ಕೆಲವು ಪದ್ಯಗಳ ಅನುವಾದ ಪ್ರಯತ್ನ (ಅನುವಾದ: ಮೋಹನ್ ವಿ ಕೊಳ್ಳೇಗಾಲ
ಒಂದು ಮಿಲನ
ಗಾಳಿಯಲ್ಲಿ ಗಾಢವಾಗಿ ಸಾವು ತನ್ನ ಗರ್ಭ ಕಟ್ಟುತ್ತಿದೆ.
ಏನೋ ತಪ್ಪಾಗಿ
ಪಟ್ಟಣದ ಫೋನ್ ಗಳೆಲ್ಲ
ಒಂದಾಗಿಹೋಗಿವೆ
ಕಣ್ಣೀರು ತುಂಬಿಕೊಂಡ ಮುದುಕ ಹೇಳುತ್ತಾನೆ.
'ಅವನ ಮುಖ ನೋಡಿ
ನಿದ್ದೆ ಮಾಡುತ್ತಿರುವಂತೆ ಕಾಣುತ್ತಿದೆ
ಕೂಗಿದೊಡನೆ ಎಚ್ಚರಗೊಳ್ಳುತ್ತಾನೆ
ಎನಿಸುತ್ತಿದೆ'
ಕೆಲವು ಜವಾಬ್ದಾರಿಯುತ ಮನುಷ್ಯರು
ಜವಾಬ್ದಾರಿಯಿಂದ ಮಾತನಾಡುತ್ತಾರೆ
'ದೇಹವನ್ನು ಎಷ್ಟು ಹೊತ್ತಿಗೆ ಎತ್ತುವುದು?'
'ಬೇಗ ಹುಳಿ ಮೊಸರನ್ನು ತನ್ನಿ'
'ಅವನ ಮುಖವನ್ನು ಕೊನೆಯ ಬಾರಿಗೆ
ನೋಡಿಕೊಳ್ಳಲು ಅವರಿಗೆ ಹೇಳಿ'
'ದೆಹಲಿಯಿಂದ ಬರುವ ಮತ್ತೊಂದು ವಿಮಾನಕ್ಕಾಗಿ
ಕಾಯೋಣ
ಮತ್ತಷ್ಟು ಜನ ಬರಬಹುದು'
ಅಷ್ಟಕ್ಕೆ ಹೊರಗೊಂದು ಕಾರು ನಿಲ್ಲುತ್ತದೆ
ಎಲ್ಲರ ಮುಖಗಳು ಹೊರಳುತ್ತವೆ:
ಸ್ತಬ್ದವಾಗಿದ್ದ ಅಳುವಿನ ಕಟ್ಟೆ
ಮತ್ತೆ ಒಡೆಯುತ್ತದೆ
ಇವರ್ಯಾರೋ ತುಂಬಾ ಹತ್ತಿರದವರಿರಬಹುದು
ಅವರಲ್ಲೊಬ್ಬರು ಅವನೆಡೆಗೆ ಬಾಗಿ
ಗದ್ಗದಿತರಾಗಿ
ಕೈ ಹಿಡಿದುಕೊಳ್ಳುತ್ತಾರೆ
ಸ್ಥೈರ್ಯವಿರಲಿ, ಎದೆಯಲ್ಲಿ ಧೈರ್ಯವಿರಲಿ
ಪ್ರತಿಯೊಬ್ಬರೂ
ಒಂದಲ್ಲ ಒಂದು ದಿನ ಹೋಗಲೇಬೇಕು
ಸಾವನ್ನು ಹೊಸ್ತಿಲಾಚೆ ನಿಲ್ಲಿಸಲು
ಯಾರಿಗೆ ಸಾಧ್ಯವಿದೆ?
ಸ್ಥೈರ್ಯವಿರಲಿ, ಎದೆಯಲ್ಲಿ ಧೈರ್ಯವಿರಲಿ
ಒಂದು ದೀರ್ಘ ನಿಟ್ಟುಸಿರಿನ ನಂತರ
ಈಗಷ್ಟೇ ಬಂದವರು
ಅಳುತ್ತಳುತ್ತಲೇ ಮಾತನಾಡುತ್ತಾರೆ
'ಏನಾಯಿತು? ಯಾವಾಗ? ಹೇಗೆ?
ನಿನ್ನೆಯಷ್ಟೇ ಚೆನ್ನಾಗಿದ್ದವರಲ್ಲವೇ.
ಕಳೆದ ಮಂಗಳವಾರ ಭೇಟಿ ಮಾಡಿದಾಗ
ತಮಾಷೆಗೆ ಹೇಳಿದ್ದರು:
'ಈ ಬಾರಿ ನೀ ಮನೆಗೆ ಬರದಿದ್ದರೆ
ಮತ್ತೆಂದು ನಿನ್ನ ಮುಖ
ನೋಡುವುದಿಲ್ಲ'
ಮಾತನಾಡುತ್ತಲೇ ಕುಸಿದು ಬಿದ್ದರು
ಸ್ಥೈರ್ಯವಿರಲಿ, ಎದೆಯಲ್ಲಿ ಧೈರ್ಯವಿರಲಿ
ಆ ಹೆಣದಿಂದ ವಾಸನೆ ಬರುತ್ತಿದೆ
ಬೇಗ ಇಲ್ಲಿಂದ ಸಾಗಿಸಿ
ಗುಂಪಿನಲ್ಲೀಗ ಸಾವಿನ ಮಾತು
ಹೆಚ್ಚಾಗುತ್ತಿದೆ
"ಯಾರೀತ?"
"ಯಾರ ಹೆಣ ಇದು?"
"ನಾನೋ ಎಲ್ಲಿಗೋ ಹೋಗುವಾಗ
ವಿಚಾರ ತಿಳಿಯಿತು
ನೇರವಾಗಿಯೇ ಬಂದೆ"
"ಕೋರ್ಟ್ ನಲ್ಲಿರುವ ನಿನ್ನ ಕೇಸಿನ
ವಿಚಾರ ಏನಾಯಿತು"
"ವಿಚಾರಣೆಯನ್ನು ಮತ್ತೆ ಮುಂದೂಡಿದರು"
"ನನಗೆ ಇದ್ದಕ್ಕಿದ್ದಂತೆ ಗಾಬರಿಯಾಯಿತು
ಆತನ ಆರೋಗ್ಯ ಚೆನ್ನಾಗೇ ಇತ್ತು"
"ಆತನ ದೇಹದ ಮೇಲೆ ಸೌದೆ ಜೋಡಿಸಿ"
ಅವರೆಲ್ಲ ಹಿಂದುರುಗಿ ನೋಡದೇ ಮನೆಗೆ ಹಿಂದಿರುಗಿದರು
ಸ್ನಾನ ಮಾಡಿದರು
ಎಲ್ಲ ಮುಗಿಯಿತು ಎಂದವರೇ
ನಿಟ್ಟುಸಿರು ಬಿಟ್ಟರು
ಸಂಜೆಯೊಳಗೆ ಬೂದಿ ತಣ್ಣಗಾಗುತ್ತದೆ
ಕಸ ಗುಡಿಸುವವ
ಬೂದಿ ಸಂಗ್ರಹಿಸುತ್ತಾನೆ
ಎರಡು ರುಪಾಯಿಯನ್ನೂ.
ಮಣ್ಣಿನಿಂದ ಮಣ್ಣಿಗೆ:
ನಾಳೆಯ ಕ್ಯಾಲೆಂಡರಿನಲ್ಲಿ
ಸೂರ್ಯೋದಯವಾದಾಗ
ನಾನಲ್ಲಿರುವುದಿಲ್ಲ,
ವರ್ತಮಾನ ಕಾಲದಲ್ಲಿದ್ದ
'ನಾನು'
ಭೂತಕಾಲದಾಳಕ್ಕೆ
ಇನ್ನೂ
ಆಳಕ್ಕೆ ಜಾರಿಕೊಳ್ಳುತ್ತೇನೆ
ಗುಲ್ಜಾರ್
-
ಕವಿತೆಯ ಚೂರು
ಕವಿತೆಯ ಚೂರೊಂದು ನನ್ನುಸಿರಿನಲ್ಲಿ
ಮುಳುಗುತ್ತಿದೆ
ಅದು ನನ್ನ ತುಟಿಯ ಬಳಿ ಬಂದಾಗ
ನಾಲಗೆಯನ್ನು ಕತ್ತರಿಸಿಬಿಟ್ಟಿತು
ಆದರೂ ಕಷ್ಟಪಟ್ಟು
ಆ ಕವಿತೆಯನ್ನು ಹಲ್ಲಿನಲ್ಲಿ
ಕಚ್ಚಿಕೊಂಡಾಗ
ತುಟಿಯಿಂದ ರಕ್ತ ಸೋರತೊಡಗಿತು
ಗಾಜಿನ ಚೂರೊಂದು ಗಂಟಲಿಗೆ
ಸಿಲುಕಿಕೊಂಡಂತಾಗಿ
ಉಗಿಯಲೂ ಆಗದ
ನುಂಗಲೂ ಬರದ ದೀನಸ್ಥಿತಿಯಲ್ಲಿ
ಉಸಿರಾಡುವಂತಾದೆ
ಚೂರಾದ ಕವಿತೆ ಮಾತ್ರ ಆ ಉಸಿರಿನಲ್ಲಿ
ಮುಳುಗುತ್ತಿತ್ತು
ಹೌದು
ಮುಳುಗಿಹೋಗುತ್ತಿತ್ತು
ಗುಲ್ಜಾರ್
-
ಧಾರ್ಮಿಕ ಕಲಹ
ಪಟ್ಟಣದಲ್ಲಿ ಯಾರನ್ನೂ ಕತ್ತರಿಸಲಾಗಿಲ್ಲ;
ಅವು ಕೊಲೆಯಾದವರ
ಕೇವಲ ಹೆಸರುಗಳಷ್ಟೇ
ಯಾರೂ ಯಾರ ತಲೆಯನ್ನು ಉರುಳಿಸಿಲ್ಲ;
ತಲೆಯನ್ನು ಹುದುಗಿಸಿಕೊಂಡಿದ್ದ
ಟೊಪ್ಪಿಯನ್ನು ತಲೆಯೊಂದಿಗೆ
ಬೇರ್ಪಡಿಸಲಾಗಿದೆಯಷ್ಟೇ
ಬೀದಿ ಬೀದಿಗಳಲ್ಲಿ ನೀವು
ಕಾಣುತ್ತಿರುವ ರಕ್ತ
ಮಾಂಸ ಮಾರುತ್ತಿರುವ
ಮನುಷ್ಯನೊಬ್ಬನ ಮಾತಿಗೆ ಸೇರಿದ್ದು
ಗುಲ್ಜಾರ್
-
ಅಶಿಸ್ತಿನಲ್ಲಿರುವ ಖುಷಿ
ಉಟ್ಟ ಬಟ್ಟೆಯಲ್ಲಿನ ಅರ್ಧಂಬರ್ಧ
ಸಿಹಿ ಶೃಂಗಾರ
ಚಂಚಲತೆಯ ಬೆಂಕಿಯನ್ನು
ಹೊತ್ತಿಸುತ್ತವೆ
ಗಿಡಮರ ವಾಲಾಡುವ ತೋಟ
ಚಂದವಾಗಿ ಕೆದರಿ
ತೋಳು ಚಾಚುತ್ತವೆ
ಎದೆ ತುಂಬಿದ ಗಡುಗೆಂಪು ಬಟ್ಟೆಗೆ
ಸರಿಯಾಗಿ ಬಿಗಿಯದ ದಾರ
ಅತ್ತಿತ್ತ ವಾಲಾಡುವಾಗ
ಅಲ್ಲೇನೋ ಆಕರ್ಷಣೆ ಪುಟಿಯುತ್ತದೆ
ಗಮನ ಹರಿಸದ ತೋಳ ಬಟ್ಟೆಯ ಝರಿ
ಗೊಂದಲದಲ್ಲಿ
ರಿಬ್ಬನ್ನಂತೆ ಹರಿದಾಡುವಾಗ
ಬಣ್ಣ ಹರಿದಾಡಿದಂತಾಗುತ್ತದೆ
ತಲೆಬಾಚಿ ಹೂವನ್ನು ಹುಲ್ಲುಗಾವಲು
ಮಾಡುವ ಬದಲು
ಸ್ನಾನ ಮಾಡಿ ಕೂದಲು
ಕೆದರಿಕೊಳ್ಳುವ ನನ್ನವಳು
ಎಲ್ಲ ಉಪಮೆ ಮೀರಿಸುವಳು
ಗೆಲುವ ಕಂಡ ಅಲೆ ಎಬ್ಬಿಸಿದ
ಬಿರುಗಾಳಿಗೆ ಸಿಲುಕಿದ
ಪೆಟ್ಟಿಕೋಟ್, ಮತ್ತು
ಅಡ್ಡದಿಡ್ಡಿ ಕಟ್ಟಿದ ಶೂ ದಾರದವನ
ನಿದ್ದೆಗಣ್ಣಿನ ಟೈನಲ್ಲಿ
ನನಗೆ ವಿಚಿತ್ರ ನಾಗರಿಕತೆ
ಕಾಣುತ್ತದೆ
ವಸ್ತುಗಳು ಶಿಸ್ತಿನ ಸುಸ್ತಿನಲ್ಲಿ
ಬಳಲುವುದಕ್ಕಿಂತ
ಚೂರು ಅಸ್ತವ್ಯಸ್ತವಾಗಿದ್ದರೆ
ಅಲ್ಲಿ ಹೆಚ್ಚು ಆಕರ್ಷಣೆ
ಇಣುಕುತ್ತದೆ
ಮೂಲ: Delight In Disorder by Robert Herrick
(ಬ್ಯೂಟಿ ಎನ್ನುವುದು ಅತಿ ಸಿಂಗಾರ ಅಥವಾ ಶಿಸ್ತಿಗಿಂತ ಚೂರು ಅಶಿಸ್ತು ಅಥವಾ ಅಸ್ತವ್ಯಸ್ತತೆಯಲ್ಲಿರುತ್ತದೆ ಎಂದು ವಿವರಿಸುವ ಕವನ. ವಸ್ತುವನ್ನು ಪೂರ್ಣ ಮುಚ್ಚುವುದು ಮತ್ತು ತೆರೆಯುವುದೆರಡರಲ್ಲೂ ನಿರಾಸೆ ಹೆಚ್ಚಾಗುವುದೋ ಹೊರತು ಆಕರ್ಷಣೆ ಉಳಿಯುವುದಿಲ್ಲ)
Comments
ಉ: ಕೆಲವು ಪದ್ಯಗಳ ಅನುವಾದ ಪ್ರಯತ್ನ (ಅನುವಾದ: ಮೋಹನ್ ವಿ ಕೊಳ್ಳೇಗಾಲ
ಮೋಹನ ಕೊಳ್ಳೆಗಾಲ ರವರಿಗೆ ವಂದನೆಗಳು
ಕವಿ ಗುಲ್ಜಾರರ ಕವನಗಳನ್ನು ಸಮರ್ಥವಾಗಿ ಅನುವಾದಿಸಿದ್ದೀರಿ, ಅವು ಓದುಗನ ಮೇಲೆ ಮಾಡುವ ಪರಣಾಮ ಗಾಢವಾದುದು, ಅದನ್ನು ಪದಗಳ ಮಿತಿಯಲ್ಲಿ ಹೇಳಲಾಗದು. ಮತ್ತೆ ಮತ್ತೆ ಓದಿಸಿಕೊಳ್ಳುವ ಅನುವಾದಗಳು ಧನ್ಯವಾದಗಳು.
In reply to ಉ: ಕೆಲವು ಪದ್ಯಗಳ ಅನುವಾದ ಪ್ರಯತ್ನ (ಅನುವಾದ: ಮೋಹನ್ ವಿ ಕೊಳ್ಳೇಗಾಲ by H A Patil
ಉ: ಕೆಲವು ಪದ್ಯಗಳ ಅನುವಾದ ಪ್ರಯತ್ನ (ಅನುವಾದ: ಮೋಹನ್ ವಿ ಕೊಳ್ಳೇಗಾಲ
ಸರ್... ಪ್ರೀತಿ ತುಂಬಿದ ಧನ್ಯವಾದಗಳು