮುಂಗಾರಿನ ಕಳೆಯೇ !
***
ಮೀಟು ತಂತಿಯ
ಮೀಟು ತಂತಿಯ ನಾದ ಮಿಲನಕೆ
ಗಾನಗಂಗೆಯ ತುಡಿತಕೆ ;
ನಾಟುವಂದದ ತಾಳ - ಮೇಳಕೆ
ಸಾನುರಾಗದ ದುಡಿತಕೆ !
ಭಾವಮಾಲೆಯ ನಾದಲೀಲೆಯ
ಕಲ್ಪನೆಯ ಆಲೋಕಕೆ ;
ಜೀವ ತುಂಬುವ ಭವ್ಯ ಬಿಂಬದ
ನಂಬಿಕೆಯ ಅಭಿಷೇಕಕೆ !
ದಿವ್ಯ ಮಿಲನದ ಸವ್ಯ ಸಲಿಲದ
ನವ್ಯ ರೂಪಿನ ಚಿಂತನ ;
ಭವ್ಯ ಭಾವದ ಕವ್ಯ ಕಲ್ಪದ
ಸತ್ವ ಸಿಂಚನ ಮಂಥನ !
ಮೀಟು ತಂತಿಯ ನಾದ ಮಿಲನದ
ಗಾನಗಂಗೆಯ ತುಡಿತಕೆ ;
ನಾಟುವಂದದ ತುಡಿತ - ಮಿಡಿತಕೆ
ಹಿಡಿದ ನಾಡಿಯ ಬಡಿತಕೆ !
***