ಕೆಸುವಿನ ಎಲೆಯ ‘ಪತ್ರೊಡೆ’

ಕೆಸುವಿನ ಎಲೆಯ ‘ಪತ್ರೊಡೆ’

ಪತ್ರೊಡೆ, ಕೆಸುವಿನ ಸಾರು, ಕೆಸುವಿನ ಗೊಜ್ಜು ಇವೆಲ್ಲಾ ಮಳೆಗಾಲದ ವಿಶೇಷ ಅಡುಗೆಗಳಾಗಿವೆ. ಮಲೆಗಾಲದಲ್ಲಿ ಬೆಚ್ಚಗಿನ ಆಹಾರಗಳನ್ನು, ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು, ಕೆಸುವಿನ ಎಲೆಯಿಂದ ಮಾಡಿದ ಆಹಾರ ಮೈ ಉಷ್ಣಾಂಶ ಹೆಚ್ಚಿಸುವುದು, ಆದ್ದರಿಂದ ಮಳೆಗಾಲದಲ್ಲಿ ಕೆಸುವಿನಿಂದ ಆಹಾರ ಸೇವಿಸುವುದು ಒಳ್ಳೆಯದು. ಕೆಸುವಿನ ಎಲೆಯಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ ಇದರಿಂದ ತಯಾರಿಸುವ ಪತ್ರೊಡೆಯನ್ನು ಔಷಧೀಯ ಗುಣಗಳಿರುವ ಆಹಾರ ಎಂದು ಆಯುಷ್‌ ಇಲಾಖೆ ಹೇಳಿದೆ. ಕೆಸುವಿನ ಎಲೆಯಲ್ಲಿ ವಿಟಮಿನ್‌ ಎ, ವಿಟಮಿನ್ ಸಿ, ಬಿ, ಥೈಯಾಮಿನ್‌, ರಿಬೋಫ್ಲೇವಿನ್‌, ಫೋಲೆಟ್, ಮ್ಯಾಂಗನೀಸ್, ತಾಮ್ರ, ಪೊಟಾಷ್ಯಿಯಂ, ಕಬ್ಬಿಣದಂಶ ಇರುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಕೂಡ ಇದೆ.

ಕೆಸುವಿನ ಎಲೆಯಲ್ಲಿ ವಿಟಮಿನ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್‌ ಅಂಶವಿರುವುದರಿಂದ ಪತ್ರೊಡೆ ಸವಿಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ: ಪತ್ರೊಡೆ ಸವಿಯುವುದರಿಂದ ಅದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ಪತ್ರೊಡೆಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.

ರಕ್ತದೊತ್ತಡ ನಿಯಂತ್ರಿಸುತ್ತದೆ: ಪತ್ರೊಡೆ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಹಲ್ಲು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ, ಅಲ್ಲದೆ ಸಂಧಿವಾತದ ಸಮಸ್ಯೆ ತಡೆಗಟ್ಟುವುದು.

ಮಧುಮೇಹಿಗಳಿಗೆ ಉತ್ತಮವಾದ ಆಹಾರ: ಕೆಸುವಿನ ಎಲೆ ರಕ್ತದಲ್ಲಿ ಗ್ಲೂಕೋಸ್‌ ಹಾಗೂ ಇನ್ಸುಲಿನ್‌ ನಿಯಂತ್ರಿಸುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ. ಮಧುಮೇಹಿಗಳು ಕೆಸುವಿನ ಎಲೆಯ ಗೊಜ್ಜು ಕೂಡ ಮಾಡಿ ಸವಿಯಬಹುದು. ಕೆಸವಿನ ಎಲೆ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ.

ತ್ವಚೆ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿ ವಿಟಮಿನ್‌ ಎ ಇರುವುದರಿಂದ ಕಣ್ಣಿಗೆ ಹಾಗೂ ತ್ವಚೆ ಒಳ್ಳೆಯದು, ಅಲ್ಲದೆ ತ್ವಚೆ ಮೃದುವಾಗುವುದು. ಅಲ್ಲದೆ ತ್ವಚೆಯ ಹೊಳಪು ಕೂಡ ಹೆಚ್ಚುವುದು. ನೀವು ಕೆಸುವಿನ ಎಲೆಯಿಂದ ಮಾಡಿದ ಅಡುಗೆಗೆ ಹುಣಸೆ ಹಣ್ಣು ಸೇರಿಸಿ ಮಾಡಬೇಕು, ಇಲ್ಲದಿದ್ದರೆ ಬಾಯಿ ತುರಿಸಬಹುದು.

(ಮಾಹಿತಿ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್