ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೪

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೪

ಕೆ. ಪಿ. ಭಟ್ಟರ ‘’ ಮರದ ನೆರಳಿನಲಿ’ ಕವನ ಸಂಕಲನದಲ್ಲಿರುವ ಕವನಗಳನ್ನು ಒಂದೊಂದಾಗಿ ಆಯ್ದು ಪ್ರಕಟ ಮಾಡುವ ಸಮಯದಲ್ಲಿ ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಸಾಹಿತಿ ಬಿ ಎ ಸನದಿ ಅವರ ಮಾತುಗಳನ್ನೂ ಓದುವ…

“೧೯೯೪ರ ಸುಮಾರಿಗಿರಬೇಕು, ನಾನಿನ್ನೂ ಮುಂಬಯಿ ನಿವಾಸಿಯಾಗಿದ್ದ ಕಾಲ. ಶ್ರೀ ಚಿಂತಾಮಣಿ ಕೊಡ್ಲೆಕೆರೆಯವರ 'ಭೂಮಧ್ಯ ರೇಖೆ' ಎಂಬ ಕವನ ಸಂಕಲನ ನೋಡಲು ದೊರೆತಾಗ ಅದರ ಸರಳ ಸುಂದರ ಮುದ್ರಣವನ್ನು ಹಾಗೂ ಮುಖಪುಟವನ್ನು `ಗಮನಿಸಿ ನನಗೆ ತುಂಬ ಆನಂದವೆನಿಸಿತ್ತು. ಅದನ್ನು ಮುದ್ರಣ ಮಾಡಿದವರಾರೆಂದು ಪ್ರಕಾಶನದ ವಿವರಗಳ ಪುಟ ತೆರೆದು ನೋಡಿದರೆ ಕುಮಟಾದ ಶ್ರೀ ಕೆ. ಪಿ. ಭಟ್ಟ ಅವರ ಗಜಾನನ ಪ್ರೆಸ್ ಎಂದು ತಿಳಿಯಿತು. ನಾನು ಅನೇಕ ಸಲ ಕುಮಟಾಕ್ಕೆ ಹೋಗಿ ಬಂದಿದ್ದರೂ ಈ ಗಜಾನನ ಪ್ರೆಸ್ಸಿನ ಹೆಸರನ್ನೇ ಕೇಳಿರಲಿಲ್ಲ. ಅದಕ್ಕೇ ಆ ಹೆಸರು ಕೇಳಿದೊಡನೆ ಆಶ್ವರ್ಯವೂ ಆಯಿತು. ಆನಂದವೂ ಆಯಿತು. 'ಭೂಮಧ್ಯ ರೇಖೆ'ಯ ಮುದ್ರಣವನ್ನೇ ಉಲ್ಲೇಖಿಸಿ, ಮುಂಬೈಯಲ್ಲಾದರೆ ಮುದ್ರಣದ ವೆಚ್ಚ ಬಹಳೇ *ಹೆಚ್ಚಾಗುವದೆಂಬ ಹಿಂಜರಿಕೆಯಿಂದ ಕಳೆದೆರಡು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಸಮಗ್ರ ಕಾವ್ಯದ ಮುದ್ರಣದ ವಿಚಾರವಾಗಿ ಶ್ರೀ ಭಟ್ಟರಿಗೆ ನಾನೊಂದು ಕಾಗದ ಬರೆದು ಮುದ್ರಣದ ಅಂದಾಜು ವೆಚ್ಚ ಮತ್ತು ಅವಧಿ ಕುರಿತು ತಿಳಿಸಬೇಕೆಂದು ಕೇಳಿದೆ. 

ಸುಮಾರು 15 ದಿನಗಳಲ್ಲಿ 'ಅವರ ಮಾರೋಲೆ ಬಂತು. ಅವರು ನೀಡಿದ ವಿವರಗಳೆಲ್ಲ ನನಗೂ, ನನ್ನ ಸಮಗ್ರ ಕಾವ್ಯ ಸಂಪುಟದ ಬಗ್ಗೆ ನನಗಿಂತಲೂ ಹೆಚ್ಚು ಆಸಕ್ತಿ ವಹಿಸಿದ್ದ ನನ್ನ ಹಿತೈಷಿಗಳೂ, ನನಗಿಂತ ಮೊದಲೇ ಆಕಾಶವಾಣಿ ಸೇವೆಯಿಂದ ನಿವೃತ್ತರಾಗಿ 'ಸಂಗೀತ-ಕಾವ್ಯ ಶಾಸ್ತ್ರ ವಿನೋದೇನ' ಕಾಲ ಕಳೆಯುತ್ತಿದ್ದ ಧೀಮಂತರೂ ಆಗಿದ್ದ ಪಂ. ರಮೇಶ ನಾಡಕರ್ಣಿಯವರಿಗೂ ಒಪ್ಪಿಗೆಯಾಗುವಂತಹವೇ ಆಗಿದ್ದವು. ನಾವಿಬ್ಬರೂ ಚರ್ಚಿಸಿ, ಆ ವರೆಗೆ ಬೆಳಕು ಕಂಡಿದ್ದ ನನ್ನ ೧೨ ಕವನ ಸಂಗ್ರಹಗಳ ಎರಡು ಕಂತೆಗಳನ್ನು ಸಿದ್ಧಗೊಳಿಸಿದೆವು. ಒಂದು ಕಂತೆಯನ್ನು ಮುದ್ರಣದ ಕೆಲಸಕ್ಕೆಂದು ಕುಮಟಾದ ಶ್ರೀ ಗಜಾನನ ಪ್ರೆಸ್ಸಿಗೂ, ಇನ್ನೊಂದು ಕಂತೆಯನ್ನು ಮುನ್ನುಡಿಗಾಗಿ ಖ್ಯಾತ ವಿಮರ್ಶಕರಾದ ಗೋಕರ್ಣದ ಡಾ॥ ಗೌರೀಶ ಕಾಯ್ಕಿಣಿಯವರಿಗೂ ಕಳಿಸುವದೆಂದು ಮಾತಾಡಿಕೊಂಡೆವು. ಆದರೆ ಈ ಮಹತ್ವದ ಹಂತದಲ್ಲಿ ಅಂಚೆ ಇಲಾಖೆಯನ್ನು ಅವಲಂಬಿಸದೆ, ನಾನೇ ಸ್ವತಃ ಕುಮಟೆಗೂ, ಗೋಕರ್ಣಕ್ಕೂ ಬಂದು ಮುದ್ರಣ ಹಾಗೂ ಮುನ್ನುಡಿಯ ಲೇಖನದ ಕೆಲಸಗಳೆರಡೂ ಏಕಕಾಲಕ್ಕೆ ನಡೆಯುವಂತೆ ಚಾಲನೆ ನೀಡುವದೆಂದು ನಿರ್ಣಯಿಸಿ ನಾನು ಮೊದಲು ಕುಮಟಾಕ್ಕೆ ಧಾವಿಸಿದೆ.

(ಉಳಿದ ಭಾಗ ಮುಂದಿನ ವಾರ)

ಹಕ್ಕಿಯಂತೆ ಹಾರಬೇಕು

ಹಕ್ಕಿಯಂತೆ ಹಾರಬೇಕು

ರೆಕ್ಕೆ ಬಡಿದು ಪಟಪಟ ;

ಉಕ್ಕಿ ಬರುವ ಉತ್ಸಾಹಕೆ

ಲೆಕ್ಕವಿಡದೆ ಸಟ-ಸಟ !

 

ಹಕ್ಕಿಯಂತೆ ಹಾರಬೇಕು

ಮುಚ್ಚು ಮರೆಯನೆಣಿಸದೆ ;

ಬಿಕ್ಕಳಿಸದೆ ಉಲಿಯಬೇಕು

ಮಿಕ್ಕಿಮೀರಿ ಸೆಣಸದೆ !

 

ಹಕ್ಕಿಯಂತೆ ಹಾರಬೇಕು

ಗಾಳಿಯಲ್ಲಿ ತೇಲುತ ;

ಸಿಕ್ಕ ಸಿಕ್ಕ ಕಡೆಗೆ ಉಲಿದು

ಬಂದು ಗೂಡು ಸೇರುತ !

 

ಚಿಮ್ಮಿ ಬರುವ ಉತ್ಸಾಹಕೆ

ಭಂಗ ಬರದ ತೆರದಲಿ

ಕಮ್ಮಿಯಾಗದಂತೆ ಸ್ಪೂರ್ತಿ

ರಂಗ ರಂಗು ಪಡೆಯಲಿ !

 

ಹಕ್ಕಿಯಂತೆ ಹಾರಬೇಕು

ಗಾಳಿಯಲ್ಲಿ ತೇಲುತ ;

ರೆಕ್ಕಿ ಬಡಿದು ಚಿಮ್ಮಿ ಹಾರಿ

ಆನಂದದಿ ಮೀಯುತ !

***

ಬೇಡವಾದ ಶೃಂಖಲೆ

ನಮಗೆ ನಾವೆ ಕಟ್ಟಿಕೊಂಡ

ಬೇಡವಾದ ಶೃಂಖಲೆ

ನಾವು ತಾನೆ ಕಳಚಿಕೊಂಡರದುವೆ

ದೊಡ್ದ ಸಾಧನೆ!

 

ಯಾರ ಕೃಪೆಯ ಬಯಸಬೇಕು,

ಈ ಶೃಂಖಲೆ ಹರಿಯಲು ?

ದಾರಿದೀಪದಂಥ ದಿವ್ಯ

ಅನುಗ್ರಹವ ಪಡೆಯಲು !

 

ನಿನ್ನ ಬಿಟ್ಟು ಅನ್ಯರಿಲ್ಲ -

ವೆಂಬುದೊಂದೆ ಭಾವನೆ

ಸಾಕು ! ನಿನ್ನ ಚರಣಕಮಲ-

ಕಿದೋ ನನ್ನ ವಂದನೆ !

 

ನನ್ನ ಮನವನೆಲ್ಲ ನಿನ್ನ

ಪಾದತಳಕೆ ಸೆಳೆದುಕೋ

ನಿನ್ನ ದಯಾವಾರಿಧಿಯಲಿ

ನನ್ನತನವ ಕಳೆದುಕೋ !

***