ಕೇರಳದ ಮಹಾನೆರೆ: ಪ್ರಕೃತಿ ಕಲಿಸಿದ ಪಾಠವೇನು?

ಕೇರಳದ ಮಹಾನೆರೆ: ಪ್ರಕೃತಿ ಕಲಿಸಿದ ಪಾಠವೇನು?

ಆಗಸ್ಟ್ ೨೦೧೮ರ ಕೇರಳದ ಜಲಪ್ರಳಯವನ್ನು ಶತಮಾನದ ಮಹಾನೆರೆ ಎಂದೇ ದಾಖಲಿಸಲಾಗಿದೆ. ಇದರ ಬಗ್ಗೆ ಹಲವರು ಕೇಳುವ ಪ್ರಶ್ನೆ: ಇದು ಮನುಷ್ಯನ ತಪ್ಪಿನಿಂದ ಆದದ್ದೇ? ಭವಿಷ್ಯದಲ್ಲಿ ಇಂತಹ ಅನಾಹುತ ಪುನಃ ಆಗದಂತೆ ಏನು ಮಾಡಬೇಕು?
ಕೇರಳದ ನೆರೆಪ್ರಕೋಪಕ್ಕೆ ಮನುಷ್ಯನೇ ಕಾರಣ ಎಂಬುದು ಸ್ಪಷ್ಟ. ಪ್ರೊ. ಮಾಧವ ಗಾಡ್ಗೀಳ್ ಇದನ್ನು ತಮ್ಮ ಸಂದರ್ಶನದಲ್ಲಿ ನೇರ ಮಾತಿನಲ್ಲಿ ಹೇಳಿದ್ದಾರೆ. ಮಾತ್ರವಲ್ಲ, ಇಂತಹ ಅನಾಹುತ ಪುನಃ ಆದೀತೆಂದು ವಿವರಿಸಿದ್ದಾರೆ.
ಕೇರಳದ ಮಹಾನೆರೆ ಉಕ್ಕಿ ಹರಿಯಲು ಮನುಷ್ಯನಿಂದಾದ ಎರಡು ಕಾರಣಗಳನ್ನು ಗುರುತಿಸಬಹುದು: ಹವಾಮಾನ ಬದಲಾವಣೆ ಮತ್ತು ಅರಣ್ಯ ನಾಶ ಸಹಿತ ಸ್ಥಳೀಯ ಜೈವಿಕಪರಿಸರ ನಾಶ. ಹವಾಮಾನ ಬದಲಾವಣೆಯಿಂದಾಗಿ ಆಕಾಶವೇ ಕಳಚಿ ಬಿದ್ದಂತೆ ಮಳೆ ಸುರಿಯಿತು ಎನ್ನಬಹುದು. ಆದರೆ, ಈ ಮಳೆಯ ದುಷ್ಪರಿಣಾಮಗಳು ಹಲವು ಪಟ್ಟು ಹೆಚ್ಚಾಗಲು ಕಾರಣ ಪರಿಸರಸೂಕ್ಷ್ಮ ಪ್ರದೇಶಗಳಾದ ಪಶ್ಚಿಮಘಟ್ಟ ಮತ್ತು ತಗ್ಗುಪ್ರದೇಶಗಳಲ್ಲಿ ಜೈವಿಕಪರಿಸರ ಧ್ವಂಸ ಮಾಡಿದ್ದು.
ಕಳೆದ ೧೦೦ ವರುಷಗಳಲ್ಲಿ ಭಾರತದ ಸರಾಸರಿ ಉಷ್ಣತೆ ೧.೧ ಡಿಗ್ರಿ ಸೆ. ಹೆಚ್ಚಾಗಿದೆ. ಮಳೆಗಾಲದ ಹೊರತಾಗಿ, ಚಳಿಗಾಲ ಮತ್ತು ಬೇಸಿಗೆಕಾಲಗಳಲ್ಲಿ ಸರಾಸರಿ ಉಷ್ಣತೆಯ ಹೆಚ್ಚಳ ೧.೫ ಡಿಗ್ರಿ ಸೆ. ದಾಟಿದೆ. ಇದು, ಪ್ಯಾರಿಸ್ ಹವಾಮಾನ ಶೃಂಗಸಭೆಯಲ್ಲಿ ವಿವಿಧ ದೇಶಗಳು ಉಷ್ಣತೆಯ ಹೆಚ್ಚಳಕ್ಕೆ ನಿಗದಿ ಪಡಿಸಿದ ಗರಿಷ್ಠ ಮಿತಿ.
ಅತಿರೇಕದ ಮಳೆ ಸುರಿತದ ಘಟನೆಗಳು ಭಾರತದಲ್ಲಿ ಮತ್ತೆಮತ್ತೆ ಆಗುತ್ತಲೇ ಇವೆ. ೨೦೦೫ರಲ್ಲಿ ಮುಂಬೈ, ೨೦೧೦ರಲ್ಲಿ ಲೆಹ್, ೨೦೧೩ರಲ್ಲಿ ಉತ್ತರಖಂಡ, ೨೦೧೪ರಲ್ಲಿ ಜಮ್ಮು ಮತ್ತು ಕಾಶ್ಮೀರ, ೨೦೧೫ರಲ್ಲಿ ಚೆನ್ನೈ, ೨೦೧೭ರಲ್ಲಿ ಸೌರಾಷ್ಟ್ರ ಮತ್ತು ಮುಂಬೈ – ವಿಪರೀತ ಮಳೆಯಿಂದ ತತ್ತರಿಸಿ ಹೋದವು. ಕೇರಳದಲ್ಲಿಯೂ ಆಗಸ್ಟ್ ೨೦೧೮ರಲ್ಲಿ ಸುರಿದದ್ದು ಪ್ರಚಂಡ ಮಳೆ – ಅಂದರೆ ಕಳೆದ ಐದಾರು ವರುಷಗಳ ಸರಾಸರಿಗಿಂತ ಎರಡೂವರೆ ಪಟ್ಟು ಜಾಸ್ತಿ. ಅಬ್ಬರದ ಮಳೆಯ ೧೧ ದಿನಗಳಲ್ಲಿ ಕೇರಳದಲ್ಲಿ ನೆಲಕ್ಕಿಳಿದ ಮಳೆನೀರು ೨೫ – ೩೦ ಟ್ರಿಲಿಯನ್ ಲೀಟರ್. ಹಾಗಾಗಿ, ಹಲವು ಮನೆಗಳ ಎರಡನೇ ಮಹಡಿಗೂ ನೀರು ನುಗ್ಗಿದ್ದರಲ್ಲಿ ಅಚ್ಚರಿಯೇನಿಲ್ಲ.
ಕೇರಳದಲ್ಲಿ ಮಳೆಯ ಆಟಾಟೋಪವನ್ನು ಉಗ್ರವಾಗಿಸಿದ್ದು, ಅಲ್ಲಿ ಕಳೆದ ೬೦ ವರುಷಗಳಲ್ಲಿ ನಡೆಸಿದ ಪರಿಸರ ನಾಶದ ಹತ್ಯಾಕಾಂಡ. ಈ ನಿಟ್ಟಿನಲ್ಲಿ ಮೂರು ಪ್ರಮುಖ ಸಂಗತಿಗಳನ್ನು ಗುರುತಿಸಬಹುದು:
(೧) ಈ ಅವಧಿಯಲ್ಲಿ ಕೇರಳದಲ್ಲಿ ೪ ಲಕ್ಷ ಹೆಕ್ಟೇರ್ ಸಹಜ ಅರಣ್ಯ ನಾಶ ಮಾಡಲಾಗಿದೆ. ಅದಲ್ಲದೆ, ಕೃಷಿ, ಪ್ಲಾಂಟೇಷನ್ ಮತ್ತು ಕಟ್ಟಡ, ರಸ್ತೆ, ಹೆದ್ದಾರಿ ಇತ್ಯಾದಿಗೆ ಬಳಕೆ ಮಾಡಲಾದ ಜಮೀನು ೨,೫೦,೦೦೦ ಹೆಕ್ಟೇರ್.
(೨) ಕಳೆದ ೫೦ ವರುಷಗಳಲ್ಲಿ ಕೃಷಿಯೇತರ ಉದ್ದೇಶಗಳಿಗಾಗಿ ಬಳಸಿದ ಜಮೀನಿನ ವಿಸ್ತೀರ್ಣ (ಹಿಂದಿನ ೫೦ ವರುಷಗಳಿಗಿಂತ) ಎರಡು ಪಟ್ಟು ಜಾಸ್ತಿ. ಕಳೆದ ೧೦ ವರುಷಗಳಲ್ಲೇ ೭೦,೦೦೦ ಹೆಕ್ಟೇರ್ ಜಮೀನನ್ನು ಮನೆ, ರಸ್ತೆ ಇತ್ಯಾದಿ ಅಧೋರಚನೆಗಳಿಗಾಗಿ ಉಪಯೋಗಿಸಲಾಗಿದೆ.
(೩) ಸಾಂಪ್ರದಾಯಿಕ ಬೆಳೆಗಳಾದ ಭತ್ತ ಮತ್ತು ಮರಗೆಣಸಿನ ಬದಲಾಗಿ ಪ್ಲಾಂಟೇಷನ್ ಬೆಳೆಯಾದ ರಬ್ಬರ್ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಭೂಬಳಕೆಯ ಈ ತೀವ್ರ ಬದಲಾವಣೆಗಳಿಂದಾಗಿ, ಜಲವಿಭಾಜಕಗಳು (ವಾಟರ್ ಷೆಡ್ಸ್) ಧ್ವಂಸವಾಗಿವೆ; ಮಳೆನೀರಿನ ಸಹಜ ಹರಿವಿಗೆ ತಡೆಗಳುಂಟಾಗಿವೆ; ಜಮೀನಿನ ನೀರು ಇಂಗಿಸುವ ಸಾಮರ್ಥ್ಯ ಕಡಿಮೆಯಾಗಿದೆ. ಇವೆಲ್ಲದರಿಂದಾಗಿ, ಅಲ್ಲಿನ ನೆರೆ ಮಹಾನೆರೆಯಾಯಿತು. ಒಂದೇ ದಿನ ೩೫ ಅಣೆಕಟ್ಟುಗಳ ಗೇಟುಗಳನ್ನು ತೆರೆದದ್ದಂತೂ ಮಹಾಪ್ರಮಾದವಾಯಿತು.
ಕೇರಳದಲ್ಲಿ ೧೯೨೪ರಲ್ಲಿಯೂ ಇಂತಹದೇ ಭಯಂಕರ ನೆರೆ ಬಂದಿತ್ತು. ಆಗಿನ ದಾಖಲೆಗಳನ್ನು ಪರಿಶೀಲಿದಾಗ ತಿಳಿಯುವ ಸಂಗತಿ: ಆಗ ನೆರೆಯಲ್ಲಿ ಮುಳುಗಿದ ಪ್ರದೇಶಗಳೇ ಈ ವರುಷವೂ ಮುಳುಗಿವೆ. ದಶಕಗಳ ಹಿಂದೆ ಆದ ಪ್ರಾಕೃತಿಕ ವಿಕೋಪಗಳನ್ನು ಜನರು ಮರೆಯುತ್ತಾರೆ; ಮುಂದಿನ ತಲೆಮಾರುಗಳಿಗೆ ಹಿಂದೆ ಆದ ಪ್ರಾಕೃತಿಕ ವಿಪತ್ತುಗಳ ಕಲ್ಪನೆಯೂ ಇರುವುದಿಲ್ಲ. ಆದರೆ ನದಿ ತನ್ನ ಹರಿವಿನ ವ್ಯಾಪ್ತಿಯನ್ನು ಯಾವತ್ತೂ ಮರೆಯುವುದಿಲ್ಲ. ಶತಮಾನದ ನಂತರವೇ ಆಗಲಿ, ಮಹಾಮಳೆ ಬಂದಾಗ, ನದಿ ತನ್ನ ಪೂರ್ಣ ನೀರಿನ ಹರಿವಿನ ಎತ್ತರಕ್ಕೆ ಏರಿ, ತನ್ನ ವ್ಯಾಪ್ತಿಯ ಮರುಸ್ಥಾಪನೆ ಮಾಡಿಯೇ ಮಾಡುತ್ತದೆ.
ಹಾಗೆ ನದಿ ಉಕ್ಕೇರಿದಾಗ ಆಗುವ ದುರಂತದ ಕತೆ ಹೇಳುತ್ತವೆ ಕೇರಳದ ಮಹಾನೆರೆಯ ಅಂಕೆಸಂಖ್ಯೆಗಳು: ಮಹಾನೆರೆಗೆ ಬಲಿಯಾದವರ ಸಂಖ್ಯೆ ೩೬೦ಕ್ಕಿಂತ ಅಧಿಕ. ೪೬,೦೦೦ ಹೆಕ್ಟೇರುಗಳಲ್ಲಿ ಬೆಳೆನಾಶ. ಸುಮಾರು ೨.೨೩ ಲಕ್ಷ ಜನರನ್ನು ನೆರೆಪ್ರಕೋಪದಿಂದ ಹೆಲಿಕಾಪ್ಟರ್ ಹಾಗೂ ಬೋಟುಗಳ ಮೂಲಕ ರಕ್ಷಿಸಲಾಯಿತು. ೩,೨೭೪ ನೆರ ಸಂತ್ರಸ್ತರ ಶಿಬಿರಗಳಲ್ಲಿದ್ದ ಜನರ ಸಂಖ್ಯೆ ೧೦ ಲಕ್ಷಕ್ಕಿಂತ ಜಾಸ್ತಿ.
ಆದ್ದರಿಂದ ನಾವು ಕಲಿಯಬೇಕಾದ ಮುಖ್ಯ ಪಾಠ: ಈ ವರುಷ ಕೇರಳದ ನದಿಗಳು ಯಾವ ಮಟ್ಟಕ್ಕೆ ಉಕ್ಕಿ ಹರಿದವೋ, ಆ ಮಟ್ಟದ ವರೆಗಿನ ಜಮೀನಿನಲ್ಲಿ ಮನೆ, ಹೋಟೆಲು, ಕಾರ್ಖಾನೆ ಇತ್ಯಾದಿಗಳ ನಿರ್ಮಾಣ ನಿಷೇಧಿಸಬೇಕು. ಆ ಜಮೀನನ್ನೆಲ್ಲ ಕೃಷಿಗಾಗಿ ಮೀಸಲಿಡಬೇಕು; ಜೊತೆಗೆ, ಮುಂದೊಮ್ಮೆ ನೆರೆ ಬಂದರೆ, ಆ ಜಮೀನಿನಲ್ಲಿ ಕೃಷಿ ಮಾಡಿದವರಿಗೆ ಆಗುವ ನಷ್ಟವನ್ನು ಸಂಪೂರ್ಣ ತುಂಬಿ ಕೊಡುವ ಭರವಸೆಯನ್ನು ಸರಕಾರ ನೀಡಬೇಕು.
ಭವಿಷ್ಯದಲ್ಲಿ ಇಂತಹ ಆಸ್ತಿಪಾಸ್ತಿ ನಷ್ಟ ತಡೆಗಟ್ಟಲು ಏನು ಮಾಡಬಹುದು? ನಮ್ಮ ದೇಶದ ಎಲ್ಲ “ಪರಿಸರ ರಕ್ಷಣಾ ಕಾಯಿದೆ”ಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಪ್ರೊ. ಮಾಧವ ಗಾಡ್ಗೀಳ್ ಮತ್ತು ಡಾ. ಕಸ್ತೂರಿ ರಂಗನ್ ವರದಿಗಳ ಶಿಫಾರಸುಗಳನ್ನು ಜ್ಯಾರಿ ಮಾಡಿದ್ದರೆ, ಈ ಪ್ರಮಾಣದ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಕೇರಳದಲ್ಲಿ ಸಂಭವಿಸುತ್ತಿರಲಿಲ್ಲ. ಇನ್ನಾದರೂ, ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆ ಮಾಡುವ ಬದಲಾಗಿ, ಪರಿಸರ ರಕ್ಷಣೆ ಮಾಡಿ ಕೇರಳ ಸರಕಾರ ಜನಸಾಮಾನ್ಯರ ಹಿತ ಕಾಯಬೇಕು.
ಎಲ್ಲ ಕಾಯಿದೆಗಳು ಮತ್ತು ನಿಯಮಗಳನ್ನು ಗಾಳಿಗೆ ತೂರಿ, ಗಣಿಗಾರಿಕೆ, ಕಲ್ಲುಕ್ವಾರಿ ಮಾಡುತ್ತಾ, ರೆಸಾರ್ಟು, ಹೋಟೆಲು, ಹೋಂಸ್ಟೇಗಳನ್ನು ಮನಬಂದಂತೆ ನಿರ್ಮಾಣ ಮಾಡುತ್ತಾ, ಕಾಡು ನಾಶ ಮಾಡುತ್ತಾ ಹೋದರೆ, ತೀವ್ರ ಪ್ರಾಕೃತಿಕ ಅಸಮತೋಲನ ಉಂಟಾಗಿ, ಕೊನೆಗೊಮ್ಮೆ ಏನಾಗುತ್ತದೆ ಎಂಬುದಕ್ಕೆ ಕೇರಳ ಮಹಾನೆರೆಯೇ ಪುರಾವೆ. ಈಗಿನ ಹಾಗೂ ಮುಂದಿನ ತಲೆಮಾರುಗಳ ಹಿತಕ್ಕಾಗಿ ಇನ್ನಾದರೂ ಪಾಠ ಕಲಿಯೋಣ.
ಫೋಟೋ: ೧೯ ಆಗಸ್ಟ್ ೨೦೧೮ರಂದು ಕೇರಳದಲ್ಲಿ ನೆರೆಪ್ರಕೋಪ
ಫೋಟೋ ಕೃಪೆ: ಫ್ರಂಟ್ ಲೈನ್ ಪಾಕ್ಷಿಕ ಪತ್ರಿಕೆ, ೧೪ ಸಪ್ಟಂಬರ್ ೨೦೧೮