ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೧

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೧

ಆಕಾಶವೊಂದು ದಿನ

ಭೂಮಿಗೆಂದಿತು ಹೀಗೆ : 

“ ಯಾಕಾಗಿ ನನ್ನತ್ತ ನೋಡುತಿರುವೆ?”

ಈ ಪ್ರಶ್ನೆಗಾಕಾಶ

ಭೂಮಿಗೆಂದಿತು ಹೀಗೆ : 

“ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು”

 

ಭೂತಾಯಿಯ ಪ್ರಕೃತಿಲೀಲೆ -

ಗಾಕಾಶವೆ ಕನ್ನಡಿ ; 

ಆಕಾಶಕೆ ಭೂಮಾತೆಯ

ವೈವಿಧ್ಯವೆ ಮುನ್ನುಡಿ !

 

ಮೇಲೆ ನೋಡೆ ನಿರಾಕಾರ

ನಿರಭ್ರತೆಯ ವಿಭ್ರಮ ;

ಲೀಲೆಯಾಗಿ ಪರಿವರ್ತಿತ -

ವಾದ ದಿವ್ಯ ಸಂಭ್ರಮ !

 

ಪ್ರಕೃತಿ ತನ್ನ ಲಾಲಿತ್ಯದ

ವೈವಿಧ್ಯದ ದೃಶ್ಯವ

ಬೆತ್ತಲಾಗಿ ತೋರಿಕೊಳುತ

ಆಕಾಶದ ಸ್ಪರ್ಶವ

 

ನಿನಗೆ ನಾನು ನನಗೆ ನೀನು

ತೋರಿಕೊಳುವ ಅಂತರ

ಮೇಲೆ-ಕೆಳಗೆ ಆಚೆ - ಈಚೆ

ಇರದೆ ಇರೆ ನಿರಂತರ

 

ನಿರಾಕಾರ ದರ್ಶನಕ್ಕೆ

ಸಾಕಾರದ ಸ್ಪರ್ಶನ

ಚಿದಾಕಾಶ ನಿದರ್ಶನಕೆ

ಸದವಕಾಶ ದರ್ಶನ !

***

‘ನಾನು’ ಎಂಬ ಚಿದಾನಂದ

‘ತಾನು’ ಎಂಬ ಅಹಂಕಾರ-

ವನ್ನು ಹರಣ ಮಾಡು

‘ನಾನು’ ಎಂಬ ಚಿದಾನಂದ

ಭಾವ ಸ್ಫುರಣೆ ನೀಡು !

 

ನನ್ನದೆಂಬುದೆಲ್ಲವನ್ನು

ನಿನ್ನ ಪದಕೆ ಸುರಿದು

ನಿನ್ನ ದಯೆಗೆ ತಲೆಯ ಬಾಗಿ

ನನ್ನತನವ ತರಿದು !

 

ನನ್ನ ಮೋಹ ಮದಗಳನ್ನು

ಗಂಟು ಕಟ್ಟಿ ಎಸೆದು

ನಿನ್ನ ನೇಹ-ಗೇಹಗಳಿಗೆ

ನಂಟು ಮಾಡಿ ಬೆಸೆದು !

 

ನಾನು ಬೇರೆ ನೀನು ಬೇರೆ

ಎಂಬ ದ್ವಂದ್ವ ತರಿದು

ಸಾನುರಾಗದಿಂದ ನಿನ್ನ

ಬಿಂಬದಲ್ಲಿ ಬೆರೆದು !

 

‘ತಾನು’ ಎಂಬ ಅಹಂಕಾರ-

ವನ್ನು ಹರಣ ಮಾಡು ;

‘ನಾನು’ ಎಂಬ ಚಿದಾನಂದ

ದಲ್ಲಿ ಲೀನ ಮಾಡು !

***