ಕೆ ಪಿ ಎಸ್ ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
ಕರ್ನಾಟಕ ಲೋಕಸೇವಾ ಆಯೋಗವು (ಕೆ ಪಿ ಎಸ್ ಸಿ) ಕಳೆದ ಆಗಸ್ಟ್ ತಿಂಗಳಲ್ಲಿ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಈಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆ ಪಿ ಎಸ್ ಸಿ ರವಿವಾರ (ಡಿ. ೨೯) ಪೂರ್ವಭಾವಿ ಮರು ಪರೀಕ್ಷೆ ಆಯೋಜಿಸಿತ್ತು. ವಿಪರ್ಯಾಸ ಎಂದರೆ, ಈ ಮರು ಪರೀಕ್ಷೆಯೂ ಅವಾಂತರಗಳಿಂದ ಮುಕ್ತವಾಗಿರಲಿಲ್ಲ ! ಪರಿಣಾಮ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲೇ ಪ್ರತಿಭಟನೆ ನಡೆಸಿ, ಮತ್ತೆ ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.
ಎಂದಿನಂತೆ ಭಾಷಾಂತರ ಸಮಸ್ಯೆ ಜತೆಗೆ ಈ ಬಾರಿ ಒ ಎಂ ಆರ್ ಶೀಟ್ ಸಂಖ್ಯೆ - ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಒಎಂಆರ್ ಶೀಟ್ - ಪ್ರಶ್ನೆ ಪತ್ರಿಕೆ ನಡುವೆ ತಾಳೆಯಾಗಿಲ್ಲ. ಇದರಿಂದಾಗಿ ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ಒಂದು ಗಂಟೆ ವಿಳಂಬವಾಗಿದೆ. ೨೦೪ ಸರಕಾರಿ, ೧೮೯ ಅನುದಾನಿತ ಹಾಗೂ ೧೬೧ ಖಾಸಗಿ ಶಾಲಾ- ಕಾಲೇಜುಗಳಲ್ಲಿ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಆ ಪೈಕಿ ವಿಜಯಪುರ ಮತ್ತು ಕೋಲಾರ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಮರು ಪರೀಕ್ಷೆಯಲ್ಲಿಯೂ ನಾಲ್ಕೈದು ಪ್ರಶ್ನೆಗಳ ಭಾಷಾಂತರದಲ್ಲಿ ದೋಷಗಳು ಕಂಡು ಬಂದುವೆ. ಹಾಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ ಕೆಲವು ಅಭ್ಯರ್ಥಿಗಳು ಕೆ ಪಿ ಎಸ್ ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಕೆ ಎಸ್ ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳು ಮಾತ್ರವಲ್ಲ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಇತರ ಯಾವುದೇ ಪರೀಕ್ಷೆಗಳು ಲೋಪದಿಂದ ಮುಕ್ತವಾಗದಿರುವುದು ಆತಂಕಕಾರಿ ವಿಷಯವಾಗಿದೆ. ಕೆ ಪಿ ಎಸ್ ಸಿ ಇತಿಹಾಸವನ್ನು ಕೆದಕಿದರೆ ಪರೀಕ್ಷಾ ಅಕ್ರಮಗಳು,ಲೋಪಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ. ೧೯೯೮, ೧೯೯೯, ೨೦೧೧ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮಗಳು ಭಾರೀ ಸದ್ದು ಮಾಡಿದ್ದವು. ಅಕ್ರಮ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರು, ಸದಸ್ಯರು ಜೈಲುಪಾಲಾಗಿದ್ದರು. ೨೦೧೪ ಮತ್ತು ೨೦೧೫ರ ಸಾಲಿನ ನೇಮಕಾತಿಯಲ್ಲೂ ಗೊಂದಲಗಳಾಗಿದ್ದವು. ಕೆ ಪಿ ಎಸ್ ಸಿಯ ಈ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಅನೇಕ ಬಾರಿ ನ್ಯಾಯಾಲಯಗಳು ಚಾಟಿ ಕೂಡಾ ಬೀಸಿವೆ. ಆದರೆ ಈಗಲೂ ಕೆ ಪಿ ಎಸ್ ಸಿ ತನ್ನ ತಪ್ಪುಗಳನ್ನು ತಿದ್ದಿಕೊಂಡಿಲ್ಲ. ರವಿವಾರ ನಡೆದ ಕೆ ಎ ಎಸ್ ಪೂರ್ವಭಾವಿ ಮರು ಪರೀಕ್ಷೆ ಮತ್ತೊಮ್ಮೆ ಸಾಕ್ಷ್ಯ ಒದಗಿಸಿದೆ.
ಕೆ ಪಿ ಎಸ್ ಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೂ ಅದರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು ಸರಕಾರದ ಜವಾಬ್ದಾರಿಯೇ ಆಗಿರುತ್ತದೆ. ಈ ನಿಟ್ಟಿನಲ್ಲಿ ೨೦೧೩ರಲ್ಲಿ ನೇಮಿಸಲಾಗಿದ್ದ ಪಿ ಸಿ ಹೂಟಾ ಸಮಿತಿ ಅನೇಕ ಶಿಫಾರಸ್ಸುಗಳನ್ನು ಮಾಡಿತ್ತು. ಈ ಪೈಕಿ ಭಾಗಷಃ ಶಿಫಾರಸುಗಳನ್ನು ಮಾತ್ರವೇ ಸರಕಾರ ಒಪ್ಪಿಕೊಂಡಿದೆ. ಇದು ಸೂಕ್ತವಾದ ನಡೆಯಲ್ಲ. ಸಮಿತಿಯ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಿ, ಜಾರಿಗೆ ತರಬೇಕು. ಆಗ, ಕೇಂದ್ರ ಲೋಕಸೇವಾ ಆಯೋಗದ (ಯುಪಿ ಎಸ್ ಸಿ) ರೀತಿಯಲ್ಲಿ ದಕ್ಷತೆಯಿಂದ, ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಬಹುದು. ಜತೆಗೆ, ಕೆ ಪಿ ಎಸ್ ಸಿ ಕಾರ್ಯದರ್ಶಿಯಂಥ ಪ್ರಮುಖ ಹುದ್ದೆಗಳಿಗೆ ಕನ್ನಡ ಬಲ್ಲ ಸ್ಥಳೀಯರಾಗಿರುವ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಹೆಚ್ಚಿನ ಸಮಸ್ಯೆಗಳನ್ನು ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಜವಾಬ್ದಾರಿ ಕೆಪಿಎಸ್ ಸಿಯದ್ದು. ಹಾಗಾಗಿ ಅದಕ್ಕೂ ತನಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಸರ್ಕಾರ ವರ್ತಿಸುವಂತಿಲ್ಲ. ಯಾಕೆಂದರೆ, ಪರೀಕ್ಷಾ ಲೋಪಗಳು, ಪರೀಕ್ಷಾ ಅಕ್ರಮಗಳು ಲಕ್ಷಾಂತರ ಯುವಕರ ಬದುಕಿಗೆ ಬರೆ ನೀಡಬಲ್ಲವು. ಹಾಗಾಗಿ, ಕೆ ಪಿ ಎಸ್ ಸಿ ಪರೀಕ್ಷೆಗಳ ಲೋಪಗಳನ್ನು ಗಂಭೀರವಾಗಿ ತೆಗೆದುಕೊಂಡು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಇಲ್ಲದಿದ್ದರೆ, ಮತ್ತೊಂದು ಪರೀಕ್ಷೆಯಲ್ಲಿ ಮತ್ತದೇ ಲೋಪಗಳು ಉಂಟಾಗಿ, ಮುಜುಗರ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೩೧-೧೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ