ಕೇಳೆ ಸಖಿ ಕೊಳಲ ಗಾನ

ಕೇಳೆ ಸಖಿ ಕೊಳಲ ಗಾನ

ಕವನ

 ಕೇಳೆ ಸಖಿ ಕೊಳಲ ಗಾನ ಮನವ ಮಿಡಿಯುತಿರುವುದು

ಎಲರಲಿ ಅಲೆ ತೇಲಿ ಬಂದು ಹೃದಯ ತಟ್ಟುತಿರುವುದು
 
ಮಾಡಲಾರೆ ಮನೆಯ ಕೆಲಸ ಮನವು ನಿಲ್ಲಲಾರದು
ಮಾಧವನ ಮೋಹಕನಗೆ ಮಧುರ ನೆನಪ ತರುವುದು
ಮಾಮರದಡಿ ನಿಂತಭಂಗಿ ತನುವ ಪುಳಕಗೊಳಿಪುದು
ಮಾಯಾವಿಯ ಚತುರ ಮಾತು ಮರುಳುಗೊಳಿಸುತಿರುವುದು.
 
ಏನುಶಕ್ತಿ ಆ ಗಾನಕೆ ಮತ್ತುಬರಿಸುತಿರುವುದು.
ಏನುಸೆಳೆತ ಏನುಮಧುರ ಹುಚ್ಚು ಹಿಡಿಸಿಬಿಡುವುದು
ಏನು ಮಂತ್ರ ಶಕ್ತಿಯಿಹುದೊ ಮೋಡಿಮಾಡಿ ಎಳೆವುದು
ಏನು ಆಕರ್ಷಣೆಯೊ ಹೃದಯ ಸೂರೆಗೊಳುವದು
 
ಮಾವ ಮನೆಗೆ ಮಾರಿಯೆನಲಿ ಅತ್ತೆಯು ಬಯ್ದಾಡಲಿ
ಮೈದುನ ಬೇಸರ ಪಡಲಿ ನಾದಿನಿ ಸಿಡಿಗುಟ್ಟಲಿ
ಪತಿಯು ಕೋಪಗೊಂಡು ಮನಕೆ ಬಂದ ಶಿಕ್ಷೆವಿಧಿಸಲಿ
ಕೇಳಿದೊಡನೆ ಮೈ ಮರೆವೆನು ಕೊಳಲ ಗಾನ ಸುಧೆಯಲಿ
 
ಕೇಳೆ ಸಖಿ ಕೊಳಲ ಗಾನ ಮನವ ಮಿಡಿಯುತಿರುವುದು
ಎಲರಲಿ ಅಲೆ ತೇಲಿ ಬಂದು ಹೃದಯ ತಟ್ಟುತಿರುವುದು
 

Comments