ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೬

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೬

‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ…

“ಅದಾಗಿ ಸುಮಾರು ೧೫ ವರ್ಷಗಳಾದವು. ನಾನು ಮುಂಬಯಿ ಬಿಟ್ಟು ಈ ಕುಮಟಾದಲ್ಲೇ ಮನೆ ಮಾಡಿಯೂ ಆರೇಳು ವರ್ಷಗಳಾದವು. ಶ್ರೀ ಕೃಷ್ಣ ಭಟ್ಟರು ತಮ್ಮ ಕೈಯಲ್ಲಿ ಅಷ್ಟೊಂದು ಬಲವಿಲ್ಲದ ಕಾಲದಲ್ಲಿ ನೆಲೆಯೂರಿದ್ದ ಮೊದಲಿನ ಕಿಷ್ಕಿಂದೆಯಿಂದ ಹೊರಬಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಈಗ ಆಧುನಿಕ ಆಫ್‌ಸೆಟ್ ಪ್ರೆಸ್ ನಡೆಸುತ್ತಿದ್ದು ಒಂದೇ ಊರಿನಲ್ಲಿದ್ದರೂ ನಮ್ಮ ಭೆಟ್ಟಿಗಳು ಮಾತ್ರ ಬಲು ತುಟ್ಟಿಯಾಗಿವೆ.

ಹೀಗಿರುವಾಗ, ಸುಮಾರು ಒಂದು ತಿಂಗಳ ಹಿಂದೆ ಶ್ರೀ ಕೃಷ್ಣ ಭಟ್ಟ ಅವರು ನನಗೆ ಫೋನ್ ಮಾಡಿ ಒಂದು ಅಚ್ಚರಿ ಮೂಡಿಸಿದರು.

"ನಾನೊಂದಿಷ್ಟು ಕವಿತೆಗಳನ್ನು ಬರೆದಿದ್ದೀನಿ"

"ತುಂಬಾ ಸಂತೋಷ"

ಆತ “ಬರೀ ಸಂತೋಷ ಪಟ್ಟರೆ ಆಗಲಿಲ್ಲ. ಆ ದಿಕ್ಕಿನಲ್ಲಿ ನಾನು ಈಗಷ್ಟೇ ಅಂಬೆಗಾಲು ಇಡುವವ, ಈ ಕವಿತೆಗಳ ಮೇಲೆ ಕಣ್ಣಾಡಿಸಿ, ಅಗತ್ಯವಿದ್ದಲ್ಲಿ ಕೈಯಾಡಿಸಿ ಕೊಡಬೇಕು"

“ಅಗತ್ಯ ನೋಡಿಕೊಡುತ್ತೇನೆ"

“ನೀವೇ ನಾಲ್ಕು ಮಾತುಗಳ ಮುನ್ನುಡಿಯನ್ನೂ ಬರೆದು ಕೊಡಬೇಕು"

ಆಗ ಮಾತ್ರ ನನ್ನ ಬಾಯಿ ಕಟ್ಟಿದಂತಾಯಿತು.

ಕವಿತೆಗಳ ಕಂತೆಯೂ ನನ್ನ ಕೈಗೆ ಬಂತು. ಮೊದಮೊದಲು ಖ್ಯಾತ ಲೇಖಕರ ಕಾದಂಬರಿಗಳನ್ನೋದುವ, ಆಗೀಗ ಕತೆಗಳನ್ನು ಬರೆದು ಪ್ರಕಟಿಸುವ ತಮ್ಮ ಹವ್ಯಾಸದ ಬಗ್ಗೆ ಹೇಳಿದ್ದರೂ ಒಂದು ಸಲವೂ ಭಟ್ಟರು ತಮ್ಮ ಕವಿತೆಗಳ ಬಗ್ಗೆ ನನ್ನೆದುರು ಮಾತೆತ್ತಿದವರೇ ಅಲ್ಲ. ಈಗ ಅವರ ಕವಿತೆಗಳ ಕಟ್ಟಿನ ಮೇಲೆ ಕಣ್ಣಾಡಿಸಿ ಖುಷಿಪಟ್ಟೆ, ಯಾಕೆಂದರೆ ಶ್ರೀ ಭಟ್ಟರ ಒಂದು ಕವಿತೆಯೇ ಅವರ ಇತರ ಎಲ್ಲ ಕವಿತೆಗಳಿಗೆ ಮುನ್ನುಡಿ ಬರೆದದ್ದು ನನ್ನ ಗಮನ ಸೆಳೆಯಿತು :

ಭೂತಾಯಿಯ ಪ್ರಕೃತಿಲೀಲೆ-

ಗಾಕಾಶವೆ ಕನ್ನಡಿ

ಆಕಾಶಕೆ ಭೂಮಾತೆಯ

ವೈವಿಧ್ಯವೆ ಮುನ್ನುಡಿ !

(ಮುಂದಿನ ವಾರ ಮುಂದುವರಿಯುತ್ತದೆ)

***

ಸಾಕು - ಬೇಕು

ನನಗೆ ನನ್ನ ಚಿಂತೆಯೊಂದೆ

ಸಾಕು ಎಂಬ ಭಾವನೆ

ತನಗೆ ತಾನೆ ಸ್ಫುರಣಗೊಂಡು

ಬೆಳೆದು ನಿಲುವ ಕಾಮನೆ !

 

ಇಷ್ಟಪಟ್ಟುದೆಲ್ಲ ಸಿಗದ -

ನಿಷ್ಟವೆನಿಪ ಈ ಭ್ರಮೆ

ಸ್ಪಷ್ಟವಾದ ನಿಲುವು ತಿಳಿಯ

ದಷ್ಟು ಬೆಳೆದ ದಿಗ್ಭ್ರಮೆ !

 

‘ಬೇಕು’ ಎನುವ ಮಹಾಕಾಂಕ್ಷೆ

ಬೆಳೆಯುವುದೇಕೆ ಈ ಪರಿ?

‘ಸಾಕು’ ಎನುವ ಸಂತೃಪ್ತಿಯು

ಮೂಡಲಾರದೇ? ಸರಿ !

 

ಬೇಕು - ಬೇಡ ಸಾಕು - ಬೇಕು

ದ್ವಂದ್ವಗಳದೆ ಹಾವಳಿ

ಜೀಕಬೇಕು ಜೀವನದಲಿ

ಪರ-ವಿರೋಧದಾ ಸುಳಿ !

 

ನನಗೆ ನಾನೆ ಚಿಂತೆಪಟ್ಟ -

ರೇನು ದೊಡ್ಡ ಸಾಧನೆ ?

ನನಗೆ ನಾನೆ ತೃಪ್ತಿಪಟ್ಟ-

ರದುವೆ ನಿಜದ ಬೋಧನೆ !