ಕೆಲವು ಝೆನ್ ಕಥೆಗಳು

ಕೆಲವು ಝೆನ್ ಕಥೆಗಳು

ಕಷ್ಟದ ಕೆಲಸ

ಹೊಗೆನ್ ಎಂಬ ಸನ್ಯಾಸಿ ನಗರದ ಹೊರಗಿನ ಒಂದು ಸಣ್ಣ ಗುಡಿಯಲ್ಲಿ ವಾಸವಾಗಿದ್ದರು. ನಾಲ್ಕು ಜನ ಬೌದ್ಧ ಭಿಕ್ಷುಗಳ ತಂಡವೊಂದು ಅಲ್ಲಿಗೆ ಬಂತು. ಅಂದು ಸಂಜೆ ಅವರು ಅಲ್ಲೇ ಉಳಕೊಳ್ಳುವವರಿದ್ದರು. ರಾತ್ರಿ ಮಲಗುವ ಮುನ್ನ ಅವರು ನಾಲ್ಕೂ ಮಂದಿ ಅಗ್ಗಿಷ್ಟಿಕೆಯ ಸುತ್ತ ಕೂತು ಶಾಸ್ತ್ರಚಿಂತನೆ ನಡೆಸಿದರು. ಅಂದಿನ ಚಿಂತನೆಯ ವಿಷಯ ಪ್ರಪಂಚ ವ್ಯಕ್ತವೋ ಅವ್ಯಕ್ತವೋ ಎಂಬುದು. ಜಗತ್ತಿನಲ್ಲಿ ಕಾಣುವ ಯಾವ ಸಂಗತಿಯೂ ವಾಸ್ತವದಲ್ಲಿ ಅಲ್ಲಿಲ್ಲ. ಅದೆಲ್ಲವೂ ನಮ್ಮ ಮನಸ್ಸಿನಲ್ಲಿದೆ ನಮ್ಮ ಬುದ್ಧಿಯಲ್ಲಿದೆ. ಬುದ್ಧಿಯಲ್ಲಿ ಧರಿಸಿರುವ ವಸ್ತುಗಳನ್ನು ನಾವು ಹೊರಗೆ ನೋಡಿ ಅದು ಅಲ್ಲಿದೆ ಎಂದು ಭಾವಿಸುತ್ತೇವೆ ಅಷ್ಟೇ. ಹಾಗಾಗಿ ಕಣ್ಣಿಗೆ ಕಾಣುವ ಸಂಗತಿಗಳೆಲ್ಲವೂ ಮೂಲತಃ ಅವ್ಯಕ್ತವೇ ಎಂಬ ನಿರ್ಣಯವಾಯಿತು. ಈ ಚರ್ಚೆಯನ್ನು ಸಮಾಧಾನದಿಂದ ಕೂತು ಕೇಳುತ್ತಿದ್ದ ಹೊಗೆನ್ ಆ ಶಿಷ್ಯರ ಬಳಿ ಬಂದು ಅವರಲ್ಲೊಬ್ಬನಲ್ಲಿ ‘ಓ ಅಲ್ಲಿ, ಆ ಕಲ್ಲುಗುಂಡು ಕಾಣಿಸುತ್ತಿದೆಯಲ್ಲ? ಅದು ವ್ಯಕ್ತವೋ ಅವ್ಯಕ್ತವೋ?’ ಎಂದು ಪ್ರಶ್ನಿಸಿದರು. ‘ಗುರುಗಳೇ, ಈಗಾಗಲೇ ನಿರ್ಣಯ ಆಗಿದೆ. ಪ್ರಾಪಂಚಿಕ ವಸ್ತುಗಳೆಲ್ಲವೂ ಅವ್ಯಕ್ತವೇ. ಹಾಗಾಗಿ ಆ ಕಲ್ಲುಗುಂಡು ಕೂಡ ಅವ್ಯಕ್ತ. ಅದು ಅಲ್ಲಿಲ್ಲ. ಕೇವಲ ನನ್ನ ಮನಸ್ಸಿನಲ್ಲಿದೆ.’ ಎಂದ ಶಿಷ್ಯ ಧೃಢವಾಗಿ. ‘ಅದು ನಿನ್ನ ಮನಸ್ಸಿನಲ್ಲಿ ಇರುವುದೇ ಆದರೆ, ಅದನ್ನು ದಯವಿಟ್ಟು ಕೆಳಗಿರಿಸು., ಅಷ್ಟು ಭಾರವನ್ನು ಹೊತ್ತುಕೊಂಡು ಓಡಾಡುವುದು ಕಷ್ಟ.’ ಎಂದರು ಹೊಗೆನ್.

***

ಅತಿ ಮುಖ್ಯ ಉಪದೇಶ

ನೂರಾರು ಬೌದ್ಧ ಸನ್ಯಾಸಿಗಳು ಸೇರಿದ್ದ ಒಂದು ಸಮಾವೇಶದಲ್ಲಿ ದೀರ್ಘವಾದ ಧ್ಯಾನ ಕಮ್ಮಟವಾದ ಮೇಲೆ ಯಾಂಗ್ ಚಿ ಅವರ ಉಪನ್ಯಾಸ ಏರ್ಪಾಡಾಗಿತ್ತು. ಯಾಂಗ್ ಚಿ, ಆ ಪ್ರಾಂತ್ಯದಲ್ಲೆಲ್ಲ ಬಹು ಅಧ್ಯಯನಶೀಲ ಚಾನ್ ಗುರುಗಳೆಂದು ಹೆಸರಾಗಿದ್ದವರು. ಅವರ ಮಾತುಗಳನ್ನು ಕೇಳಲು ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ಬರುವುದಿತ್ತು. ಅಂದು ಅವರು ಅಲ್ಲಿ ಸೇರಿದ್ದ ನೂರಾರು ಸನ್ಯಾಸಿಗಳನ್ನು ಉದ್ಡೇಶಿಸಿ ಬಹಳ ಸಾಂಪ್ರದಾಯಿಕವಾದ ಒಂದು ಉಪನ್ಯಾಸ ಕೊಡಬೇಕೆಂದು ತಿಳಿಸಲಾಗಿತ್ತು. ಅದಕ್ಕೆ ತಕ್ಕ ವೇದಿಕೆಯೂ ಸಿದ್ಧವಾಗಿತ್ತು.

ಯಾಂಗ್ ಚಿ ವೇದಿಕೆಯನ್ನೇರಿದರು. ತಮಗೆ ಮೀಸಲಿಟ್ಟ ಪೀಠದಲ್ಲಿ ಕುಳಿತರು. ನಂತರ ಸಭೆಯನ್ನುದ್ಡೇಶಿಸಿ, ‘ನನ್ನ ಪ್ರಿಯ ಮಿತ್ರರೇ, ಭಾಷಣ ಕೇಳುವುದರಲ್ಲೇನಿದೆ, ಹೋಗಿ ಬಿಸಿ ಬಿಸಿಯಾದ ಚಹಾ ಕುಡೀರಿ' ಎಂದು ವೇದಿಕೆಯಿಂದ ಇಳಿದರು.

***

ಎಮ್ಮೆಯ ಬಾಲ

ಒಂದು ದಿನ ಶಿಷ್ಯಂದಿರೆಲ್ಲಾ ತಮ್ಮ ಝೆನ್ ಗುರುಗಳ ಸುತ್ತ ಕುಳಿತಿದ್ದರು. ಅವರಲ್ಲೊಬ್ಬ ಶಿಷ್ಯ "ಹೇ ಗುರುದೇವ! ದಯವಿಟ್ಟು ಇಂದು ನಮಗೊಂದು ಕಥೆಯನ್ನು ಹೇಳಿ!" ಎಂದು ಕೇಳಿಕೊಂಡನು.

ಅದಕ್ಕೆ ಗುರುಗಳು, "ಸರಿ, ಖಂಡಿತವಾಗಿಯೂ ಹೇಳುತ್ತೇನೆ, ಆದರೆ ಅದರ ಕೊನೆಯಲ್ಲಿ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ." ಎಂದರು.

ಕಥೆಯನ್ನು ಕೇಳುವ ಉತ್ಸಾಹದಲ್ಲಿದ್ದ ಶಿಷ್ಯಂದಿರು "ಸರಿ! ನಾವು ತಯಾರಿದ್ದೇವೆ." ಎಂದು ಹೇಳಿದರು.

ಗುರುಗಳು ಕಥೆಯನ್ನು ಹೇಳಲು ಪ್ರಾರಂಭಿಸಿದರು. "ಒಂದು ಹಳ್ಳಿಯಲ್ಲಿ ದೊಡ್ಡದೊಂದು ಎಮ್ಮೆ ಇದ್ದಿತು. ಪ್ರತಿದಿನ ಅದು ಮೇಯಲು ಹೋಗುವ ದಾರಿಯಲ್ಲಿ ಒಂದು ಗುಡಿಸಲಿನ ಮುಂದೆ ಹಾದು ಹೋಗುತಿತ್ತು. ಆ ಗುಡಿಸಲಿನ ಒಳಭಾಗ ತಣ್ಣಗಿರಲೆಂದು ಅದರ ಮೇಲ್ಛಾವಣಿಯ ಮೇಲೆ ಬಹಳಷ್ಟು ಹುಲ್ಲಿನ ಕಂತೆಗಳನ್ನು ಜೋಡಿಸಿಡಲಾಗಿತ್ತು.

ಆ ಎಮ್ಮೆ ನಿತ್ಯವೂ ತನಗೆ ಎಟುಕುವಷ್ಟು ಹುಲ್ಲಿನ ಕಂತೆಗಳನ್ನು ಎಳೆದುಕೊಂಡು ತಿನ್ನುತ್ತಿತ್ತು. ದಿನ ಕಳೆದಂತೆ ಹೆಚ್ಚಿನ ಹುಲ್ಲಿನ ಕಂತೆಗಳು ಅದಕ್ಕೆ ಎಟುಕದೇ ಹೋದಾಗ, "ಈ ಗುಡಿಸಲಿನ ಮೇಲ್ಛಾವಣಿಯ ಮೇಲೇ ಇಷ್ಟೊಂದು ಹುಲ್ಲು ಇರಬೇಕಾದರೆ, ಒಳಗಿನ್ನೆಷ್ಟಿರಬಹುದು?" ಎಂದದು ಯೋಚಿಸತೊಡಗಿತು. ಆದರೆ, ಗುಡಿಸಲಿನ ಕಿಟಕಿ ಸದಾ ಮುಚ್ಚಿರುತಿದ್ದ ಕಾರಣ ಒಳಗೇನಿದೆ ಎಂದು ನೋಡಲು ಎಮ್ಮೆಗೆ ಸಾಧ್ಯವಾಗಲಿಲ್ಲ.

ಒಂದು ದಿನ ಎಂದಿನಂತೆ ಅದು ಮೇಯಲು ಹೊರಟಾಗ, ಅದರ ಕಣ್ಣು ಅಚ್ಚರಿಯಿಂದ ಕಂಗೊಳಿಸಿತು. ಏಕೆಂದರೆ ಗುಡಿಸಲಿನ ಕಿಟಕಿ ತೆರೆದಿತ್ತು! ಸಡಗರದಿಂದ ಎಮ್ಮೆ ಕಿಟಕಿಯ ಬಳಿ ಹೋಗಿ, ತನ್ನ ಕೋಡುಗಳು ಅಡ್ಡಬಾರದಂತೆ, ಬಹಳ ಎಚ್ಚರಿಕೆಯಿಂದ ತನ್ನ ತಲೆಯನ್ನು ಕಿಟಕಿಯೊಳಕ್ಕೆ ತೂರಿಸಿ ನೋಡಿತು. ಅದು ಅಂದುಕೊಂಡತೆಯೇ ಸಾಕಷ್ಟು ಹುಲ್ಲಿನ ಕಂತೆಗಳನ್ನು ಗುಡಿಸಲಿನ ಒಂದು ಮೂಲೆಯಲ್ಲಿ ಗುಡ್ಡೆಮಾಡಿ ಇಡಲಾಗಿತ್ತು.

ತನ್ನ ಕುತ್ತಿಗೆಯನ್ನು ಎಷ್ಟೇ ಉದ್ದಕ್ಕೆ ಚಾಚಿದ್ದರೂ ಸಹ ಆ ಎಮ್ಮೆಗೆ ಹುಲ್ಲು ನಿಲುಕಲಿಲ್ಲ. ಹಾಗಾಗಿ ಅದು ತನ್ನ ಇಡೀ ದೇಹವನ್ನು ಆ ಕಿಟಕಿಯಿಂದ ಒಳತೂರಿಸಲು ಪ್ರಯತ್ನಿಸಿತು. ಕೋಡು, ಮುಖ, ಕುತ್ತಿಗೆ ಎಲ್ಲವನ್ನು ಒಳತೂರಿಸಿದರೂ ಸಹ, ಹುಲ್ಲು ಮಾತ್ರ ಅದರ ಬಾಯಿಗೆಟುಕಲೇ ಇಲ್ಲ.

ಮೆಲ್ಲನೆ ಅದು ತನ್ನ ಮುಂಗಾಲುಗಳನ್ನು ಕಿಟಕಿಯೊಳಗೆ ತೂರಿಸಿತು. ಕಾಲುಗಳನ್ನು ಗೋಡೆಗೊರಗಿಸಿ ತನ್ನ ದೇಹವನ್ನು ನಿಧಾನವಾಗಿ ಒಳಗೆಳೆದುಕೊಳ್ಳಲು ಪ್ರಾರಂಭಿಸಿತು. ಸ್ವಲ್ಪ ಸ್ವಲ್ಪವಾಗಿ, ಅದರ ದೈತ್ಯ ದೇಹ ಕಿಟಕಿಯ ಸರಳುಗಳನ್ನು ಮುರಿದು ಒಳನುಸುಳತೊಡಗಿತು ಮತ್ತು ಅದರ ದೇಹದ ಅತಿ ದೊಡ್ಡ ಭಾಗಗಳಾದ ಬೆನ್ನು ಮತ್ತು ಹೊಟ್ಟೆ ಒಳಗೆ ಹೋದವು. ಇನ್ನುಳಿದದ್ದು ಹಿಂಗಾಲುಗಳು ಮಾತ್ರ. ನಿಧಾನವಾಗಿ ಒಂದರ ನಂತರ ಇನ್ನೊಂದರಂತೆ ಅದು ತನ್ನ ಹಿಂಗಾಲುಗಳನ್ನೂ ಸಹ ಒಳಕ್ಕಿರಿಸಿ ಗಟ್ಟಿಯಾಗಿ ನಿಂತಿತು.

ತಾನು ಸಂಪೂರ್ಣವಾಗಿ ಒಳಕ್ಕೆ ಬಂದಿದ್ದೇನೆಂದು ನಂಬಿದ ಎಮ್ಮೆ, ತನ್ನ ಸಾಧನೆಯನ್ನು ಮೆಚ್ಚಿ, ಜೋರಾಗಿ ಅರಚುತ್ತ. ಹುಲ್ಲನ್ನು ತಿನ್ನಲು ಕುತ್ತಿಗೆಯನ್ನು ಚಾಚಿತು. ಆದರೆ ಅದಕ್ಕೆ ಹುಲ್ಲಿನ ರಾಶಿಯನ್ನು ಎಟುಕಲು ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಬಾಲ ಇನ್ನೂ ಕಿಟಕಿಯಲ್ಲೇ ಸಿಕ್ಕಿಹಾಕಿಕೊಂಡಿತ್ತು.

ಗುರುಗಳು ಕಥೆಯನ್ನು ಇಲ್ಲಿಗೇ ನಿಲ್ಲಿಸಿದರು.

"ಈ ಕಥೆ ನಡೆಯಲು ಸಾಧ್ಯವಿದೆಯೋ ಇಲ್ಲವೋ?" ಎಂದವರು ಶಿಷ್ಯರನ್ನು ಪ್ರಶ್ನಿಸಿದರು.

"ಹಾಗಾಗಲು ಸಾಧ್ಯವೇ ಇಲ್ಲ." ಎಂದು ಶಿಷ್ಯರೆಲ್ಲಾ ಹೇಳಿದರು.

"ಏಕೆ?" ಎಂದು ಗುರುಗಳು ಕೇಳಿದರು.

"ಎಮ್ಮೆಯ ಅತಿ ಸಣ್ಣ ಅಂಗವೆಂದರೆ ಅದರ ಬಾಲ". ಅದು ತನ್ನ ತಲೆ ಮತ್ತು ಹೊಟ್ಟೆಯನ್ನು ಒಳತೂರಿಸಲು ಸಾಧ್ಯವಿದೆ ಎಂದಾದರೆ, ಅದರ ಬಾಲವನ್ನೇಕೆ ಅದು ಒಳತೂರಿಸಲು ಸಾಧ್ಯವಿಲ್ಲ?" ಎಂದು ಶಿಷ್ಯರು ಕೇಳಿದರು.

ಅದಕ್ಕೆ ಗುರುಗಳು, "ನಿಮ್ಮಲ್ಲಿ ಬಹಳಷ್ಟು ಎಮ್ಮೆಗಳಿವೆ" ಎಂದು ಹೇಳಿದರು.

***

ಡೈಮಂಡ್ ಸೂತ್ರ ಮತ್ತು ರೊಟ್ಟಿಯ ಮುದುಕಿ

ಜಪಾನಿನಲ್ಲೊಬ್ಬ ಝೆನ್ ಸನ್ಯಾಸಿ ಇದ್ದ. ಜಗತ್ತಿನಲ್ಲಿ ನಷ್ಟವಾಗಿಹೋಗಿದ್ದ ಬೌದ್ಧ ಧರ್ಮದ ‘ಡೈಮಂಡ್ ಸೂತ್ರ’ವನ್ನು ಅವನು ಅರೆದು ಕುಡಿದಿದ್ದ. ಅದು ಹೇಗೋ ಡೈಮಂಡ್ ಸೂತ್ರದ ಒಂದು ಪ್ರತಿ ಅವನ ಬಳಿ ಇದ್ದುಬಿಟ್ಟಿತ್ತು. ಅವನು ಅದನ್ನು ಜತನದಿಂದ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದ.

ಡೈಮಂಡ್ ಸೂತ್ರದ ಬಗ್ಗೆ ಭಿಕ್ಷುಗಳೇ ಅಲ್ಲ, ಜನಸಾಮಾನ್ಯರೂ ಕುತೂಹಲಿಗಳಾಗಿದ್ದರು. ಈ ಸನ್ಯಾಸಿಯ ಬಳಿ ಅದರ ಪ್ರತಿ ಇದೆ, ಅದರ ಜ್ಞಾನವಿದೆ ಎಂದು ಕೇಳಿ, ಅವನ ಬಳಿ ಧಾವಿಸಿ ಬರುತ್ತಿದ್ದರು.

ಆ ಸನ್ಯಾಸಿ, ಡೈಮಂಡ್ ಸೂತ್ರದ ಪ್ರತಿಯನ್ನು ಬೆನ್ನಿಗೆ ಕಟ್ಟಿಕೊಂಡು. ಊರೂರಿಗೆ ಹೋಗಿ ತನ್ನ ಜ್ಞಾನ ಪ್ರದರ್ಶನ ಮಾಡುತ್ತಿದ್ದ.
ಹೀಗೇ ಒಂದು ಮಧ್ಯಾಹ್ನ ಬೆಟ್ಟದ ಮೇಲೆ ನಡೆದು ಪಕ್ಕದ ಊರಿಗೆ ಹೋಗುತ್ತಿದ್ದ. ದಾರಿಯಲ್ಲಿ ಹಸಿವಾಗತೊಡಗಿತು. ತಿನ್ನಲು ತಂದಿದ್ದ ಬುತ್ತಿಯೆಲ್ಲ ಖಾಲಿಯಾಗಿತ್ತು. ಅವನ ಬಳಿ ಹಣವೂ ಇರಲಿಲ್ಲ.

ಹಸಿವು ತಾಳಲಾಗದೆ ಅತ್ತ ಇತ್ತ ನೋಡಿದಾಗ ಮುದುಕಿಯೊಬ್ಬಳು ಚಹಾ – ರೊಟ್ಟಿ ಮಾರುತ್ತಿರುವುದು ಕಂಡಿತು.
“ಪ್ರಿಯ ಮುದುಕಿ, ನನಗೊಂದಷ್ಟು ರೊಟ್ಟಿ, ಚಹಾ ಕೊಡು. ನನ್ನ ಬಳಿ ಹಣವಿಲ್ಲ; ಆದರೆ ಡೈಮಂಡ್ ಸೂತ್ರದ ಜ್ಞಾನವಿದೆ. ನಿನಗೆ ಅದರಿಂದ ಒಂದಷ್ಟನ್ನು ಹೇಳುತ್ತೇನೆ.” ಅಂದ.

ಆ ಮುದುಕಿಗೂ ಒಂದಷ್ಟು ಜ್ಞಾನವಿತ್ತು. “ಸನ್ಯಾಸಿ! ನನಗೂ ಯೌವನದಲ್ಲಿ ಡೈಮಂಡ್ ಸೂತ್ರ ಅಭ್ಯಾಸ ಮಾಡಿದ್ದೆ. ನಾನೊಂದು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಉತ್ತರ ಕೊಟ್ಟರೆ ಚಹಾ – ರೊಟ್ಟಿ ಕೊಡುತ್ತೇನೆ” ಅಂದಳು.

ಸನ್ಯಾಸಿ ಆಗಲೆಂದ. ಮುದುಕಿ ಕೇಳಿದಳು, “ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸಿನಿಂದ ತಿನ್ನುತ್ತೀಯೋ?”

ಸನ್ಯಾಸಿ ತಲೆ ಕೆರೆದುಕೊಂಡು ಯೋಚಿಸಿದ. ಉತ್ತರ ಹೊಳೆಯಲಿಲ್ಲ.

ಬೆನ್ನಿಂದ ಪುಸ್ತಕವಿಳಿಸಿ ಪುಟಪುಟವನ್ನೂ ಬಿಡದೆ ಓದತೊಡಗಿದ…. ಸಂಜೆಯಾಯಿತು. ಅವನಿಗೆ ಪುಸ್ತಕದಲ್ಲೂ ಉತ್ತರ ಸಿಗಲಿಲ್ಲ. ಮುಚ್ಚಿಟ್ಟು ಧ್ಯಾನಿಸತೊಡಗಿದ…. ಮುಸ್ಸಂಜೆಯಾದರೂ ಉತ್ತರ ಸಿಗಲಿಲ್ಲ.

ಮುದುಕಿ ತನ್ನ ಗೂಡಂಗಡಿಯನ್ನು ಮುಚ್ಚಿ ಅಲ್ಲಿಂದ ಹೊರಟಳು.

“ಪ್ರಿಯ ಮುದುಕಿ! ನನಗೆ ಉತ್ತರ ಗೊತ್ತಾಗಲಿಲ್ಲ. ಹೋಗಲಿ, ಅದೇನೆಂದು ಹೇಳು!” ಸನ್ಯಾಸಿ ಕೇಳಿದ.

“ನೀನೊಬ್ಬ ಮೂರ್ಖ! ಹಸಿವನ್ನು ಡೈಮಂಡ್ ಸೂತ್ರದಿಂದ ಹೋಗಲಾಡಿಸಿಕೊಳ್ಳಲು ಸಾಧ್ಯವೇ?” ಮುದುಕಿ ಬೈದಳು. “ಯಾವ ಕಾಲದ ಮನಸ್ಸಿನಿಂದಲೂ ರೊಟ್ಟಿಯನ್ನು ತಿನ್ನಲಾಗದು. ರೊಟ್ಟಿಯನ್ನು ತಿನ್ನುವುದು ಬಾಯಿಯಿಂದ” ಅನ್ನುತ್ತಾ ನಕ್ಕು ಅಲ್ಲಿಂದ ಹೊರಟಳು.

***

(ವಿವಿಧ ಮೂಲಗಳಿಂದ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ