ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨

ಕಳೆದ ವಾರ ಕೆ ಪಿ ಭಟ್ಟರ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೆವು. ಈ ವಾರವೂ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ.
ನಡುವೆ ಖಾಲಿ ಖಾಲಿ
ಮೇಲೆ ಬಾನು ಕೆಳಗೆ ಭೂಮಿ
ನಡುವೆ ಖಾಲಿ - ಖಾಲಿ ;
ಖಾಲಿಯಾದಲ್ಲಿ ಹಾಲಿ
ಸುಡುವ ಬಿಸಿಲ ಬೇಲಿ !
ಸೂರ್ಯಬಿಂಬ ಬೆಳಕು ತುಂಬ
ಲೋಕಕ್ಕೆಲ್ಲ ಬಿಸಿಲು
ಅಲ್ಲಿ - ಇಲ್ಲಿ ಎಲ್ಲೆಯಿರದ
ಧಗೆಗೆ ಬಗೆಯ ಹುಯಿಲು
ರವಿಯ ಬೆಳಕಿನುರಿಯ ಜ್ವಾಲೆ
ಬುವಿಯನೆಲ್ಲ ಚುಂಬಿಸಿ ;
ಜೀವಿಗಳಿಗೆ ಚೈತನ್ಯದ
ಸಾರಗಳನು ತುಂಬಿಸಿ !
ಮೇಲೆ ನೋಡೆ ಆಕಾಶದ
‘ನಿರಾಕಾರ’ ಬೋಧನೆ ;
ಕೆಳಗೆ ನೋಡೆ ಭೂಮಿಗಿಹುದು
ವೈವಿಧ್ಯದ ಸಾಧನೆ !
ಮೇಲೆ ಬಾನು ಕೆಳಗೆ ಭೂಮಿ
ನಡುವೆ ಖಾಲಿ - ಖಾಲಿ
ಖಾಲಿಯಾದ ತಾಣದಲ್ಲಿ
ನಿರಾವರಣ ಪಾಲಿ !
***
ಹತ್ತಿರ - ದೂರ
ನಾನೂ ನೀನೂ ಹತ್ತಿರವಿದ್ದರು
ಮನಸು ದೂರ - ದೂರ
ನಾಗಾಲೋಟದ ಪ್ರಕ್ರಿಯೆಯಲ್ಲಿ
ಮನವಪಾರ ಪಾರ !
ನಾನೂ ನೀನೂ ಕೈಕೈ ಹಿಡಿದರು
ಮನಸು ಹರಿವುದೆಲ್ಲಿ?
ನಾನೂ ನೀನೂ ಜತೆ - ಜತೆಗಿದ್ದರು
ಕನಸು ಬಿರಿವುದೆಲ್ಲಿ?
ಹತ್ತಿರ - ದೂರ ಎಂಬುದೆಲ್ಲವೂ
ಮನಸಿಗಷ್ಟೇ ಬದ್ಧ
ಮನಸಿಗೆ ಮನಸು ಬೆಸುಗೆಗೊಂಡರೆ
ಅದೇ ಸರ್ವಸಿದ್ಧ !