ಕೆಳದಿ ರಾಮೇಶ್ವರ ದೇವಸ್ಥಾನ

ಕೆಳದಿ ರಾಮೇಶ್ವರ ದೇವಸ್ಥಾನ

ಇಂದಿನ ಪ್ರವಾಸದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಗೆ ಪಯಣ ಬೆಳೆಸೋಣ ಬನ್ನಿ. ಭೂಮಿ ಉಳುವಾಗ ಸಿಕ್ಕಿದ ಲಿಂಗ, ಕತ್ತಿ ಹಾಗೂ ನಿಧಿಯಿಂದ ಅಸ್ತಿತ್ವಕ್ಕೆ ಬಂದ ರಾಜ್ಯ ಇಕ್ಕೇರಿ. ನೆಲದಲ್ಲಿ ಸಿಕ್ಕ ಲಿಂಗಕ್ಕೆ ಗುಡಿಕಟ್ಟಿ, ಕತ್ತಿಗೆ ನಾಗರ ಮುರಿ ಎಂಬ ಹೆಸರುಕೊಟ್ಟು ರಾಜ್ಯ ಕಟ್ಟಿದವರು ಚೌಡೇಗೌಡ ಹಾಗೂ ಭದ್ರೇಗೌಡ ಎಂಬ ಕೃಷಿಕರು. ಈ ಇಕ್ಕೇರಿ ನಾಯಕರ ಮೊದಲ ರಾಜಧಾನಿಯೇ ಕೆಳದಿ. ಇಲ್ಲಿರುವ ಜೋಡಿಗುಡಿಗಳು ರಾಮೇಶ್ವರ ಹಾಗೂ ವೀರಭದ್ರ ಆಲಯಗಳು. ಅದರ ಬದಿಯಲ್ಲಿ ಪಾವಟಿಗುಡಿ. ಕನ್ನಡ ನಾಡಿನ ಚರಿತ್ರೆಯಲ್ಲಿ ಸ್ಥಾನ ಪಡೆದಿರುವ ಕೆಳದಿಯಲ್ಲಿರುವ ವೀರಭದ್ರ ದೇವಾಲಯದಲ್ಲಿರುವ ಗಂಡಭೇರುಂಡ ಕರ್ನಾಟಕದ ನಾಲ್ಕಾರು ರಾಜರಿಗೆ ಲಾಂಛನವಾಗಿತ್ತು. 

ಶಿವಮೊಗ್ಗ ಜಿಲ್ಲೆ ಸಾಗರದಿಂದ ಕೆಳದಿ 8 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಜಿಲ್ಲೆ ಸಾಗರದಿಂದ ಮಾಸೂರು - ಸೊರಬ ಮಾರ್ಗವಾಗಿ 6 ಕಿ.ಮೀ. ದೂರ ಸಾಗಿದರೆ ಕೆಳದಿ ಗ್ರಾಮವಿದೆ. ಇಲ್ಲಿನ ರಾಮೇಶ್ವರ ದೇವಸ್ಥಾನ 500 ವರ್ಷಗಳ ಇತಿಹಾಸ ಹೊಂದಿದೆ. ದೇವಸ್ಥಾನ ಪ್ರವೇಶಿಸುವಾಗ ಬಲಬದಿಯಲ್ಲಿ ಮರದಲ್ಲಿ ಕೆತ್ತಲ್ಪಟ್ಟಿರುವ ಎಡಗೈ ಮುರಾರಿ, ಬಲಗೈ ಮುರಾರಿ ಎಂಬ ಸಹೋದರರ ಎರಡು ಗೊಂಬೆಗಳು ವಿಶೇಷ ಗಮನ ಸೆಳೆಯುತ್ತವೆ. ಈ ದೇವಸ್ಥಾನಕ್ಕೆ 500 ವರ್ಷದ ಇತಿಹಾಸ ಇರುವ ಹಾಗೆಯೇ, ಈ ಮೂರ್ತಿಗಳಿಗೂ ಕೂಡ 500 ವರ್ಷದ ಹಿನ್ನೆಲೆ ಇದೆ. ಎಡಗೈ ಎತ್ತಿರುವ ಗೊಂಬೆ ಎಡಗೈ ಮುರಾರಿಯದ್ದು, ಬಲಗೈ ಎತ್ತಿರುವ ಗೊಂಬೆ ಬಲಗೈ ಮುರಾರಿಯದ್ದು, ಪರಿಶಿಷ್ಟ ಜಾತಿಗೆ ಸೇರಿದ ಈರ್ವರ ಈ ವಿಗ್ರಹ ದೇವಸ್ಥಾನದ ಬಲಬದಿಯಲ್ಲಿಯೇ ಇರಿಸುವುದಕ್ಕೂ ಒಂದು ಇತಿಹಾಸವಿದೆ.

ಕೆಳದಿಯಿಂದ 1 ಕಿ.ಮೀ. ದೂರದಲ್ಲಿ ಚೌಡಪ್ಪ ನಾಯಕ ಎಂಬ ಜಮೀನುದಾರನಿದ್ದ. ಇವರ ಬಳಿ ಎಡಗೈ ಮುರಾರಿ, ಬಲಗೈ ಮುರಾರಿ ಹೆಸರಿನ ಸಹೋದರರು ಎಡಗೈ, ಬಲಗೈ ಭಂಟರಂತಿದ್ದು ಕೆಲಸ ಮಾಡಿಕೊಂಡಿದ್ದರು. ಚೌಡಪ್ಪ ನಾಯಕರ ದನಗಳಲ್ಲಿ ಒಂದು ಹಸು ಬೆಳಗ್ಗೆ ಹಾಲು ಕೊಡುತ್ತಿತ್ತು. ಸಂಜೆ ಹಾಲು ಕೊಡುತ್ತಿರಲಿಲ್ಲ. ಶಿವಪ್ಪ ನಾಯಕನ ಮಡದಿ ದನ ಕಾಯುವವನಲ್ಲಿ ವಿಚಾರಿಸಿದಾಗ ಅದು ತನಗೆ ಗೊತ್ತಿಲ್ಲ. ಪರೀಕ್ಷಿಸಿ ತಿಳಿಸುವುದಾಗಿ ಹೇಳಿದ್ದ. ಮಾರನೇ ದಿನ ಸಂಜೆ ಮರಳಿ ಬರುವಾಗ ಈ ಹಸು ಒಂದು ಹುತ್ತಕ್ಕೆ ಹಾಲು ಹರಿಸುವುದನ್ನು ನೋಡಿದ. ಶಿವಮೊಗ್ಗಕ್ಕೆ ಹೋಗಿದ್ದ ಚೌಡಪ್ಪ ನಾಯಕ ಈ ಕೌತುಕ ಅರಿತು ಅದು ಶುಭಸೂಚಕ ಎಂದು ಮಡದಿಗೆ ತಿಳಿಸುತ್ತಾನೆ. ಚೌಡಪ್ಪ ನಾಯಕ ಊಟ ಮಾಡಿ ನಿದ್ರಿಸುವಾಗ ಕನಸಿನಲ್ಲಿ ಪರಮೇಶ್ವರ ದೇವರು ಕಾಣಿಸಿಕೊಳ್ಳುತ್ತಾನೆ. "ನಿಮ್ಮ ಆಕಳ ಹಾಲು ಸೇವಿಸುತ್ತಿರುವುದು ನಾನೇ, ನಿನಗೆ ರಾಜಯೋಗವಿದೆ. ನೀನು ರಾಜನಾದ ಕೂಡಲೇ ನನಗೊಂದು ರಾಮೇಶ್ವರ ದೇವಸ್ಥಾನ ಕಟ್ಟಿಸಬೇಕು.

ಅದಕ್ಕೆ ಕೈಯಿಂದ ಹಣ ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಜಮೀನಿನೊಳಗೆ ನಿಧಿ ಇದೆ. ಅದನ್ನು ಬಳಸಿಕೋ ನೀನು ರಾಜನಾಗುತ್ತೀಯ" ಎಂದು ನುಡಿದು ಮಾಯವಾದಾಗ ಚೌಡಪ್ಪ ನಾಯಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಅದರಂತೆ ಚೌಡಪ್ಪ ನಾಯಕ ಸ್ವಪ್ನದಲ್ಲಿ ಶಿವ ಹೇಳಿದಂತೆ ರಾಮೇಶ್ವರ ದೇಗುಲ ನಿರ್ಮಿಸಿದ ಎಂದು ಹೇಳಲಾಗುತ್ತದೆ.

ರಾಜನ ಶ್ರೇಯೋಭಿವೃದ್ಧಿಗಾಗಿ ಹುತಾತ್ಮರಾದ ಎಡಗೈ ಮುರಾರಿ, ಬಲಗೈ ಮುರಾರಿ ಅವರ ನೆನಪಿಗಾಗಿ ಈ ಮೂರ್ತಿಗಳನ್ನು ನಿರ್ಮಿಸಲಾಗಿದೆ ಎಂಬುದು ಪ್ರತೀತಿ. ಅನಂತರ ಪಾರ್ವತಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಚೌಡಪ್ಪ ನಾಯಕ, ಕೇವಲ 5 ವರ್ಷ ರಾಜ್ಯಭಾರ ಮಾಡಿ, ಯುದ್ಧವೊಂದರಲ್ಲಿ ವೀರ ಮರಣ ಹೊಂದುತ್ತಾನೆ.

ದೇವಿ ವಿಗ್ರಹ : ಅವರ ಮೊದಲನೇ ಮಗ ದೊಡ್ಡ ಸಂಕಣ್ಣ ನಾಯಕ, ಅಘೋರೇಶ್ವರ ದೇವಸ್ಥಾನದಲ್ಲಿ ಪಟ್ಟಾಭಿಷೇಕವಾಗುತ್ತದೆ. ಕೆಳದಿ ದೇವಸ್ಥಾನದಲ್ಲಿ ಇಲ್ಲಿನ ಅರಸರು ದರ್ಬಾರು ನಡೆಸುತ್ತಿದ್ದರು. ಶಿವಮೊಗ್ಗದ ಶಿವಪ್ಪ ನಾಯಕನ ಅರಮನೆಯಲ್ಲಿ ಇಲ್ಲಿನ ರಾಜರು ವಾಸ್ತವ್ಯ ಹೂಡುತ್ತಿದ್ದರು. ದೊಡ್ಡ ಸಂಕಣ್ಣ ನಾಯಕ ರಾಜನಾದ ಸಂದರ್ಭ ಉತ್ತರ ಪ್ರದೇಶದ ಸಭೆ ಏರ್ಪಡಿಸಿ ಸಂಕಣ್ಣ ನಾಯಕನಿಗೆ ಆಹ್ವಾನ ಪತ್ರಿಕೆ ಕಳುಹಿಸುತ್ತಾನೆ. ಅಲ್ಲಿಗೆ ಭೇಟಿ ಕೊಟ್ಟ ಸಂಕಣ್ಣ ನಾಯಕ ಅಲ್ಲಿ ದೇವಸ್ಥಾನದಲ್ಲಿ ಕೆತ್ತಲ್ಪಟ್ಟ ಮರದ ವಿಗ್ರಹದಿಂದ ಪ್ರಭಾವಿತನಾಗಿ, ದೇವಿಯ ಮರದ ವಿಗ್ರಹ ಕೆತ್ತಿಸುತ್ತಾನೆ. ಇಲ್ಲಿಯ ಗರ್ಭಗುಡಿಯ ಸ್ತಂಭ 15 ಅಡಿ ಉದ್ದ, 10 ಅಡಿ ಅಗಲದಲ್ಲಿ ಏಕಶಿಲೆಯಿಂದ ಕೆತ್ತಲ್ಪಟ್ಟಿದೆ. ರಾಮೇಶ್ವರ ದೇಗುಲದ ಎಡಭಾಗದಲ್ಲಿ ಚಾಮುಂಡೇಶ್ವರಿ ವಿಗ್ರಹ, ಬಲಭಾಗದಲ್ಲಿ ವಿಶ್ವೇಶ್ವರ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಅನಂತರ ಆಳ್ವಿಕೆಗೆ ಬಂದ ದೊರೆ ಶಿವಪ್ಪ ನಾಯಕ, ಮನೆ ದೇವರಾದ ವೀರಭದ್ರ ದೇವರನ್ನು ಪ್ರತಿಷ್ಠಾಪಿಸುತ್ತಾನೆ. ಹಾಗಾಗಿ, ಕೆಳದಿಯಲ್ಲಿ 3ನೇ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಾಲಯದಲ್ಲಿ ರಂಗೋಲಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ವೀರಭದ್ರ ದೇವರ ಬಲಭಾಗದಲ್ಲಿ ಟಗರು, ಬ್ರಹ್ಮ, ದಕ್ಷ ಬ್ರಹ್ಮನ ಮೂರ್ತಿ ಕೂಡ ನೋಡಬಹುದು. ಎಡಭಾಗದಲ್ಲಿ ಶಾಂತಸ್ವರೂಪಿ ನರಸಿಂಹನನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮೇಲ್ಚಾವಣಿಯಲ್ಲಿ ಗಂಡಭೇರುಂಡ, ನವಗ್ರಹಗಳ ವಿಗ್ರಹ ಕೆತ್ತನೆಯಿದೆ.

15 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕೆಳದಿ ಚೆನ್ನಮ್ಮಳ ಕಾಲದಲ್ಲಿ ಮಹಾರಾಷ್ಟ್ರದ ರಾಜಾರಾಮ್ ಎಂಬ ರಾಜ ಭಿಕ್ಷೆಗಾಗಿ ವೇಷ ಮರೆಸಿ ಆಗಮಿಸಿದ್ದ ನೆನಪಿಗಾಗಿ ಕೆತ್ತಿಸಿರುವ ಏಕಶಿಲೆ ಗರುಡಗಂಬ ವಿಶೇಷವಾಗಿದೆ. ಈ ಗರುಡಗಂಬದ ನಾಲ್ಕು ದಿಕ್ಕಿನಲ್ಲಿ ಹುಂಚ ಪದ್ಮಾವತಿ ದೇವಿ, ಶೃಂಗೇರಿ ಶಾರದಾಂಬೆ, ಕೊಲ್ಲೂರು ಮೂಕಾಂಬಿಕೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ಚಿತ್ರಗಳಿವೆ. ಸಿಂಹದ ತಲೆ, ಗಡ್ಡ ಸಿಂಹ, ಎಡಬಲ ತೋಳುಗಳಲ್ಲಿ ಆನೆ ಸೊಂಡಿಲು, ಆನೆ ಪಾದಗಳು, ಮೊಸಳೆ ಬಾಲ ಒಳಗೊಂಡ ವಾಸ್ತು ಪುರುಷ ಇರುವುದು ಮತ್ತೊಂದು ವೈಶಿಷ್ಟ್ಯ.

ಮಾರ್ಗ : ಶಿವಮೊಗ್ಗ ಜಿಲ್ಲೆ ಸಾಗರದಿಂದ 8 ಕಿ.ಮೀ. ದೂರ ಸಾಗಿದರೆ ಕೆಳದಿ ರಾಮೇಶ್ವರ ದೇವಸ್ಥಾನ ನೋಡಬಹುದು. "ಇತಿಹಾಸವು ನಮ್ಮ ನಾಡಿನ ಭವ್ಯ ಸಂಸ್ಕೃತಿಯ ಪ್ರತೀಕ ಇದ್ದಂತೆ, ಅಂತಹ ಕುರುಹುಗಳಲ್ಲಿ ಕೆಳದಿಯ ಈ ಭವ್ಯತೆಯು ಒಂದು" ಬನ್ನಿ ಪ್ರವಾಸ ಹೋಗೋಣ ಕೆಳದಿಗೆ... 

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು