ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು ಆದರೆ...

ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು ಆದರೆ...

" ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು..." ಜಾನಪದ ಹಾಡಿನ ಕಥೆಯ ಸಾರಾಂಶವಿದು. ಕಾಡಿನ ಒಂಟಿ ಮನೆಯಲ್ಲಿ ಒಂದು ದಿನ ಮನೆಯ ಒಡೆಯ ವಿವೇಚನೆ ಇಲ್ಲದೆ ಆತುರದ ಅವಿವೇಕದ ಬುದ್ಧಿಯಿಂದ ತನ್ನ ಮಗುವನ್ನು ಹಾವಿನಿಂದ ಕಾಪಾಡಿದ ಮುಂಗಸಿಯನ್ನೇ ಕೊಂದು ಕೊನೆಗೆ ಮುಂಗಸಿಯೇ ಮಗುವನ್ನು ಕಾಪಾಡಿದ ನಿಜದ ಅರಿವಾದಾಗ ಪಶ್ಚಾತ್ತಾಪ ಪಡುವ ನೀತಿ ಕಥೆ ಇದು.

ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ನಿಜವೇ ? ಅಬಕಾರಿ ನೀತಿಯ ಅನುಷ್ಠಾನದಲ್ಲಿ‌ ಅಲ್ಲಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಲಂಚ ಪಡೆದ ಆರೋಪದಲ್ಲಿ ಸಿಬಿಐ ದಾಳಿ ಮಾಡಿದೆ. ಈ ಪ್ರಕರಣದಲ್ಲಿ ನಿಜವಾಗಿಯೂ ಭ್ರಷ್ಟಾಚಾರ ನಡೆದಿದೆಯೇ? ತಾಂತ್ರಿಕ ಸಾಕ್ಷ್ಯಗಳನ್ನು ಹೊರತುಪಡಿಸಿ ಸಿಸೋಡಿಯಾ ಉದ್ದೇಶಪೂರ್ವಕವಾಗಿ ಹಣಕ್ಕೆ ಕೈಚಾಚಿದರೆ ? ಕೇಜ್ರಿವಾಲ್ ಅರಿವಿನಲ್ಲಿ ಇದು ನಡೆದಿದೆಯೇ ಎಂಬ ಪ್ರಶ್ನೆಗಳ ಜೊತೆ...

ಇದೊಂದು ರಾಜಕೀಯ ಪಿತೂರಿಯೇ ? ತಾವು ಮಾತ್ರ ಪರಿಶುದ್ಧರು ಇತರ ಯಾರೂ ನಮ್ಮಷ್ಟು ಪ್ರಾಮಾಣಿಕರು ಇಲ್ಲ ಎಂದು ತೋರಿಸುವ ಪ್ರಚಾರದ ತಂತ್ರವೇ ? ಅಥವಾ ಪರ್ಯಾಯ ಶಕ್ತಿಯೊಂದರ ಬೆಳವಣಿಗೆಯನ್ನು ತಡೆಗಟ್ಟುವ ವ್ಯವಸ್ಥಿತ ಕುತಂತ್ರವೇ ? ಈ ಆರೋಪ ಮತ್ತು ದಾಳಿ ಸಾಮಾನ್ಯವಾದುದಲ್ಲ. ಇದು ಭಾರತದ ಮಣ್ಣಿನ ಗುಣವನ್ನು - ಹೋರಾಟಗಾರರ ಪ್ರಾಮಾಣಿಕತೆಯನ್ನು - ಜನರ ನಂಬಿಕೆ ಭಾವನೆಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುವ ಒಂದು ಮಹತ್ವದ ಘಟ್ಟ. ಸಿಬಿಐ ಎಂಬ ಸ್ವತಂತ್ರ ತನಿಖಾ ಸಂಸ್ಥೆಯ  ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಕೇವಲ ಸಾಕ್ಷ್ಯಗಳನ್ನು ಮಾತ್ರ ಇಲ್ಲಿ ಪರಿಗಣಿಸಬಾರದು. ನಿಜವಾಗಿಯೂ ಮನೀಶ್ ಸಿಸೋಡಿಯಾ ಸ್ವಂತಕ್ಕೆ ಹಣ ಪಡೆದಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ಒಂದು ವೇಳೆ ಇದು ಒಂದು ಅಚಾತುರ್ಯ ಮಾತ್ರ ಎಂಬುದನ್ನಾದರೂ ಸಾರ್ವಜನಿಕವಾಗಿ ಹೇಳಬೇಕು.

ಇದನ್ನು ಇಷ್ಟು ಗಂಭೀರವಾಗಿ ಪರಿಗಣಿಸಲು ಕಾರಣ.... ಭ್ರಷ್ಟಾಚಾರದ ವಿರುದ್ಧ ನಡೆದ ಹೋರಾಟದಲ್ಲಿ ಸೃಷ್ಟಿಯಾದ ಪಕ್ಷವೊಂದು ದೆಹಲಿಯಲ್ಲಿ ಎರಡು ಬಾರಿ, ಪಂಜಾಬಿನಲ್ಲಿ ಒಂದು ಬಾರಿ ಅಧಿಕಾರ ವಹಿಸಿಕೊಂಡು ಮತ್ತು ಈಗ ಗುಜರಾತಿನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವಾಗ, ಸಾಂಪ್ರದಾಯಿಕ ಪಕ್ಷಗಳಿಗೆ ರಾಷ್ಟ್ರೀಯವಾಗಿ  ಪರ್ಯಾಯ ಆಯ್ಕೆಯಾಗುತ್ತಿರುವಾಗ ಒಂದು ಸುಳ್ಳು ಆರೋಪ ಇಡೀ ಹೋರಾಟಗಾರರ ಪ್ರಾಮಾಣಿಕತೆಯನ್ನೇ ಅಣಕಿಸಿ ಬಿಡುತ್ತದೆ. ಜನರ ನಂಬಿಕೆಗೆ ಬಲವಾದ ಪೆಟ್ಟು ಕೊಡುತ್ತದೆ. 

ಹಾಗೆಯೇ ಒಂದು ವೇಳೆ ಈ ಆರೋಪ ನಿಜವಾದರೆ ಆಗಲೂ ಅದು ಉಂಟು ಮಾಡುವ ನಿರಾಶಾದಾಯಕ ಪರಿಣಾಮ ಊಹಿಸುವುದು ಕಷ್ಟ. ಎಲ್ಲರೂ ಹೇಳುವುದು ಒಂದು ಕೊನೆಗೆ ಅಧಿಕಾರ ಸಿಕ್ಕ ಮೇಲೆ ಮಾಡುವುದು ಇನ್ನೊಂದು ‌ಎಂದು ಜನ ಯಾರನ್ನೂ ನಂಬುವುದಿಲ್ಲ. ಈಗಾಗಲೇ ಇರುವ ಸಿನಿಕತನ ಮತ್ತಷ್ಟು ಆಳವಾಗಿ ಮತ್ತೆ ಈ‌ ಸಾಂಪ್ರದಾಯಿಕ ಪಕ್ಷಗಳೇ ಮೇಲುಗೈ ಸಾಧಿಸುತ್ತವೆ. ಮತ್ತೆ ಜಾತಿ ಧರ್ಮ ಹಣ ತೋಳ್ಬಲ ಮುನ್ನಲೆಗೆ ಬರುತ್ತದೆ.

ಜೊತೆಗೆ ಈ ಮಣ್ಣಿನ ಗುಣವು ಅಷ್ಟೇ. ಬರೀ ಮುಖವಾಡಗಳು. ಮಾತು ಮತ್ತು ಕೃತಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹೋರಾಟಗಳು ಕೇವಲ ಸ್ವಾರ್ಥಕ್ಕಾಗಿ ಎಂಬ ಜನರ ನಂಬಿಕೆ ನಿಜವಾಗಿ ಮುಂದೆ ಪ್ರಾಮಾಣಿಕರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಬೇಕಾಗಿರುವುದು ಇದೇ. ಆದ್ದರಿಂದ ದಯವಿಟ್ಟು ಭವಿಷ್ಯದ ಬಲಿಷ್ಠ ಭಾರತದ ದೃಷ್ಟಿಯಿಂದ ಈ ವಿಷಯದಲ್ಲಿ ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬರಬೇಡಿ. ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ತೆವಲಿನ ಬಲಯೊಳಗೆ ಬೀಳಬೇಡಿ. ಸೋಷಿಯಲ್‌ ಮೀಡಿಯಾ ಏಜೆಂಟರ ಪಕ್ಷಪಾತದ ಗಾಳಿಸುದ್ದಿಗಳನ್ನು ನಂಬಬೇಡಿ. ಸ್ವಲ್ಪ ತಾಳ್ಮೆಯಿಂದ ಕಾಯೋಣ. 

ನಿಜ ನಾವು ಸಾಮಾನ್ಯರು. ನಮಗೆ ಈ ರಾಜಕೀಯ ಒಳಸುಳಿಗಳ ನೈಜತೆ ಅರ್ಥಮಾಡಿಕೊಳ್ಳುವುದು ಕಷ್ಟ. ಸುದ್ದಿಯ ಮೂಲಗಳು, ಘಟನೆಯ ವಾಸ್ತವ ವರದಿಗಳು, ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಗಳು ನಮಗೆ ಸಿಗುವುದಿಲ್ಲ. ಮತ್ತೆ ಮಾಧ್ಯಮಗಳ ಮೂಲಕವೇ  ನಾವು ಒಂದು ತೀರ್ಮಾನಕ್ಕೆ ಬರಬೇಕು. ಆರೋಪ ಪಟ್ಟಿ,  ವಕೀಲರ ವಾದಗಳು, ನ್ಯಾಯಾಲಯದ ತೀರ್ಪುಗಳು ಎಲ್ಲವೂ ಬುದ್ದಿವಂತಿಕೆ, ಸಾಕ್ಷ್ಯ ಇತ್ಯಾದಿಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಆತ್ಮಸಾಕ್ಷಿಯ ಸಂಪೂರ್ಣ ಸತ್ಯ ಹೊರಬರುವುದು ತುಂಬಾ ಕಷ್ಟ.

ಆದ್ದರಿಂದ ‌ಇನ್ನಷ್ಟು ನಮ್ಮ ನಂಬಿಕೆಗೆ ಅರ್ಹವಾದ ವಿಷಯಗಳು ಬಯಲಾಗುವವರೆಗೂ ದೆಹಲಿ ಸರ್ಕಾರದ ಬಗ್ಗೆ ಸ್ವಲ್ಪ ಸಹಾನುಭೂತಿ ಇರಲಿ. ನಮ್ಮ ಮನಸ್ಸಿಗೆ ಅದು‌ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಅನಿಸಿದರೆ ಖಂಡಿತ ಅದನ್ನು ಕ್ಷಮಿಸದೆ ಇತರ ಪಕ್ಷಗಳಿಗಿಂತ ಎರಡು ಪಟ್ಟು ಶಿಕ್ಷೆಗೆ ‌ಅರ್ಹ ಎಂದು ಪ್ರತಿಭಟಿಸೋಣ. ಒಂದು ವೇಳೆ ಆರೋಪ ‌ಸುಳ್ಳಾದರೆ ಸಿಬಿಐ ಎಂಬ ಸಂಸ್ಥೆಯನ್ನೇ ಹೊಣೆ ಮಾಡಿ ಅಲ್ಲಿನ ಅಧಿಕಾರಿಗಳನ್ನೇ ಶಿಕ್ಷಿಸಲು ಒಕ್ಕೊರಲಿನಿಂದ ಒತ್ತಾಯ ಮಾಡೋಣ ಹಾಗೆಯೇ ಇದಕ್ಕೆ ಕಾರಣವಾದ ರಾಜಕೀಯ ಪಕ್ಷದ ಪಿತೂರಿಯನ್ನು ಬಯಲಿಗೆಳೆಯೋಣ.

ಏಕೆಂದರೆ ಇಲ್ಲಿ ಯಾರನ್ನು ಬೆಂಬಲಿಸಬೇಕು, ಯಾರನ್ನು ವಿರೋಧಿಸಬೇಕು ಎಂಬುದು ಮುಖ್ಯವಲ್ಲ. " ಒಳ್ಳೆಯವರ ಪ್ರೋತ್ಸಾಹ ಮತ್ತು ಕೆಟ್ಟವರ ತಿರಸ್ಕಾರ " ಮಾತ್ರ ಭಾರತದ ಅಭಿವೃದ್ಧಿಯ ಮಾನದಂಡವಾಗಬೇಕು. ಅದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ