ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩

‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು…

ಕನಸು

ಪುಡಿಯಾಗಿರುವ ನನ್ನ ಹಲವಾರು ಕನಸುಗಳ

ನಿಡಿಯಾಗಿಸಲು ನಾನು ಹೆಣಗಬೇಕು;

ನಿಡಿದಾದ ರೂಪಕನುಗುಣವಾದ ತೆರದಲ್ಲಿ

ಪಡಿ ಮೂಡಿಸಲು ಮತ್ತೆ ಸೆಣಸಬೇಕು !

 

ಮನದಲ್ಲಿ ಮೂಡಿಬಹ ಹಲವಾರು ಯೋಜನೆಗೆ

ಘನವಾದ ರೂಪವನು ನೀಡಬೇಕು;

ತನಗೆ ತನ್ನಷ್ಟಕ್ಕೆ ಪುಟಿದೆದ್ದು ಹೊರಬರುವ 

ಅನಗತ್ಯ ಯೋಚನೆಯ ತಡೆಯಬೇಕು !

 

ಮನವೆಂಬ ಕಳ್ಳನನು ಹಿಡಿವ ಸಾಹಸವನ್ನು

‘ಅನುಮಾನ’ ವೆಂಬುವವ ಮಾಡಬಹುದೇ ?

ಮನವೆಂಬ ಕಳ್ಳನನು ಹಿಡಿವ ಗಟ್ಟಿಗತನವ

ಮನದಿಂದಲೇ ಮಾಡಿ ಮುಗಿಸಲಹುದೇ?

 

ಮನವೆಂಬ ಕಳ್ಳನನು ಹಿಡಿದು ಕಟ್ಟಲು ಬೇರೆ

ಜನವೇಕೆ ಮನವೆಂಬ ಪೋಲೀಸ ಸಾಕು;

ಮನವೆಂಬ ಕಳ್ಳನೂ ಪೋಲೀಸನೂ ಕೂಡ

ಕೊನೆಗೊಮ್ಮೆ ‘ನಿಜ’ದೆಡೆಗೆ ಸಾಗಬೇಕು !

***

ಇದೆಯೆಂದರೆ ಇದೆ

ಆಸ್ತಿಕನೆಂದನು ; ದೇವರು ಎಂದರೆ

ಶಿಲೆಯಲ್ಲೆ ‘ನೆಲೆ’ಯಾದವನು

ಆಸ್ತಿಕನೆಂದನು ; ದೇವರು ಎಂದರೆ

‘ನೆಲೆ’ಯಲ್ಲೇ ‘ಸೆಲೆ’ಯಾದವನು !

 

ನಾಸ್ತಿಕನೆಂದನು ; ದೇವರು ಎಂದರೆ

‘ನ-ಆಸ್ತಿ’ ಎಂಬುವ ಇಲ್ಲದವ ;

ಇಲ್ಲದ ದೇವರ ಸಲ್ಲದ ಪರಿಯಲಿ

ಪೂಜಿಸುವವನೇ ಸಲ್ಲದವ !

 

ಇದೆಯೆಂದರೆ ‘ಇದೆ’ ಇದರೆಂದರೆ ‘ಇರ’

‘ನಾನೆಂ’ಬುದು ತಾನೆದೆಯಲ್ಲ;

‘ನಾನಿಲ್ಲೆ’ನ್ನುವನಾವನು ದೊರೆಯನು

‘ನಾನೇ ಎಲ್ಲಕು ನಿಜ ಮೂಲ !’