ಕೆಳದಿ ರಾಮೇಶ್ವರ ದೇವಾಲಯ ನೋಡಿದ್ದೀರಾ?
ಇತಿಹಾಸ ಮತ್ತು ಧಾರ್ಮಿಕ ಪರಂಪರೆಗಳನ್ನು ಥಳುಕು ಹಾಕಿಕೊಂಡಿರುವ, ಕೆಳದಿ ಅರಸರ ಮತ್ತು ಕವಿಮನೆತನದವರ ಆರಾಧ್ಯ ದೇವರಾದ ಕೆಳದಿ ರಾಮೇಶ್ವರ ದೇವಾಲಯ ಒಂದು ವೀಕ್ಷಿಸಬಹುದಾದ ಸ್ಥಳವಾಗಿದೆ. ಕೆಳದಿಯು ಶಿವಮೊಗ್ಗದಿಂದ 78 ಕಿ.ಮೀ. ಹಾಗೂ ಸಾಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಒಂದು ಪಂಚಾಯಿತಿ ಕೇಂದ್ರ. ಬೆಂಗಳೂರಿನಿಂದ ಸಾಗರಕ್ಕೆ ಬಸ್ಸು ಮತ್ತು ರೈಲುಗಳ ನೇರ ಸಂಪರ್ಕ ಸೌಲಭ್ಯವಿದೆ. ಕೆಳದಿ ಅರಸರ ಪ್ರಥಮ ರಾಜಧಾನಿಯಾಗಿದ್ದ ಕೆಳದಿಯಲ್ಲಿರುವ ರಾಮೇಶ್ವರ ದೇವಸ್ಥಾನದ ಉಗಮದ ಕುರಿತು ಇರುವ ಐತಿಹ್ಯವೆಂದರೆ, ಹಳ್ಳಿಬಯಲು ಗ್ರಾಮದಲ್ಲಿ ವಾಸವಿದ್ದ ಕೆಳದಿಯ ಪ್ರಥಮ ದೊರೆ ಚೌಡಪ್ಪ ದೊರೆಯಾಗಿ ಪಟ್ಟಾಧಿಕಾರ ಹೊಂದುವ ಹಲವು ವರ್ಷಗಳ ಮೊದಲು ಆತನ ಕನಸಿನಲ್ಲಿ ಜಂಗಮನೊಬ್ಬ ಕಾಣಿಸಿಕೊಂಡು, ಕೆಳದಿಯ ಸೀಗೆವಟ್ಟಿ ಎಂಬಲ್ಲಿ ಸೀಗೆಮೆಳೆಯ ನಡುವಣ ಹುತ್ತದ ಕೆಳಗೆ ರಾಮೇಶ್ವರ ಲಿಂಗವಿರುವ ಕುರಿತು ತಿಳಿಸಿದ್ದನಂತೆ. ಮರುದಿನ ಆ ಸ್ಥಳಕ್ಕೆ ಹೋಗಿ ಮುಳ್ಳು ಕಂಟಿಗಳು, ಹಾಳುಗಿಡಗಳನ್ನು ಕಡಿದು, ಹುತ್ತವನ್ನು ಕಡಿದು, ಮಣ್ಣು ಸರಿಸಿ ನೋಡಿದರೆ, ಅಲ್ಲಿ ನಿಜಕ್ಕೂ ಲಿಂಗವಿದ್ದುದು ಗೊತ್ತಾಯಿತಂತೆ. ನಂತರದಲ್ಲಿ ಸುತ್ತಲಿನ ಪ್ರದೇಶವನ್ನು ಸಮತಟ್ಟುಗೊಳಿಸಿ, ಒಂದು ಹುಲ್ಲಿನ ಗುಡಿಸಲು ಕಟ್ಟಿ ತಾತ್ಕಾಲಿಕ ದೇವಸ್ಥಾನದ ರೂಪಕ್ಕೆ ಚೌಡಪ್ಪ ತಂದದ್ದಲ್ಲದೆ, ಅದನ್ನು ಪ್ರತಿದಿನ ಪೂಜಿಸುವ ಪರಿಪಾಠ ಬೆಳೆಸಿಕೊಂಡನಂತೆ. ಚೌಡಪ್ಪ ಕೆಳದಿ ಸಂಸ್ಥಾಪಕ ಅರಸನಾದ ಕೂಡಲೇ ದೇವಸ್ಥಾನದ ಗರ್ಭಗುಡಿಯನ್ನು ಕಲ್ಲುಕಟ್ಟಡವನ್ನಾಗಿಸಿದನು. ನಂತರದ ಅರಸರುಗಳೂ ಸಹ ಕಾಲಕಾಲಕ್ಕೆ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿಕೊಂಡು ಬಂದರು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಸಂರಕ್ಷಿತ ಸ್ಮಾರಕವೆಂದು ಪುರಾತತ್ವ ಇಲಾಖೆಯ ನಿಗಾವಣೆಯಲ್ಲಿದೆ.
ದೇವಸ್ಥಾನದ ಪ್ರಾಂಗಣದಲ್ಲಿ ಒಂದು ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳಿವೆ. ದೇವಾಲಯದ ಎದುರಿಗೆ ಇರುವ ಧ್ವಜಸ್ಥಂಭದಲ್ಲಿ ರಾಣಿ ಚೆನ್ನಮ್ಮ ಶರಣು ಬಂದಿದ್ದ ಶಿವಾಜಿಯ ಮಗ ರಾಜಾರಾಮನಿಗೆ ಅಭಯ ನೀಡಿದ್ದ ಕುರುಹಾಗಿ ಕೆತ್ತಿದ ಚೆನ್ನಮ್ಮ, ರಾಜಾರಾಮರ ಶಿಲ್ಪಗಳಿವೆ. ಕೆಳದಿಯ ರಕ್ಷಣೆಗಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ಎಡವಮುರಾರಿ, ಬಲವಮುರಾರಿಯವರ ಕಾಷ್ಠ ಶಿಲ್ಪ, ಅಲಂಕಾರಿಕ ಕಾಷ್ಠಶಿಲ್ಪಗಳು, ದೇವಾಲಯದಲ್ಲಿರುವ ಕೆತ್ತನೆಗಳು ಆಕರ್ಷಕವಾಗಿವೆ. ಛಾವಣಿಯ ಭಾಗದಲ್ಲಿ ಕೆತ್ತಿರುವ ಗಂಡ ಭೇರುಂಡ ಕೆಳದಿ ಅರಸರ ಲಾಂಛನವಾಗಿತ್ತು. ಈಗಿನ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಗಂಡ ಭೇರುಂಡವೂ ಒಳಗೊಂಡಿದೆ. ಅನೇಕ ದೇವತಾ ವಿಗ್ರಹಗಳು, ವಾದ್ಯಗಾರರ ಶಿಲ್ಪಗಳು ಗಮನ ಸೆಳೆಯುತ್ತವೆ. ಪ್ರದಕ್ಷಿಣಾ ಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡದಾಗಿದ್ದು ಇದರ ಮೇಲೆ ಆರು ಕಂಬಗಳನ್ನು ನಿಲ್ಲಿಸಲಾಗಿದೆ. ಮೂರು ಪ್ರವೇಶ ದ್ವಾರಗಳಿವೆ. ದೇವಾಲಯದ ಹೊರಭಾಗದಲ್ಲಿರುವ ಗಜಹಂಸದ ಶಿಲ್ಪವನ್ನು ಲಕ್ಷ್ಮಿ ಮತ್ತು ಸರಸ್ವತಿಯರ ಸಂಕೇತವೆಂದು ಕುವೆಂಪು ವಿಶ್ವವಿದ್ಯಾಲಯವು ತನ್ನ ಲಾಂಛನವಾಗಿ ಬಳಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ನಾನು ತೆಗೆದಿದ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿರುವೆ. ನಿಮ್ಮನ್ನೂ ಕೆಳದಿಗೆ ಒಮ್ಮೆ ಭೇಟಿ ಕೊಡಲು ಪ್ರೇರೇಪಿಸಲು ಈ ಪ್ರಯತ್ನ.
-ಕ.ವೆಂ.ನಾಗರಾಜ್.
ಪೂರಕವಾದ ಈ ಲೇಖನವನ್ನೂ ಓದಿ: ಕೆಳದಿ ಮೂಲ ಸಂಸ್ಥಾನದ ಮನ್ನೆಯ ಚೌಡಪ್ಪನಾಯಕ
Comments
ಕವಿ ನಾಗರಾಜರೇ, ಲೆಖನ
In reply to ಕವಿ ನಾಗರಾಜರೇ, ಲೆಖನ by Shobha Kaduvalli
ಧನ್ಯವಾದಗಳು, ಶೋಭಾರವರೇ. ಈಗ ಲೇಖನ