ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೫

‘ಈ ಮರದ ನೆರಳಿನಲಿ’ ಕವನ ಸಂಕಲನಕ್ಕೆ ಬಿ ಎ ಸವದಿಯವರು ಬರೆದ ಮುನ್ನುಡಿಯ ಮುಂದಿನ ಭಾಗ…
“ಶ್ರೀ ಭಟ್ಟ ಅವರು ಮೊದಲೇ ಫೋನಿನಲ್ಲಿ ಸೂಚಿಸಿದಂತೆ ಕುಮಟೆಯ ಹಳೆಯ ಬಸ್ ಸ್ಟ್ಯಾಂಡ್ ಬದಿಯೊಳಗಿರುವ ಕಿಕ್ಕಿಂಧೆಯಂಥ ಸಂದಿಯಲ್ಲಿ ಅಳುಕುತ್ತಲೇ ಹತ್ತಿಪ್ಪತ್ತು ಹೆಜ್ಜೆ ಹಾಕಿದರೆ ಸಿಕ್ಕಿತ್ತು ಗಜಾನನ ಪ್ರೆಸ್! ನಾನು ಹೊರಗಿನ ಬಿಸಿಲಿನಲ್ಲಿ ನಡೆದು ಒಳಹೊಕ್ಕಿದ್ದರಿಂದಲೋ, ಆ ಕಟ್ಟಡದ ಬೆಳಕಿನ ವ್ಯವಸ್ಥೆಯೇ ವರ್ಣನಾತೀತವಾಗಿದ್ದರಿಂದಲೋ ನನಗಂತೂ ಬಾದಾಮಿಯ ಗುಹೆಗಳೇ ಕಣ್ಣೆದುರು ಬಂದು ನಿಂತ ಹಾಗಾಯಿತು. ನಾನು ಆ ಹಳೆಯ ಕಟ್ಟಡದ ಮುರುಕಲು ಬಾಗಿಲ ಹಲಗೆಯೊಂದನ್ನು ಮೆಲ್ಲಗೆ ದೂಡಿ, ಅಲ್ಲಿಯೇ ಯಾವುದೋ ಪುಸ್ತಕದ ಬೈಂಡಿಂಗ್ ಕೆಲಸದಲ್ಲಿ ನಿರತರಾದ ಕೆಲಸಗಾರರನ್ನು ಕೇಳಿದೆ : "ಪ್ರೆಸ್ ಮಾಲಿಕರು ಒಳಗಿದ್ದಾರಾ ?
ಅವರೊಳಗೊಬ್ಬ ಒಳಗಿನ ಕೋಣೆಯಲ್ಲಿ ಉರಿಯುತ್ತಿದ್ದ ತೂಗು ಬಲ್ಬಿನತ್ತ ಕೈಮಾಡಿ "ಅವರೇ ನೋಡಿ" ಎಂದ. ನಾನು ಮತ್ತೊಂದು ಹೊಸತಿಲು ದಾಟಿ ಒಳಗೆ ಹೋದೆ. ಒಂದು ಕಡೆ ನಮ್ಮಂಥವರು ಕೂಡ್ರಲಿಕ್ಕಿಟ್ಟ ಒಂದು ಬೆಂಚು, ಇನ್ನೊಂದು ಕಡೆ ಲಯಬದ್ಧವಾಗಿ ಸದ್ದುಮಾಡುತ್ತಿದ್ದ ಹಳೆಯ ಮುದ್ರಣ ಪದ್ಧತಿಯ ಟ್ರೇಡಲ್ ಮಷಿನ್, ಮತ್ತೆ ಒಂದು ಗೋಡೆಗುಂಟ ಆನಿಸಿಟ್ಟಿದ್ದ ಹಳೆಯ ರಾಕ್. ಇವೆಲ್ಲವುಗಳ ನಡುವೆ ಮೇಟಿಯಂತೆ ನಿಂತಿದ್ದ ಒಂದು ಕಂಬ. ಅದಕ್ಕೆ ಹೊಂದಿಯೇ ಇಟ್ಟಿದ್ದ ಮೇಜು. ಈ ಎಲ್ಲ 'ಪುರಾತನ'ವೆನಿಸುವ ಯಂತ್ರೋಪಕರಣ, ಕುರ್ಚಿ, ಮೇಜುಗಳು ಕಂಡೂ ಕಾಣದಂತಿರುವಷ್ಟು ಮಂದ ಬೆಳಕಿನ ಬಲ್ಬು ! ಅದರ ಕೆಳಗೇ ಕುಳಿತು ಕರಡು ತಿದ್ದುತ್ತಿದ್ದ ಶ್ರೀ ಕೆ. ಪಿ. ಭಟ್ಟರು! ಆ ಪ್ರೆಸ್ಸಿನ ಪರಸ್ಥಿತಿಯನ್ನು ನೋಡಿ "ಅಬ್ಬ ! ನನ್ನ ಸಮಗ್ರ ಕಾವ್ಯದ ಮುದ್ರಣ ಇಲ್ಲಿಯೇ ನಡೆಯುವದೇ!" ಎಂದು ಮನಸ್ಸಿನಲ್ಲಿಯೇ ಗೊಣಗುತ್ತ ಶ್ರೀ ಭಟ್ಟರ ಮುಂದೆ ಹೋಗಿ ನಿಂತು "ನಮಸ್ಕಾರ. ನಾನು ಸನದಿ, ಮುಂಬಯಿಯಿಂದ ಬಂದಿದ್ದೀನಿ" ಎನ್ನುತ್ತಲೇ ಭಟ್ಟರು ಮುಗುಳು ನಗುತ್ತ ಎದ್ದು ನಿಂತು ನಮಸ್ಕಾರ ಮಾಡಿದಾಗ, ಆ ಕೋಣೆಯಲ್ಲಿ ಒಮ್ಮೆಲೇ ಹತ್ತು ಬಲ್ಬು ಹೊತ್ತಿಕೊಂಡಂತೆ ಭಾಸವಾಯಿತು ನನಗೆ ! ಆ ಒಂದು ಕ್ಷಣದಲ್ಲೇ ಭಟ್ಟರು ನನ್ನ ಮೇಲೆ ಮೋಡಿ ಮಾಡಿಬಿಟ್ಟಿದ್ದರು. ಮುಂದೆ ನಡೆದದ್ದು ಉಭಯ ಕುಶಲೋಪರಿ. ಆ ಅರೆಬರೆ ಬೆಳಕಿನಲ್ಲಿ ಆ ಪ್ರೆಸ್ಸಿನಲ್ಲಿ ನನಗೆ ಕಂಡು ಬಂದ ಅಭಾವಗಳನ್ನೆಲ್ಲ ಮೀರಿಸುವ ಪ್ರಭಾವ ಭಟ್ಟರ ಸೌಮ್ಯ ಮಾತುಗಳಲ್ಲಿತ್ತು. ಭಟ್ಟರು ತರಿಸಿದ ಕುಮಟಾ ಕಷಾಯ್ ಸೇವನೆಯ ಬಳಿಕ ಶ್ರೀ ಭಟ್ಟರು ತಮ್ಮ ಪ್ರೆಸ್ಸಿನ ಒಳಭಾಗವನ್ನು ತೋರಿಸಲು ನನ್ನನ್ನು ಕರೆದುಕೊಂಡು ಮತ್ತೊಂದು ಹೊಸತಿಲು ದಾಟಿದರು. ನಾನು ನನ್ನ ಕೌತುಕಗಣ್ಣುಗಳಿಂದ ಆಚೆ-ಈಚೆ ನೋಡುತ್ತ ಅವರನ್ನು ಹಿಂಬಾಲಿಸಿದೆ. ನೆಟ್ಟಗೆ ಹತ್ತು ಹೆಜ್ಜೆ ಒಳಗೆ ಹೋಗಿ, ಎಡಗಡೆಯ ಬಾಗಿಲು ದಾಟಿ ಕೊನೆಯ ಕೋಣೆಗೆ ಹೋದೆವು. ಅಲ್ಲಿ ಸಾಲಾಗಿ ಇಟ್ಟ ಅಕ್ಷರದ ಮೊಳೆಗಳ ಸ್ಟ್ಯಾಂಡ್ಗಳು, ಕಣ್ಣೆವೆ ಮುಚ್ಚಿ ತೆರೆಯುವಷ್ಟು ಹೊತ್ತಿನಲ್ಲೆ ಹತ್ತಿಪ್ಪತ್ತರಷ್ಟು ಮೊಳೆಗಳನ್ನು ಜೋಡಿಸುವ ಮೂವರು ಮಹಿಳೆಯರು. "ಮುಂದಿನ ವಾರದಿಂದ ನೀವೆಲ್ಲ ಇವರ ಕವಿತಾ ಪುಸ್ತಕದ ಕೆಲ್ಸಾ ಮಾಡೋದಿದೆ" ಎಂದು ಭಟ್ಟರು ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಇಂಥ ಹಳೆಯ ಮಾದರಿಯ ಪ್ರೆಸ್ಸಿನಲ್ಲಿ ೬-೮ ಜನರ ಹೊಟ್ಟೆ ಬಟ್ಟೆ ನೋಡಿಕೊಳ್ಳುವ ಶ್ರೀ ಭಟ್ಟರ ಬಗ್ಗೆ ನನಗೆ ಅಭಿಮಾನವೇ ಅನಿಸಿತು. ಈ ಶ್ರೀ ಕೃಷ್ಣ ಭಟ್ಟರು, ತಮ್ಮ ಕಾಗದದಲ್ಲಿ ಮೊದಲೇ ಭರವಸೆ ನೀಡಿದಂತೆ ಮೂರೇ ಮೂರು ತಿಂಗಳಲ್ಲಿ ಕೈಮೊಳೆ ಜೋಡಿಸಿದ ಐನೂರು ಪುಟಗಳ ನನ್ನ ಸಮಗ್ರ ಕಾವ್ಯ ಸಂಪುಟವನ್ನು ನನ್ನ ಮುಂಬೈ ಮಿತ್ರರೆಲ್ಲ ಮೆಚ್ಚಿಕೊಳ್ಳುವ ಹಾಗೆ ಸಿದ್ಧಪಡಿಸಿ ಕೊಟ್ಟ 'ಪವಾಡ' ಮೆರೆದವರೆಂಬ ನೆನಪಿನೊಡನೆ, ಇಲ್ಲಿ ಇಷ್ಟು ಸುದೀರ್ಘ ಪ್ರಸ್ತಾವನೆ ಹಾಕಬೇಕಾಯಿತು !
(ಇನ್ನಷ್ಟು ಮುಂದಿನ ವಾರ)
ಚಕೋರವೆಂದಿತು…
ಚಕೋರವೆಂದಿತು ; ಚಂದ್ರಮನಿಗೆ - ‘ನೀ
ದಿನವೂ ಕ್ಷೀಣಿಪುದೇತಕ್ಕೆ?
ಚಂದ್ರಮನೆಂದನು : ‘ಚಕೋರಿ, ಈ ಪರಿ
ಕತ್ತಲೆಗಳುಕುವುದೇತಕ್ಕೆ?’
ಕತ್ತಲೆ ಕವಿದರೆ ನೀ ಕಣ್ಮುಚ್ಚುವೆ
ಬೆಳಕಿನ ನೆನಪನು ಮಾಡುತ್ತ
ಬೆಳಗಾದರೆ ನೀ ಪುನರಪಿ ಅರಳುವೆ
ಪುಳಕಿತ ವದನವ ತೋರುತ್ತ !
ಚಂದ್ರಮನಿಗೆ ಭಯ : ಸೂರ್ಯನ ಬೆಳಕನು
ಎದುರಿಸಲಾರದ ಸಂಕಷ್ಟ.
ಸೂರ್ಯನಿಗಾದರೊ, ಚಂದ್ರನ ಸೊಂಪಿನ
ತಂಪನು ಅನುಭವಿಸುವದಿಷ್ಟ !
ನಮಗೋ, ಹಗಲಿನ ಸುಂದರ ಬೆಳಕಿನ
ಬಳಕೆಯ ಫಲವೂ ಸಿಗಬೇಕು;
ಚಂದ್ರನ ಬೆಳಕಿನ ಅಂದದ ಸುಂದರ
ಸಂಭ್ರಮ ಸಹ ಜತೆಗಿರಬೇಕು !
ಸೂರ್ಯನ ಪ್ರಖರತೆ ಚಂದ್ರನ ಸೌಮ್ಯತೆ
ಬೇರ್ಪಡಿಸಲು ಬರದನುಬಂಧ ;
ಹಗಲೂ ಇರುಳೂ ಸಂಧಿಸಿದಾಗಲೆ
ಹಾಯೆನಿಸುವುದಾ ಸಂಬಂಧ !
***
ಗುಲಾಬಿ
ಮುಳ್ಳಕಂತಿಯಲಿ ಮುಗ್ಧತನವ -
ನರಳಿಸುವ ಸ್ನಿಗ್ಧ ಭಾವ ;
ಚೆಲುವಿಗೊಂದು ಹೊಸ ಜೀವಕಳೆಯ
ಕರುಣಿಸಿದ ಕರಣ ಜೀವ !
ತೆಳುವಾದ ಎಸಳು ತಿಳಿಯಾದ ನೊಸಲ
ನೇವರಿಪ ನಯದ ರೂಪು ;
ನಯವಾದ ಮುಖದ ಹದವಾದ ಸುಖದ
ಸೊಬಗನ್ನು ಸೂಸುವೊನಪು !
ಮನ ಪುಳಕಗೊಳಿಸಿ ಮನ ಸೆಳೆದುಕೊಳುವ
ಮನಮೋಹಕತೆಯ ಬಿಂಬ ;
ಕನಸಿಗರ ಕಾಮನೆಯ ಹುರುಳನರಳಿಸುವ
ಅನುರಾಗದೊಲವು ತುಂಬ !
ಮುಳ್ಳ ಕಂಟಿಯಲಿ ಮೋಹಕತೆಯ ಮುದ
ಪೂಸಿ ಸೂಸಿ ಅರಳಿ ;
ಮುಳ್ಳು ಮೊನಚ ಮರೆಮಾಚಿ ಮುಗ್ಧತೆಯ
ಸೊಬಗ ತರುತ ಮರಳಿ !
***