ಕೆರೆ ತುಂಬುವ ಕೆಲಸಕ್ಕೆ ಆದ್ಯತೆ ಸಿಗಲಿ

ಕೆರೆ ತುಂಬುವ ಕೆಲಸಕ್ಕೆ ಆದ್ಯತೆ ಸಿಗಲಿ

ಮೇ ತಿಂಗಳ ಮೂರನೇ ವಾರದಲ್ಲಿ ರಾಜ್ಯವು ತೀವ್ರ ಬರದ ದವಡೆಯಲ್ಲಿ ಸಿಲುಕಿದ್ದಾಗ, ೨೦೨೪ರ ಮುಂಗಾರು ಕೂಡ ರಾಜ್ಯದ ಪಾಲಿಗೆ ಆಶಾದಾಯಕವಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೃಷ್ಟವಶಾತ್ ಮೇ ತಿಂಗಳ ಕೊನೆ ವಾರದಿಂದ ಆರಂಭವಾಗಿ ನಿರಂತರವಾಗಿ ಸುರಿದ ಮಳೆ ಜುಲೈವರೆಗೂ ಮುಂದುವರಿದಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ೧೦ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ವಿದ್ಯುಚ್ಛಕ್ತಿಗೆ ಪೂರಕವಾದ ಮಲೆನಾಡಿನ ಜಲಾಶಯಗಳು ಅರ್ಧದಷ್ಟು ಭರ್ತಿಯಾಗಿವೆ. ಕೃಷ್ಣರಾಜ ಸಾಗರ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳು ತುಂಬಿರುವುದು ಮುಂದಿನ  ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಎರಡು ಕೋಟಿ ಜನತೆಯ ಕುಡಿಯುವ ನೀರಿನ ಆತಂಕವನ್ನು ಕಡಿಮೆ ಮಾಡಿದೆ.  ಮುಖ್ಯವಾಗಿ ತಮಿಳುನಾಡಿನ ಕಾವೇರಿ ನದಿ ನೀರಿನ ಪಾಲು ನಿಗದಿಗಿಂತ ಹೆಚ್ಚಾಗಿಯೇ ಹರಿದು ಹೋಗಿದೆ. ಮತ್ತೊಮ್ಮೆ ಸುಪ್ರೀಂಕೋರ್ಟ್ ಕಟಕಟೆ ಏರುವ ಅನಿವಾರ್ಯತೆ ತಪ್ಪಿದೆ. 

ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರದ (ಕೆ ಎಸ್ ಎನ್ ಡಿ ಎಂ ಸಿ) ವರದಿಯಂತೆ, ಜುಲೈ ೨೪ರ ವೇಳೆ ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ೬೫೫ ಟಿ ಎಂ ಸಿ ನೀರಿದೆ. ಕಳೆದ ವರ್ಷ ಇದೇ ದಿನ ೩೭೦ ಟಿ ಎಂ ಸಿ ನೀರು ಸಂಗ್ರಹವಾಗಿತ್ತು. ಈ ವರ್ಷ ದುಪ್ಪಟ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಇನ್ನುಳಿದ ಜಲಾಶಯಗಳೂ ಶೀಘ್ರ ತುಂಬುವ ನಿರೀಕ್ಷೆ ಇದೆ. ಕಾವೇರಿ, ಕೆ ಆರ್ ಎಸ್, ಕಬಿನಿ ಮತ್ತು ಹಾರಂಗಿಯಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೇ ರೀತಿ ಆಲಮಟ್ಟಿ ಜಲಾಶಯದಿಂದ ೧.೫೦ ಲಕ್ಷ ಕ್ಯುಸೆಕ್ಸ್ ನಷ್ಟು ಭಾರೀ ಪ್ರಮಾಣದ ನೀರು ಹರಿಯಬಿಡಲಾಗಿದೆ. ಇದೀಗ ತುರ್ತಾಗಿ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕಾಗಿದೆ. ಕೆರೆ ಕಟ್ಟೆಗಳನ್ನು ತುಂಬಿಕೊಳ್ಳಬೇಕಿದೆ. ಕಳೆದ ವರ್ಷ ಕೆರೆಕಟ್ಟೆಗಳನ್ನು ತುಂಬಲು ಸಾಧ್ಯವಾಗದ ಕಾರಣ ಕಾವೇರಿ ಕೊಳ್ಳದ ರೈತರು ಹಿಂಗಾರು ಬೆಳೆಗೆ ನೀರಿನ ಕೊರತೆ ಎದುರಿಸಿದ್ದರು. ತಮಿಳುನಾಡಿನ ಕ್ಯಾತೆಯಿಂದ ನಾಲೆಗಳಿಗೂ ನಿಯಮಿತವಾಗಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮುಂಚಿತವಾಗಿಯೇ ನಾಲೆಗಳಿಗೆ ನೀರು ಹರಿಸುವ ಮೂಲಕ ನಮ್ಮ ರೈತರು ಮೂರು ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ಜಲಾಶಯಗಳು ತುಂಬಿದ ನಂತರವೂ ನೀರು ಬಿಡಲು ವಿಳಂಬ ಮಾಡುವುದು ಸರಿಯಲ್ಲ. ಮಳೆ ಎಷ್ಟೇ ಸುರಿದರೂ, ಬಿದ್ದ ಮಳೆಯನ್ನು ಹಿಡಿದಿಟ್ಟುಕೊಳ್ಳದೇ ಹೋದರೆ ಮುಂದಿನ ಬೇಸಿಗೆಯಲ್ಲಿ ಮತ್ತೆ ಜಲಕ್ಷಾಮ ಎದುರಿಸಬೇಕಾಗುತ್ತದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೫-೦೭-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ