ಕೇಳಿ ಬರಲೊಮ್ಮೆ ಏಕತೆಯ ಮಾತು!

ಕೇಳಿ ಬರಲೊಮ್ಮೆ ಏಕತೆಯ ಮಾತು!

ಬರಹ

ನಮಗಿಂದು ಬೇಕಿಲ್ಲ ಜಾತಿ, ಭಾಷೆ, ಪಕ್ಷಗಳ ಮಾತು
ಕೇಳಬೇಕಾಗಿದೆ ದೇಶದುದ್ದಗಲಕ್ಕೂ ಏಕತೆಯ ಮಾತು

ದೇಶದ್ರೋಹಿಗಳೆದುರು ನಾಯಕರೆ ಹೀಗೆ ನಗ್ನರಾಗದಿರಿ
ದೇಶ ಹತ್ತಿ ಉರಿಯುವಾಗ ತಮ್ಮ ಬೇಳೆ ಬೇಯಿಸದಿರಿ

ಒಗ್ಗಟ್ಟು ಇಲ್ಲದಿರೆ ನಿಜವಾಗಿ ಇಲ್ಲಿ ಈ ಬಾಳಿಗೆ ಅರ್ಥವಿಲ್ಲ
ಇದನರಿತು ಬಾಳಿದರೆ ನಮಗಿನ್ನು ಒಳಿತು ಇಲ್ಲದಿರೆ ಇಲ್ಲ

ಒಡೆದು ಆಳುವ ಈ ನೀತಿ ನಿಜಕೂ ಇಂದು ನಿನ್ನೆಯದಲ್ಲ
ನಾವೆಂತು ಸುಲಭದಲಿ ಒಡೆವವರ ಕೈಗೆಟಕುತಿರುವೆವಲ್ಲ

ಪರದೇಶೀ ಬ್ಯಾಂಕುಗಳು ದಿವಾಳಿಹೋಗಿ ಆದಾಗ ಬತ್ತಲು
ನಮ್ಮ ಮನೆಗಳಲ್ಲಿ ಏಕೆ ಕವಿಯುವುದು ಬಡತನದ ಕತ್ತಲು

ಹೊಲ ತೋಟಗಳ ಮಾರಿ ನಾಲ್ಕು ಕಾಸು ಗಳಿಸುವಾಸೆ
ಎಸ್‌ಇಝಡ್ ಗಳಿಗಾಗಿ ತಮ್ಮನ್ನೇ ಮಾರಿಕೊಳ್ಳುವಾಸೆ

ಇಂಗೀಷಿಗೇ ಒಗ್ಗಿಕೊಂಬಾಸೆ, ಪರದೇಶೀ ವಸ್ತುಗಳಾಸೆ
ಮೈಮರೆತು ಪಾಶ್ಚಾತ್ಯ ಶೈಲಿಗೇ ಮಾರುಹೋಗುವಾಸೆ

ನಮ್ಮತನವೆಲ್ಲವನ್ನೂ ಮಾರಿಕೊಂಡಿಲ್ಲಿ ಬದುಕುವಾಸೆ
ಸ್ವಂತಿಕೆಯಿಲ್ಲದೆ ಸದಾ ಪರಾವಲಂಬೀ ಜೀವನದ ಆಸೆ

ಈ ಎಲ್ಲಾ ಆಸೆಗಳಿಗೂ ಮುಂದೆ ಕೊನೆ ಒಂದೇ ಒಂದು
ತನ್ನವರಿಗೆ ವಿಷವುಣ್ಣಿಸಿ ತಾನೂ ಸಾಯಬೇಕಾದೀತಂದು
*-*-*-*-*-*-*-*-*-*-*-*-*-*-*-*