ಕೇವಲ ಬೂದಿ

ಕೇವಲ ಬೂದಿ

ಬರಹ

ನಿನಗನ್ನಿಸುವದಿಲ್ಲವೆ
ನಾವಿಬ್ಬರು ಬಹಳಷ್ಟನ್ನು ಕಳೆದುಕೊಂಡಿದ್ದೇವೆಯೆಂದು?
ಈಗ ಬರಿ ಮಾತುಗಳಲ್ಲಿ ಮಡುಗಟ್ಟಿಹೋದ
ನಮ್ಮಿಬ್ಬರ ನಡುವಿನ “ಅಗಾಧ” ಪ್ರೀತಿಯನ್ನು?
ಒಬ್ಬರೊನ್ನೊಬ್ಬರು ನೋಡುವ ಆತುರ ಕಾತುರಗಳನ್ನು
ಭೇಟಿಯ ಸಂಭ್ರಮ ಸಡಗರಗಳನ್ನು?

ನಿನಗನ್ನಿಸುವದಿಲ್ಲವೆ
ನಮ್ಮಿಬ್ಬರ ಚುಂಬನಗಳು ಕಾವು ಕಳೆದುಕೊಂಡು
ಸಾಮಿಪ್ಯದ ಬಿಸುಪು ಆರಿಹೋಗಿ
ಭೇಟಿಗಳೆಲ್ಲ ಹೆಪ್ಪುಗಟ್ಟಿದ ಹಿಮಗಡ್ಡೆಗಳಂತಾಗಿವೆಯೆಂದು?
ಪ್ರೀತಿ ಮಾತುಗಳೆಲ್ಲ ಈಗ
ಬರಿ ಉಪಚಾರದ ಮಾತುಗಳಾಗಿ
ಭೇಟಿ ಮಾಡಲು ಸಹ ಮರೆತುಹೋಗಿ
ಸುಳ್ಳು ಸುಳ್ಳು ನೆಪಹೇಳಿ ಜಾರಿಕೊಳ್ಳುತ್ತಿದ್ದೇವೆಯೆಂದು?

ನಿನಗನ್ನಿಸುವದಿಲ್ಲವೆ
ನಾವು ಬರೆಯುವ ಅವಸರದ ಸಣ್ಣ ಸಣ್ಣ ಪತ್ರಗಳಲ್ಲಿ
ಭಾವನೆಗಳಾಗಲಿ ಉತ್ಸಾಹವಾಗಲಿ
ಹ್ರದಯದ ಪಿಸುಮಾತುಗಳಾಗಲಿ ಪ್ರೀತಿಯ ಹೊಂಗನಸುಗಳಾಗಲಿಲ್ಲವೆಂದು?
ಉತ್ತರಿಸುವದು ಹೊರೆಯಾಗಿ
ಪ್ರತಿಕ್ರಿಯಿಸುವದು ನಿಧಾನವಾಗಿದೆಯೆಂದು?

ನಿನಗನ್ನಿಸುವದಿಲ್ಲವೆ
ನಮ್ಮಿಬ್ಬರ ನಡುವಿದ್ದ ಜಗವು ಮುರಿದುಬಿದ್ದು
ಹೊಸದೊಂದು ಹುಟ್ಟಿದೆಯೆಂದು?
ನಮ್ಮ ಅಂತ್ಯ ಕಹಿಯಾಗಿ ಘೋರವಾಗಿ
ಕೇವಲ ಬೂದಿಯಾಗಿ ಉಳಿಯುತ್ತದೆಂದು?
ಏಕೆಂದರೆ ಇದು ಧುತ್ತೆಂದು ನಮ್ಮ ಮೇಲೆ ಎರಗಿದ್ದಲ್ಲ
ತಾನೇ ತಾನಾಗಿ ನಮ್ಮೊಳಗಿಂದ ನಿಧಾನವಾಗೆದ್ದು ಬಂದದ್ದು!

ಅರೇಬಿ ಮೂಲ: ಸಮೀಹ ಆಲ್ ಕಾಶಿ
ಭಾವಾನುವಾದ: ಉದಯ ಇಟಗಿ
ಚಿತ್ರಕೃಪೆ: ಪ್ರಜಾವಾಣಿ ದಿನಪತ್ರಿಕೆ