ಕೇಜ್ರಿವಾಲ್ ರಾಜೀನಾಮೆ ನೀಡಲಿ

ಕೇಜ್ರಿವಾಲ್ ರಾಜೀನಾಮೆ ನೀಡಲಿ

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ತಂಡವು ಅದೆಷ್ಟೇ ‘ನಾಟಕ' ಮಾಡಿದರೂ ವಾಸ್ತವಾಂಶಗಳು ಮಾತ್ರ ಅವರು ಅಬಕಾರಿ ನೀತಿ ಹಗರಣದಲ್ಲಿ ಪಾಲುದಾರರೇ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇದೀಗ ದಿಲ್ಲಿ ಹೈಕೋರ್ಟ್ ಕೂಡಾ ಈ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಸಿಂಧುವಾಗಿಯೇ ಇದೆ ಎಂಬುದಾಗಿ ತೀರ್ಪಿತ್ತಿರುವುದು ಇದನ್ನು ಧೃಢಪಡಿಸುತ್ತದೆ. ತಾನು ಅಮಾಯಕ, ತನ್ನನ್ನು ವಿನಾಕಾರಣ ಬಂಧಿಸಲಾಗಿದೆ ಎಂಬಂತೆ ನಟಿಸುತ್ತಿರುವ ಕೇಜ್ರಿವಾಲ್ ರ ಬಂಡವಾಳವನ್ನು ಹೈಕೋರ್ಟ್ ತೀರ್ಪು ತೆರೆದಿಟ್ಟಿದೆ. ತನ್ನ ಬಂಧನದ ಔಚಿತ್ಯವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಲೇರಿದ್ದ ಕೇಜ್ರಿವಾಲ್ ಗೆ ಈ ತೀರ್ಪು ಅತಿದೊಡ್ಡ ಹಿನ್ನಡೆಯೇ ಸರಿ.

ಅನುಷ್ಟಾನ ನಿರ್ದೇಶನಾಲಯ (ಇ.ಡಿ.) ವು ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿದಂದಿನಿಂದ ಕೇಜ್ರಿವಾಲ್ ದಾರ್ಷ್ಟ್ಯತನ ತೋರುತ್ತಾ ತಾನು ಕಾನೂನಿಗಿಂತ ಮಿಗಿಲು ಎಂಬಂತಹ ಧೋರಣೆ ಪ್ರದರ್ಶಿಸಿದ್ದರು. ತನ್ನನ್ನು ಬಂಧಿಸಿದ್ದು ತಪ್ಪು ಬೇಕಿದ್ದರೆ ವಿಡಿಯೋ ಮುಖಾಂತರ ವಿಚಾರಣೆ ನಡೆಸಬಹುದಿತ್ತು ಎಂಬುದಾಗಿಯೂ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಶ್ರೀಸಾಮಾನ್ಯನಿಗೊಂದು ಕಾನೂನು, ಆಳುವವರಿಗೊಂದು ಕಾನೂನು ಅನ್ವಯಿಸಲು ಬರುವುದಿಲ್ಲ ಎಂದು ಹೇಳಿರುವ ನ್ಯಾಯಾಲಯವು ಈ ಮೊದಲು ವಿಚಾರಣೆಗೆ ೯ ಬಾರಿ ಸಮನ್ಸ್ ನೀಡಿದ್ದರೂ ಅದನ್ನು ತಿರಸ್ಕರಿಸಿದ್ದು ಕೇಜ್ರಿವಾಲ್ ರದ್ದೇ ತಪ್ಪು. ಹಾಗಾಗಿ ತನ್ನನ್ನು ಚುನಾವಣೆ ಸಮಯದಲ್ಲಿ ಬೇಕೆಂದೇ ಬಂಧಿಸಲಾಗಿದೆ ಎಂಬ ಅವರ ವಾದವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದೆ. ಅಬಕಾರಿ ನೀತಿಯ ಭ್ರಷ್ಟಾಚಾರದಲ್ಲಿ ಕೇಜ್ರಿವಾಲ್ ಕೂಡಾ ಶಾಮೀಲಾಗಿರುವ ಕುರಿತಂತೆ ಇ.ಡಿ. ಬಳಿ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ಅವರನ್ನು ಬಂಧಿಸಿರುವುದು ಸರಿಯಾಗಿಯೇ ಇದೆ ಎಂಬುದಾಗಿ ನ್ಯಾಯಾಲಯವು ನುಡಿದಿದೆ. 

ಹೈಕೋರ್ಟ್ ತೀರ್ಪಿನ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟಿನ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅದು ಅವರಿಗೆ ಬಿಟ್ತ ವಿಚಾರ. ಆದರೆ ಅದಕ್ಕಿಂತ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿದೆ. ಪ್ರಸ್ತುತ ಜೈಲಿನಿಂದಲೇ ಅವರು ಅಧಿಕಾರ ನಡೆಸುತ್ತಾ ಇದ್ದಾರೆ. ಆರೋಪ ಸಾಬೀತಾಗುವ ತನಕ ಅವರು ರಾಜೀನಾಮೆ ನೀಡಬೇಕೆಂದಿಲ್ಲ ಎಂಬುದಾಗಿ ಕಾನೂನು ಹೇಳುವುದು ನಿಜವಾದರೂ ನ್ಯಾಯಾಲಯಗಳು ವ್ಯಕ್ತಪಡಿಸಿರುವ ಪ್ರಾಥಮಿಕ ಅಭಿಪ್ರಾಯಗಳು ಕೇಜ್ರಿವಾಲ್ ಗೆ ಪ್ರತಿಕೂಲವಾಗಿರುವುದರಿಂದ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅಗತ್ಯವಿದೆ. ಈ ಹಿಂದೆ ಯಾವ ಮುಖ್ಯಮಂತ್ರಿಯೂ ಜೈಲಿನಿಂದಲೇ ರಾಜ್ಯಭಾರ ಮಾಡಿರುವ ದೃಷ್ಟಾಂತಗಳು ಇಲ್ಲದಿರುವುದರಿಂದ ಕೇಜ್ರಿವಾಲ್ ‘ಕೆಟ್ಟ ದೃಷ್ಟಾಂತ'ವೊಂದಕ್ಕೆ ನಾಂದಿ ಹಾಕುವುದು ತರವಲ್ಲ. ಮುಖ್ಯಮಂತ್ರಿ ಹುದ್ದೆಯ ಘನತೆಯ ದೃಷ್ಟಿಯಿಂದಲಾದರೂ ಅವರು ರಾಜೀನಾಮೆ ನೀಡಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೧-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ